ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸೂರ್ಯನ ಅಧ್ಯಯನಕೆ ‘ಆದಿತ್ಯ’

ಬಿ.ಆರ್. ಗುರುಪ್ರಸಾದ್

ಸೂರ್ಯ. ಜೀವಪೋಷಣೆಯೂ ಸೇರಿದಂತೆ ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳಿಗೆ ಕಾರಣೀಭೂತನಾದ ಈ ಬೃಹತ್ ಆಕಾಶಕಾಯವನ್ನು ಕಂಡು ಮಾನವ ಅನಾದಿಕಾಲದಿಂದಲೂ ಬೆರಗಾಗಿದ್ದಾನೆ. ಭೀತನಾಗಿದ್ದಾನೆ. ಅನೇಕ ಬಗೆಯಲ್ಲಿ ಆರಾಧಿಸಿದ್ದಾನೆ. ಅವಲಂಬಿಸಿದ್ದಾನೆ. ಕಾಲಗಣನೆಗೆ ಸಂಬಂಧಿಸಿದ ಭಾರತದ ಪಂಚಾಂಗಗಳು ಸೂರ್ಯಚಂದ್ರರ ತೋರಿಕೆಯ ಚಲನೆಯನ್ನು ಆಧರಿಸಿವೆ. ಈ ನಿಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯೂ ಸೂರ್ಯನನ್ನು ಕುರಿತದ್ದೆ ಆಗಿದ್ದು ಮಕರ ರಾಶಿಗೆ ಅಥವಾ ನಕ್ಷತ್ರಪುಂಜಕ್ಕೆ (ಕೇಪ್ರಿಕಾರ್ನ್‍ಸ್ ಕಾನ್ಸ್ಟಲೇಷನ್) ಸೂರ್ಯನ ಪ್ರವೇಶವನ್ನು ಸೂಚಿಸಿ ಒಂದು ದೃಷ್ಟಿಯಿಂದ ಹೆಚ್ಚು ಬೆಳಕಿರುವ ದಿನಗಳ ಪ್ರಾರಂಭವನ್ನು (ಉತ್ತರಾಯಣ) ಸಾರುತ್ತದೆ.
ಸೂರ್ಯನ ನಿಜ ಸ್ವರೂಪದ ಹೆಚ್ಚಿನ ಅರಿವು ಮೂಡಿದ್ದು ಇಪ್ಪತ್ತನೇ ಶತಮಾನದಲ್ಲಷ್ಟೆ. ವಿಜ್ಞಾನ ಹೆಚ್ಚು ಹೆಚ್ಚು ಬೆಳೆದಂತೆ ಈ ರಾಕೆಟ್ ಯುಗದ ವಿಜ್ಞಾನಿಗಳು ಸೂರ್ಯನೆಂಬ ನಕ್ಷತ್ರವನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು ಹಾಗೂ ಭೂಮಿಯಿಂದ ಹೊರಹೊರಟ ರೋಬೊ ಅಂತರಿಕ್ಷ ನೌಕೆಗಳು ಅಪಾರವಾದ ನೆರವನ್ನು ನೀಡಿವೆ. ಆದರೆ, ಈ ನೌಕೆಗಳು ಸೂರ್ಯನನ್ನು ಕುರಿತ ಈ ಮೊದಲಿನ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದರೊಂದಿಗೇ ಮತ್ತಷ್ಟು ಗಹನವಾದ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಇದರಿಂದಾಗಿ ಸೂರ್ಯನ ಹೆಚ್ಚಿನ ಅಧ್ಯಯನಕ್ಕಾಗಿ ರೋಬೊ ನೌಕೆಗಳನ್ನು ಹಾರಿಬಿಡುವ ಕಾರ್ಯ ಮುಂದುವರಿಯುತ್ತಲೇ ಇದೆ. ಈ ನಿಟ್ಟಿನಲ್ಲಿ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಇಸ್ರೋಸಹ ಆದಿತ್ಯ- ಎಲ್1’ ಎಂಬ ಯೋಜನೆ ಹಾಕಿಕೊಂಡು ಅದನ್ನು ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ.
