ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸೂಪರ್ ಸಾಮರ್ಥ್ಯದ ಸಮಿಟ್ ಟಿ. ಜಿ. ಶ್ರೀನಿಧಿ

ಒಂದಾನೊಂದು ಕಾಲದಲ್ಲಿ ಎಲ್ಲ ಲೆಕ್ಕಾಚಾರಗಳನ್ನೂ – ಅದು ಎಷ್ಟೇ ಸಂಕೀರ್ಣವಾಗಿರಲಿ ಮನುಷ್ಯರೇ ಮಾಡಬೇಕಾದ್ದು ಅನಿವಾರ್ಯವಾಗಿತ್ತು. ಲೆಕ್ಕಾಚಾರವೆಂದರೆ ಮನೆಯ ತಿಂಗಳ ಖರ್ಚುವೆಚ್ಚದ ವಿವರ ಮಾತ್ರವೇ ಅಲ್ಲ; ತಂತ್ರಜ್ಞರು, ವಿಜ್ಞಾನಿಗಳು, ನಾವಿಕರು ಬಳಸುತ್ತಿದ್ದ ಅದೆಷ್ಟೋ ಕ್ಲಿಷ್ಟ ಲೆಕ್ಕಾಚಾರಗಳಿಗೂ ಆಗ ಇದ್ದದ್ದು ಇದೊಂದೇ ಮಾರ್ಗ.
ಇದನ್ನೆಲ್ಲ ನೋಡುತ್ತಿದ್ದ ಕೆಲವರು ಈ ಪರಿಸ್ಥಿತಿ ಬದಲಿಸಲು ಏನಾದರೂ ಮಾಡಬಹುದೇ ಎಂದು ಯೋಚಿಸುತ್ತಲೇ ಇದ್ದರು. ಬ್ರಿಟನ್ನಿನ ಚಾರ್ಲ್ಸ್ ಬ್ಯಾಬೇಜ್ ಅಂತಹ ವ್ಯಕ್ತಿಗಳಲ್ಲೊಬ್ಬರು. ಮನುಷ್ಯರು ಮಾಡುವ ಲೆಕ್ಕಾಚಾರಗಳನ್ನು ಯಂತ್ರವೇ ಮಾಡುವ ಹಾಗಾದರೆ ಲೆಕ್ಕಾಚಾರದ ವೇಗ ಹಾಗೂ ನಿಖರತೆಗಳೆರಡೂ ಹೆಚ್ಚುತ್ತವೆ ಎಂಬ ಯೋಚನೆ ಇಟ್ಟುಕೊಂಡು ಅವರು ‘ಡಿಫರೆನ್ಸ್ ಇಂಜನ್’ ಎಂಬ ಯಂತ್ರವೊಂದನ್ನು ವಿನ್ಯಾಸಗೊಳಿಸಿದ್ದರು. ಈ ಯಂತ್ರವೇನಾದರೂ ನಿರ್ವಣವಾಗಿದ್ದರೆ ಹಲವು ವ್ಯಕ್ತಿಗಳು ಹಲವು ದಿನಗಳಲ್ಲಿ ಮಾಡುವ ಕೆಲಸವನ್ನು ಅದು ಹತ್ತಾರು ಪಟ್ಟು ಕಡಿಮೆ ಸಮಯದಲ್ಲಿ ಮಾಡಿಮುಗಿಸುತ್ತಿತ್ತು!
ಅಂದಹಾಗೆ ಈ ವಿನ್ಯಾಸದ ವಿವರ ಮೊದಲಿಗೆ ಪ್ರಕಟವಾದದ್ದು ಸುಮಾರು ಎರಡು ಶತಮಾನಗಳ ಹಿಂದೆ (1822ನೇ ಇಸವಿ), ಇದೇ ಜೂನ್ ತಿಂಗಳಿನಲ್ಲಿ. ಈಗ, 2018ರ ಜೂನ್ ತಿಂಗಳಿನಲ್ಲಿ, ಇಂಥದ್ದೇ ಇನ್ನೊಂದು ಬೆಳವಣಿಗೆ ನಡೆದಿದೆ. ಅಂದಿಗೂ ಇಂದಿಗೂ ನಡುವೆ ಹೆಚ್ಚೂ ಕಡಿಮೆ ಇನ್ನೂರು ವರ್ಷ ಕಳೆದುಹೋಗಿದೆಯಲ್ಲ, ಹಾಗಾಗಿ ಇಂದಿನ ಬೆಳವಣಿಗೆ ಇಂದಿನ ಕಾಲಕ್ಕೆ ತಕ್ಕಂತೆ ಕೇಳಲು ಇನ್ನೂ ರೋಚಕವಾಗಿದೆ.
