ವಿಷಯಕ್ಕೆ ಹೋಗಿ

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ

ಡಾ.ಅ.ಶ್ರೀಧರ ವಿಜ್ಞಾನ ಮತ್ತು ತಂತ್ರಜ್ಞಾನ ಜನಮನದತ್ತ ಸಾವಧಾನವಾಗಿ ಸಾಗುತ್ತಿದ್ದ ಕಾಲ ಇದೀಗ ಅಂತ್ಯಗೊಳ್ಳತ್ತಿದೆ ಎಂಬುದು ವಿಶ್ವದಲ್ಲೆಡೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ತಂತ್ರಜ್ಞಾನದ ಅನ್ವಯಿಕೆಗಳು, ಪ್ರಭಾವಗಳು ಜನಜೀವನದೊಂದಿಗೆ ನೇರವಾಗಿ ಬೆರೆತು ಹೊಸ ಸ್ಪಂದನಗಳನ್ನು ಬಲಗೊಳಿಸುತ್ತಿದೆ. ಮಾಹಿತಿಗಳನ್ನು ಮನೋವೇಗದಲ್ಲಿ ಮತ್ತು ಕಡಿಮೆ ವೆಚ್ಘದಲ್ಲಿಯೇ ಸಾಗಿಸಬಲ್ಲ ವಿದ್ಯುನ್ಮಾನ ಮಾಧ್ಯಮಗಳು ಜೀವನೋದ್ದೇಶಗಳ ಮೂಲ ರೂಪುರೇಷಗಳನ್ನು ಬದಲಾಯಿಸ ಬಲ್ಲದ್ದಗಿವೆ. ಕಂಪ್ಯೂಟರ್ ಯಂತ್ರದ ಬಳಕೆಯಿಂದಾಗಿ ವಿಶ್ವದ ವಿದ್ಯಮಾನಗಳು ಹೆಚ್ಚು ಹೆಚ್ಚು ಸಾರ್ವತ್ರಿಕವಾಗುವ ಸಾಧ್ಯತೆಗಳು ಅಧಿಕವಾಗುತ್ತಿವೆ. ಇದರೊಂದಿಗೆ ವಿಶ್ವದ ಅಗಾಧ ಗಾತ್ರ ಸಂಕುಚಿತಗೊಂಡು ಕಂಪ್ಯೂಟರ್ ತೆರೆ (ಮಾನಿಟರ್) ಯ ಮೇಲೆ ಮೂಡ ಬಲ್ಲದಾಗಿದೆ. ಕಂಪ್ಯೂಟರ್ ತಂತ್ರಜ್ಞಾನದ ವಿಕಾಸವು ವೇಗವಾಗಿ ಮುಂದುವರೆಯುತ್ತಿರುವ ರಭಸದಲ್ಲಿ ನೂರಾರು ವರ್ಷಗಳಿಂದ ಜನಜೀವನವನ್ನು ಹಸನುಗೊಳಿಸುತ್ತಿದ್ದ ಸಾಂಸ್ಕ್ರುತಿಕ ಕಾರಕಗಳ ಮೂಲೋದ್ದೇಶಗಳು ಸಹ ಮಾರ್ಪಾಡಾಗುತ್ತಿವೆ. ಕಂಪ್ಯೂಟರ್ ಯಂತ್ರದ ಸಮಸ್ತ ಸಾಮಥ್ರ್ಯಗಳನ್ನು ಯಶಸ್ವಿಯಾಗಿ ಪಡೆಯುವುದು ನಾವಾಡುವ ಭಾಷೆಯನ್ನು ಬಳಸಿಕೊಳ್ಳುವುದರಿಂದ ಮಾತ್ರ ಸಾಧ್ಯವೆಂಬುದನ್ನು ಸುಮಾರು ಅರ್ಧ ಶತಮಾನಗಳ ಹಿಂದೆಯೇ ಕಂಡುಕೊಳ್ಳಲಾಗಿತ್ತು ಎಂಬುದು ಅಚ್ಘರಿಯ ಸಂಗತಿ. ಕಂಪ್ಯೂಟರ್ ಯಂತ್ರವು ಆದೇಶಗಳನ್ನು ಪರಿಪಾಲಿಸುವಂತೆ ಸೂಚಿಸುವ ಕಮಾಂಡ್ಗಳನ್ನು ಇಂಗ್ಲೀಷ್ ಭಾಷೆಯಲ್ಲಿ ತಂತ್ರಜ್ಞನಿಗಳು ರೂಪಿಸಿಕೊಂಡರು. ಅದು ಸಹ ಅಮೆರಿಕಾದ ವಿಶ್ವವಿದ್ಯಾಲಯಗಳ ತಂತ್ರಜ್ಞಾನ ಪ್ರಯೋಗಾಲಯಗಳಿಂದ ಮೂಡಿಬಂದುದು. ಇವುಗಳು ಅರ್ಥಪೂರ್ಣ ಏಕಪದಗಳಾಗಿದ್ದು , ಟೆಲಿಗ್ರಾಂ ಮಾದರಿಯ ವಾಕ್ಯಗಳ ರೂಪವನ್ನು ಹೊಂದಿರುತ್ತಿದ್ದವು. ಉದಾಹರಣೆಗೆ, ಎರಡು ಸಂಖ್ಯೆಗಳನ್ನು ಕೊಡಿಸಿ ಒಟ್ಟು ಮೊತ್ತವನ್ನು ನೀಡುವ ಕಾರ್ಯವನ್ನು ಇಂಗ್ಲೀಷ್ನ ಆಡ್ ಎಂಬ ಪದವನ್ನು ಬಳಸಿಕೊಂಡು ಮಾಡುವ ವಿಧಾನವನ್ನು ಪರಿಣಾಮಕಾರಿಯಾಗಿ ಯಂತ್ರದಲ್ಲಿ ಅಳವಡಿಸಲಾಗಿತ್ತು. ಈ ಆದೇಶವನ್ನು ನಿರ್ವಹಿಸುವಂತೆ ತಿಳಿಸುವ ಕ್ರಮವನ್ನು ತಂತ್ರಾಂಶ ರಚನೆ ಎಂದು ಕರೆಯಲಾಯಿತು. ಭಾಷೆ ಮತ್ತು ಕಂಪ್ಯೂಟರ್ ಕಾರ್ಯಾಚರಣೆ ಸುಮಾರು 50 ವರ್ಷಗಳ ಹಿಂದೆ ಅಂದು ಬಳಕೆಯಲ್ಲಿದ್ದ ಅತಿ ದೈತ್ಯಾಕಾರದ ಕಂಪ್ಯೂಟರ್ಗೆ ಕಾರ್ಯ ನಿರ್ವಹಿಸಲು ನೀಡಲಾಗುತ್ತಿದ್ದ ಆದೇಶಾವಳಿಗಳನ್ನು ಚಿಹ್ನೆ ಹಾಗೂ ಅಂಕಿಗಳನ್ನು ಬಳಸಿಕೊಂಡು ಸಿದ್ಧಪಡಿಸಲಾಗುತ್ತಿತ್ತು. ಈ ಆದೇಶಾವಳಿಗಳನ್ನು ಜಟಿಲ ಲೆಕ್ಕಾಚಾರಗಳ ಮೂಲಕ ಯಂತ್ರಕ್ಕೆ ಅಳವಡಿಸಲಾಗುತ್ತಿತ್ತು. ಈ ಮಾದರಿ ಕಾರ್ಯವನ್ನು ಮಾಡಲು ಅತ್ಯವಶ್ಯಕವಾಗಿ ಉನ್ನತ ಮಟ್ಟದ ಗಣಿತ ಜ್ಞಾನ ಪಡೆದಿರಬೇಕಾಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಗ್ರೇಸ್ ಹೂಪರ್ ಎಂಬ ಮಹಿಳೆ ಯಂತ್ರಕ್ಕೆ ಆದೇಶಗಳನ್ನು ನೀಡುವ ಭಾಷೆ ಸರಳವಾಗಿದ್ದರೆ ಮಾತ್ರ ಕಂಪ್ಯೂಟರ್ ಬಳಕೆಗೆ ಅರ್ಥವಿದೆ ಎಂದು ನಂಬಿ, ಯಂತ್ರಕ್ಕೆ ಅರ್ಥವಾಗುವ ಕೆಲವು ಇಂಗ್ಲೀಷ್ ಪದಗಳನ್ನು ಬಳಸಿಕೊಂಡು ಆದೇಶಾವಳಿಗಳನ್ನು ಸಿದ್ಧಪಡಿಸಿದರು. ಸುಮಾರು 20 ಇಂಗ್ಲೀಷ್ ಪದಗಳನ್ನು ಬಳಸಿಕೊಂಡು ಕಂಪ್ಯೂಟರ್ ಯಂತ್ರ ಕಾರ್ಯ ನಿರ್ವಹಿಸುವಂತೆ ಮಾಡಿದರು. ಆದರೆ ಇವರ ಆದೇಶಾವಳಿಗಳು ಇಂಗ್ಲೀಷ್ ಭಾಷೆಯಲ್ಲಿವೆ. ಇಂಗ್ಲೀಷ್ ಭಾಷೆ ಕಂಪ್ಯೂಟರ್ ಯಂತ್ರಕ್ಕೆ ಅರ್ಥವಾಗುವುದಿಲ್ಲ ಎಂದು ತಜ್ಞರು ತಿರಸ್ಕರಿಸಿದರು. ಸುಮಾರು ಮೂರು ವರ್ಷಗಳ ಸತತ ಪ್ರಯತ್ನದಿಂದ ಕಂಪ್ಯೂಟರ್ ಯಂತ್ರಕ್ಕೆ ಇಂಗ್ಲೀಷ್ ಭಾಷೆ ಹೇಗೆ ಅರ್ಥವಾಗುತ್ತದೆ ಎಂಬುದನ್ನು ಶ್ರೀಮತಿ ಗೇಸ್ ಹೂಪರ್ ತೋರಿಸಿಕೊಟ್ಟರು. ಇದರಿಂದಾಗಿ ಕಂಪ್ಯೂಟರ್ ಯಂತ್ರಕ್ಕೆ ಸನಿಹವಾದ ಭಾಷೆಯಂದರೆ ನಾವಾಡುವ ಭಾಷೆಯಂಬುದನ್ನು ತಜ್ಞರು ಅನುವೋದಿಸಿದರು. ಅಂದರೆ, ಕಂಪ್ಯೂಟರ್ ಯಂತ್ರಕ್ಕೆ ಆದೇಶಗಳನ್ನು ನೀಡಲು ಉನ್ನತ ಮಟ್ಟದ ಗಣಿತ ಜ್ಞಾನ ಬೇಕಾಗಿಲ್ಲ. ಆಸಕ್ತರೆಲ್ಲರೂ ಆದೇಶಾವಳಿಗಳನ್ನು ರೂಪಿಸಬಹುದು ಎಂದು ಈಕೆ ವಿಶ್ವಕ್ಕೆ ಮೊದಲ ಬಾರಿಗೆ ಪರಿಚಯಿಸಿದರು. ನಾವಾಡುವ ಭಾಷೆಯ ಮೂಲಕ ಯಂತ್ರಕ್ಕೆ ಸೂಚನೆಗಳನ್ನು ನೀಡಲು ಸಾಧ್ಯವಿದೆ ಎಂಬುದನ್ನು ಕೊಬಾಲ್ (COBOL.., ಸಾಮಾನ್ಯ ವ್ಯಾಪಾರೋದ್ದೇಶಿತ ಭಾಷೆ) ತಂತ್ರಾಂಶವನ್ನು ಸಿದ್ಧಪಡಿಸುವುದರ ಮೂಲಕ ತೋರಿಸಿಕೊಟ್ಟರು. 