1957ರಲ್ಲಿ ಅಂತರಿಕ್ಷ ಯುಗ ಆರಂಭವಾದ ನಂತರ ಮಾನವ ನಿರ್ಮಿತ ರೋಬೊ ನೌಕೆಗಳು ಸೌರವ್ಯೂಹದ ಉದ್ದಗಲಕ್ಕೂ ಸಂಚರಿಸಿವೆ. ಮಾನವನ ಈ ರೋಬೊ ಪ್ರತಿನಿಧಿಗಳು ಭೂಮಿಗೆ ಅತಿ ಹತ್ತಿರದಲ್ಲಿರುವ ಆಕಾಶಕಾಯವಾದ ಚಂದ್ರನತ್ತ, ಇಲ್ಲಿನ ಎಲ್ಲ ಗ್ರಹಗಳ, ಅನೇಕ ಉಪಗ್ರಹಗಳ, ಕೆಲವು ಧೂಮಕೇತು ಹಾಗೂ ಕ್ಷುದ್ರಗ್ರಹಗಳತ್ತ (ಆಸ್ಟರಾಯ್ಡ್ಸ್) ತೆರಳಿ ಆ ಕುತೂಹಲಕಾರಿಯಾದ ಲೋಕಗಳನ್ನು ನಮಗೆ ಪರಿಚಯಿಸಿವೆ.
ಭೂಮಿಯಿಂದ ಸೂರ್ಯನಿರುವ ಸರಾಸರಿ ದೂರ ಸುಮಾರು 15 ಕೋಟಿ ಕಿಲೋಮೀಟರ್‌. ಅಷ್ಟು ದೂರ ಅಂತರಿಕ್ಷದ ಭಯಂಕರ ಪರಿಸರದಲ್ಲಿ ತೆರಳಬಲ್ಲ ರೋಬೊ ನೌಕೆಗಳನ್ನು ನಿರ್ಮಿಸುವುದು ಇಂದು ಸಾಧ್ಯವಿದ್ದರೂ 6000 ಡಿಗ್ರಿ ಸೆಲ್ಸಿಯಸ್‌ ಮೇಲ್ಮೈ ಉಷ್ಣತೆಯುಳ್ಳ ಸೂರ್ಯನ ಸಮೀಪಕ್ಕೆ (ಇಲ್ಲಿ ಸಮೀಪಅಂದರೆ ಕೆಲವೇ ಕೋಟಿ ಕಿಲೋಮೀಟರ್‌ಗಳಷ್ಟು!) ತೆರಳಿದ ಮಾನವನಿರ್ಮಿತ ನೌಕೆಯೊಂದು ಸುಟ್ಟು ಬೂದಿಯಾಗುತ್ತದೆ. ಹಾಗೆ ನೋಡಿದರೆ ಸೂರ್ಯನಿಗೆ ಅತಿ ಸಮೀಪದಲ್ಲಿರುವ ಗ್ರಹವಾದ ಬುಧ (ಮರ್ಕ್ಯುರಿ) ಸೂರ್ಯನಿಂದ ಸುಮಾರು ಆರು ಕೋಟಿ ಕಿಲೋಮೀಟರ್ ಸರಾಸರಿ ದೂರದಲ್ಲಿದೆ.
