ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಯುಜಿಸಿಗೆ ತಿಲಾಂಜಲಿ

ಕೇಂದ್ರ ಸರ್ಕಾರ ಆರು ದಶಕಗಳ ಹಿಂದಿನ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವನ್ನು ರದ್ದುಗೊಳಿಸಿ ಉನ್ನತ ಶಿಕ್ಷಣ ಆಯೋಗ (ಎಚ್​ಇಸಿಐ) ರಚಿಸಲು ಮುಂದಾಗಿದೆ.
ಮಳೆಗಾಲದ ಅಧಿವೇಶನದಲ್ಲಿ ಹೊಸ ಕಾಯ್ದೆ ಮಂಡನೆಯಾಗಲಿದ್ದು, ಪೂರ್ವಭಾವಿಯಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವೆಬ್​ಸೈಟ್​ನಲ್ಲಿ ನೂತನ ಆಯೋಗಕ್ಕೆ ಸಂಬಂಧಿಸಿದ ಕಾಯ್ದೆಯ ಕರಡು ಪ್ರತಿ ಅಪ್​ಲೋಡ್ ಮಾಡಲಾಗಿದೆ. ಆಕ್ಷೇಪಣೆ ಹಾಗೂ ಸಲಹೆ ಸಲ್ಲಿಸಲು ಜು.7ರವರೆಗೆ ಅವಕಾಶ ನೀಡಲಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಶೈಕ್ಷಣಿಕ ಸ್ವಾಯತ್ತತೆ ನೀಡಲು ಹಾಗೂ ಸಂಶೋಧನಾ ಪ್ರವೃತ್ತಿ ವೃದ್ಧಿಸುವ ಉದ್ದೇಶದಿಂದ ಭಾರತೀಯ ಉನ್ನತ ಶಿಕ್ಷಣ ಆಯೋಗ ರಚನೆಗೆ ಸರ್ಕಾರ ನಿರ್ಧರಿಸಿದೆ. ಯಶ್​ಪಾಲ್ ಹಾಗೂ ಹರಿ ಗೌತಮ್ ಸಮಿತಿ ವರದಿ ಪ್ರಕಾರ ಯುಜಿಸಿ ರದ್ದುಪಡಿಸಿ ಹೊಸ ಆಯೋಗ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಮಿತಿ ಶಿಫಾರಸಿನಂತೆ ಆಯೋಗದಿಂದ ಅನುದಾನ ಹಂಚಿಕೆಯ ಜವಾಬ್ದಾರಿ ಕಿತ್ತುಕೊಳ್ಳಲಾಗಿದೆ. ಆದರೆ ಸಂಪೂರ್ಣ ಉನ್ನತ ಶಿಕ್ಷಣಕ್ಕೆ ಏಕರೂಪ ಆಯೋಗ ರಚಿಸಲು ಕೇಂದ್ರ ವಿಫಲವಾಗಿದೆ.
ಇಲಾಖೆ ವೆಬ್​ಸೈಟ್​ನಲ್ಲಿ ಲಭ್ಯವಿರುವ 14 ಪುಟಗಳ ಕರಡು ನಿಯಮ ಪ್ರಕಾರ ನೂತನ ಆಯೋಗವು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 12 ಸದಸ್ಯರನ್ನು ಹೊಂದಿರಲಿದೆ. ಕೇಂದ್ರ ಸರ್ಕಾರ ಶಿಕ್ಷಣ ತಜ್ಞರನ್ನು ಈ ಹುದ್ದೆಗೆ ಪರಿಗಣಿಸಲಿದ್ದು, ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಏರಿಕೆ ಬಗ್ಗೆ ಮಾತ್ರ ಇನ್ನು ತಲೆಕೆಡಿಸಿಕೊಳ್ಳಲಿದೆ.