1959ನೆ ಇಸವಿಯಲ್ಲಿ ಕೋಬಾಲ್, ಅಂದರೆ ಕಾಮನ್ ಬಿಸಿನೆಸ್ ಬಳಕೆಗೆ ಬಂತು. ಕಂಪ್ಯೂಟರ್ ಯಂತ್ರಕ್ಕೂ ಸಹ ತಾಯಿನುಡಿಯನ್ನು ಮೊದಲ ಭಾಷೆಯಂಬಂತೆ ಕಲಿಸುವ ಸಾಹಸ ಮಾಡಿದ ಮೊದಲ ಮಹಿಳೆಯಂದು ಶ್ರೀಮತಿ ಗ್ರೇಸ್ ಅವರನ್ನು ಕೊಂಡಾಡಲೇಬೇಕು. ಅದೂ ಅಮೆರಿಕ ದೇಶದಲ್ಲಿ ಮಹಿಳೆಗೆ ಪ್ರಜಾಸತ್ತಾತ್ಮಕ ಸ್ಥಾನಮಾನ ಇಲ್ಲದಿದ್ದ ಸಮಯದಲ್ಲಿ ಈ ಕಾರ್ಯ ನಡೆಯಿತು ಎನ್ನುವುದು ಐತಿಹಾಸಿಕ ಘಟನೆ ಎನ್ನಬಹುದು. ನಾವಾಡುವ ಭಾಷೆಯಲ್ಲಿನ ಕಿರುವಾಕ್ಯಗಳನ್ನು ಬಳಸಿಕೊಂಡು ಯಂತ್ರ ಚಾಲನೆಯ ಕಾರ್ಯ ವಿಧಾನಗಳನ್ನು ಮಾಡುವ ಕ್ರಮದಿಂದಾಗಿ ಕಂಪ್ಯೂಟರ್ ಯಂತ್ರದ ಮಹತ್ವ ಹೆಚ್ಚಾಯಿತು. ಕಂಪ್ಯೂಟರ್ ಯಂತ್ರಾಂಶ ಹಾಗೂ ತಂತ್ರಾಂಶಗಳನ್ನು ಉದ್ದೇಶಿತ ಕಾರ್ಯಗಳನ್ನು ಮಾಡಲು ನಿಯೋಜಿಸುವ ಆದೇಶಾವಳಿಗಳನ್ನು ಬರೆಯುವ ಕ್ರಮ ಇಂದು ಪ್ರಭಾವಶಾಲಿ ಉದ್ದಿಮೆಯಾಗಲು ಕಾರಣವಾಗಿದೆ. ಅಂದರೆ ಭಾಷಾ ಸಹಯೋಗದಿಂದ ಕಂಪ್ಯೂಟರ್ ಕಾರ್ಯ ಬಹು ಪರಿಣಾಮಕಾರಿಯಾಗುವುದಕ್ಕೆ ಕಾರಣವಾಗಿದೆ. ಆದೇಶಾವಳಿಗಳು ಸಮಸ್ಯೆಗಳನ್ನು ಬಿಡಿಸುವಂತೆ ಕಂಪ್ಯೂಟರ್ ಯಂತ್ರಕ್ಕೆ ಸೂಕ್ತ ರೀತಿಯಲ್ಲಿ ತಿಳಿಸುತ್ತವೆ. ಸಮಸ್ಯೆ ಪರಿಹಾರ ಕಾರ್ಯವನ್ನು ಮಾಡುವ ವಿಧಿವಿಧಾನಗಳನ್ನು ಯಾವ ಭಾಷೆಯಲ್ಲಿ ಬೇಕಾದರೂ ರಚಿಸಬಹುದು. ಭಾಷೆಗಳನ್ನು ಬಳಸಿಕೊಂಡು ತಂತ್ರಾಂಶಗಳನ್ನು ಸಿದ್ಧಪಡಿಸುವ ತಾಂತ್ರಿಕ ಪದ್ಧತಿ ಇಂದು ಸರಳವಾಗಿ ಲಭ್ಯವಿದೆ. ಆದರೂ ಅನೇಕ ಕಾರಣಗಳಿಂದಾಗಿ ತಂತ್ರಾಂಶಗಳನ್ನು ಬಳಸುವ ವಿಧಾನಗಳನ್ನು ಕಲಿಸುವ ಕ್ರಮದಲ್ಲಿ ಪ್ರಬಲ ಭಾಷೆ ಅನಿವಾರ್ಯವೆಂಬ ಭಾವನೆಯನ್ನು ಉತ್ತೇಜಿಸಲಾಗುತ್ತಿದೆ. ಕಂಪ್ಯೂಟರ್ ಯಂತ್ರದಲ್ಲಿ ನಾವಾಡುವ ಭಾಷೆ ಅಥವಾ ಪ್ರಾಂತೀಯ ಭಾಷೆಯನ್ನೂ ಸಹ ಬಳಸಲು ಸಾಧ್ಯವಿದೆ ಎಂಬುದನ್ನು ಸಾಮಾನ್ಯ ಜನರ ತಿಳುವಳಿಕೆಗೆ ತರಬೇಕಾಗಿದೆ. ಇಂದು ವ್ಯಾಪಕವಾಗಿ ಜನಪ್ರಿಯವಾಗುತ್ತಿರುವ ಜನಪರ ತಂತ್ರಜ್ಞಾನವೆಂದರೆ ಮಾಹಿತಿ ತಂತ್ರಜ್ಞಾನವೆನ್ನಬಹುದು. ಮಾಹಿತಿ ತಂತ್ರಜ್ಞಾನ ವೇಗವಾಗಿ ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರಲು ಹತ್ತಾರು ಕಾರಣಗಳಿವೆ. ಮುಖ್ಯವಾಗಿ ಜನಾಡಳಿತ ಮತ್ತು ಸಾಮಾನ್ಯ ವಾಣಿಜ್ಯ ವಹಿವಾಟುಗಳನ್ನು ಇದು ಸರಾಗವಾಗಿ ನೆರವೇರಿಸಬಲ್ಲ ಕಾರಣದಿಂದಾಗಿ ಈ ತಂತ್ರಜ್ಞಾನದ ಪ್ರಾಬಲ್ಯ ಹೆಚ್ಚಾಗಿದೆ. ಇಂದು ಮಾಹಿತಿ ತಂತ್ರಜ್ಞಾನದ ನಿರೂಪಣೆಯನ್ನು ಸಹ ಈ ನೆಲೆಯಿಂದಲೇ ಮಾಡಲಾಗಿದೆ ಎಂದರೆ ತಪ್ಪಾಗಲಾರದು. ಮಾಹಿತಿ ತಂತ್ರಜ್ಞಾನವೆಂದರೆ ಎಲ್ಲಾ ರೀತಿಯ ಮಾಹಿತಿಗಳನ್ನು ವಿತರಿಸಲು ಬಳಸುವ ವಿದ್ಯುನ್ಮಾನ ಮಾಧ್ಯಮವೆನ್ನಬಹುದು. ಈ ಮಾಧ್ಯಮದಲ್ಲಿ ಕಂಪ್ಯೂಟರ್ ಯಂತ್ರಾಂಶ (ಹಾರ್ಡ್ವೇರ್), ತಂತ್ರಾಂಶ (ಸಾಫ್ಟ್ವೇರ್) ಕಂಪ್ಯೂಟರ್ ಆಧಾರಿತ ಸೇವೆಗಳು. ಸಂವಹನ ಕಾರ್ಯಗಳನ್ನು ಸಾಧ್ಯವಾಗಿಸುವ ತಂತ್ರಜ್ಞಾನಗಳೂ ಸೇರಿವೆ. ಅಂದರೆ ಧ್ವನಿ, ದತ್ತಾಂಶ ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಬಳಕೆಗೆ ಸರಿಹೊಂದುವಂತೆ ಮಾಡುವ ಎಲ್ಲಾ ಕಾರ್ಯಗಳನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇರಿಸಬಹುದಾಗಿದೆ. ಭಾರತದಲ್ಲಿ ಕಂಪ್ಯೂಟರ್ ಬೆಳವಣಿಗೆ ಭಾರತದಲ್ಲಿ ಕಂಪ್ಯೂಟರ್ ತಂತ್ರಜ್ಞಾನ 1950ರ ದಶಕದ ಮಧ್ಯದಲ್ಲಿ ಹುಟ್ಟಿತು. ಅಂದಿನ ಬಾಂಬೆಯಲ್ಲಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿಐಎಫ್ಆರ್)ಯಲ್ಲಿ ಆಟೋಮ್ಯಟಿಕ್ ಕ್ಯಲಿಕ್ಯುಲೇಟರ್ ಎಂಬ ಯಂತ್ರವನ್ನು ತಯಾರಿಸುವುದರ ಮೂಲಕ ತಂತ್ರಜ್ಞಾನ ಯುಗಕ್ಕೆ ಕಾಲಿಟ್ಟಿತು ಎನ್ನಬಹುದು. ಈ ಯಂತ್ರವನ್ನು ತಯಾರಿಸಿದ ಸಮಯದಲ್ಲಿ ವಿದ್ಯುನ್ಮಾನ ತಂತ್ರಜ್ಞಾನದ ಬೆಳವಣಿಗೆಯ ಆಕಾರಗಳು ಸಹ ಇಲ್ಲಿ ಮೂಡಿರಲಿಲ್ಲವೆನ್ನಬಹುದು. ವಿದ್ಯುನ್ಮಾನ ಕ್ಷೇತ್ರವನ್ನು ರೂಪಿಸುವ ಶಕ್ತಿಗಳು ನಮ್ಮ ದೇಶದ ಹೊರಗಿನದಾಗಿದ್ದವು. ಕಳಪೆ ಗುಣಮಟ್ಟದ ಎರವಲು ತಂತ್ರಜ್ಞಾನದ ಮೂಲಕವೇ ನಮ್ಮ ವಿದ್ಯುನ್ಮಾನ ತಂತ್ರಜ್ಞಾನ ಕ್ಷೇತ್ರದ ಉತ್ಪಾದನೆ ಪ್ರಾರಂಭವಾದದ್ದು. 1960ರ ಯುದ್ಧದ ವಾತಾವರಣವು ನಮ್ಮ ಅಂದಿನ ಕೇಂದ್ರ ಸರ್ಕಾರವನ್ನು ತಾಂತ್ರಿಕ ಬೆಳವಣಿಗೆಯತ್ತ ಹೆಚ್ಚು ಗಮನ ನೀಡುವಂತೆ ಮಾಡಿತು. ಭಾರತ ಸರ್ಕಾರವು ವಿದ್ಯುನ್ಮಾನ ಸಮಿತಿಯೊಂದನ್ನು ಡಾ.ಹೋಮಿ ಜಹಾಂಗೀರ್ ಭಾಭಾ ಅವರ ನೇತೃತ್ವದಲ್ಲಿ ರಚಿಸಿತು. ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ನೆಲದಲ್ಲಿಯೇ ಸಣ್ಣ ಹಾಗೂ ಮಧ್ಯಮ ಶಕ್ತಿಯ ಕಂಪ್ಯೂಟರ್ಗಳನ್ನು ತಯಾರಿಸುವುದಕ್ಕೆ ಹೆಚ್ಚು ಉತ್ತೇಜನ ನೀಡಿದರು. ಉತ್ತಮ ಗುಣಮಟ್ಟವಲ್ಲದ ತಂತ್ರಜ್ಞಾನವನ್ನು ಇಂಗ್ಲೆಂಡ್ ಮತ್ತು ಅಮೆರಿಕಾದ ದೊಡ್ಡ ಕಂಪ್ಯೂಟರ್ ಕಂಪನಿಗಳು ನಾನಾ ರೀತಿಯ ಆಮಿಷಗಳನ್ನು ಒಡ್ಡಿ ನಮ್ಮ ಮೇಲೆ ಹೇರಿರುವ ಪ್ರಸಂಗಗಳು ಇವೆ. 1970ರಲ್ಲಿ ಭಾರತ ಸರ್ಕಾರ ಕಂಪ್ಯೂಟರ್ ಬೆಳವಣಿಗೆಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸುವುದಕ್ಕಗಿ ವಿದ್ಯುನ್ಮಾನ ಸಮಿತಿಯೊಂದನ್ನು ರಚಿಸಿತು. ವಿಕ್ರಂ ಸಾರಾಬಾಯಿ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಸಮಿತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪ್ಯೂಟರ್ಗಳ ಉತ್ಪಾದನೆಯ ಕಾರ್ಯವನ್ನು ಭಾರತ ಸರ್ಕಾರದ ಎಲೆಕಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐ) ಎಂಬ ಸಂಸ್ಥೆಯ ಮೂಲಕ ಮಾಡಲು ಉತ್ತೇಜಿಸಿತು. ಉದ್ದೇಶಿತ ಗುರಿಗಳನ್ನು ಈ ಸಂಸ್ಥೆ ನಾನಾ ಕಾರಣಗಳಿಂದ ಪೂರ್ಣವಾಗಿ ಸಾಧಿ ಸಲು ಆಗಲಿಲ್ಲ. 1984ರಲ್ಲಿ ರಾಜೀವ್ ಗಾಂಧಿಯವರ ಸರ್ಕಾರ ಕಂಪ್ಯೂಟರ್ ಯಂತ್ರವನ್ನು ಆಡಳಿತದಲ್ಲಿ ಬಳಸುವುದರಿಂದ ಅನೇಕ ಜನಪರ ಕಾರ್ಯಗಳನ್ನು ವೇಗವಾಗಿ ಮಾಡಲು ಸಾಧ್ಯವಿದೆ ಎಂಬುದನ್ನು ನಂಬಿ, ಇದರ ಬೆಳವಣಿಗೆಗೆ ಪೂರಕವಾದ ನಿಯಮಾವಳಿಗಳನ್ನು ರೂಪಿಸುವುದಕ್ಕೆ ಸೂಕ್ತ ತಜ್ಞರ ಸಲಹಾ ಸಮಿತಿಯನ್ನು ರಚಿಸಿತು. ಅಮೆರಿಕ ದೇಶದಲ್ಲಿ ಕಂಪ್ಯೂಟರ್ ಕ್ರಾಂತಿ ವೇಗವಾಗಿ ಹರಡುತ್ತಿತ್ತು. ಹೆಚ್ಚು ಹೆಚ್ಚು ಜನ ಕಂಪ್ಯೂಟರ್ ಯಂತ್ರವನ್ನು ಖರೀದಿಸುವ ಸಾಮಥ್ರ್ಯ ಪಡೆದಿದ್ದರು. ಈ ಬೆಳವಣಿಗೆಯ ಪ್ರಭಾವದಿಂದಾಗಿ ವಿಶ್ವದ ಬಹುಪಾಲು ಮುಂದುವರೆದ ರಾಷ್ಟ್ರಗಳು ಸಹ ಕಂಪ್ಯೂಟರ್ ಬಳಕೆಯಿಂದಾಗುವ ಆರ್ಥಿಕ, ಸಾಮಾಜಿಕ ಲಾಭಗಳೇನೆಂಬುದನ್ನು ಕಂಡುಕೊಂಡರು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸಣ್ಣ ಗಾತ್ರದ ಪರ್ಸನಲ್ ಕಂಪ್ಯೂಟರ್ (ಪಿ.ಸಿ) ಕಡಿಮೆ ಬೆಲೆಗೆ ತಯಾರು ಮಾಡಲು ಅನೇಕ ಕಂಪನಿಗಳು ವಿದ್ಯುನ್ಮಾನ ಸಂಶೋಧನೆಯನ್ನು ಎಲ್ಲಾ ರೀತಿಯಲ್ಲಿ ಉತ್ತೇಜಿಸಿದವು. ಈ ಬೆಳವಣಿಗೆಯಿಂದಾಗಿ ಪಿಸಿ ತಯಾರಿಕೆಯಲ್ಲಿ ಹೊಸ ಹುರುಪು ಮೂಡಿತು. ಒಂದೆರಡು ವರ್ಷಗಳಲ್ಲಿ ಕೋಟ್ಯಂತರ ಪಿ.ಸಿ.ಗಳನ್ನು ಉತ್ಪಾದಿಸಿ ಮಾರಾಟ ಮಾಡಲು ಕಂಪನಿಗಳಾದ ಐಬಿಎಂ, ಕಾಂಪ್ಯಾಕ್, ಡೆಲ್ ಇತ್ಯಾದಿ ಸಂಸ್ಥೆಗಳು ಮುಂದಾದವು. ಪಿ.ಸಿಗಳ ಕಾರ್ಯ ಚಾಲನೆಯನ್ನು ನಿರ್ವಹಿಸುವ ತಂತ್ರಾಂಶಗಳು (ಸಾಫ್ಟ್ವೇರ್) ಅತ್ಯಂತ ಪ್ರಭಾವಶಾಲಿ ಉದ್ದಿಮೆಯಾಗುವುದಕ್ಕೆ ಅವಕಾಶ ಸೃಶ್ಟಿಯಾಯಿತು. ತಂತ್ರಾಂಶಗಳು ಕಂಪ್ಯೂಟರ್ ಸಾಮಥ್ರ್ಯವನ್ನು ನೂರಾರು ಕ್ಷೇತ್ರಕ್ಕೆ ಅನ್ವಯಿಸಬಲ್ಲದು ಎಂಬುದನ್ನು ಯುವ ಹವ್ಯಾಸಿ ತಂತ್ರಜ್ಞಾನ ನಿಪುಣರು ತೋರಿಸಿಕೊಟ್ಟರು. ಅನೇಕ ರೀತಿಯ ವಾಣಿಜ್ಯ ಹಾಗೂ ವ್ಯವಹಾರಗಳನ್ನು ಅತಿ ವೇಗವಾಗಿ ಮತ್ತು ಸರಳವಾಗಿ ಪಿ.ಸಿ.ಗಳ ಮೂಲಕ ಮಾಡಬಲ್ಲ ತಂತ್ರಾಂಶಗಳನ್ನು ಸಿದ್ಧಪಡಿಸುವ ಉದ್ದಿಮೆ ಅನೇಕ ರಾಷ್ಟ್ರಗಳಲ್ಲಿ ಪ್ರಾರಂಭವಾಯಿತು. ಭಾರತದಲ್ಲಿಯೂ ಕೂಡ ತಂತ್ರಾಂಶವನ್ನು ಹೊರರಾಷಗಳಿಗೆ ರಫ್ತು ಮಾಡುವ ಉದ್ದಿಮೆಗಳು ಯಶಸ್ವಿಯಾಗಿ ವಿಶ್ವ ಮಾರುಕಟ್ಟೆಯಲ್ಲಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದವು. ಅಮೆರಿಕಾದ ಮೆಕ್ರೋಸಾಫ್ಟ್ ಕಂಪನಿ ಈ ಸಮಯದಲ್ಲಿ ಕಂಪ್ಯೂಟರ್ ತಂತ್ರಾಂಶದ ಮೂಲಕ ಎಣಿಸಲಾರದಷ್ಟು ಲಾಭ ಗಳಿಸಿ ವಿಶ್ವ ವಿಖ್ಯಾತಿ ಪಡೆಯಿತು. ರಾಜೀವ್ ಗಾಂಧಿಯವರ ಸರ್ಕಾರ ಕಂಪ್ಯೂಟರ್ ಬೆಳವಣಿಗೆಯನ್ನು ಉತ್ತೇಜಿಸಲು ಈ ಕಾರಣಗಳು ಪ್ರಮುಖವೆನ್ನಬಹುದು. ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಉದ್ದಿಮೆಯಾಗಿ 1980ರ ದಶಕದಲ್ಲಿ ಇನ್ಫೋಸಿಸ್, ವಿಪ್ರೋ ಮುಂತಾದ ಸಂಸ್ಥೆಗಳು ಪ್ರಾರಂಭಿಸಿದವು. ಬೆಂಗಳೂರು ನಗರವನ್ನು ಮಾಹಿತಿ ತಂತ್ರಜ್ಞಾನದ ಬೀಡನ್ನಗಿ ಕೇವಲ ಒಂದು ದಶಕದಲ್ಲಿ ಮಾಡುವಲ್ಲಿ ಈ ಸಂಸ್ಥೆಗಳು ಯಶಸ್ವಿಯಾದವು. ತಂತ್ರಾಂಶಗಳ ಸೇವಾ ವಿತರಣೆ ಕಾರ್ಯವನ್ನು ಮಾಡುವುದರಿಂದ ಅಪಾರವಾದ ವಿದೇಶಿ ವಿನಿಮಯವನ್ನು ಗಳಿಸಿಕೊಟ್ಟು ವಿಶ್ವದೆಲ್ಲೆಡೆ ಉತ್ತಮ ತಂತ್ರಾಂಶ ಕಂಪನಿಯೆಂದು ಇನ್ಫೋಸಿಸ್ ಹೆಸರು ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವಾ ಉದ್ದಿಮೆಗಳು ಅನೇಕ ರೀತಿಯ ಸೇವೆಗಳನ್ನು ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಳ್ಳುವುದರ ಮೂಲಕ ವಿಶ್ವದಾದ್ಯಂತ ಸಾವಿರಾರು ಉದ್ದಿಮೆದಾರರಿಗೆ ಸೇವೆಗಳನ್ನು ಒದಗಿಸುವುದರ ಮೂಲಕ ಕರ್ನಾಟಕ ರಾಜ್ಯದ ಸಂಪನ್ಮೂಲಗಳನ್ನು ಉತ್ತಮಗೊಳಿಸುವಂತೆ ಮಾಡಿದೆ. ವಿಪ್ರೋ ಮುಂತಾದ ಅನೇಕ ಸ್ವದೇಶಿ, ವಿದೇಶಿ ಹಾಗೂ ಬಹುರಾಷ್ಟ್ರಿಯ ತಂತ್ರಾಂಶ ಸಂಸ್ಥೆಗಳು ಒಂದರ ನಂತರ ಮತ್ತೊಂದರಂತೆ ಹುಟ್ಟುವುದಕ್ಕೆ ಮತ್ತು ನೆಲೆಯೂರುವುದಕ್ಕೆ ಈ ಮಾದರಿಯ ತಂತ್ರಜ್ಞಾನ ಪ್ರಮುಖ ಕಾರಣ. ಇದಲ್ಲದೆ ನಾಡಿನಲ್ಲಿರುವ ಉತ್ತಮ ಹವಾಮಾನ, ಸುಶಿಕ್ಷಿತರು, ನೆಮ್ಮದಿಯಿಂದ ಕೆಲಸ ಮಾಡಲು ಬಿಡುವ ಜನಸಮುದಾಯ ಇತ್ಯಾದಿ ಕಾರಣಗಳೆನ್ನಬಹುದು. ಇಂದು ಬೆಂಗಳೂರನ್ನು ಸಿಲಿಕಾನ್ ನಗರವೆಂದು ಕರೆಯಲು ಈ ಸಂಸ್ಥೆಗಳ ಸಾಧನೆಗಳು ಕಾರಣವಾಗಿವೆ. ತಂತ್ರಾಂಶ ತಯಾರಿಕೆಯ ಮೂಲಕ ಯುವ ಜನರಲ್ಲಿ ಹೊಸ ಚಿಂತನೆ, ಚೈತನ್ಯ ಹಾಗೂ ಉದ್ಯಮಶೀಲತ್ವವನ್ನು ಮೂಡಿಸುವಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಅನೇಕ ಕಂಪ್ಯೂಂಟರ್ ತಂತ್ರಾಂಶ, ಯಂತ್ರಾಂಶ ಮತ್ತು ವಿದ್ಯುನ್ಮಾನ ಕಂಪನಿಗಳು ಕಾರಣವೆನ್ನಬಹುದು. ವಿಶ್ವದಾದ್ಯಂತ ಉಂಟಾದ ತಂತ್ರಜ್ಞಾನದ ಸಾಮಥ್ರ್ಯವನ್ನು ಅರ್ಥಪೂರ್ಣವಾಗಿ ಮತ್ತು ಲಾಭದಾಯಿಕವಾದ ಉದ್ದಿಮೆಯಾಗಿ ಮುಂದುವರೆಯುವಂತೆ ಮಾಡುವುದರೊಂದಿಗೆ ಸಮುದಾಯದ ಒಲವು ತಂತ್ರಜ್ಞಾನದತ್ತ ಸಾಗುವಂತೆ ಮಾಡಲು ಬೇಕಾದ ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಇಂದಿನ ಸರ್ಕಾರ ಹಮ್ಮಿಕೊಂಡಿದೆ. ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯಡಿಯಲ್ಲಿ ಭಾರತೀಯ ಸಾಫ್ಟ್ವೇರ್ ಪಾರ್ಕ್ಗಳು (ಎಸ್.ಟಿ.ಸಿ.ಐ) ಎಂಬ ಹೆಸರಿನ ಸಂಸ್ಥೆಯೊಂದನ್ನು 1990ರಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಸ್ತಾಪಿಸಲಾಯಿತು. ಈ ಸಂಸ್ಥೆಯ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ತಂತ್ರಾಂಶ ತಯಾರಿಕೆದಾರರಿಗೆ ರಫ್ತು ಮಾಡುವುದಕ್ಕೆ ಬೇಕಾದ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಬಹುವೇಗವಾಗಿ ಬೆಳೆಯಲು ಮುಖ್ಯ ಕಾರಣವೆಂದರೆ ಕನ್ನಡ ಜನತೆ ಮತ್ತು ಕನ್ನಡ ಭಾಷೆ ಎನ್ನಬಹುದು. ಏಕೆಂದರೆ ಹೊಸ ತಂತ್ರಜ್ಞಾನಗಳನ್ನು ಸರಳವಾಗಿ ತನ್ನದಾಗಿಸಿಕೊಳ್ಳುವ ಸಾಮಥ್ರ್ಯ ಕನ್ನಡ ಸಂಸ್ಕ್ರುತಿಯ ಅತ್ಯಂತ ಪ್ರಭಾವಶಾಲಿ ಸಾಮಥ್ರ್ಯವಾಗಿದೆ. ಕನ್ನಡದ ನೆಲದಲ್ಲಿ ತಂತ್ರಜ್ಞಾನಗಳು ಬೇರೂರಲು ಇಲ್ಲಿರುವ ಕನ್ನಡ ಸಮುದಾಯದ ಈತಾಸ್ (ethos)ಗಳೇ ಕಾರಣ. ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ತಾಂತ್ರಿಕ ಶಿಕ್ಷಣ ಮುನ್ನಡೆ ಸಾಧ್ಯವಾಗದಿರಲು ಪ್ರಾಂತೀಯತೆಯೇ ಕಾರಣವೆನ್ನಬಹುದು. ಇಂದಿಗೂ ಸಹ ನಮ್ಮ ರಾಷ್ಟ್ರದ ಅನೇಕ ರಾಜ್ಯಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಒಂದು ವಿಧದ ಅಸಡ್ಡೆ ರಾಜಕೀಯ ಆವರಣದಿಂದ ಮೂಡಿಬಂದಿದೆ. ನೂರಾರು ವರ್ಷಗಳಿಂದಲೂ ಕನ್ನಡ ನಾಡಿನಲ್ಲಿ ಕಲಿಕೆ ಮತ್ತು ಶಿಕ್ಷಣಕ್ಕೆ ಅತ್ಯಧಿಕ ಗೌರವ ನೀಡುವುದು ಒಂದು ಪರಂಪರೆಯಾಗಿ ಸಾಗಿಬಂದಿದೆ. ಈ ಸಾಂಪ್ರದಾಯಿಕ ಭಾವನೆಯಿಂದಾಗಿ ಕನ್ನಡ ಜನತೆಯೊ ಅನ್ಯ ಭಾಷೆಯಲ್ಲಿನ ತಾಂತ್ರಿಕ ಪರಿಣಿತಿ ಮತ್ತು ಉದ್ದಿಮೆಗಳನ್ನು ಇಲ್ಲಿ ಉತ್ತೇಜಿಸಿಕೊಂಡು ಬಂದಿರುತ್ತಾರೆ. ಈ ಕಾರಣದಿಂದಾಗಿ ಅನೇಕ ಪ್ರಮುಖ ತಂತ್ರಜ್ಞಾನಾಧಾರಿತ ಉದ್ದಿಮೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಭದ್ರವಾಗಿ ನೆಲೆಯೊರಿವೆ. ಇಂತಹ ಉದ್ದಿಮೆಗಳ ವಿಸ್ತಾರ ವ್ಯಾಪ್ತಿಗಳ ಬಗ್ಗೆ ಸ್ಪಷ್ಟ ಅಂಕಿ ಅಂಶಗಳು ನಮ್ಮಲ್ಲಿ ಸದ್ಯದಲ್ಲಿ ಲಭ್ಯವಿರಲಾರದು. ಆದರೆ ಕನ್ನಡ ನೆಲದಲ್ಲಿ ಬೇರೂರಿರುವ ತಂತ್ರಜ್ಞಾನಗಳು ಅನ್ಯಭಾಷೆಯಲ್ಲಿದ್ದರೂ ಸಹ ಇವುಗಳನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಸಾಂಪ್ರದಾಯಿಕವಾಗಿ ನಮ್ಮ ನಾಡಿನಲ್ಲಿ ಬೆಳೆದುಕೊಂಡು ಬಂದಿದೆ. ಅತ್ಯಂತ ಮೇಧಾವಿ ಪುರುಷರು ತಂತ್ರಜ್ಞಾನವನ್ನು ತಮ್ಮದಾಗಿಸಿಕೊಂಡು ಸಮುದಾಯದ ಒಳಿತಿಗಾಗಿ ಶ್ರಮಿಸುವುದಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರು ಅತ್ಯುತ್ತಮ ಉದಾಹರಣೆ. ಹೀಗಾದ ಮಾತ್ರಕ್ಕೆ ಕನ್ನಡ ಭಾಷೆಯು ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಮೃದ್ಧಿಯನ್ನು ಪಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಕನ್ನಡ ಅಭಿವೃದ್ಧಿ ಪ್ರಧಿಕಾರ ಮತ್ತು ಕಂಪ್ಯೂಟರ್ ಬೆಳವಣಿಗೆ ಕರ್ನಾಟಕ ಸರ್ಕಾರ ಕಂಪ್ಯೂಟರ್ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕನ್ನಡ ಭಾಷೆಯ ಬಗ್ಗೆ ಸ್ವಲ್ಪ ಮಟ್ಟಿಗೆ ಸಂಶಯಗಳನ್ನು ಪ್ರಾರಂಭದ ದಿನಗಳಲ್ಲಿ ವ್ಯಕ್ತಪಡಿಸಿತು. ಕನ್ನಡಪರ ಸಂಸ್ಥೆಗಳು ಹಾಗೂ ಕನ್ನಡ ಅಭಿವೃದ್ದಿ ಪ್ರಧಿಕಾರದ ಅಂದಿನ ಅಧ್ಯಕ್ಷರಾಗಿದ್ದ ಡಾ.