ಸೌರವ್ಯೂಹದ ಇತರ ಆಕಾಶಕಾಯಗಳ ಸಂಬಂಧದಲ್ಲಿ ಮಾಡಿದಂತೆ ಸೂರ್ಯನ ಸಮೀಪಕ್ಕೆ ರೋಬೊ ಪ್ರತಿನಿಧಿಗಳನ್ನು ಕಳುಹಿಸಲು ಇಂದಿನ ತಂತ್ರಜ್ಞಾನದ ಬಳಕೆಯೊಡನೆ ತನಗೆ ಸಾಧ್ಯವಾಗದಿದ್ದರೂ ಮಾನವ ವಿಶಿಷ್ಟ ವೈಜ್ಞಾನಿಕ ಉಪಕರಣಗಳನ್ನು ಹೊತ್ತ ಉಪಗ್ರಹಗಳನ್ನು ಭೂಕಕ್ಷೆಗೆ ಉಡಾಯಿಸಿ ಅವುಗಳ ಮೂಲಕ ಸೂರ್ಯನ ಅನ್ವೇಷಣೆ ನಡೆಸಿದ್ದಾನೆ. ಇದರೊಂದಿಗೇ ಕೆಲವು ಬಾರಿ ರೋಬೊ ನೌಕೆಗಳನ್ನು ಅಂತರಿಕ್ಷದ ಕೆಲವು ವಿಶೇಷ ಪ್ರದೇಶಗಳಲ್ಲಿ ಸ್ಥಾಪಿಸಿ ಅವು ಸದಾಕಾಲ ಅಲ್ಲಿಂದ ಸೌರವೀಕ್ಷಣೆಯನ್ನು ನಡೆಸುವಂತೆ ಮಾಡಿ ಆ ಮೂಲಕ ಸೂರ್ಯನ ಬಗ್ಗೆ ವಿಪುಲವಾಗಿ ಮಾಹಿತಿಯನ್ನು ಸಂಗ್ರಹಿಸಿದ್ದಾನೆ. ಮತ್ತೆ ಕೆಲವು ಬಾರಿ ತಾನು ಹಾರಿಬಿಟ್ಟ ರೋಬೊ ನೌಕೆಗಳು ವಿಶೇಷ ಪಥಗಳಲ್ಲಿ ಕೋಟ್ಯಂತರ ಕಿಲೋಮೀಟರ್ ಸಂಚರಿಸುವಂತೆ ಮಾಡಿ ಆ ಮೂಲಕ ಸೂರ್ಯನ ಧ್ರುವ ಪ್ರದೇಶಗಳ ಬಗ್ಗೆ ಪರಿಜ್ಞಾನ ಹೊಂದಿದ್ದಾನೆ.
ಸೂರ್ಯನು ಅಪಾರವಾದ ಪ್ರಮಾಣದಲ್ಲಿ ಚಿಮ್ಮುವ ಶಾಖ ಮತ್ತು ಬೆಳಕುಗಳಿಂದಾಗಿಯೇ ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳು ನಡೆದು ಜೀವವನ್ನು ಪೋಷಿಸುವ ಪರಿಸ್ಥಿತಿ ಇಲ್ಲಿ ಅಸ್ತಿತ್ವದಲ್ಲಿದ್ದರೂ ಪ್ರತಿ ಹನ್ನೊಂದು ವರ್ಷಗಳ ಸುಮಾರಿಗೆ ಸೂರ್ಯನ ಚಟುವಟಿಕೆಗಳು ಹೆಚ್ಚಿ ಸೂರ್ಯ ಸಿಟ್ಟಾಗುವುದನ್ನು’, ಆ ಮೂಲಕ ಪರಮಾಣು ಕಣಗಳನ್ನು ಹಾಗೂ ಶಕ್ತಿಯುತವಾದ ವಿಕಿರಣಗಳನ್ನು (ರೇಡಿಯೇಷನ್ಸ್) ಯಥೇಚ್ಛ ಪ್ರಮಾಣದಲ್ಲಿ ಮತ್ತೆ ಮತ್ತೆ ಹೊರಚೆಲ್ಲುವುದು ಮಾನವನಿಗಿಂದು ತಿಳಿದಿದೆ.
