ಎಮುನೂರಮ್ಮ ಹುಲಿಗೆಮ್ಮ
ಬರಮಪ್ಪ ದೇವವ್ವರ ಇಡೀ ಕತೆ ಜಾಡಮಾಲಿಗಳ ದುಃಸ್ಥಿತಿಯನ್ನು ಸಾರಾಸಗಟಾಗಿ ನಮ್ಮ ಮುಂದಿಡುತ್ತದೆ. ಅದು
ಲಿಂಗ, ಜಾತಿ, ವರ್ಗ, ಸಮಾಜ, ವಲಸೆ ಮುಂತಾದವುಗಳನ್ನು ಬಿಡಿಬಿಡಿಯಾಗಿಸಿ, ಒಟ್ಟುಗೂಡಿಸಿ ತಿಳಿಸುತ್ತದೆ.
ಜಾಡಮಾಲಿ ಎಂಬುವುದನ್ನು
ಸ್ತ್ರೀವಾಚಿಯಾಗಿಯೂ, ಪುರುಷವಾಚಿಯಾಗಿಯೂ ಬಳಸಲಾಗುತ್ತಿದೆ.
ಇದು ವೃತ್ತಿಸೂಚಕ
ಪದವೇ ಹೊರತು ಜಾತಿಸೂಚಕ ಪದವಲ್ಲ. ಸಮಾಜದ ಕಣ್ಣಲ್ಲಿ ಕೆಟ್ಟದ್ದು, ವಾಸನೆ, ಕೊಳಕು, ಗಲೀಜು, ಅಸಹ್ಯ
ಎನಿಸಿಕೊಂಡಿರುವ ಕೆಲಸವನ್ನು ಯಾರು ಮಾಡುತ್ತಾರೋ ಅಂತಹವರನ್ನು ಜಾಡಮಾಲಿಗಳು ಎಂದು ಕರೆಯುತ್ತಾರೆ.
ಕೆಲವು ಕಡೆ ತೋಟಿಗರು ಎಂದು ಕರೆಯುತ್ತಾರೆ. ಕರ್ನಾಟಕ ಅಷ್ಟೆ ಅಲ್ಲದೆ ಇಡೀ ದೇಶದಲ್ಲಿಯೇ ಜಾಡಮಾಲಿತನವನ್ನು
ಕೆಳಜಾತಿಗಳಷ್ಟೇ ಮಾಡುತ್ತವೆ.
‘ಕರ್ಮವಾರಾಧನೆ ಸೇವೆಯೇ ಪೂಜೆ
ನನ್ನ ಭಾಗಕೆ ಪೊರಕೆ
ಆರತಿ, ಗುಡಿಸುವುದೆ
ನನ್ನ ದೇವರ ಪೂಜೆ
| ನಿನ್ನ ದೇಗುಲದೆಡೆಗೆ
ಹೋದೆನ್ನ ಕಂದನಂ
ಬೈದಿರಿಸು ನೂಕಿದರು
ಶಿವಗುಡಿಯ ಶಿವನು
ಜೋಯಿಸರ ಶಿವನಂತೆ,
ನನ್ನ ಶಿವನು ಮಣ್ಣಿನಲ್ಲಿಹನು,
ನನ್ನ ಶಿವ
ಕೊಳೆತ ಕಸದೊಳಗಿಹನು,
ಕಪ್ಪುರದೊಳಿಲ್ಲ
ಮಂಗಳಾರತಿಯೊಳಿಲ್ಲ,
ಹೂವುಗಳಲಿಲ್ಲ’ (ಕುವೆಂಪು, 2006, ಪು. 7)
ಜಾಡಮಾಲಿಗಳಿಗೆ ಪೊರಕೆ
ಆರತಿ, ಕೊಳೆತ ಕಸವೇ ಶಿವನ ರೂಪ, ಕಾಯಕವೇ ಕೈಲಾಸತತ್ವ, ಜಾಡಮಾಲಿ ಎಂಬುವುದು ಅವಮಾನವಲ್ಲ ಅದು
ಸ್ವಾಬಿಮಾನದ ಪ್ರಶ್ನೆ. ಎಂಬುವುದನ್ನು ಕುವೆಂಪುರವರು ತಮ್ಮ ಜಲಗಾರ ನಾಟಕದಲ್ಲಿ ಜಲಗಾರನ ಮೂಲಕ ಪ್ರತಿಬಿಂಬಿಸುತ್ತಾರೆ.
