ಚೀನಾ ದೇಶದ ದಕ್ಷಿಣ ಭಾಗದಲ್ಲಿರುವ ಗುಯಾಂಗ್ಸ್‌ಕಿ ಜುಯಾಂಗ್ ಪ್ರಾಂತ್ಯದ ಈಶಾನ್ಯದಲ್ಲಿರುವ ಗ್ಯುಲಿನ್, ಪ್ರಕೃತಿ ಮಾತೆಯು ತನ್ನ ಲಾಸ್ಯದಾಟಕ್ಕೆ ರಂಗಸ್ಥಳವಾಗಿ ಆಯ್ದುಕೊಂಡಿರುವ ಚೆಲುವು ಸೂರೆವರಿದಿರುವ ತಾಣ. ಚೀನಾ ಸರ್ಕಾರವು ಆರು ಜಿಲ್ಲೆಗಳು, ಹನ್ನೊಂದು ಕೌಂಟಿಗಳನ್ನೊಳಗೊಂಡಿರುವ ಗ್ಯುಲಿನ್ನನ್ನು ದೇಶದ ಪ್ರಮುಖವಾದ ನಾಲ್ಕು ಐತಿಹಾಸಿಕ, ಪ್ರಾಕೃತಿಕ, ಸಾಂಸ್ಕೃತಿಕ ನೆಲೆವೀಡುಗಳಲ್ಲಿ ಒಂದು ಎಂದು ಪರಿಗಣಿಸಿದೆ. ಗ್ಯುಲಿನ್ ಎಂಬ ಪದದ ಅರ್ಥ ’ಸುಗಂಧಿತ ಆಸ್ಮಾಂಥಾಸ್ ಬೆಳೆವ ಅರಣ್ಯ’ ಎಂದು. ಕಳೆದ ಶತಮಾನದ ಪ್ರಾರಂಭದಲ್ಲಿ ಚೀನಾವನ್ನು ಆಳುತ್ತಿದ್ದ ದುರ್ಬಲ ಮಂಚು ವಂಶದವರು ದೇಶದ ಹಿತಾಸಕ್ತಿಗಳನ್ನು ಗಾಳಿಗೆ ತೂರಿ ವಸಾಹತುಶಾಹಿ ಶಕ್ತಿಗಳಿಗೆ ಮಣೆ ಹಾಕುತ್ತಿದ್ದಾಗ, ಡಾ.ಸನ್‌ಯಾತ್‌ಸೆನ್‌ರವರು ಜನರನ್ನು ಮಂಚು ಆಳ್ವಿಕೆಯ ವಿರುದ್ಧ ಸಂಘಟಿಸಿದ್ದರು. ಇದಕ್ಕಾಗಿ ಗ್ಯುಲಿನ್‌ಅನ್ನು ತಮ್ಮ ಉತ್ತರದ ಸೇನಾ ದಂಡಯಾತ್ರೆಯ ಕೇಂದ್ರ ನೆಲೆಯಾಗಿಸಿಕೊಂಡಿದ್ದರು. ಗ್ಯುಲಿನ್ನನ್ನು ಸುತ್ತುವರಿದಿರುವ ಬೆಟ್ಟಗಳು, ಶಿಖರಗಳು, ಇಲ್ಲಿನ ಸುಣ್ಣಕಲ್ಲಿನ ನಿರ್ಮಿತಿಯ ಭೂ ಲಕ್ಷಣಗಳು ಹಾಗೂ ಗುಹೆಗಳು, ಮಧ್ಯಭಾಗದಲ್ಲಿ ಹರಿವ ಲೀ ನದಿ-ಇವೆಲ್ಲವುಗಳ ಮೂಲಕ ವ್ಯಕ್ತವಾಗುವ ಪ್ರಕೃತಿಯ ರಮ್ಯತೆ, ಭವ್ಯತೆಯು ಪ್ರವಾಸಿಗಳಿಗೆ ವಿಶಿಷ್ಟವಾದ ಆನಂದಾನುಭವ ನೀಡುತ್ತದೆ. ಹಾಗೆಯೇ ಗ್ಯುಲಿನ್, ಚೀನಾದ ಏಕೈಕ ಅಲ್ಪಸಂಖ್ಯಾತ ಜನಾಂಗೀಯ ಸಮುದಾಯವನ್ನೊಳಗೊಂಡ ಪ್ರದೇಶವಾಗಿದ್ದು, ಸಾಂಪ್ರದಾಯಿಕ ಚೀನೀ ಪದ್ಧತಿಗಳಿಗಿಂತ ವಿಭಿನ್ನವಾದ ಸಂಸ್ಕೃತಿಗಾಗಿ ಕೂಡ ಇದು ಪ್ರಸಿದ್ಧವಾಗಿದೆ.