ಈ ಪ್ರಬಲ ಕಣ-ವಿಕಿರಣ ಪ್ರವಾಹವೇನಾದರೂ ಭೂಮಿಯಿರುವ ದಿಕ್ಕಿಗೆ ಸಾಗಿ ಬಂದರೆ ನಿತ್ಯ ಜೀವನಕ್ಕಾಗಿ ಬಗೆಬಗೆಯ ತಾಂತ್ರಿಕ ಸಾಧನಗಳನ್ನು ಅವಲಂಬಿಸಿರುವ ಈ ಆಧುನಿಕ ಜಗತ್ತಿಗೆ ನಾನಾವಿಧವಾದ ತೊಂದರೆಗಳು ಎದುರಾಗುತ್ತವೆ. ಈ ಹಿಂದೆ ಇಂತಹ ಅವಲಂಬನೆ ಇಲ್ಲದಿರಲಾಗಿ ಸೂರ್ಯನ ಸಿಟ್ಟಿನಿಂದಾಗುವಪರಿಣಾಮ ಜನ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿರಲಿಲ್ಲ.
ಇಂದು ನೂರಾರು ಕೃತಕ ಭೂ ಉಪಗ್ರಹಗಳು ಭೂಮಿಯನ್ನು ವಿವಿಧ ಕಕ್ಷೆಯಲ್ಲಿ ಸುತ್ತುತ್ತಾ ಅನೇಕ ಉಪಯುಕ್ತವಾದ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಆ ಆಧುನಿಕ ಸಾಧನಗಳು ಇಂದು ನೀಡುತ್ತಿರುವ ಸೇವೆಗಳ ಮಹತ್ವದಿಂದಾಗಿ ಅವು ಇಂದು ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಸಂಪರ್ಕ, ಮನರಂಜನೆ, ಹವಾಮಾನ ಕುರಿತ ಅರಿವು, ಸಾರಿಗೆ ಕ್ಷೇತ್ರಗಳ ಅವಿಭಾಜ್ಯ ಅಂಗವಾಗಿವೆ. ಇವುಗಳ ಸೇವೆ ಹಠಾತ್ತನೆ ಸ್ಥಗಿತವಾದಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗುವ ಗೊಂದಲ ಊಹಿಸಲೂ ಸಾಧ್ಯವಾಗುವುದಿಲ್ಲ.
ಆದ್ದರಿಂದ ಸೂರ್ಯನ ಸಿಟ್ಟಿನಿಂದಾಗಿಉಂಟಾಗುವ ಶಕ್ತಿಯುತ ಕಣ ವಿಕಿರಣ ಪ್ರವಾಹವೇನಾದರೂ (ಅವುಗಳ ತೀಕ್ಷ್ಣತೆಯನ್ನು ಆಧರಿಸಿ ಅವುಗಳಿಗೆ ಇಂಗ್ಲಿಷಿನಲ್ಲಿ ಸೋಲಾರ್ ಫ್ಲೇರ್ಸ್‌ ಹಾಗೂ ಕರೋನಲ್ ಮಾಸ್ ಎಜಕ್ಷನ್ಸ್ಎಂಬ ಹೆಸರಿದೆ) ಭೂಮಿಯಿರುವ ದಿಕ್ಕಿಗೇ ಬಂದು ಭೂಮಿಯನ್ನು ಆವರಿಸಿರುವ ಅದರ ಕಾಂತಕ್ಷೇತ್ರವನ್ನು ರಾಚಿದರೆ ಅಂತರಿಕ್ಷದಲ್ಲಿರುವ ಉಪಗ್ರಹಗಳ ಕಾರ್ಯನಿರ್ವಹಣೆಗೆ ತಾತ್ಕಾಲಿಕವಾಗಿ ಇಲ್ಲವೇ ಕಾಯಂ ಆಗಿ ಅಡಚಣೆಯುಂಟಾಗುವ ಸಾಧ್ಯತೆಯಿರುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಉಂಟಾಗುವ ಅರಾಜಕತೆ ಅಂಜಿಕೆ ಉಂಟು ಮಾಡುವಂತಿದೆ.