ಜಾಡಮಾಲಿ ಎಂಬುವುದು
ಹಿಂದಿ ಭಾಷೆಯ ಪದ. ಜಾಡ ಎಂದರೆ ಗಲೀಜು, ಕೊಳಕು, ಜಾಡು ಎಂದರ್ಥ. ಮಾಲಿ ಎಂದರೆ ಶುಚಿ ಮಾಡುವವ, ಕೊಳಕು
ತೆಗೆಯುವವ ಎಂದರ್ಥ. ಸರಕಾರ ಇವರನ್ನು ‘ಪೌರಕಾರ್ಮಿಕ’ ಎಂಬುವುದಾಗಿ ಕರೆಯುತ್ತಿದೆ. ಪೌರ ಎಂದರೆ ಪ್ರಜೆ,
ಜನ ಎಂದಾದರೆ, ಕಾರ್ಮಿಕ ಎಂಬುವುದು ಕೆಲಸಗಾರ ಎಂದಾಗುತ್ತದೆ. ಜನರ ಕೆಲಸವನ್ನು ಮಾಡುವವನು ಯಾರೋ ಅವನು
ಪೌರಕಾರ್ಮಿಕ ಎಂಬುವುದಾಗಿದೆ.
ಜಾಡಮಾಲಿ ಎಂಬುವುದು
ಬೈಗುಳ ರೀತಿಯ ಪದವಾಗಿರುವುದರಿಂದ ಅವರಿಗೆ ಗೌರವ ಸೂಚಿಸುವ ಸಲುವಾಗಿಯೇ ‘ಪೌರಕಾರ್ಮಿಕ’
ಎಂದು ಸರಕಾರ ನಾಮಾಂಕಿತವನ್ನು ಇಟ್ಟಿತು
ಎಂದು ಐ.ಪಿ.ಡಿ ಸಾಲಪ್ಪನವರು 1976 ರಲ್ಲಿ ಸರ್ಕಾರಕ್ಕೆ ಜಾಡಮಾಲಿ ಸ್ಥಿತಿಗತಿಗಳ ಬಗ್ಗೆ ತಿಳಿಸಿದ
ತಮ್ಮ ವರದಿಯಲ್ಲಿ ತಿಳಿಸುತ್ತಾರೆ. ಪೌರಕಾರ್ಮಿಕ ಪದವೂ ಸಹ ಹರಿಜನ ಪದದಂತೆ ವ್ಯಂಗ್ಯವಾಗಿದೆಯಲ್ಲವೆ?
ಹಾಗಾಗಿ ಜಾಡಮಾಲಿ ಎಂದು ನಿದಿರ್ಷ್ಟವಾಗಿ ವೃತ್ತಿಯನ್ನೇ ಗುರುತಿಸುವ ಪದ ಬಳಕೆಯನ್ನು ಮಾಡುವುದು ಸೂಕ್ತವೆನಿಸುತ್ತದೆ.
jaada
ಊಳಿಗಮಾನ್ಯ ಸಮಾಜದ
ಹಳೆಯ ಮೌಲ್ಯಗಳು ಜಾತಿ ಪದ್ಧತಿಯಲ್ಲಿ ಆಳವಾಗಿ ಬೇರುಬಿಟ್ಟ ಸಂದರ್ಭದಲ್ಲಿ ಅಸ್ಪ್ನೃಶ್ಯತೆ ಹುಟ್ಟಿಕೊಂಡಿತು.