ಗ್ಯುಲಿನ್‌ನಿಂದ ಎಂಬತ್ಮೂರು ಕಿ.ಮೀ.ದೂರದ ಯಾಂಗ್ ಶೌ ಕೌಂಟಿಗೆ ಪುಟ್ಟ ಹಡಗುಗಳಲ್ಲಿನ ನಾಲ್ಕು ಗಂಟೆಗಳ ಜಲಯಾನವು ಪ್ರವಾಸಿಗಳಿಗೆ ಪ್ರಕೃತಿ ಸೌಂದರ್ಯದ ಶ್ರೀಮಂತ ಖಜಾನೆಯನ್ನೇ ತೆರೆದಿಡುತ್ತದೆ. ನೀಲಾಕಾಶದಡಿಯಲ್ಲಿ ಹರಿವ ತುಂಬು ನದಿ ಲೀ- ಇದರ ಇಕ್ಕೆಲಗಳಲ್ಲೂ ದಟ್ಟ ಹಸಿರು ಮರಗಳು, ಅವುಗಳ ಹಿನ್ನೆಲೆಯಲ್ಲಿನ ನೀಲ ಬೆಟ್ಟಗಳು, ಕೋಡುಗಲ್ಲಿನಂತಹ ಶಿಖರಗಳ ಸಾಲು ಸಾಲು ಸರಮಾಲೆ, ಈ ಹೆಚ್ಚು ಎತ್ತರವಲ್ಲದ ಶಿಖರಗಳನ್ನು ಮುದ್ದಾಡುತ್ತಿರುವ ಮೋಡಗಳ ದೃಶ್ಯವು ಕಣ್ಣಿಗೆ ರಸದೌತಣವೀಯುತ್ತಾ ಎಂತಹವರಲ್ಲೂ ರಸಿಕತೆಯ ಸೆಲೆಯುಕ್ಕಿಸುತ್ತದೆ. ಅಲ್ಲಲ್ಲಿ ನದಿಯ ದಡಕ್ಕೆ ತಾಗಿದಂತಿರುವ ಕಲ್ಲಿನ ಸೋಪಾನಗಳು, ಅವುಗಳಾಚೆಯ ಪುಟ್ಟ ಹಳ್ಳಿಗಳು, ಕೌತುಕದ ಭಾವ ಮೂಡಿಸುತ್ತವೆ. ದಡದ ಮರಗಳೆಡೆಯಿಂದ ನದಿಗೆ ಧುಮ್ಮಿಕ್ಕುವ ಜಲಧಾರೆ. ಅಲ್ಲಲ್ಲಿ ಕೆಲವೆಡೆ ಪುರ್‍ರೆಂದು ಹಾರಿ ಹೋಗುವ ಹಕ್ಕಿಗಳ ಹಿಂಡು. ಅಲ್ಲೊಮ್ಮೆ ಇಲ್ಲೊಮ್ಮೆ ಕಂಡುಬರುವ ಭತ್ತದ ಹೊಲಗಳಲ್ಲಿ ದುಡಿವ ರೈತರು. ಬಿದಿರ ತೆಪ್ಪದ ಮೇಲೆ ಮೀನು ಹಿಡಿವ ಬೆಸ್ತರು. ನಿಸರ್ಗದ ಚೆಲುವು ಚೆಲ್ಲುವರಿದಿರುವಂತಹ ಈ ಸನ್ನಿವೇಶವು ಚೀನಾದ ಇಪ್ಪತ್ತು ಯುಯಾನ್‌ನ ನೋಟಿನಲ್ಲಿ ಮುದ್ರಿತವಾಗಿದೆ.