ಎಐಸಿಟಿಇಗೂ ಹೊಸ ರೂಪ?: ತಾಂತ್ರಿಕ ಶಿಕ್ಷಣ ಆಯೋಗವನ್ನು ಕೂಡ ಉನ್ನತ ಶಿಕ್ಷಣ ಆಯೋಗದ ವ್ಯಾಪ್ತಿಗೆ ಸೇರಿಸುವ ಚರ್ಚೆ ನಡೆದಿತ್ತು. ಆದರೆ ವಿರೋಧ ವ್ಯಕ್ತವಾದ ಕಾರಣ ತಾಂತ್ರಿಕ ಶಿಕ್ಷಣ ಆಯೋಗ ಸ್ವತಂತ್ರವಾಗಿ ಉಳಿಯಲಿದೆ. ಸಚಿವರ ಸಲಹೆ ಮೇರೆಗೆ ಉನ್ನತ ಶಿಕ್ಷಣ ಆಯೋಗ ರಚನೆಯಾದ ಬಳಿಕ ಎಐಸಿಟಿಇಗೂ ಕೂಡ ಹೊಸ ರೂಪ ಸಿಗಲಿದೆ.
ಆಯೋಗದ ಜವಾಬ್ದಾರಿಗಳು
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಸ್ವಾಯತ್ತತೆಗೆ ಅವಕಾಶ ನೀಡಿ, ಜಾಗತಿಕ ಸ್ಪರ್ಧೆಗೆ ಅನುವಾಗುವಂತೆ ಸಂಶೋಧನೆ ಒತ್ತು ನೀಡುವುದು
ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಕೌಶಲ ತರಬೇತಿ ಕುರಿತು ಮಾರ್ಗಸೂಚಿ
ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮೌಲ್ಯಮಾಪನ, ಅಕ್ರೆಡೇಷನ್ ವ್ಯವಸ್ಥೆ
ಸರ್ಕಾರದೊಂದಿಗೆ ರ್ಚಚಿಸಿ ಸಂಶೋಧನೆಗೆ ಅನುದಾನ ದೊರಕಿಸುವುದು
ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾದ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಹಾಗೂ ನೋಂದಣಿ ರದ್ದು
ಶಿಕ್ಷಣ ಸಂಸ್ಥೆ ಅಥವಾ ವಿವಿಗಳು ತಮ್ಮದೇ ಶೈಕ್ಷಣಿಕ ಪಠ್ಯಕ್ರಮ ರಚಿಸಿಕೊಳ್ಳಲು ಅವಕಾಶ
ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಕುರಿತು ನಿಯಮ ರಚನೆ
ಸಿಬ್ಬಂದಿ ನೇಮಕಕ್ಕೆ ಅರ್ಹತೆ ನಿಗದಿ
ಶುಲ್ಕದ ಬಗ್ಗೆ ನಿಗಾ!
ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಗದಿಗೂ ಕೇಂದ್ರ ಸರ್ಕಾರ ಮುಂದಾಗಿದೆ. ಕರಡು ನಿಯಮದಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಪ್ರಸ್ತಾಪ ಸೇರಿಸಲಾಗಿದೆ. ಶುಲ್ಕ ನಿಗದಿಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಯೋಗವು ಶಿಫಾರಸು ಮಾಡಲಿದೆ. ಆಯಾ ಸರ್ಕಾರಗಳು ತಮ್ಮ ಅಧೀನದಲ್ಲಿನ ಶಿಕ್ಷಣ ಸಂಸ್ಥೆಗಳು ಈ ಪ್ರಕಾರ ಶುಲ್ಕ ನಿಗದಿಪಡಿಸುವಂತೆ ಕ್ರಮಕೈಗೊಳ್ಳಬೇಕಿದೆ.
ಸರ್ಕಾರದಿಂದಲೇ ಅನುದಾನ ಹಂಚಿಕೆ
ಯುಜಿಸಿಯು ನ್ಯಾಕ್ ರ್ಯಾಂಕ್ ಆಧರಿಸಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡುತ್ತಿತ್ತು. ಆದರೆ ಈ ಪ್ರಕ್ರಿಯೆ ಬಗ್ಗೆ ಸಾಕಷ್ಟು ವಿರೋಧವ್ಯಕ್ತವಾಗಿದ್ದವು. ಹೀಗಾಗಿ ನೂತನ ಆಯೋಗದಿಂದ ಈ ಅಧಿಕಾರ ಕಿತ್ತುಕೊಂಡು, ಕೇಂದ್ರ ಸರ್ಕಾರವೇ ನೇರವಾಗಿ ಅನುದಾನ ಹಂಚಿಕೆ ಮಾಡಲಿದೆ. ವಿವಿ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯೇ ಹಂಚಿಕೆ ಮಾಡಲಿದೆ.
http://mhrd.gov.in/sites/upload_files/mhrd/files/HE_CoI_India_2018_act.pdf

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....