ಇಂದಿನ ಬೆಳವಣಿಗೆಯ ಸಾರಾಂಶ ಇಷ್ಟೇ: ಅಮೆರಿಕಾದ ತಂತ್ರಜ್ಞರು ಇದೀಗ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಎನ್ನಬಹುದಾದಂತಹ ಕಂಪ್ಯೂಟರ್ ಒಂದನ್ನು ರೂಪಿಸಿದ್ದಾರೆ. ಅಷ್ಟೆಲ್ಲ ಶಕ್ತಿಶಾಲಿಯಾದ್ದರಿಂದಲೇ ಇದು ‘ಸೂಪರ್’ ಕಂಪ್ಯೂಟರ್. ‘ಸಮಿಟ್’ ಎನ್ನುವುದು ಈ ಕಂಪ್ಯೂಟರಿಗೆ ಆ ತಂತ್ರಜ್ಞರು ಕೊಟ್ಟಿರುವ ಹೆಸರು.
ಇದನ್ನು ‘ಸೂಪರ್’ ಕಂಪ್ಯೂಟರ್ ಎಂದು ಕರೆದಿದ್ದು ಸಾಮರ್ಥ್ಯದ ಕುರಿತಾದ ಮೆಚ್ಚುಗೆಯಿಂದ ಮಾತ್ರವೇ ಏನಲ್ಲ. ನಿಜಕ್ಕೂ ಸೂಪರ್ ಕಂಪ್ಯೂಟರ್ ಎನ್ನುವುದು ಒಂದು ಬಗೆಯ ಕಂಪ್ಯೂಟರ್​ಗಳ ಹೆಸರು. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವ ಇವು ತಮ್ಮ ಬೃಹತ್ ಸಂಸ್ಕರಣಾ ಸಾಮರ್ಥ್ಯಕ್ಕಾಗಿ ಹೆಸರಾಗಿವೆ. ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ಸದ್ಯ ವಿಶ್ವದಲ್ಲಿರುವ ಸೂಪರ್ ಕಂಪ್ಯೂಟರ್​ಗಳ ಪೈಕಿ ಸಮಿಟ್​ಗೆ ಅಗ್ರಸ್ಥಾನ.
ಬೃಹತ್ ಸಂಸ್ಕರಣಾ ಸಾಮರ್ಥ್ಯ ಎಂದಿರಲ್ಲ, ಇಲ್ಲಿ ಬೃಹತ್ ಎಂದರೆ ಎಷ್ಟು ಎಂದು ನೀವು ಕೇಳಬಹುದು. ಅದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ನೋಡಬಹುದು: ಒಂದು ಸೆಕೆಂಡಿಗೆ ಒಂದು ಲೆಕ್ಕ ಬಿಡಿಸಬಲ್ಲ ವ್ಯಕ್ತಿ ಎಡೆಬಿಡದೆ ಕೆಲಸ ಮಾಡಿದರೆ 630 ಕೋಟಿ ವರ್ಷಗಳ ಅವಧಿಯಲ್ಲಿ ಎಷ್ಟು ಲೆಕ್ಕಗಳನ್ನು ಬಿಡಿಸಬಹುದೋ ಅಷ್ಟನ್ನು ಈ ಸಮಿಟ್ ಒಂದೇ ಸೆಕೆಂಡಿನಲ್ಲಿ ಮುಗಿಸಿ ಬಿಸಾಕುತ್ತದೆ. ಜಾಸ್ತಿ ಜನರನ್ನು ತೊಡಗಿಸುತ್ತೇವೆ, ಅವರಿಗೆ ಕಂಪ್ಯೂಟರನ್ನೂ ಕೊಡುತ್ತೇವೆ ಎಂದಿರಾ? ಆಧುನಿಕ ಲ್ಯಾಪ್​ಟಾಪ್​ಗಳಿರುವ ಒಂದು ಲಕ್ಷ ಜನರನ್ನು ಕ್ರಿಕೆಟ್ ಸ್ಟೇಡಿಯಂನಲ್ಲಿ ಕೂರಿಸಿ ಕೆಲಸ ಮಾಡಿಸುವುದೇ ಆದರೂ ಸಮಿಟ್​ನ ಶಕ್ತಿಯನ್ನು ಸರಿಗಟ್ಟಲು ಅಂತಹ ಇಪ್ಪತ್ತು ಸ್ಟೇಡಿಯಂಗಳನ್ನು ಭರ್ತಿ ಮಾಡಬೇಕಾಗುತ್ತದೆ!