ಅದೇ ರೀತಿ ಸೂರ್ಯನಿಂದ ಬಂದ ಪ್ರಬಲ ಕಣ ಪ್ರವಾಹವು ಭೂಮಿಯ ಕಾಂತಕ್ಷೇತ್ರಕ್ಕೆ ಅಪ್ಪಳಿಸುವುದರಿಂದ ಉಂಟಾಗುವ ಭೂಕಾಂತ ಬಿರುಗಾಳಿ (ಜಿಯೋಮ್ಯಾಗ್ನೆಟಿಕ್ ಸ್ಟಾರ್ಮ್) ಭೂಮಿಯ ಮೇಲಿನ ಕೆಲ, ಅದರಲ್ಲೂ ಧ್ರುವ ಪ್ರದೇಶಗಳಿಗೆ ಸಮೀಪದಲ್ಲಿರುವ ಸ್ಥಳಗಳಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯುಂಟುಮಾಡಿ ಅದನ್ನು ಸ್ಥಗಿತಗೊಳಿಸಬಹುದು. 1989ರಲ್ಲಿ ಅಂತಹ ಒಂದು ಪ್ರಮುಖ ಘಟನೆ ಕೆನಡಾದಲ್ಲಿ ನಡೆದು ಅಲ್ಲಿನ ಜನ ತತ್ತರಿಸಿಹೋಗಿದ್ದರು.
ಆಧುನಿಕ ವೈಜ್ಞಾನಿಕ ಉಪಕರಣಗಳ ಮೂಲಕ ಸೂರ್ಯನನ್ನು ಅಧ್ಯಯನ ಮಾಡುವುದು ಭಾರತದಲ್ಲಿ 19ನೇ ಶತಮಾನದಲ್ಲೇ ಪ್ರಾರಂಭವಾಯಿತು. ಸೂರ್ಯನಲ್ಲಿ ವಿಪುಲವಾದ ಪ್ರಮಾಣದಲ್ಲಿ ಕಂಡುಬರುವ ಹೀಲಿಯಂ ಧಾತು ಮೊದಲಿಗೆ ಗುರುತಿಸಿದವನು 1868ರಲ್ಲಿ ಆಂಧ್ರದ ಗುಂಟೂರಿನಿಂದ ಕಂಡ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನ ವೀಕ್ಷಣೆ ನಡೆಸಿದ ಪಿಯರ್ ಜಾನ್ಸನ್ ಎಂಬ ಫ್ರೆಂಚ್‌ ವಿಜ್ಞಾನಿ. 1947ರಿಂದ ಇತ್ತೀಚೆಗೆ ಭಾರತದಲ್ಲಿ ಭಾರತೀಯ ವಿಜ್ಞಾನಿಗಳು ಸೂರ್ಯನ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಭಾರತದ ಅಂತರಿಕ್ಷ ಇಲಾಖೆಯ ಅಡಿಯಲ್ಲಿ ಬರುವ ಸೌರವೀಕ್ಷಣಾಲಯವಿದೆ. 1975ರಲ್ಲಿ ಉಡಾಯಿಸಲಾದ ಭಾರತದ ಪ್ರಥಮ ಉಪಗ್ರಹವಾದ ಆರ್ಯಭಟದಲ್ಲೇ ಸೌರವೀಕ್ಷಣಾ ಉಪಕರಣ ಅಳವಡಿಸಲಾಗಿತ್ತು.
ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಇಸ್ರೋಇಂದು ಆದಿತ್ಯ- ಎಲ್1’ ಎಂಬ ಸೌರವೀಕ್ಷಣಾ ಅಂತರಿಕ್ಷ ನೌಕೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದಿತ್ಯಎಂಬುದು ಸೂರ್ಯನ ಇನ್ನೊಂದು ಹೆಸರಾದ್ದರಿಂದ ಅದನ್ನು ಭಾರತದ ಸೌರವೀಕ್ಷಣಾ ನೌಕೆಗೆ ಇಟ್ಟಿರುವುದು ಸಮಂಜಸವಾಗಿದೆ. ಮೊದಲಿಗೆ ಆದಿತ್ಯಭೂಮಿಯನ್ನು ಸುತ್ತುವ ಒಂದು ವೈಜ್ಞಾನಿಕ ಉಪಗ್ರಹವಾಗಿರುವಂತೆ ಯೋಜಿಸಲಾಗಿತ್ತು. ಹೀಗಾಗಿ ಭೂಮಿಯನ್ನು ಸುತ್ತುತ್ತಲೇ ಅದು ಸೌರವೀಕ್ಷಣೆಯನ್ನು ನಡೆಸುವಂತೆ ಅದನ್ನು ನಿರ್ಮಿಸುವ ಕಾರ್ಯಕ್ರಮವಿತ್ತು. ಆ ಕಾರ್ಯಕ್ಕಾಗಿ ಅದರಲ್ಲಿ ಕರೋನೋಗ್ರಾಫ್‌ಎಂಬ ವೈಜ್ಞಾನಿಕ ಉಪಕರಣವನ್ನು ಅಳವಡಿಸಲು ನಿರ್ಧರಿಸಲಾಗಿತ್ತು.