ಅದರ ಹಿನ್ನೆಲೆಯಲ್ಲಿಯೇ ಸೇವೆ, ಚಾಕರಿ ವೃತ್ತಿಗಳೂ ಹುಟ್ಟಿಕೊಂಡವು. ಪುರೋಹಿತಶಾಹಿ ಕಾಲಘಟ್ಟದಲ್ಲಿ
ಸೇವೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಈ ಕೀಳು ಜಾತಿಯಲ್ಲಿ ಹುಟ್ಟಿರುವವರು ಮುಂದಿನ ಜನ್ಮದಲ್ಲಿ
ಉತ್ತಮ ಕುಲದಲ್ಲಿ ಜನ್ಮ ತಾಳುವರು ಎಂಬ ಹುಸಿಕಲ್ಪನೆಗಳನ್ನು ಕಟ್ಟಿಕೊಡಲಾಯಿತು. ಇದರ ಮೂಲಕ ಚಾಕರಿ
ವೃತ್ತಿ ಪ್ರಾರಂಭವಾಗಿ, ಊಳಿಗಮಾನ್ಯ ಕಾಲಘಟ್ಟದಲ್ಲಿ ಅವು ಮಾಯವಾಗದ ಹಾಗೆ ಯಾರೂ ಎಂದಿಗೂ ಕಳಚಲಾಗದಷ್ಟು
ಆಳವಾದ ಬೇರುಗಳನ್ನು ಬಿಟ್ಟುಕೊಂಡಿತು.
ಜಾಡಮಾಲಿತನವನ್ನು
ಕೆಳಜಾತಿಗಳೇ ಯಾಕೆ ಮಾಡುತ್ತವೆ?
ಕಸಗುಡಿಸುವವರು ಹಾಗೂ
ಮಲ ಹೊರುವವರ ವೃತ್ತಿಯ ಬಗ್ಗೆ ನಿದಿರ್ಷ್ಟವಾಗಿ ಪ್ರಾಚೀನ ಕಾಲದಿಂದಲೂ ಹೇಗೆ ನಡೆದುಕೊಂಡು ಬಂದಿತೆಂದು
ಹೇಳುವುದು ತ್ರಾಸದಾಯಕ. ಪ್ರಾಚೀನ ಭಾರತದಲ್ಲಿ ಜನಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು. ಹಾಗೂ
ಕೆಲವೇ ಕೆಲವು ನಗರಗಳು ಮಾತ್ರ ಇದ್ದವು. ಈಗ ಇರುವ ಪ್ರಮಾಣದಷ್ಟು ಆಗ ಜಾಡಮಾಲಿತನ ಇರಲಿಲ್ಲ ಎಂದೇ ಹೇಳಬೇಕು.
ಜನಸಂಖ್ಯೆ ಬೆಳೆದಂತೆಲ್ಲಾ
ದೊಡ್ಡ ನಗರಗಳು ಬೆಳೆದವು. ಹಾಗೂ ಅದರಡಿಯಲ್ಲಿಯೇ ಅಲ್ಲಿ ಉದ್ಬವಿಸಿದ ಸಮಸ್ಯೆಗಳನ್ನು ಸುಧಾರಿಸುವುದು
ಕಷ್ಟವಾಯಿತು. ಆದಕಾರಣ ಅನಿವಾರ್ಯವಾಗಿ ಇಂತಹ ನಗರ ಪ್ರದೇಶಗಳ ಸ್ವಚ್ಫತೆಯನ್ನು ಮಾಡಲು ಜನರ ಅಗತ್ಯತೆ
ಕಾಡಿತು. ಈ ನಗರಗಳ ಧೂಳು, ಕಸ, ಮಲಮೂತ್ರ ಎಲ್ಲವನ್ನು ತೆಗೆಯುವ, ಶುಚಿಗೊಳಿಸುವ, ಹೊರುವ ಕೆಲಸ ತುಂಬಾ
ಕಷ್ಟವಾಯಿತು. ಭಾರತದಲ್ಲಿನ ಮೇಲ್ಜಾತಿಗಳು ಇಂತಹ ಕೆಲಸದಲ್ಲಿ ತೊಡಗುವುದು ಪಾಪ, ಅಪರಾಧ ಎಂಬ ಮಿಥ್‍ನ್ನು
ಸೃಷ್ಟಿಸಿದವು. ನಂತರದ ಕಾಲದಲ್ಲಿ ಅವುಗಳನ್ನು ಗಾಢಗೊಳಿತ್ತಾ ಬರಲಾಯಿತು. ಕೊಳಕು, ಗಲೀಜು ಕೆಲಸಗಳು
ಅಸ್ಪ್ನೃಶ್ಯರು ಮಾತ್ರ ಮಾಡಬೇಕು ಅವರು ಆ ಕೆಲಸವನ್ನು ಮಾಡುವುದು ನೈಸರ್ಗಿಕವಾದುದು ಹಾಗೂ ಅದು ಅವರ
ಕರ್ತವ್ಯ ಎಂದು ನಂಬಿಸಲಾಯಿತು.
