ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಹೈಪರ್‌ಲೂಪ್‌: ಭವಿಷ್ಯದ ಸಾರಿಗೆ ವ್ಯವಸ್ಥೆ



ಸುಧಾ ಹೆಗಡೆ

ಜೇಮ್ಸ್‌ ಬಾಂಡ್‌ನ ಮೂನ್‌ ರಾಕರ್‌ಸಿನಿಮಾದಲ್ಲಿ ಬಾಂಡ್‌ ಕೋಶದಂತಹ ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಬಾಹ್ಯಾಕಾಶದ ನಿರ್ವಾತ ವಾತಾವರಣದಲ್ಲಿ ಸರ್ರಂತ ಹೋಗಿ ಮತ್ತೆ ಭೂಮಿಗೆ ಇಳಿಯುವುದನ್ನು ಕಂಡು ಬೆರಗಾಗಿರಬಹುದು. ಬಾಹ್ಯಾಕಾಶಕ್ಕೆ ಸಾಮಾನ್ಯರೂ ನಿಗದಿತ ಮೊತ್ತ ತೆತ್ತು ಹೋಗಿ ಬರುವ ಕನಸು ಯಾವಾಗಲೋ ನನಸಾಗಿಬಿಟ್ಟಿದೆ. ಆದರೆ, ಆ ಕೋಶದೊಳಗೆ ಕೂತು ಈ ಭೂಮಿಯಲ್ಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿರ್ವಾತ ವಾತಾವರಣದಲ್ಲಿ ಧ್ವನಿಯ ವೇಗದಲ್ಲಿ ಪಯಣಿಸ ಬಹುದಾದರೆ... ಅದೂ ಕೂಡ ನನಸಾಗಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಹೈಪರ್‌ಲೂಪ್‌ಎಂಬ ಅದ್ಭುತ ತಂತ್ರಜ್ಞಾನವು ಅದನ್ನು ಸಾಧ್ಯ ಮಾಡಿಕೊಡಲಿದೆ.
ಭವಿಷ್ಯದ ಸಾರಿಗೆ ವ್ಯವಸ್ಥೆಎಂದೇ ಹೇಳಲಾಗುತ್ತಿರುವ ಈ ಹೈಪರ್‌ಲೂಪ್‌ ಸಾರಿಗೆ ವ್ಯವಸ್ಥೆಯೇನಾದರೂ ಜಾರಿಗೆ ಬಂದರೆ ಬೆಂಗಳೂರಿನಿಂದ 140 ಕಿ.ಮೀ. ದೂರದ ಮೈಸೂರನ್ನು ಕೇವಲ 20 ನಿಮಿಷಗಳಲ್ಲಿ ತಲುಪಲು ಸಾಧ್ಯ.
ಏನಿದು ಹೈಪರ್‌ಲೂಪ್‌
ಅಮೆರಿಕದ ಉದ್ಯಮಿ, ಸ್ಪೇಸ್‌ ಎಕ್ಸ್‌ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್‌ ಮಸ್ಕ್‌ 2012ರಲ್ಲಿ ಈ ಐದನೇ ವಿಧದ ಸಾರಿಗೆ ವ್ಯವಸ್ಥೆಯ ಬಗ್ಗೆ ತನ್ನ ಕನಸನ್ನು ಬಿಚ್ಚಿಟ್ಟಾಗ ಜನ ನಕ್ಕರು. ಆದರೆ, ಕಾರ್ಖಾನೆಯಲ್ಲಿ ವಸ್ತುಗಳನ್ನೋ ಅಥವಾ ಕಚೇರಿಯಲ್ಲಿ ಫೈಲುಗಳನ್ನೋ ಒಂದು ಕೊಳವೆಯಲ್ಲಿ ಅತ್ಯಂತ ವೇಗದಲ್ಲಿ ರವಾನಿಸುವ ಈ ತಂತ್ರಜ್ಞಾನವನ್ನು ಜನರನ್ನು ಮತ್ತು ಸರಕನ್ನು ದೂರದೂರಿಗೆ ಸಾಗಣೆ ಮಾಡಲು ಯಾಕೆ ಬಳಸಬಾರದು ಎಂದು ಆತ ವಾದ ಮಂಡಿಸಿದ್ದು ಕೆಲವರಲ್ಲಾದರೂ ಆಲೋಚನೆಯ ಸುಳಿಯನ್ನು ಎಬ್ಬಿಸಿತ್ತು. ಗಂಟೆಗೆ 760 ಮೈಲು ಅಂದರೆ ಸುಮಾರು 1,223 ಕಿ.ಮೀ. ವೇಗದಲ್ಲಿ ಚಲಿಸುವುದೆಂದರೆ... ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಬೆವರಿಳಿಸದೇ ಕ್ಷಣ ಮಾತ್ರದಲ್ಲಿ ಗಮ್ಯ ಸ್ಥಾನವನ್ನು ತಲುಪಬಹುದು.