ನಾಲ್ಕು ಗಂಟೆಗಳ ಜಲಯಾನದ ನಂತರ ಯಾಂಗ್ ಶೌ ಕೌಂಟಿಗೆ ಬಂದರೆ ನಾವು ಕಾಲಿಡುವ ಇಲ್ಲಿನ ‘ವೆಸ್ಟ್ ಸ್ಟ್ರೀಟ್’ ದೇಶ ವಿದೇಶಗಳ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತದೆ. ಆಕರ್ಷಕ ಕರಕುಶಲ ವಸ್ತುಗಳು, ಸ್ಮರಣಿಕೆಗಳ ಮಾರಾಟ ಭರದಿಂದ ಸಾಗಿರುತ್ತದೆ. ವಿಧವಿಧದ ಭವ್ಯ ಕಟ್ಟಡಗಳು, ಕೆಲವು ಕಟ್ಟಡಗಳ ಮುಂದಿರುವ ಡ್ರ್ಯಾಗನ್ ಪ್ರತಿಮೆಗಳು, ಟ್ರಾಂ ಗಾಡಿಯನ್ನೂ ಒಳಗೊಂಡ ಸಕಲ ವಿಧದ ವಾಹನಗಳು ಯಾಂಗ್ ಶೌ ಕೌಂಟಿಯಲ್ಲಿ ಪ್ರವಾಸಿಗರಿಗಾಗಿ ರೆಸಾರ್ಟ್‌ಗಳಿವೆ. ಬಂಡೆಗಳನ್ನೇರುವ ಚಾರಣಕ್ಕಾಗಿಯೇ ಇಲ್ಲಿಗೆ ಬರುವವರಿದ್ದಾರೆ.
ಗ್ಯುಲಿನ್‌ನಿಂದ ಐದು ಕಿಲೋಮೀಟರ್ ದೂರದಲ್ಲಿರುವ ರೀಡ್ ಫ್ಲೂಟ್ ಕೇವ್‌ಗೆ (ಚೀನೀ ಹೆಸರು-ಲು ದಿ ಯಾನ್) ಪ್ರವೇಶಿಸುವುದೆಂದರೆ ಒಂದು ಕಿನ್ನರ ಲೋಕವನ್ನೇ ಹೊಕ್ಕಂತೆ. ಈ ಗುಹೆಯ ಮೇಲೆ ಬೆಳೆಯುವ ರೀಡ್ ಸಸ್ಯದಿಂದ ಕೊಳಲು ತಯಾರಿಸುವುದರಿಂದ ಆ ಹೆಸರು ಬಂದಿದೆ. ಈ ಗುಹೆಯಲ್ಲಿ ಎಂಟನೇ ಶತಮಾನದ ಟ್ಯಾಂಗ್ ವಂಶದವರು ಬರೆದ ಶಾಸನಗಳಿರುವುದು ಇದರ ಪ್ರಾಚೀನತೆಗೆ ನಿದರ್ಶನ. ಪ್ರಾಚೀನ ಕಾಲದಿಂದಲೂ ಇದು ಆಕರ್ಷಣೆಯ ತಾಣವಾಗಿತ್ತೆಂದು ಈ ಬರಹಗಳು ತಿಳಿಸುತ್ತವಂತೆ. ನಂತರದಲ್ಲಿ ವಿಸ್ಮೃತಿಗೆ ಸಂದಿದ್ದ ಈ ಗುಹೆಯು, ಜಪಾನೀಯರು ಚೀನಾವನ್ನು ಆಕ್ರಮಿಸಿದಾಗ ಇಲ್ಲಿ ಆಶ್ರಯ ಪಡೆದ ನಿರಾಶ್ರಿತರ ತಂಡವೊಂದರಿಂದ ಪುನರ್‌ಪತ್ತೆಯಾಯಿತು. 1962ರಿಂದ ಪ್ರವಾಸಿಗರಿಗೆ ತೆರವಾಗಿದೆ. ಪ್ರವೇಶ ದ್ವಾರದಿಂದ ಹೊಕ್ಕು, 240 ಮೀಟರ್ ಉದ್ದದ ಗುಹೆಯಲ್ಲಿ ಇಂಗ್ಲಿಷ್‌ನ ’ಯು’ ಆಕಾರದಲ್ಲಿ ಸಾಗಿ ಇನ್ನೊಂದು ದ್ವಾರದಿಂದ ಹೊರ ಬರಬಹುದು. ನಮ್ಮ ಚೀನೀ ಗೈಡ್ ಎವ್ಲಿನ್‌ಳ ಮಾರ್ಗದರ್ಶನದಲ್ಲಿ ನಾವೆಲ್ಲಾ ಈ ಗುಹೆಯ ಒಳ ಪ್ರವೇಶಿಸಿದಾಗ ಕಣ್ಣಿಗೆ ಮಬ್ಬುಗತ್ತಲು. ಟಾರ್ಚ್ ಬೆಳಕು ಬೀರುತ್ತಾ ನಿಧಾನವಾಗಿ ಮೆಟ್ಟಿಲಿಳಿದು ಬನ್ನಿ ಎಂಬ ಗೈಡ್ ಸೂಚನೆಯಂತೆ ಮುಂದುವರಿದೆವು. ಉದ್ದಕ್ಕೂ ಹಿಡಿದು ಸಾಗಲು ಇದ್ದ ದಪ್ಪ ಸ್ಟೀಲ್‌ನ ಕಂಬಿಗಳಿಂದಾಗಿ ಬೀಳುವ ಭಯವೇನಿರಲಿಲ್ಲ. ಕ್ರಮೇಣ ಕಣ್ಣು ನಸುಗತ್ತಲಿಗೆ ಹೊಂದಿಕೊಂಡಾಗ ಅನಾವರಣಗೊಂಡ ಶಿಲೆಯಲ್ಲಿ ನೇಯ್ದ ಕಲೆಯ ಬಲೆಯ ಜಾಲದ ಭವ್ಯತೆಗೆ ಬೆರಗಾದ ನಾವೆಲ್ಲಾ ಉಸಿರು ಬಿಗಿಹಿಡಿದು ಮೂಕರಾದೆವು.