ಈ ಅಸ್ಪ್ನೃಶ್ಯ ಜಾತಿಗಳು
ತಮ್ಮ ಬರ್ಬರ ಜೀವನದ ಕಾರಣದಿಂದ ಜಾಡಮಾಲಿ ಕೆಲಸದಲ್ಲಿ ತೊಡಗಿ, ಮೇಲ್ಜಾತಿಯ ಚಿಂತನೆಗಳನ್ನು ಸರಿ ಎಂದು
ಒಪ್ಪಿಕೊಂಡರು. ಅವರ ಚಿಂತನೆಗಳಿಗೆ ತಕ್ಕಂತೆ ನಡೆದುಕೊಂಡವು. ಇದೇ ದಾರಿಯಲ್ಲೇ ಮುಂದುವರೆದ ಜಾಡಮಾಲಿ
ವೃತ್ತಿಯಲ್ಲಿ ಇಂದಿಗೂ ನಾವು ಪರಿಶಿಷ್ಟ ಜಾತಿಯವರನ್ನು ಮಾತ್ರ ಕಾಣುತ್ತೇವೆ. ಕರ್ನಾಟಕ ಪರಿಸರದಲ್ಲಿ
ಇವರ ಸಂಖ್ಯೆ 90% ರಷ್ಟು ಇದೆ. ಉಳಿದ ಜಾತಿಗಳು ಕೇವಲ 10% ಮಾತ್ರ. ಕೆಲವು ಜಾತಿಗಳು ಆರ್ಥಿಕ ದುಸ್ಥಿತಿ
ಕಾರಣದಿಂದ ಜಾಡಮಾಲಿ ವೃತ್ತಿಗಳಿಗೆ ಇಳಿದುಕೊಂಡಿವೆ. ಅಂತಹ ಜಾತಿಗಳೆಂದರೆ ಬೇಡ, ಮುಸ್ಲಿಂ, ಕ್ರಿಶ್ಚಿಯನ್,
ಕುರುಬ ಮುಂತಾದವು.
