ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಕಬ್ಬು ಬೆಲೆ ನಿಗದಿಗೆ ಆಸ್ಟ್ರೇಲಿಯಾ ಮಾದರಿ

ಕಬ್ಬು ನೈಸರ್ಗಿಕವಾಗಿ ಸಿಹಿಯಾಗಿದ್ದರೂ ರೈತರಿಗೆ, ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಸರ್ಕಾರಗಳಿಗೆ ಮಾತ್ರ ಕಹಿಯಾಗಿಯೇ ಮುಂದುವರೆದಿದೆ ಎಂದರೆ ತಪ್ಪಲ್ಲ.
ದೇಶದಲ್ಲಿ ಕಬ್ಬಿನ ಬೆಲೆಯ ನಿಗದಿಗಾಗಿ ಹೋರಾಟಗಳು ಪ್ರತೀವರ್ಷ ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ಭವಿಷ್ಯದಲ್ಲಿನ ಕಾರ್ಖಾನೆಯ ಉತ್ಪನ್ನಗಳ ಅಸ್ಥಿರವಾದ ಬೆಲೆಗಳ ಆಧಾರದ ಮೇಲೆ ಪ್ರತಿವರ್ಷ ಕೇಂದ್ರ ಸರಕಾರವು ನಿಗದಿಪಡಿಸುತ್ತಿರುವ ಖರೀದಿ ದರಕ್ಕೆ ಮತ್ತು ರಾಜ್ಯ ಸರಕಾರವು ನಿಗದಿಪಡಿಸುತ್ತಿರುವ ಬೆಂಬಲ ಬೆಲೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಒಪ್ಪುತ್ತಿಲ್ಲ. ಹೀಗಾಗಿ ಪ್ರತೀವರ್ಷ ಕಬ್ಬು ಬೆಲೆಯ ನಿಗದಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ಹಾಗೂ ಸಕ್ಕರೆ ಕಾರ್ಖಾನೆಗಳೊಂದಿಗೆ ಸಂಘರ್ಷ ನಡೆಸುತ್ತಲೇ ಇರುತ್ತವೆ.
ಈ ಸಮಸ್ಯೆಯ ಸರಳ, ಸುಲಭ ಮತ್ತು ಶಾಶ್ವತ ಮಾರ್ಗೋಪಾಯ ಕಂಡುಕೊಳ್ಳಲು ಆರ್ಥಿಕ ತಜ್ಞ ಡಾ. ಸಿ.ರಂಗರಾಜನ್‍ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು  ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆ, ಖರ್ಚು ಹಾಗು ಆದಾಯದ ಮೂಲಗಳನ್ನು ಅಭ್ಯಾಸ ಮಾಡಿ  2013ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ವರದಿಯ ಶಿಫಾರಸಿನಂತೆ ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಅನುಕ್ರಮವಾಗಿ 30:70 ರ ಅನುಪಾತದಂತೆ ಒಟ್ಟು ಆದಾಯದ ವರಮಾನ ಹಂಚಿಕೆಯನ್ನು ನಿಗದಿಪಡಿಸಲಾಗಿತ್ತು. ಈ ವರದಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು, ಪ್ರತಿಯೊಂದು ರಾಜ್ಯಗಳಲ್ಲಿ  ರೈತ ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣಾ ಮಂಡಳಿ ರಚಿಸಿದೆ. ಇದರಿಂದಾಗಿ ಹಲವಾರು ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿದ್ದ  ಕಬ್ಬು ಬೆಲೆ ನಿಗದಿ ಬಿಕ್ಕಟ್ಟನ್ನು ಶಾಶ್ವತವಾಗಿ ದೂರವಾಗಲಿದೆ ಎಂದು ಸರ್ಕಾರಗಳು, ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ನಿಟ್ಟುಸಿರು ಬಿಟ್ಟಿದ್ದವು.