‘ಭಗವಂತನಾನಂದ ರೂಪುಗೊಂಡ’, ಈ ಗುಹೆಯು ‘ನೆಲದಾಳದ ಅರಮನೆ’, ‘ನಿಸರ್ಗದ ಕಲಾಶಾಲೆ’ ಎಂದೆಲ್ಲಾ ಬಣ್ಣಿಸಲ್ಪಟ್ಟಿದೆ. ಗುಹೆಯ ಒಳಗೆ ಸುಣ್ಣಕಲ್ಲಿನ ವರ್ಣನಾತೀತವಾದ ಶಿಲಾರಚನೆಗಳ ಲೋಕ ಮೂಕವಿಸ್ಮಿತರನ್ನಾಗಿಸುತ್ತದೆ. ಇಲ್ಲಿ ಮೌನವೇ ಮಾತಾಗುತ್ತದೆ. ಕ್ಯಾಲ್ಸಿಯಂ ಕಾರ್ಬೋನೇಟ್‌ನ ಸಡಿಲ ಸಂರಚನೆ, ಮೇಲಿನ ಕಲ್ಲಿನಿಂದ ಜಿನುಗುವ ನೀರ ಹನಿಗಳ ಲವಣಗಳು ಮಡುಗಟ್ಟಿ ನಿರ್ಮಾಣವಾದ ರಚನೆಗಳು ಮೇಲ್ಚಾವಣಿಯಿಂದ ಇಳಿಬಿದ್ದಿರುವಂತೆಯೇ ನೆಲದ ಮೇಲೂ ಅದ್ಭುತ ವಿನ್ಯಾಸಗಳಲ್ಲಿ ರೂಪುಗೊಂಡಿವೆ. ಇದು ರೂಪುಗೊಂಡಿದ್ದು ನೂರಾಎಂಬತ್ತು ಮಿಲಿಯನ್ ವರ್ಷಗಳ ಹಿಂದೆ. ಪ್ರಕೃತಿಮಾತೆಯ ಈ ಕೊರಳ ಹಾರ ಒಂದು ಸೆಂಟಿಮೀಟರ್‌ನಷ್ಟು ರೂಪುಗೊಳ್ಳಲು ನೂರಾರು ವರ್ಷಗಳೇ ಬೇಕಾಗುತ್ತದಂತೆ. ಪ್ರಕೃತಿ ಮಾತೆಯ ಚಾಣದಿಂದ ಈ ಗುಹೆಯಲ್ಲಿ ರೂಪುಗೊಂಡ ವಿವಿಧಾಕೃತಿಗಳ ಈ ಸುಣ್ಣಕಲ್ಲಿನ ಅನುಪಮ ನಿರ್ಮಾಣಗಳ ಕುಸುರಿ ಕೆಲಸದ ಕುಶಲತೆ ಸರಿಸಾಟಿಯಿಲ್ಲದ್ದು. ಅವುಗಳ ಸೊಬಗಿಗೆ ಮೆರಗು ನೀಡಲು ಗುಹೆಯ ಒಳಗೆ ವರ್ಣರಂಜಿತ ಬೆಳಕಿನ ವ್ಯವಸ್ಥೆ ಇದೆ. ಕೆಳಗೆ ಹರಿವ ಹಳ್ಳಗಳಿಗೂ ಕೆಳಗಿನಿಂದ ಅಳವಡಿಸಿದ ಫ್ಲಡ್‌ಲೈಟ್‌ನಿಂದಾಗಿ ಅಲ್ಲೊಂದು ಕಾಲ್ಪನಿಕ ಲೋಕವೇ ಸೃಷ್ಟಿಯಾದಂತಿದೆ. ಅಲ್ಲಲ್ಲಿ ಮಡುಗಟ್ಟಿದ ಕೊಳದ ದಡಗಳನ್ನು ಮಿನುಗುವ ಮಣಿಗಳಂತಹ ದೀಪದ ಮಾಲೆಗಳು ಸಿಂಗರಿಸಿವೆ.