ಕೊಳವೆ ಮಾರ್ಗವನ್ನು ನಿರ್ಮಿಸುವುದು, ಅದರೊಳಗೆ ಒತ್ತಡವನ್ನು ಕಡಿಮೆ ಮಾಡುವುದು, ಹೆಚ್ಚು ಕಡಿಮೆ ನಿರ್ವಾತ ವಾತಾವರಣವನ್ನು ನಿರ್ಮಿಸುವುದು, ಪ್ರಯಾಣಿಕರು ಕುಳಿತ ಕೋಶದಂತಹ ರಚನೆ ಅತ್ಯಂತ ವೇಗವಾಗಿ ಈ ಕೊಳವೆಯೊಳಗೆ ಚಲಿಸುವುದುಇದೆಲ್ಲ ಈ ಹೂಪರ್‌ ಲೂಪ್ ತಂತ್ರಜ್ಞಾನದಿಂದ ಸಾಧ್ಯ.
ಈ ಕೋಶ ವೇಗೋತ್ಕರ್ಷ ಪಡೆಯಲು ವಿದ್ಯುತ್‌ ಮುನ್ನೂಕುವಿಕೆ (ಎಲೆಕ್ಟ್ರಿಕ್‌ ಪ್ರೊಪಲ್ಶನ್‌)ಯಿಂದ ಸಾಧ್ಯವಾಗುತ್ತದೆ. ಈ ಕೋಶ ಮಾರ್ಗದಿಂದ ಮೇಲೇಳಲು ಅಯಸ್ಕಾಂತೀಯ ತೇಲುವಿಕೆಯನ್ನು (ಮ್ಯಾಗ್ನೆಟಿಕ್‌ ಲೆವಿಟೇಶನ್‌) ಬಳಸಲಾಗುವುದು. ಕೊಳವೆಯಲ್ಲಿ ಅಲ್ಲಲ್ಲಿ ಅಳವಡಿಸಲಾಗುವ ಚೋದಕ ಮೋಟರ್‌ಗಳಿಂದ ವೇಗವನ್ನು ಹೆಚ್ಚುಕಡಿಮೆ ಮಾಡಬಹುದು.
ವೆಚ್ಚವೂ ಕಡಿಮೆ
ಈ ತಂತ್ರಜ್ಞಾನ ಅಳವಡಿಕೆಗೆ ತಗಲುವ ವೆಚ್ಚವೂ ಕಡಿಮೆಯೇ. ಹೈ ಸ್ಪೀಡ್‌ ರೈಲಿಗೆ ತಗಲುವ ವೆಚ್ಚದ ನಾಲ್ಕನೇ ಒಂದು ಭಾಗದಷ್ಟು ಮಾತ್ರ. ಜರ್ಮನಿ ಹಾಗೂ ಚೀನಾದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಅಯಸ್ಕಾಂತೀಯ ತೇಲುವಿಕೆ (ಹಳಿ ಬಿಟ್ಟು ಮೇಲೆ ಚಲಿಸುವ ಅಯಸ್ಕಾಂತೀಯ ತೇಲುವಿಕೆ ತಂತ್ರಜ್ಞಾನದಿಂದ ಚೀನಾದ ಷಾಂಗೈ ನಗರದಿಂದ ಅಲ್ಲಿಯ ವಿಮಾನ ನಿಲ್ದಾಣಕ್ಕೆ ಮ್ಯಾಗ್ಲೆವ್‌ರೈಲು ಗಂಟೆಗೆ 430 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.) ಆಧಾರದ ಸಾರಿಗೆ ವ್ಯವಸ್ಥೆಗೆ ತಗುಲುತ್ತಿರುವ ವೆಚ್ಚದ ಒಂದಂಶ ಮಾತ್ರವಂತೆ. ಜೊತೆಗೆ ಕೋಶ ಚಲಿಸುವಾಗ ಶೇ 30ರಷ್ಟು ಶಕ್ತಿಯನ್ನೂ ಉತ್ಪಾದಿಸುತ್ತದೆ. ಇದನ್ನು ಬೇರೆ ಕಾರ್ಯಕ್ಕೆ ಬಳಸಬಹುದು ಎಂಬುದು ಕಂಪೆನಿಯ ಅಂಬೋಣ.
ಸದ್ಯಕ್ಕೆ ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಅರ್ಧ ಕಿ.ಮೀ. ಉದ್ದದ ಕೊಳವೆ ಮಾರ್ಗ ನಿರ್ಮಿಸಲಾಗಿದ್ದು, ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಸಮುದ್ರ ಮಟ್ಟಕ್ಕಿಂತ 2 ಲಕ್ಷ ಅಡಿಯಷ್ಟು ಮೇಲೆ ಎಷ್ಟು ಒತ್ತಡವಿದೆಯೋ ಅಷ್ಟು ಒತ್ತಡವನ್ನು ಈ ಕೊಳವೆಯಲ್ಲಿ ಸೃಷ್ಟಿಸಲಾಗಿದೆ.