ಚಂದ್ರಶೇಖರ ಪಾಟೀಲ ಅವರು ತಮ್ಮ ಅಧಿಕಾರಾವಧಿಯಲ್ಲಿ ಕಂಪ್ಯೂಟರ್ನಲ್ಲಿ ಕನ್ನಡ ಬಳಸುವಂತೆ ಮಾಡಲೇಬೇಕೆಂಬ ಛಲ ವ್ಯಕ್ತಪಡಿಸಿದ್ದರು. ಇದೇ ಸಮಯದಲ್ಲಿ ಕನ್ನಡ ಗಣಕ ಪರಿಷತ್ ಎಂಬ ಸ್ವಯಂಸೇವಾ ಸಂಸ್ಥೆ ಕನ್ನಡ ಭಾಷೆಯನ್ನು ಕಂಪ್ಯೂಟರ್ ನಲ್ಲಿ ಬಳಸಲು ಸಾಧ್ಯವಿದೆ ಎಂಬುದರ ಬಗ್ಗೆ ಅನೇಕ ರೀತಿಯಲ್ಲಿ ವೈಜ್ಞಾನಿಕ ವಿವರಣೆಗಳನ್ನು ಮತ್ತು ಕಂಪ್ಯೂಟರ್ಗಳನ್ನು ಜನಪರವಾಗಿ ಬಳಸಬಹುದಾದ ವಿಧಾನಗಳನ್ನು ತೋರಿಸಿಕೊಟ್ಟಿತು. ಕನ್ನಡ ಭಾಷೆಯನ್ನು ಕಂಪ್ಯೂಟರ್ ಯಂತ್ರ ತಿರಸ್ಕರಿಸುವುದಿಲ್ಲವೆಂಬುದನ್ನು ನಿರಂತರವಾಗಿ ತೋರಿಸಿಕೊಡುವ ಹೊಣೆಗಾರಿಕೆಯನ್ನು ಈ ಸಂಸ್ಥೆ ಹೊತ್ತುಕೊಂಡಿದೆ. ಕಂಪ್ಯೂಟರ್ ಕನ್ನಡೀಕರಣದ ಹೊಸ ಆಯಾಮಗಳು ಈ ಮಾದರಿಯ ಸ್ವಯಂಸೇವಾ ಸಂಸ್ಥೆಗಳ ಮೂಲಕ ಆಗುವುದಕ್ಕೆ ಇಂದು ಉತ್ತಮ ಅವಕಾಶಗಳಿವೆ. ಡಾ.ಚಂದ್ರಶೇಖರ ಪಾಟೀಲರ ನಂತರ ಕನ್ನಡ ಅಭಿವೃದ್ದಿ ಪ್ರಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರೊ.ಬರಗೂರು ರಾಮಚಂದ್ರಪ್ಪನವರು ಕಂಪ್ಯೂಟರ್ ತಂತ್ರಜ್ಞಾನದ ಬೆಳವಣಿಗೆ ಕನ್ನಡದಲ್ಲಿ ಗಟ್ಟಿಯಾಗಿ ಬೇರೂರುವುದಕ್ಕೆ ಹಾಗೂ ಕಂಪ್ಯೂಟರ್ ಕನ್ನಡೀಕರಣಕ್ಕೆ ಅವಶ್ಯಕವಾಗಿ ಬೇಕಾದ ಅಡಿಪಾಯವನ್ನು ಹಾಕಿದ್ದಾರೆ. ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಕಂಪ್ಯೂಟರ್ಗಳಲ್ಲಿ ಕನ್ನಡದ ಸಾಮಥ್ರ್ಯ ಮತ್ತು ಪರಿಣಾಮಕಾರಿ ಬಳಕೆ ಸಾಧ್ಯವಾಗುವಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಗುರುತಿಸಿ, ಅವುಗಳಿಗೆ ಸ್ಪಷ್ಟರೂಪ ನೀಡಿ ಅನುಷ್ಟಾನಗೊಳಿಸಿದ್ದಾರೆ. ಈ ಕೆಲಸಕ್ಕೆ ಕನ್ನಡ ಗಣಕ ಪರಿಷತ್ತಿನ ನೆರವನ್ನು ಪಡೆಯುತ್ತಿರುವುದು ಸಂತಸದ ಸಂಗತಿ. ಕನ್ನಡದ ಕಂಪ್ಯೂಟರ್ಗಳ ಬಳಕೆ ವ್ಯಾಪಕವಾಗಬೇಕಾದರೆ ಕನ್ನಡ ಅಕ್ಷರಗಳನ್ನು ಬಳಸುತ್ತಿರುವ ಅಥವಾ ನೀಡುತ್ತಿರುವ ಲಿಪಿ ತಂತ್ರಾಂಶಗಳಲ್ಲಿ ಸಮಾನತೆ, ಶಿಷ್ಟತೆ ಮೂಡಿಸುವಂತೆ ಮಾಡಬೇಕಾದುದರಿಂದ , ಈ ದಿಸೆಯಲ್ಲಿ ಸರ್ಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಅಂತೆಯೇ ಏಕರೂಪದ ಕೀಲಿಮಣೆಯನ್ನು ಉತ್ತೇಜಿಸುವ ಕಾರ್ಯ ಪರಿಣಾಮಕಾರಿಯಾಗಬೇಕಾಗಿದೆ. ಕನ್ನಡ ವೃತ್ತಪತ್ರಿಕೆಗಳು ಕನ್ನಡ ಭಾಷೆಯ ತಂತ್ರಾಂಶಗಳನ್ನು ಅನೇಕ ವರ್ಷಗಳಿಂದ ಬಳಸಿಕೊಂಡು ಬಂದಿವೆ. ಹಲವೊಮ್ಮೆ ತಂತ್ರಾಂಶಗಳಲ್ಲಿ ಸಮಾನತೆ ಇಲ್ಲದಿರುವ ಕಾರಣದಿಂದಾಗಿ ನಿತ್ಯ ಸಂಕಟಗಳನ್ನು ಎದುರಿಸಿರುತ್ತಾರೆ. ಮಾಹಿತಿ ತಂತ್ರಜ್ಞಾನದ ಬಳಕೆ ಭಾಷಾ ಸೀಮಿತವೆಂಬ ಕೆಲವು ತಜ್ಞರ ನಂಬಿಕೆಯನ್ನು ತಪ್ಪೆಂದು ತೋರಿಸುವಲ್ಲಿ ಈ ಸಂಸ್ಥೆಗಳು ಯಶಸ್ವಿಯಾಗಿವೆ. ಈ ಕಾರಣದಿಂದಾಗಿ ಸರ್ಕಾರವು ಸಹ ಕಂಪ್ಯೂಟರ್ ಯಂತ್ರವನ್ನು ಜನಾಡಳಿತ ಕಾರ್ಯದಲ್ಲಿ ಬಳಸಿ ಆಡಳಿತದಲ್ಲಿ ಪಾರದರ್ಶಕತೆ ಉಂಟುಮಾದಬಹುದೆಂದು ನಂಬಿಕೆ ಉಂಟಾಗಿದೆ. ಸರ್ಕಾರವು ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಯಂತ್ರವನ್ನು ಬಳಸಲು ಬೇಕಾದ ಕನ್ನಡ ತಂತ್ರಾಂಶಗಳನ್ನು ಸಿದ್ಧಪಡಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಧಿಕಾರ ಅನೇಕ ಪ್ರೋತ್ಸಾಹಗಳನ್ನು ಕೆಲವು ಸಂಸ್ಥೆಗಳಿಗೆ ನೀಡಿದೆ. ಇದರಿಂದಾಗಿ ತಂತ್ರಾಂಶಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕನ್ನಡದಲ್ಲಿ ಮಾಡಬಲ್ಲವರಿಗೆ ಆಶಾಭಾವನೆ ಉಂಟಾಗಬಹುದು. ಉದಾಹರಣೆಗೆ ಭಾರತೀಯ ಭಾಷೆಗಳಲ್ಲಿ ಸಿದ್ಧಪಡಿಸಲಾಗುವ ತಂತ್ರಾಂಶಗಳ ಬೇಡಿಕೆ ಮುಂದಿನ ಎರಡು-- ಮೂರು ವರ್ಷಗಳಲ್ಲಿ ಸುಮಾರು 130 ಕೋಟಿಗಳಷ್ಟು ಆಗಲಿದೆ ಎಂದು ಮಾರುಕಟ್ಟೆ ಅಂಕಿಅಂಶಗಳು ಸೂಚಿಸುತ್ತವೆ. ಇಂಗ್ಲೀಷ್ ಭಾಷೆಯಲ್ಲಿರುವ ತಂತ್ರಾಂಶಗಳನ್ನು ಮಾತ್ರ ಕಂಪ್ಯೂಟರ್ಗೆ ಅಳವಡಿಸಲು ಸಾಧ್ಯವೆಂಬ ತಪ್ಪು ಕಲ್ಪನೆಯಿಂದ ಭಾರತೀಯ ಭಾಷೆಗಳಲ್ಲಿರುವ ತಂತ್ರಾಂಶದ ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಕಂಪ್ಯೂಟರ್ ಯಂತ್ರವನ್ನು ಸ್ವಂತಕ್ಕೆ ಖರೀದಿಸಿ ಉಪಯೋಗಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ನಾಡಭಾಷೆಯಲ್ಲಿ ತಂತ್ರಾಂಶಗಳನ್ನು ಉತ್ತೇಜಿಸುವುದರ ಮೂಲಕ ಇನ್ನೂ ಹೆಚ್ಚಿನ ಮೊತ್ತದ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನಾಧಾರಿತ ಸೇವಾ ಉದ್ದಿಮೆಯ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳು ಇಂಗ್ಲೀಷ್ ಭಾಷೆಯ ಕೌಶಲ್ಯವನ್ನು ಪಡೆದಿರುವ ಭಾರತೀಯ ಉದ್ದಿಮೆದಾರರ ಪ್ರಭಾವ ಅಷ್ಟೇನೂ ಪ್ರೋತ್ಸಾಹದಾಯಕವಾಗಿಲ್ಲವೆಂದು ಮೆಕೆನ್ಸಿ ಮತ್ತು ಕಂಪನಿಯವರ ಅಂಕಿಅಂಶಗಳು ಸೂಚಿಸುತ್ತಿದೆ. ಇಂಗ್ಲೀಷ್ ಭಾಷೆಯ ಉತ್ತಮ ಪರಿಚಯವಿಲ್ಲದ ದೇಶಗಳಾದ ಚೀನಾ ಮತ್ತು ಪಿಲಿಪ್ಪೀನ್ಸ್ ದೇಶಗಳು ಹೆಚ್ಚು ಲಾಭದಾಯಕವಾದ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸಬಲ್ಲವರಾಗಿದ್ದಾರೆ. ಈ ವಿಷಯವನ್ನು ಹಗುರವಾಗಿ ನೋಡದೆ, ನಾಡ ಭಾಷೆಯಲ್ಲಿ ತಂತ್ರಾಂಶಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಸರ್ಕಾರಗಳು ಉತ್ತೇಜಿಸಿದರೆ ಅಧಿಕ ಮೊತ್ತದ ವಿದೇಶಿ ವಿನಿಮಯವನ್ನು ಗಳಿಸಬಹುದು ಮತ್ತು ಉಳಿಸಲೂಬಹುದು. ಇದಲ್ಲದೆ ನಮ್ಮ ಯುವ ತಂತ್ರಜ್ಞನಿಗಳಿಗೆ ಉದ್ಯೋಗಾವಕಾಶಗಳನ್ನು ಪರಿಚಿತ ಭಾಷಾ ವಾತಾವರಣದಲ್ಲಿ ಕಲ್ಪಿಸಲು ಸಾಧ್ಯವಿದೆ. ಶಿಕ್ಷಣ ರಂಗದಲ್ಲಿ ಮಾಹಿತಿ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಬಹಳ ಕಾಲದಿಂದಲೂ ಮುಂದಿದೆ. ಆಧುನಿಕ ಶಿಕ್ಷಣ ಕ್ರಮಗಳನ್ನು ಕರ್ನಾಟಕ ರಾಜ್ಯದ ಜನತೆ ಸದಾಕಾಲ ಉತ್ತೇಜಿಸಿಕೊಂಡು ಬಂದಿದೆ. ಉತ್ತಮ ಶಿಕ್ಷಣವನ್ನು ಅಪೇಕ್ಷಿಸುವ ಕರ್ನಾಟಕದ ಯುವ ಜನತೆಗೆ ಕಂಪ್ಯೂಟರ್ ಪರಿಚಯಿಸುವಲ್ಲಿ ಇಂದಿನ ಸರ್ಕಾರ ದೀರ್ಘಕಾಲದ ಪರಿಣಾಮ ಬೀರಬಲ್ಲ ಕಂಪ್ಯೂಟರ್ ಶಿಕ್ಷಣವನ್ನು ಹಮ್ಮಿಕೊಂಡಿದೆ. ಶಾಲಾ ಮಕ್ಕಳಿಗೆ ತಂತ್ರಜ್ಞಾನ ಕೌಶಲ್ಯವನ್ನು ಒದಗಿಸುವ ಮಾಹಿತಿ ಸಿಂಧು ಎಂಬ ಹೆಸರಿನ ಕಂಪ್ಯೂಟರ್ ಶಿಕ್ಷಣ ಪದ್ಧತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಅಧೀನದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ತರಲು ಯೋಜನೆಯನ್ನು ರೂಪಿಸಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಮಾಂತರ ಪ್ರದೇಶದಲ್ಲಿರುವ ಶಾಲಾ ಮಕ್ಕಳು ಸಹ ಕಂಪ್ಯೂಟರ್ ಬಳಕೆ, ಅಂತರಜಾಲದ ಉಪಯುಕ್ತತೆಯ ಬಗ್ಗೆ ಅನುಭವ ಪಡೆಯಲಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾದರೆ ವಿದ್ಯುನ್ಮಾನ ಆಡಳಿತ ಸೇವೆ ಗ್ರಾಮಾಂತರ ಜನತೆಗೆ ಸುಲಭವಾಗಿ ಸಿಗುತ್ತದೆ. ಮಾಹಿತಿ ತಂತ್ರಜ್ಞಾನ ಅಧ್ಯಯನವನ್ನು ಕಾಲೇಜು ಮಟ್ಟದಲ್ಲಿ ಕನ್ನಡ ಭಾಷೆಯಲ್ಲಿಯೂ ಕಲಿಯಲು ಅವಕಾಶ ಮಾಡಿಕೊಟ್ಟವರಲ್ಲಿ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳು ಸೇರಿವೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಲ್ಲಿ ಕನ್ನಡದಲ್ಲಿ ಕಂಪ್ಯೂಟರ್ ಕಲಿಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಕಂಪ್ಯೂಟರ್ ಪಠ್ಯವನ್ನು ರಚಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ರಾಮೇಗೌಡರ ಪೂರ್ವಾಲೋಚನೆಯ ಫಲದಿಂದಾಗಿ ದೂರ ಶಿಕ್ಷಣದ ಎರಡನೆಯ ಬಿಎ ಮತ್ತು ಬಿಕಾಂ ಪದವಿ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಕಂಪ್ಯೂಟರ್ ಮೂಲ ಅಧ್ಯಯನವನ್ನು ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಟ್ಟದಲ್ಲಿ ಅಧ್ಯಯನಕ್ಕೆ ಬೇಕಾದ ಸೂಕ್ತ ಪಠ್ಯ ವಸ್ತುವನ್ನು ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ. ಈ ಕಾರ್ಯವನ್ನು ವಿಶ್ವವಿದ್ಯಾಲಯದ ಡೀನ್ (ಶೈಕ್ಷಣಿಕ) ಡಾ.