ನಿಯಮಾನುಸಾರ ಈ ಮಂಡಳಿಯ ಸಭೆಗಳು ಸರ್ಕಾರದ ಮಧ್ಯಸ್ಥಿಕೆಯಲ್ಲಿ ಪ್ರಾರಂಭವಾದವು. ಆದರೆ ಈ ಕಬ್ಬು ನಿಯಂತ್ರಣಾ ಮಂಡಳಿಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದ ಬಹುತೇಕ ನಿರ್ಣಯಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದವು. ಇದರಿಂದಾಗಿ ರೈತ, ಕಾರ್ಖಾನೆ ಹಾಗೂ ಸರ್ಕಾರಗಳ ಮಧ್ಯೆ ತಲೆದೋರಿದ ಈ ಕಬ್ಬು ಬೆಲೆ ನಿಗದಿಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸಲಾರಂಭಿಸಿತು.
ಈ ಕಬ್ಬು ನಿಯಂತ್ರಣಾ ಮಂಡಳಿಯಲ್ಲಿನ ನಿರ್ಣಯಗಳು ಅನುಷ್ಠಾನವಾಗದ ಕಾರಣದಿಂದ ಕೆಲವು ಸದಸ್ಯರು ಯಾವ ಪುರುಷಾರ್ಥಕ್ಕೆ ಮಂಡಳಿಯಲ್ಲಿ ಇರಬೇಕು ಎನ್ನುವ ಕಾರಣ ನೀಡಿ ಮಂಡಳಿಗೆ ರಾಜೀನಾಮೆ ಕೊಟ್ಟರು. ಈ ಎಲ್ಲ ಬೆಳವಣಿಗೆಗಳಿಂದ   ಕಬ್ಬು ಬೆಳೆಗಾರರ ಹೋರಾಟಗಳು ಪ್ರತಿವರ್ಷ ಮುಂದುವರೆಯುತ್ತಿವೆ. ಇದರಿಂದ ಸರಕಾರ ಮತ್ತು ಕಾರ್ಖಾನೆ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಿಂದಾಗಿ ಈ ಕಬ್ಬು ಬೆಲೆ ನಿಗದಿಯ ಸುಲಭ ಪರಿಹಾರ ಇನ್ನೂ ಮರೀಚಿಕೆಯಾಗಿಯೇ ಮುಂದುವರೆದಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಪಾಲಿಗೆ ಯಕ್ಷಪ್ರಶ್ನೆಯಾಗಿಯೇ ಮುಂದುವರೆದಿದೆ.
ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಆಸ್ಟ್ರೇಲಿಯಾದಲ್ಲಿ ಪ್ರಚಲಿತದಲ್ಲಿರುವ ಪದ್ಧತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಲ್ಲಿಯೂ ಬಲಿಷ್ಠ ರೈತ ಸಂಘಟನೆಗಳಿದ್ದರೂ  ರೈತ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯೆ ಸಂಘರ್ಷ ನಡೆದಿಲ್ಲ ಎನ್ನುವುದು ಗಮನಿಸಬೇಕಾಗಿರುವ ಸಂಗತಿಯಾಗಿದೆ.