ಕರೋನೋಗ್ರಾಫ್‌ಎಂಬ ಉಪಕರಣವು ಸೂರ್ಯನಿಂದ ಬಂದ ಬೆಳಕು ದೂರದರ್ಶಕವೊಂದನ್ನು ತಲುಪಿದ ನಂತರ ಆ ಪೈಕಿ ಸೂರ್ಯನ ಪ್ರಖರವಾದ ಮೇಲ್ಮೈಯಿಂದಬಂದ ಬೆಳಕನ್ನು ತಡೆದು ಸೂರ್ಯಗ್ರಹಣವೊಂದನ್ನು ಕೃತಕವಾಗಿ ಉಂಟು ಮಾಡುತ್ತದೆ. ಆ ಮೂಲಕ ವಿಜ್ಞಾನಿಗಳು ಸೂರ್ಯನ ಹೊರ ವಾತಾವರಣವಾದ ಕಿರೀಟ’ (ಕರೋನಾ)ವನ್ನು ವೀಕ್ಷಿಸಲು ಸಮರ್ಥರಾಗುತ್ತಾರೆ. ಈ ಉಪಕರಣವನ್ನು ಕಂಡುಹಿಡಿಯುವುದಕ್ಕೆ ಮೊದಲು ಕರೋನಾವನ್ನು ವೀಕ್ಷಿಸಲು ಸಂಪೂರ್ಣ ಸೂರ್ಯಗ್ರಹಣವೊಂದಕ್ಕೆ ಕಾಯಬೇಕಾಗುತ್ತಿತ್ತು.
ಕರೋನಾ ವೀಕ್ಷಣೆಗೇಕೆ ಪ್ರಾಮುಖ್ಯ?
ಸೂರ್ಯನ ಮೇಲ್ಮೈಯಲ್ಲಿ ಉಂಟಾಗುವ ಸೌರಕಲೆ (ಸನ್ ಸ್ಪಾಟ್ಸ್), ಸೌರ ಜ್ವಾಲೆ (ಸೋಲಾರ್ ಫ್ಲೇರ್) ಮುಂತಾದ ಭೀಕರವಿದ್ಯಮಾನಗಳಿಂದ ಜನಿತವಾಗುವ ಬೃಹತ್ ಕಣ ವಿಕಿರಣ ಪ್ರವಾಹವು ತೂರಿಬರುವುದು ಕರೋನಾದ ಮೂಲಕವೇ. ಹೀಗಾಗಿ ಕರೋನಾದ ಸ್ಥಿತಿಯನ್ನು ಅಭ್ಯಸಿಸುವ ಕಾರ್ಯವು ಸೂರ್ಯನಿಂದ ಚಿಮ್ಮಿಬರುವ ಕಣಪ್ರವಾಹವದ ಬಗ್ಗೆ ಸಾಕಷ್ಟು ಮುಂಚೆಯೇ ಅರಿಯುವ ಹಾಗೂ ಆ ಮೂಲಕ ಭೂಮಿಯ ದಿಕ್ಕಿನಲ್ಲಿ ಸಾಗಿಬರುವ ಮಾರಕಕಣಪ್ರವಾಹದ ಬಗ್ಗೆ ನಿಖರವಾದ ಮುನ್ನೆಚ್ಚರಿಕೆ ನೀಡುವ ದೃಷ್ಟಿಯಿಂದ ವಿಜ್ಞಾನಿಗಳಿಗೆ ಅತ್ಯಂತ ಪ್ರಮುಖವೆನಿಸಿದೆ. ಇದರೊಂದಿಗೇ ಕರೋನಾದ ಲಕ್ಷಾಂತರ ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ ಅವರಿಗೆ ಒಗಟಾಗಿದೆ.