ಇವರ ಸಂಖ್ಯೆ ತೀರಾ
ಕಡಿಮೆ. ಮೇಲ್ವರ್ಗದ ಜಾತಿಗಳು ಇಲ್ಲಿ ಕೆಲಸ ಮಾಡುತ್ತಿರುವುದು ಸರ್ಕಾರಿ ನೌಕರಿ, ಸಂಬಳ ಚೆನ್ನಾಗಿದೆ
ಎಂಬ ಕಾರಣಕ್ಕಾಗಿಯೇ ಹೊರತು ಕೆಲಸ ಮಾಡಬೇಕೆಂದಲ್ಲ. ಈ ಕೆಲಸವನ್ನು ಮಾಡುವುದು ಅವಮಾನವೆಂದೇ ತಿಳಿದ
ಅವರು ಈ ಕೆಲಸಕ್ಕಾಗಿ ನೇಮಕಗೊಂಡರೂ ಹೇಳಿಕೊಳ್ಳುವುದು ಕ್ಲರ್ಕ್ ಅಂತಲೇ. ಕೆಲಸಕ್ಕೆ ದಿನವೂ ಸಹಿ ಹಾಕಿ
ಸಂಬಳ ತೆಗೆದುಕೊಳ್ಳುತ್ತಾರೆ ಹೊರತು ತಾವು ಕೆಲಸ ಮಾಡುವುದಿಲ್ಲ. ತಮ್ಮ ಕೆಲಸವನ್ನು ಕೆಳ ಜಾತಿ ಬಡವರಿಂದಲೇ
ಮಾಡಿಸಿ ಅವರಿಗೆ ಇಂತಿಷ್ಟು ಅಂತ ಕಡಿಮೆ ಹಣವನ್ನು ಕೊಟ್ಟು ಬಾಯಿ ಮುಚ್ಚಿಸುತ್ತಾರೆ.
ಇವರೆಲ್ಲಾ ಮಿನಿಸ್ಟರ್
ಲೆವೆಲ್‍ನಿಂದ ರೆಕಮೆಂಡ್ ಮೇಲೆ ಬಂದವರು. ಅವರು ಈ ಕೆಲಸಕ್ಕೆ ಬಂದು ಸೇರಿಕೊಂಡರೂ ತುಂಬಾ ದಿನಗಳ ಕಾಲ
ಆ ವೃತ್ತಿಯಲ್ಲಿ ಇರುವುದಿಲ್ಲ. ಓ.ಓ.ಡಿ ಮೇಲೆ ಮೇಲ್ಬಡ್ತಿ ಹೊಂದುತ್ತಾರೆ. ಮೇಸ್ತ್ರಿ, ಅಟೆಂಡರ್,
ಪೀವನ್ ಆಗಿ ಹೋಗುತ್ತಾರೆ. ಅನಿವಾರ್ಯವಾಗಿ ಹೋಗಲು ಆಗದೇ ಇದ್ದವರು ಅಲ್ಲೆಯೇ ಇದ್ದು ಗೋಲ್‍ಮಾಲ್ ಮಾಡುತ್ತಾರೆ.
ಆರೋಗ್ಯಾದಿಕಾರಿ, ಗುತ್ತಿಗೆದಾರ, ಇನ್‍ಸ್ಪೆಕ್ಟರ್ ಇವರಿಗೆ ಶಾಮೀಲಾಗಿ ಜಾಡಮಾಲಿಗಳನ್ನು ಶೋಷಿಸುತ್ತಲೇ
ಮುಂದುವರಿಯುತ್ತಾರೆ.
ಇವತ್ತಿಗೂ ಸಾಕಷ್ಟು
ಹೊಲೆಮಾದಿಗರು ತಮ್ಮ ಜೀವನ ವೃತ್ತಿಯಾಗಿ, ಗುತ್ತಿಗೆ ಜಾಡಮಾಲಿಗಳಾಗಿ, ಕಸಗುಡಿಸುವ, ಕಸಎತ್ತುವ ಜಾಡಮಾಲಿ
ವೃತ್ತಿಯನ್ನೇ ಸ್ವೀಕರಿಸಿದ್ದಾರೆ. ಅದು ಅವರಿಗೆ ಅನಿವಾರ್ಯ ಹಾಗೂ ಯಾವುದೇ ಪರ್ಯಾಯಗಳಿಲ್ಲದ ಕಾರಣ,
ಗುತ್ತಿಗೆ ಮಾಲಿಗಳಾಗಿ ಈ ವೃತ್ತಿ ಪಡೆಯಲು ಯಾವುದೇ ಸ್ಪರ್ಧೆಗಳು ಇಲ್ಲದ ಕಾರಣ, ಸಹಜವಾಗಿ ಹಾಗೂ ಸುಲಭವಾಗಿ
ಈ ವೃತ್ತಿ ಅವರಿಗೆ ಎಟಕುತ್ತಿದೆ. ಕಾರಣ ಹೆಚ್ಚಾಗಿ ಹೆಣ್ಣು ಮಕ್ಕಳೇ ಈ ವೃತ್ತಿಯನ್ನು ಅವಲಂಬಿಸಿದ್ದಾರೆ.