ಇತ್ತೀಚೆಗೆ ದುಬೈನಲ್ಲಿ ಈ ಕೋಶದ ಮಾದರಿಯನ್ನು ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದೆ. ಅಂದುಕೊಂಡಂತೆ ಎಲ್ಲವೂ ಜಾರಿಯಾದರೆ ದುಬೈ ಮತ್ತು ಅಬುಧಾಬಿ ನಡುವೆ 12 ನಿಮಿಷದಲ್ಲಿ ಪಯಣಿಸಬಹುದು. ಗಂಟೆಗೆ 10 ಸಾವಿರ ಪ್ರಯಾಣಿರು ಪಯಣಿಸಬಹುದು.
ಎಲಾನ್‌ ಮಸ್ಕ್‌ ಈಗಾಗಲೇ ನ್ಯೂಯಾರ್ಕ್‌ ಮತ್ತು ವಾಷಿಂಗ್ಟನ್‌ ಡಿಸಿಯನ್ನು ಹೈಪರ್‌ಲೂಪ್‌ ಮೂಲಕ ಜೋಡಿಸಲು ನೆಲದಡಿ ಸುರಂಗ ಮಾರ್ಗ ಕೊರೆಯುತ್ತಿದ್ದು, ಇದು ಪೂರ್ಣಗೊಂಡರೆ ಕೇವಲ ಅರ್ಧ ತಾಸಿನಲ್ಲಿ ಗಮ್ಯ ತಲುಪಬಹುದಂತೆ. ಆದರೆ ಅಮೆರಿಕ ಸರ್ಕಾರ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಲು ಮೀನಮೇಷ ಮಾಡುತ್ತಿದೆ.
ಭಾರತದ ಮೇಲೆ ಕಣ್ಣು
ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಈ ತಂತ್ರಜ್ಞಾನ ಆಧಾರಿತ ಸಾಕಷ್ಟು ಕಂಪನಿಗಳು ಹುಟ್ಟಿಕೊಂಡಿದ್ದು, ಏಷ್ಯಾದ ರಾಷ್ಟ್ರಗಳಲ್ಲಿ ಈ ಯೋಜನೆ ಜಾರಿಗೊಳಿಸುವುದು ಸುಲಭ ಎಂದು ಹೇಳುತ್ತಿವೆ. 2–3 ಕಂಪನಿಗಳು ಭಾರತದಲ್ಲಿ ವಿವಿಧ ರಾಜ್ಯಗಳ ಸರ್ಕಾರಗಳನ್ನು ಸಂಪರ್ಕಿಸಿ ಯೋಜನೆ ಕುದುರಿಸಲು ನೋಡುತ್ತಿವೆ. ಆಂಧ್ರದ ಅಮರಾವತಿ ಹಾಗೂ ವಿಜಯವಾಡಾ ಮಧ್ಯೆ ಭಾರತದ ಮೊದಲ ಹೈಪರ್‌ಲೂಪ್‌ ಸಾರಿಗೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಕಳೆದ ವರ್ಷ ಬೆಂಗಳೂರಿನ ಏರೋ ಇಂಡಿಯ ಷೋನಲ್ಲಿ ಎಲಾನ್‌ ಮಸ್ಕ್‌ನ ಹೈಪರ್‌ಲೂಪ್‌ ಟ್ರಾನ್ಸ್‌ಪೋರ್ಟೇಶನ್‌ ಟೆಕ್ನಾಲಜೀಸ್‌ನ ಬಿಬಾಪ್‌ ಗ್ರೇಸ್ಟಾ ಬೆಂಗಳೂರುಮೈಸೂರು ಮಧ್ಯೆ ಇಂತಹ ಮಾರ್ಗ ನಿರ್ಮಾಣದ ಕನಸು ಬಿತ್ತಿದ್ದರು.
ಬೆಂಗಳೂರುಚೆನ್ನೈ, ಮುಂಬೈಬೆಂಗಳೂರುಚೆನ್ನೈ, ಬೆಂಗಳೂರುತಿರುವನಂತಪುರಂ ಮಧ್ಯೆ ಇಂತಹ ಮಾರ್ಗ ನಿರ್ಮಾಣದ ಪ್ರಸ್ತಾವವನ್ನು ಲಾಸ್‌ ಏಂಜಲೀಸ್‌ನ ಹೈಪರ್‌ಲೂಪ್‌ ಕಂಪನಿ ಮುಂದಿಟ್ಟಿತ್ತು. ಇದೇನಾದರೂ ಕಾರ್ಯಗತಗೊಂಡರೆ ಬೆಂಗಳೂರಿನಿಂದ ಚೆನ್ನೈನಿಂದ 20 ನಿಮಿಷದಲ್ಲಿ ತಲುಪಬಹುದು ಎನ್ನುತ್ತಾರೆ ಕಂಪನಿಯ ಪ್ರತಿನಿಧಿಗಳು.
ಒಟ್ಟಿನಲ್ಲಿ 40ಕ್ಕೂ ಅಧಿಕ ದೇಶಗಳ ಸುಮಾರು 800 ವಿಜ್ಞಾನಿಗಳು ಈ ಯೋಜನೆಗೆ ಶ್ರಮಿಸುತ್ತಿದ್ದು, ವಿವಿಧ ಕಂಪನಿಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ವಹಿವಾಟು ಕುದುರಿಸಲು ಯತ್ನಿಸುತ್ತಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....