ಈ ರೀತಿ ಸೂರ್ಯನ ಕರೋನಾವನ್ನು ಭೂಕಕ್ಷೆಯಿಂದ ಅಭ್ಯಸಿಸುವುದೇ ಬಹುಮಟ್ಟಿಗೆ ಉದ್ದೇಶವಾಗಿದ್ದ ಆದಿತ್ಯಯೋಜನೆಯನ್ನು ನಂತರ ಮಾರ್ಪಾಡುಮಾಡುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಇದರಿಂದಾಗಿ ಆದಿತ್ಯ- ಎಲ್1’ ಈಗ ಕರೋನೋಗ್ರಾಫ್‌ಸಹ ಸೇರಿದಂತೆ ಏಳು ವೈಜ್ಞಾನಿಕ ಉಪಕರಣಗಳನ್ನು ಉಳ್ಳ ಒಂದು ರೋಬೊ ಅಂತರಿಕ್ಷ ನೌಕೆಯಾಗಿ ಪರಿವರ್ತನೆ ಹೊಂದಿದೆ.
ಸೂರ್ಯನ ಕರೋನಾದಿಂದ ಹೊರಹೊಮ್ಮುವ ಅವಕೆಂಪು (ಇನ್‌ಫ್ರಾ ರೆಡ್), ಅತಿನೇರಳೆ (ಅಲ್ಟ್ರಾವಯೊಲೆಟ್), ಕ್ಷ-ಕಿರಣಗಳು (ಎಕ್ಸ್-ರೇಸ್), ಹಾಗೂ ಬೆಳಕನ್ನು ದಾಖಲುಮಾಡಿಕೊಳ್ಳುವ ಮೂಲಕ ಸೂರ್ಯನ ಕೂಲಂಕಷ ಅಧ್ಯಯನಕ್ಕೆ ನೆರವಾಗುವ ಸಾಮರ್ಥ್ಯವಿರುವಂತೆ ಆ ಉಪಕರಣಗಳನ್ನು ರೂಪಿಸಲಾಗುತ್ತಿದೆ. ಸೂರ್ಯನ ಕರೋನಾದ ಉಷ್ಣತೆಯನ್ನು ಹೆಚ್ಚಿಸುವ, ಸೂರ್ಯನಿಂದ ಹೊರಚಿಮ್ಮುವ ಕಣಪ್ರವಾಹದ (ಸೌರಗಾಳಿಅಥವಾ ಸೋಲಾರ್ ವಿಂಡ್) ವೇಗವನ್ನು ವೃದ್ಧಿಸುವ ಹಾಗೂ ಬೃಹತ್ ಪ್ರಮಾಣದ ಕಣ ವಿಕಿರಣ ಪ್ರವಾಹಕ್ಕೆ ಕಾರಣಿಭೂತವಾದ ಭೌತಿಕ ಕ್ರಿಯೆಗಳ ಮೂಲಭೂತ ಸ್ವರೂಪವನ್ನು ಆದಿತ್ಯ-ಎಲ್1’ದ ಉಪಕರಣಗಳ ಮೂಲಕ ಅರ್ಥಮಾಡಿಕೊಳ್ಳಲು ಭಾರತೀಯ ವಿಜ್ಞಾನಿಗಳು ಉದ್ದೇಶಿಸಿದ್ದಾರೆ.
ಇನ್ನು ಆದಿತ್ಯ-ಎಲ್1’ ನೌಕೆಯ ಅಂತರಿಕ್ಷದಲ್ಲಿನ ತಂಗುದಾಣವೂ ಕುತೂಹಲಕಾರಿಯಾದುದಾಗಿದೆ. ಭೂಮಿಯ ಸುತ್ತಲಿನ ಕಕ್ಷೆಗೆ ಅದನ್ನು ಉಡಾಯಿಸುವುದಕ್ಕೆ ಬದಲಾಗಿ ಅದನ್ನು ಭೂಮಿ ಹಾಗೂ ಸೂರ್ಯರ ನಡುವೆ ಭೂಮಿಯಿಂದ ಹದಿನೈದು ಲಕ್ಷ ಕಿಲೋಮೀಟರ್ ದೂರದಲ್ಲಿರುವ ಎಲ್-1 ಲೆಗ್ರಾಂಜಿಯನ್ ಬಿಂದುವಿನ (ಎಲ್-1 ಲೆಗ್ರಾಂಜಿಯನ್ ಪಾಯಿಂಟ್) ಸಮೀಪದ ವಿಶೇಷ ಕಕ್ಷೆಯೊಂದರಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದಿತ್ಯ- ಎಲ್1’ ಆ ಕಕ್ಷೆಯಲ್ಲಿ ಬಹುಮಟ್ಟಿಗೆ ಸ್ಥಿರವಾಗಿ ಇರಲು ಹಾಗೂ ಸೂರ್ಯನನ್ನು ಸದಾಕಾಲ ವೀಕ್ಷಿಸಲು ಸಮರ್ಥವಾಗಿರುತ್ತದೆ. ಭೂಕಕ್ಷೆಯಿಂದ ಈ ಬಗೆಯ ನಿರಂತರವಾದ ವೀಕ್ಷಣೆ ಸಾಧ್ಯವಾಗುವುದಿಲ್ಲ.
ಆದಿತ್ಯ-ಎಲ್1’ ನೌಕೆಯನ್ನು ಭಾರತದ ಧ್ರುವೀಯ ಉಪಗ್ರಹ ಉಡಾವಣಾ ವಾಹನದ (ಪಿಎಸ್ಎಲ್‌ವಿ) ಮೂಲಕ ಮುಂದಿನ ಒಂದೆರಡು ವರ್ಷಗಳಲ್ಲಿ ಅಂತರಿಕ್ಷಕ್ಕೆ ಹಾರಿಬಿಡುವ ಉದ್ದೇಶವಿದೆ. ಇದರ ಉಡಾವಣೆಯನ್ನು ಅನೇಕ ವಿಜ್ಞಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
ಹೀಗೆ ಸಾವಿರಾರು ವರ್ಷಗಳಿಂದಲೂ ಜಗತ್ತಿನ ನಾಗರಿಕತೆಗಳು ಊಟು (ಸುಮೇರಿಯನ್), ರಾ (ಪ್ರಾಚೀನ ಈಜಿಪ್ಟ್), ಸೂರ್ಯ, ಆದಿತ್ಯ (ಭಾರತೀಯ), ಹೀಲಿಯೋಸ್ (ಪ್ರಾಚೀನ ಗ್ರೀಕ್) ಸನ್, ಸಾಲ್ (ಯೂರೋಪಿಯನ್), ಟೋನಟಿಯು (ಅಜ್ಹ್‌ಟೆಕ್ ರೆಡ್ಇಂಡಿಯನ್ ನಾಗರಿಕತೆ) ಮುಂತಾದ ಹೆಸರುಗಳಿಂದ ಆರಾಧಿಸಲ್ಪಟ್ಟ ಸೂರ್ಯನನ್ನು ವೈಜ್ಞಾನಿಕ ಹಾಗೂ ಅರ್ಥಮಾಡಿಕೊಳ್ಳುವ, ಜೊತೆಗೆ ಸೂರ್ಯನ ಸಿಟ್ಟನ್ನುಸಮರ್ಥವಾಗಿ ಎದುರಿಸುವ ಪ್ರಯತ್ನವಿಂದು ನಿರಂತರವಾಗಿ ಮುಂದೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....