ಸಮಾಜ ಬೆಳೆದಂತೆಲ್ಲಾ ಇವರ ಅವಶ್ಯಕತೆಯೂ ಬೆಳೆಯುತ್ತಿದೆ. ಆದರೆ ಸಮಾಜಕ್ಕೆ ಇವರು ಬೇಡದೇ ಇರುವವರು.
ಕರ್ನಾಟಕದಲ್ಲಿ ಕಸಗುಡಿಸುವವರು
ಹಾಗೂ ಜಾಡಮಾಲಿಗಳು ಪ್ರಮಾಣದಲ್ಲಿ ತೆಲಗು ಮಾತನಾಡುವ ಮಾದಿಗರೇ ಇದ್ದಾರೆ. ಇವರು ಆಂಧ್ರಪ್ರದೇಶದಿಂದ
ವಲಸೆ ಬಂದಿರುವವರೇ ಆಗಿದ್ದಾರೆ. ಅವರು ಚಿತ್ತೂರು, ಕರ್ನೂಲ್, ಅನಂತಪುರ, ನೆಲ್ಲೂರ್‍ಗಳಲ್ಲಿ ಕ್ಷಾಮ
ಹಾಗೂ ಅಲ್ಲಿನ ನೈಸರ್ಗಿಕ ವಿಕೋಪಗಳಿಂದ ಜರ್ಜರಿತರಾಗಿ ಇಲ್ಲಿಗೆ ಬಂದಿದ್ದಾರೆ. ಇನ್ನೂ ಕೆಲವರು ಅಲ್ಲಿ
ಭೂಮಾಲಿಕರಲ್ಲಿ ಏಕಪಾರಂಪರ್ಯವಾಗಿ ಕೃಷಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಬಡ್ಡಿ, ಚಕ್ರಬಡ್ಡಿ
ಸಾಲಗಳನ್ನು ತೀರಿಸಲಾಗದೆ ಅದರಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಇವರು ಬಂದ ತಕ್ಷಣ
ಅವರಿಗೆ ತಮ್ಮ ಜೀವನಸ್ಥಿತಿಯ ಸಾಗುವಿಕೆಗೆ ಯಾವುದಾದರೂ ಕೆಲಸದಲ್ಲಿ ತೊಡಗುವುದು ಅನಿವಾರ್ಯವಾಯಿತು.
ತುಂಬಾ ಸುಲಭವಾಗಿ ಸಿಕ್ಕ ಕೆಲಸವೆಂದರೆ ಜಾಡಮಾಲಿತನ. ಆದ್ದರಿಂದ ಅದೇ ವೃತ್ತಿಗೆ ಸೇರಿ, ಅದೇ ವೃತ್ತಿಯಲ್ಲಿ
ಮುಂದುವರಿದರು.