ಆಸ್ಟ್ರೇಲಿಯಾದಲ್ಲಿರುವ ವಿಧಾನ
* ಕಬ್ಬು ಹಾಗೂ ಸಕ್ಕರೆ ಬೆಲೆಯನ್ನು ರೈತರೇ ನಿರ್ಧರಿಸುತ್ತಾರೆ
* ಪ್ರತಿಯೊಬ್ಬ ರೈತರು ಸಕ್ಕರೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಪ್ರಮಾಣ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆಯಾದ ಸಕ್ಕರೆಯಲ್ಲಿನ ಎರಡು ಮೂರಾಂಶದಷ್ಟು  (2/3) ಭಾಗವನ್ನು ರೈತರೆ ಪಡೆದುಕೊಂಡು ಮಾರಾಟ ಮಾಡಿ ಹಣ ಪಡೆಯುತ್ತಾರೆ
* ರೈತರಿಂದ ಪೂರೈಕೆಯಾದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯಲ್ಲಿನ  ಒಂದು ಮೂರಾಂಶದಷ್ಟು (1/3) ಭಾಗವನ್ನು ಕಾರ್ಖಾನೆಗಳು ತಮ್ಮಲ್ಲಿಯೇ ಉಳಿಸಿಕೊಂಡು ಮಾರಾಟ ಮಾಡಿ ಹಣ ಪಡೆಯುತ್ತವೆ
* ಆಸ್ಟ್ರೇಲಿಯಾದಲ್ಲಿನ ರೈತ ಸಂಘಟನೆಗಳು ಖಾಸಗಿಯಾಗಿ ಕಬ್ಬು ಸಂಶೋಧನೆ ಹಾಗು ಅಭಿವೃದ್ಧಿ ಘಟಕಗಳನ್ನು ಹೊಂದಿವೆ. ಇಲ್ಲಿ ಸಂಶೋಧಿಸಲಾದ ಅಲ್ಪಾವಧಿ ತಳಿಯ ಕಬ್ಬನ್ನು ಮಾತ್ರ ರೈತರು ಸ್ವ-ಇಚ್ಛೆಯಿಂದ ನಾಟಿ ಮಾಡುತ್ತಾರೆ
* ಅಲ್ಲಿ ಬೃಹತ್ ಪ್ರಮಾಣದ 24 ಸಕ್ಕರೆ ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ
* ಎಲ್ಲ 24 ಸಕ್ಕರೆ ಕಾರ್ಖಾನೆಗಳಿಗೆ ವಿದೇಶಿಯರೆ ಮಾಲೀಕರಾಗಿದ್ದಾರೆ. ಸ್ಥಳೀಯರಿಗೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅವಕಾಶವಿಲ್ಲ
* ರೈತರು ಕಬ್ಬು ನಾಟಿಯಿಂದ ಹಿಡಿದು ಕಟಾವಿನ ಹಂತದವರೆಗೆ ಶೇ 90ರಷ್ಟು ಕೆಲಸಗಳಿಗೆ ಯಂತ್ರಗಳನ್ನೇ ಬಳಸುತ್ತಾರೆ
* ಕಟಾವಾದ ಶೇ 90ರಷ್ಟು ಕಬ್ಬು ರೈಲು ಮುಖಾಂತರ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ
* ರೈತರು ತಮ್ಮ ಕಬ್ಬು ಕಟಾವು ಮತ್ತು ಸಾಗಾಣಿಕೆಗಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಅವಲಂಬಿತರಾಗದೇ ತಾವೇ ನಿರ್ವಹಿಸುತ್ತಾರೆ
* ಇಲ್ಲಿನ ಸರಾಸರಿ ಸಕ್ಕರೆ ಇಳುವರಿ ಶೇ 12ರಷ್ಟು ಇರುತ್ತದೆ
* ಇಲ್ಲಿನ ರೈತರು ಕಬ್ಬು ಬೆಳೆ ನಾಟಿ ಮಾಡಲು ಕಡ್ಡಾಯವಾಗಿ ಹನಿ-ನೀರಾವರಿ ಹೊಂದಿರಬೇಕು
* ಗುಣಮಟ್ಟವಿಲ್ಲದ ಕಬ್ಬನ್ನು ಕಟಾವು ಮಾಡುವುದಿಲ್ಲ. ಪಶು ಆಹಾರಕ್ಕಾಗಿ ಉಪಯೋಗಿಸುತ್ತಾರೆ
* ಕಾರ್ಖಾನೆಗಳಿಗೆ ಸರ್ಕಾರದಿಂದ ಹಂಚಿಕೆಯಾದ ಕ್ಷೇತ್ರದಿಂದ ಮಾತ್ರ ಕಬ್ಬು ಖರೀದಿ. ಎಲ್ಲೆಂದರಲ್ಲಿ ಕಬ್ಬು ಖರೀದಿಸಲು ಅವಕಾಶವಿಲ್ಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...