ಸಾಗುತ್ತಾ ಬರುವಾಗ ಅಲ್ಲೊಂದೆಡೆ ಸಿಂಹವು ತನ್ನ ಮರಿಯೊಂದಿಗೆ ಕುಳಿತಂತಿರುವುದೇ ‘ಜಂಗಲ್ ಲಯನ್’. ವಿವಿಧ ತರಕಾರಿಗಳು ಮೇಲಿನಿಂದ ಇಳಿಬಿದ್ದಿರುವ ಈ ಗೊಂಚಲೇ ‘ಹಾರ್ವೆಸ್ಟ್ ಆಫ್ ವೆಜಿಟಬಲ್ಸ್’. ಈ ಅಣಬೆಗಳ ಪ್ರದರ್ಶನಾಲಯ ‘ಮಶ್ರೂಮ್ ಹಿಲ್’. ‘ನಾಟಕದ ರಂಗಸ್ಥಳ’ವು ಒಂದು ನಾಟಕ ಪ್ರದರ್ಶನಕ್ಕೆ ಇದೀಗ ಸಜ್ಜಾಗಿರುವ ವೇದಿಕೆಯಂತೆ ರೂಪುಗೊಂಡಿದೆ. ಯಕ್ಷಲೋಕ, ಸ್ಫಟಿಕದರಮನೆ, ಡ್ರ್ಯಾಗನ್ ಪಗೋಡಾ- ಹೀಗೆ ಇಲ್ಲಿ ಮೂಡಿರುವ ಆಕೃತಿಗಳಿಗೆ ಚೀನೀಯರು ಕೊಟ್ಟಿರುವ ಹೆಸರುಗಳನ್ನು ನಾವು ಸ್ವಲ್ಪ ಕಲ್ಪನಾಶಕ್ತಿ ಬೆರೆಸಿ ಅರ್ಥೈಸಿಕೊಂಡರಾಯಿತು.
ಚೀನೀಯರು ಇವುಗಳ ಕುರಿತು ದಂತಕತೆಗಳನ್ನೂ ಹೇಳುತ್ತಾರೆ. ಅಂತಹವುಗಳಲ್ಲಿ ಒಂದೆಂದರೆ, ಒಬ್ಬ ಕವಿ ಈ ಗುಹೆಯ ಸೌಂದರ್ಯವನ್ನು ವರ್ಣಿಸಿ ಒಂದು ಕವಿತೆ ರಚಿಸಲು ತೊಡಗಿದ. ಈ ಸೌಂದರ್ಯಕ್ಕೆ ಸರಿಸಾಟಿಯಾಗಬಲ್ಲ ಸೂಕ್ತ ಪದಗಳೇ ಅವನಿಗೆ ಸಿಗಲಿಲ್ಲ. ಅಂತಹ ಪದಗಳಿಗಾಗಿ ಹುಡುಕುತ್ತಾ ಹುಡುಕುತ್ತಾ ಕೊನೆಗೆ ಅವನೇ ಒಂದು ಶಿಲೆಯಾದನಂತೆ! ನಿಜ, ಇಲ್ಲಿನ ಶಿಲೆಯ ಕುಸುರಿ ಕಲೆಯ ವರ್ಣನೆಗೆ ಭಾಷೆಯೇ ಬಡವಾಗುತ್ತದೆ. ಕೊನೆಯಲ್ಲಿ ಎವ್ಲಿನ್ ಇಲ್ಲಿ ಜೀವ ವಿಕಾಸದ ಲೇಸರ್ ಷೋ ತೋರಿಸಿದಳು. ಅದನ್ನು ನೋಡಿ ಈ ಕಲಾ ನಿರ್ಮಿತಿ ಆರಂಭವಾದ ಅವಧಿಯನ್ನು ಊಹಿಸಲೆತ್ನಿಸಿ ಸೋತಾಗ ನೆನಪಾದ ಕವಿವಾಣಿ ‘ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ’. ಗುಹೆಯಿಂದ ಹೊರಬಂದಾಗ ಅಲ್ಲಿ ಹೊಂದಿದ ಅನುಪಮ ಆನಂದಾನುಭವದಿಂದಾಗಿ ಹೊರಗಿನ ಮಾಮೂಲಿನ ಯಾಂತ್ರಿಕ ಜಗತ್ತೂ ಮೆರುಗಿನಿಂದ ಕೂಡಿದ್ದಂತೆನಿಸಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