ತಮಿಳು ನಾಡಿನ ಚೆನ್ನಗಿರಿ,
ಹೊಸೂರು, ವೇಲೂರು, ಸತ್ಯಮಂಗಲಗಳಿಂದ ತಮಿಳು ಮಾದಿಗರು ಹೊಟ್ಟೆಪಾಡಿಗಾಗಿ ಕೆಲಸವನ್ನು ಹುಡುಕಿಕೊಂಡು
ಬಂದಿದ್ದಾರೆ. ಕೋಲಾರ ಭಾಗದಲ್ಲಿ ಚಿನ್ನದ ಗಣಿಯಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದರೆ, ಬಳ್ಳಾರಿ
ಜಿಲ್ಲೆಯಲ್ಲಿ ತುಂಗಭದ್ರ ಡ್ಯಾಂ ಕಟ್ಟುವ ಸಮಯದಲ್ಲಿ ಇವರ ಕೆಲಸದ ಹುಡುಕಾಟ ಪ್ರಾರಂಭವಾಗಿದೆ. ಡ್ಯಾಂ
ಹಾಗೂ ಕಾಲುವೆ ಕಾಮಗಾರಿಗೆ ಕೂಲಿಯಾಳುಗಳಾಗಿ ಬಂದು ಸೇರಿ ಕಾಮಗಾರಿ ಪೂರ್ಣಗೊಂಡ ನಂತರ ಅನಿವಾರ್ಯವಾಗಿ
ಸುಲಭವಾಗಿ ಸಿಗುವ ಜಾಡಮಾಲಿತನದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಕೃಷಿ ಕೂಲಿಗಳಾಗಿ, ಕಟ್ಟಡ ನಿರ್ಮಾಣದ
ಕೂಲಿಯಾಳುಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಬೆರಳೆಣಿಕೆಯ ಜನ ಮಾತ್ರ ಇತರ ಆರ್ಥಿಕ ಚಟುವಟಿಕೆಗಳಲ್ಲಿ
ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕೋಲಾರದ ಚಿನ್ನದ
ಗಣಿಗೆ ಕೂಲಿಯಾಳುಗಳಾಗಿ ಬಂದು ಸೇರಿರುವ ತಮಿಳುನಾಡಿನ ದಲಿತರು ಚಿನ್ನದ ಗಣಿ ಮುಚ್ಚಿದ ನಂತರ ಅವರ ಪಾಡು
ಅತಂತ್ರ ಸ್ಥಿತಿಗೆ ತಲುಪಿದೆ. ಅವರ ಅಳಲು ಕೇಳುವವರಾರೂ ಇಲ್ಲ. ಅನೇಕ ಎನ್.ಜಿ.ಓ ಗಳು, ಪತ್ರಿಕೆಗಳು,
ಡಾಕ್ಯುಮೆಂಟ್ ಮಾಡಿದವು, ಪ್ರಸಾರವನ್ನೂ ಮಾಡಿದವು. ಆದರೆ ಪ್ರಯೋಜನವಾಗಲಿಲ್ಲ. ಇಂದಿಗೂ ಯಾವುದೇ ಸೌಕರ್ಯವಿಲ್ಲದೆ
ದೊಡ್ಡ ದೊಡ್ಡ ಸ್ಲಂಗಳಲ್ಲಿ ಇವರ ಜೀವನ ಸಾಗುತ್ತಿದೆ.
ಇಲ್ಲಿನ ಅನೇಕ ದಲಿತ
ಹೆಣ್ಣುಮಕ್ಕಳು ಬೆಂಗಳೂರಿನ ಗಾರ್ಮೆಂಟ್ಗಳಿಗೆ ಕೆ.ಜಿ.ಎಫ್ ನಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ
ಹೋಗಿ ಸಂಜೆ ಬರುತ್ತಾರೆ. ಇವರ ಪರಿಸ್ಥಿತಿ ಅನೇಕ ಹೆಣ್ಣು ಮಕ್ಕಳನ್ನು ವೇಶ್ಯೆ ವೃತ್ತಿಗೂ ಸಹ ಇಳಿಸಿದೆ.
ಇವರದೇ ಆದ ಒಂದು ದೊಡ್ಡ ಭಯಾನಕ ಲೋಕವಿದೆ. ಈ ಪರಿಸ್ಥಿತಿಯನ್ನು ಕುರಿತ ಪ್ರತ್ಯೇಕವಾದ ಅಧ್ಯಯನದ ಅವಶ್ಯಕತೆ
ಇದೆ.
(ಮುಂದುವರೆಯುವುದು
)
?"
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