ಚಂಬಿ ಪುರಾಣಿಕ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಇದಲ್ಲದೆ ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಕಂಪ್ಯೂಟರ್ ಕಲಿಯಲು ಸಾಧ್ಯವಾಗುವ ವಿದಾನಗಳನ್ನು ಕಂಡು ಹಿಡಿಯುವುದಕ್ಕಗಿ ಪ್ರಯತ್ನಗಳು ಮುಂದುವರೆಯುತ್ತಿವೆ. ಇದೇ ರೀತಿಯ ಮತ್ತೊಂದು ಕಾರ್ಯಕ್ರಮವೆಂದರೆ ಕರ್ನಾಟಕದ ರೈತಾಪಿ ಜನರಿಗೆ ತಮ್ಮ ಜಮೀನು ಹಕ್ಕುಪತ್ರಗಳನ್ನು ಅರ್ಜಿ ಹಾಕಿದ ತಕ್ಷಣವೇ ಕಂಪ್ಯೂಟರ್ ಯಂತ್ರದ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಇದಲ್ಲದೇ, ಕೃಶಿಕರಿಗೆ ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಸಂಗ್ರಹ ಮತ್ತು ವಿವಿಧ ಉತ್ಪನ್ನಗಳ ಮಾರುಕಟ್ಟೆ ಧಾರಣೆಗಳನ್ನು ತಿಳಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಅಂತರ್ ಜಾಲ ವ್ಯೂಹದಲ್ಲಿ ಜಾಲಕ್ಷೇತ್ರವೊಂದನ್ನು ಸೃಶ್ಟಸಿದೆ. ಈ ಜಾಲಕ್ಷೇತ್ರವನ್ನು ರೈತರು ಸಂದರ್ಶಿಸವುದರ ಮೂಲಕ ಬೆಳೆದ ಬೆಳೆಯ ಮಾರಾಟದ ವಿವರಗಳು ದೊರಕುತ್ತದೆ. ಇದಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳು ಜಂಟಿಯಾಗಿ ಯುವ.ಕಾಂ ಎಂಬ ಹೆಸರಿನ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಈ ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವ ಜನರಿಗೆ ಕಂಪ್ಯೂಟರ್ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಗಳ ವೃತ್ತಿ ಕುಶಲತೆಯಲ್ಲಿ ತರಬೇತಿ ನೀಡುವುದು ಈ ಯೋಜನೆಯ ಪ್ರಮುಖ ಗುರಿ. ಇದಲ್ಲದೆ ಕಂಪ್ಯೂಟರ್ ತಂತ್ರಜ್ಞಾನ ಸಂಶೋಧನೆಗಳು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ವಿಷಯಗಳ ಬಗ್ಗೆ ಕರ್ನಾಟಕ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿವೆ. ಇಂತಹ ಒಂದು ಉತ್ತಮ ಉದಾಹರಣೆಯಂದರೆ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನಿಗಳು ಸಿಂಪ್ಯೂಟರ್ ಎಂಬ ಕಿರು ಕಂಪ್ಯೂಟರ್ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆಲೆ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚಿರಲಾರದು ಎಂದು ತಿಳಿಸಿರುವ ವಿಜ್ಞಾನಿಗಳು, ಈ ಸರಳ ಯಂತ್ರ ಗ್ರಾಮಾಂತರ ಪ್ರದೇಶದ ಜನತೆಗೆ ಅನೇಕ ದಿನನಿತ್ಯದ ವ್ಯವಹಾರಗಳಲ್ಲಿ ಸಹಾಯಕವಾಗಲಿದೆ ಎಂದು ತಿಳಿಸಿರುತ್ತಾರೆ. ಬೆಳೆ, ಮಾರುಕಟ್ಟೆ ವಿದ್ಯಮಾನಗಳು, ಹವಾಮಾನ, ರೈಲು, ಬಸ್ಸುಗಳ ವೇಳಾಪಟ್ಟಿ ವಿದ್ಯುನ್ಮಾನ ಸಂದೇಶಗಳನ್ನು ಕಳುಹಿಸುವುದು, ಪಡೆಯುವುದು ಮುಂತಾದ ಹಲವಾರು ಕಾರ್ಯಗಳನ್ನು ಮಾಡಬಲ್ಲ ಸಾಮಥ್ರ್ಯವನ್ನು ಇದು ಹೊಂದಿರುತ್ತದೆ. ಇದರ ಮೂಲಕ ಜನಸಾಮಾನ್ಯರು ಸಹ ಸರ್ಕಾರದ ಆಡಳಿತ ಮತ್ತು ವ್ಯವಹಾರದಲ್ಲಿ ಭಾಗವಹಿಸಿ ಸರ್ಕಾರದ ಕಾರ್ಯಾಚರಣೆಯ ಬಗ್ಗೆ ಮಾಹಿತಿಗಳನ್ನು ಪಡೆಯಲು ಸಾಧ್ಯವಿದೆ. ವಿಜ್ಞಾನ ತಂತ್ರಜ್ಞಾನಗಳನ್ನು ಉತ್ತೇಜಿಸುವ ದಿಶೆಯಲ್ಲಿ ನಾಡ ಜನತೆಯ ಜ್ಞಾನ ನಾಡಿಯಾದ ನಾಡಭಾಷೆಯ ಸಮೃದ್ಧಿಯಾಗುವುದಕ್ಕೆ ಬೇಕಾದ ಕಲಿಕೆಯ ವಾತಾವರಣ ಸೃಶ್ಟಿಯಾಗಲಿಲ್ಲ. ಅನ್ಯ ಭಾಷೆಯಿಂದ ಮಾತ್ರ ತಂತ್ರಜ್ಞಾನವನ್ನು ಪಡೆಯಬೇಕು ಎಂಬ ಮನೋವೃತ್ತಿ ಇಂದಿಗೂ ಸಹ ತಾಂತ್ರಿಕ ಭಾಷಾ ಬೆಳವಣಿಗೆಗೆ ಅಡ್ಡಿ ಉಂಟುಮಾಡುತ್ತಿದೆ. ಹೀಗಿದ್ದರೂ ಸಹ ಕನ್ನಡ ನೆಲದಲ್ಲಿ ಉತ್ಸಾಹಿ ತರುಣರು ಹೊಸ ತಂತ್ರಜ್ಞಾನವನ್ನು ಕನ್ನಡ ಜನತೆಗೆ ನೀಡುವತ್ತ ಶ್ರಮಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ನಡೆದ ಪ್ರಯತ್ನಗಳಿಂದಾಗಿ ಕಂಪ್ಯೂಟರ್ ಯಂತ್ರಕ್ಕೆ ಕನ್ನಡ ಕಲಿಸುವ ಕಾರ್ಯ ಪರಿಣಾಮಕಾರಿಯಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಹೊಸ ಅಸ್ತಿತ್ವವನ್ನು ಕಂಡುಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪನವರು ಕಾರಣವೆನ್ನಬಹುದು. ಸರ್ಕಾರಗಳಲ್ಲಿರುವ ಜಡತ್ವ ಹೊಸ ಆಯಾಮಗಳನ್ನು ನಿಸ್ತೇಜಗೊಳಿಸುವ ಅಂತರ್ಯುಕ್ತಿಯನ್ನು ಪಡೆದಿರುತ್ತದೆ. ಇಂತಹ ಸ್ಥಿತಿಯನ್ನು ತಮ್ಮ ಸೈದ್ಧಾಂತಿಕ ಹಿನ್ನೆಲೆಯಲ್ಲಿ ತಿಳಿದಿರುವ ಅವರು, ಕನ್ನಡದ ತಂತ್ರಾಂಶಗಳು ಮೂಡಿಬರುವ ಹಾದಿಯಲ್ಲಿರುವ ತೊಡಕುಗಳನ್ನು ನಿವಾರಿಸಬಲ್ಲವರಾಗಿದ್ದಾರೆ. ಕನ್ನಡ ತಂತ್ರಾಂಶಗಳು ಅನೇಕ ಎದುರಾಳಿಗಳನ್ನು ಎದುರಿಸಬೇಕಾದ ಸಮಯದಲ್ಲಿ ಸರ್ಕಾರದ ಉತ್ತೇಜನ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಹೀಗೆಂದ ಮಾತ್ರಕ್ಕೆ ಸರ್ಕಾರದಿಂದ ಮಾತ್ರ ಕನ್ನಡ ಭಾಷೆ ಯಾ ಕನ್ನಡ ತಂತ್ರಾಂಶಗಳು ಮೂಡಿಬರಲು ಸಾಧ್ಯವೆಂಬ ಇಂಗಿತವಲ್ಲ. ಕನ್ನಡದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಮುಂದುವರಿಯಬೇಕಾದರೆ ಸರ್ಕಾರದ ನೀತಿ ನಿಯಮಗಳು ಇದರ ಪರವಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ.ಅ.ಪ್ರಾ.ದಂತಹ ಸಂಸ್ಥೆಗಳ ಸಹಾಯ ಅನಿವಾರ್ಯ. ಇತ್ತೀಚಿನ ಬೆಳವಣಿಗೆಗಳು ಮಾಹಿತಿ ತಂತ್ರಜ್ಞಾನದ ನಿರೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ಹುಸಿಯಾಗುತ್ತಿವೆ. ಎಂಬ ಭಾವನೆ ತಂತ್ರಾಂಶಗಳನ್ನು ರಫ್ತು ಮಾಡುತ್ತಿದ್ದ ರಾಷ್ಟ್ರಗಳಲ್ಲಿ ಕಾಣಬರುತ್ತಿದೆ. ಎಣಿಸಲಾರದಷ್ಟು ಪಗಾರವನ್ನು ಪಡೆಯುತ್ತಿದ್ದ ಯುವ ತಂತ್ರಾಂಶಿಗಳು ತಮ್ಮೆಲ್ಲ ನಿರೀಕ್ಷೆಗಳು ನಿರಾಶಾಭಾವನೆಯನ್ನು ಮೂಡಿಸಿಕೊಂಡಿರುವುದು ಕಾಣಬರುತ್ತಿದೆ. ಕನ್ನಡ ನೆಲದಿಂದ ವಿದೇಶಗಳಿಗೆ ತೆರಳಿದ ಸಾವಿರಾರು ಸಾಫ್ಟ್ವೇರ್ ಎಯನಿಯರ್ಗಳು ಉದ್ಯೋಗದ ಗುರಿಯೇನೆಂಬುದನ್ನು ತಿಳಿಯಲು ಅಶಕ್ತರಾಗಿದ್ದಾರೆ. ಇಂದಲ್ಲ ನಾಳೆ ನಮ್ಮ ಸುವರ್ಣಯುಗ ಬರಬಹುದು ಎಂದು ಚಾತಕ ಪಕ್ಷಿಗಳಂತೆ ತಮ್ಮ ಪೋಷಕರೊಂದಿಗೆ ನಿರೀಕ್ಷಿಸುತ್ತಿದ್ದಾರೆ. ಆದರೆ ಈ ವಿದ್ಯಮಾನಗಳು ಮಾಹಿತಿ ತಂತ್ರಜ್ಞಾನದ ಸಾಮಥ್ರ್ಯವನ್ನು ಸೂಚಿಸುವುದಿಲ್ಲವೆನ್ನಬಹುದು. ಮಾಹಿತಿ ತಂತ್ರಜ್ಞಾನದ ಅನ್ವಯಿಕತೆ ಜನಸಾಮಾನ್ಯರ ಜೀವನದತ್ತ ಹೆಚ್ಚು ಹೆಚ್ಚಾಗಿ ಸಾಗಿದೆ ಎಂಬುವುದರ ಅರಿವು ಈ ಮಂದಿಗೆ ಆಗಬೇಕಾಗಿದೆ. ಮಾಹಿತಿ ತಂತ್ರಜ್ಞಾನವನ್ನು ಆಡಳಿತ, ಸ್ಥಳೀಯ ವಾಣಿಜ್ಯ ಹಾಗೂ ವಹಿವಾಟಿನತ್ತ ಅಳವಡಿಸುವ ತಂತ್ರೋದ್ಯಮಿಗಳು ಮುಂದೆ ಬರಬೇಕಾಗಿದೆ. ನಾಡಭಾಷೆಯಲ್ಲಿ ವಾಣಿಜ್ಯ, ವ್ಯವಹಾರ, ಆಡಳಿತಗಳನ್ನು ಮಾಡಬಲ್ಲ ವಿಧಾನಗಳನ್ನು ಸೃಶ್ಟಿಸಲು ಹೇರಳವಾದ ಅವಕಾಶಗಳು ಇದೀಗ ಲಭ್ಯವಿದೆ. ಇಂತಹ ಒಂದು ಉತ್ತಮ ಉದ್ದಿಮೆ ಕನ್ನಡದಲ್ಲಿ ವಿದ್ಯುನ್ಮಾನ ಸಂದೇಶದ ಕಾರ್ಯಗಳನ್ನು ಮಾಡಬಲ್ಲ ಕಂಪನಿಯಾಗಿ ಪ್ರಾರಂಭವಾಗಿದೆ. ಈ ಟಾಪಲ್ ಎಂಬ ಶಿರೋನಾಮೆಯಲ್ಲಿ ಕಾವೇರಿ ಕಮ್ಯುನಿಕೇಶನ್ ಎಂಬ ಸಂಸ್ಥೆಯ ಮೂಲಕ ಕರ್ನಾಟಕದ ಹಿರಿಯ ಪತ್ರಿಕೋದ್ಯಮಿ ಶ್ರೀ ಕೆ.ಎನ್. ಹರಿಕುಮಾರ್ ಅವರು ವಿದ್ಯುನ್ಮಾನ ಸಂದೇಶ ಸೇವಾ ಸೌಲಭ್ಯಗಳನ್ನು ಕನ್ನಡ ಜನತೆಗೆ ನೀಡಿರುತ್ತಾರೆ. ವಿದ್ಯುನ್ಮಾನ (ಇ-ಮೇಲ್) ಸಂದೇಶವನ್ನು ಕನ್ನಡ ಭಾಷೆಯಲ್ಲಿಯೇ ಕಳುಹಿಸಿ ಪಡೆಯುವ ಉಚಿತ ಸೇವೆಯನ್ನು ಕನ್ನಡ ಜನತೆಗಾಗಿ ಅಂತರ್ಜಾಲದಲ್ಲಿ ಮೀಸಲಿಟ್ಟಿರುತ್ತಾರೆ. ಇದರಂತೆ ಕೆಲವು ವರ್ಷಗಳ ಹಿಂದೆಯೇ ಕನ್ನಡದಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವ ತಂತ್ರಾಂಶಗಳನ್ನು ಶಿವಮೊಗ್ಗದ ಶ್ರೀ ಕೇಶವ ಗಣಕ ಕೇಂದ್ರ ಸಿದ್ಧಪಡಿಸಿದೆ. ಈ ಸಂಸ್ಥೆಯವರು ಕನ್ನಡ ಭಾಷೆಯನ್ನು ಕಲಿಸುವ ಅತ್ಯುತ್ತಮ ತಂತ್ರಾಂಶವನ್ನು ಸಹ ಬಿಡುಗಡೆ ಮಾಡಿರುತ್ತಾರೆ. ಇದಲ್ಲದೆ ಕನ್ನಡ ಗಣಕ ಪರಿಷತ್, ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಧಿಕಾರದ ಸಹಕಾರದ ಮೂಲಕ ನುಡಿ ತಂತ್ರಾಂಶವನ್ನು ಕನ್ನಡ ಜನತೆಗೆ ನೀಡಲಾಗಿದೆ. ಇದನ್ನು ಬಳಸಿಕೊಂಡು ಕನ್ನಡದಲ್ಲಿ ತಂತ್ರಾಂಶಗಳನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ ಎಂಬುದನ್ನು ತಿಳಿಯಬಹುದು. ಕನ್ನಡದ ನೆಲದಲ್ಲಿ ಇಂದು ವಿಶ್ವದ ಪ್ರತಿಶ್ಠಿತ ಯಂತ್ರಾಂಶ ಹಾಗೂ ತಂತ್ರಾಂಶ ತಯಾರಕರು ತಮ್ಮ ಉದ್ದಿಮೆಯನ್ನು ಸ್ಥಾಪಿಸಿರುತ್ತಾರೆ. ಇಂದು ಐಬಿಎಂ, ಮೆಕ್ರೋಸಾಫ್ಟ್, ಒರಾಕಲ್, ಸನ್ಮೆಕ್ರೋ ಸಿಸ್ಟಂ ಇತ್ಯಾದಿ ನೂರಾರು ಉದ್ದಿಮೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ಮೂಲ ಕಾರಣ ಇಲ್ಲಿರುವ ಸುಶಿಕ್ಷಿತರು, ತಂತ್ರಜ್ಞಾನದತ್ತ ಇರುವ ಮನೋಭಾವ ಮತ್ತು ಕನ್ನಡ ಜನತೆಯ ಔದಾರ್ಯ ಎನ್ನಬಹುದು. ಕರ್ನಾಟಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೊರ ರಾಜ್ಯಗಳವರಿಂದ ಪಡೆಯುವ ಅವರಿಗೆ ಅವಕಾಶ ಕಲ್ಪಸಿಕೊಡುವ ಉದ್ದೇಶ ನಮ್ಮ ವಿಶಾಲ ಮನೋಭಾವದ ಪ್ರತೀಕವೇನೋ ಸರಿ. ಆದರೆ ನಮ್ಮ ಭಾಷೆ ಮತ್ತು ಸಂಸ್ಕ್ರುತಿಯನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಸಹ ಮಾಡಬೇಕೆನ್ನುವುದನ್ನು ಸ್ಪಷ್ಟವಾಗಿ ಸೂಚಿಸಬೇಕಾಗಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ಪ್ರವಾಹದಲ್ಲಿ ನಾವು ಕೊಚ್ಘಿಕೊಂಡು ಹೋಗುತ್ತೇವೆ ಎಂಬ ಆತಂಕವನ್ನು ದೂರ ಸರಿಸಿ ನಮ್ಮ ಸಾಂಸ್ಕ್ರುತಿಕ ಪರಂಪರೆಯ ಶಕ್ತಯಿಂದ ಹೊಸ ತಂತ್ರಜ್ಞಾನಗಳನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮಲ್ಲಿದೆ ಎಂಬುದನ್ನು ವಿಶ್ವಕ್ಕೆ ಎತ್ತಿ ತೋರಿಸಬೇಕಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....