ಸೆಕೆಂಡಿಗೊಂದು ಲೆಕ್ಕದ್ದೂ ಸ್ಟೇಡಿಯಂ ಭರ್ತಿ ಜನರದ್ದೂ ಉದಾಹರಣೆ ಸರಿಹೋಗಲಿಲ್ಲ ಎಂದರೆ ಸಮಿಟ್ ಸಾಮರ್ಥ್ಯವನ್ನು ಒಂದೇ ಸಾಲಿನಲ್ಲಿ ಹೀಗೆ ವಿವರಿಸಬಹುದು: ಇದು 200 ಪೆಟಾಫ್ಲಾಪ್ಸ್ ಸಾಮರ್ಥ್ಯದ ಸೂಪರ್​ಕಂಪ್ಯೂಟರ್. ಫ್ಲಾಪ್ಸ್(ಫ್ರೋಟಿಂಗ್ ಪಾಯಿಂಟ್ ಇನ್ಸ್​ಟ್ರಕ್ಷನ್ಸ್ ಪರ್ ಸೆಕೆಂಡ್) ಎನ್ನುವುದು ಸೂಪರ್ ಕಂಪ್ಯೂಟರ್​ಗಳ ಸಂಸ್ಕರಣಾ ಸಾಮರ್ಥ್ಯ ಅಳೆಯಲು ಬಳಕೆಯಾಗುವ ಏಕಮಾನ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರ್​ಗಳು, ಮೊಬೈಲ್ ಫೋನ್​ಗಳು ಪ್ರತಿ ಸೆಕೆಂಡಿಗೆ ಇಂತಹ ಕೋಟ್ಯಂತರ ಲೆಕ್ಕಾಚಾರಗಳನ್ನು ಮಾಡಬಲ್ಲವು.
ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಕೇಳಲು ಬಹಳ ದೊಡ್ಡದೆಂದು ತೋರಿದರೂ ಸಮಿಟ್ ಸಾಮರ್ಥ್ಯದ ಮುಂದೆ ಇದು ಲೆಕ್ಕಕ್ಕೇ ಇಲ್ಲ. ಏಕೆ ಗೊತ್ತಾ, ಸಮಿಟ್ ಸಾಮರ್ಥ್ಯದಲ್ಲಿರುವ ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ! ಅದು ಒಂದು ಗಿಗಾಫ್ಲಾಪಸ್ ಕಂಪ್ಯೂಟರ್​ಗಿಂತ ಹತ್ತು ಲಕ್ಷ ಪಟ್ಟು ಹೆಚ್ಚಿನ ಕೆಲಸ ಮಾಡಬಲ್ಲದು!
ಅಣ್ವಸ್ತ್ರ ಪರೀಕ್ಷೆಯಿಂದ ವೈದ್ಯಕೀಯ ಸಂಶೋಧನೆಯವರೆಗೆ, ಹವಾಮಾನ ಪರಿವೀಕ್ಷಣೆಯಿಂದ ದತ್ತಾಂಶ ಸಂಸ್ಕರಣೆಯವರೆಗೆ ಇಂದು ಸೂಪರ್​ಕಂಪ್ಯೂಟರ್​ಗಳು ಹಲವೆಡೆ ಬಳಕೆಯಾಗುತ್ತಿವೆ. ಭಾರತವೂ ಸೇರಿ ವಿಶ್ವದ ಹಲವು ದೇಶಗಳಲ್ಲಿ ಸೂಪರ್​ಕಂಪ್ಯೂಟರ್​ಗಳಿವೆ. ತಮ್ಮ ಅದ್ಭುತ ಸಾಮರ್ಥ್ಯ ಪ್ರದರ್ಶಿಸುವ ಜತೆಗೆ ಇವು ಆ ಸಾಮರ್ಥ್ಯ ಬಳಸಿಕೊಂಡು ಅದ್ಭುತಗಳನ್ನು ಸಾಧಿಸಲಿವೆಯೆಂಬ ನಿರೀಕ್ಷೆಯೂ ವ್ಯಾಪಕವಾಗಿಯೇ ಇದೆ. ಆ ನಿರೀಕ್ಷೆಗೆ ತಕ್ಕ ಫಲಿತಾಂಶಗಳು ದೊರಕಲಿ, ದೊರಕುತ್ತಲೇ ಇರಲಿ ಎಂಬ ಹಾರೈಕೆಯೂ!
ಸಮಿಟ್​ಗೆ ಫಸ್ಟ್ ರ್ಯಾಂಕ್
ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ಅಗ್ರಸ್ಥಾನಗಳಲ್ಲಿರುವ ವಿಶ್ವದ ಐದುನೂರು ಸೂಪರ್​ಕಂಪ್ಯೂಟರ್​ಗಳನ್ನು ಟಾಪ್ 500 ಎಂಬ ಜಾಲತಾಣ ಪಟ್ಟಿ ಮಾಡುತ್ತದೆ. ಈ ಪಟ್ಟಿಯಲ್ಲಿ ಸಮಿಟ್ ಇದೀಗ ಅಗ್ರಸ್ಥಾನ ಪಡೆದುಕೊಂಡಿದೆ. ಐಬಿಎಂ ನಿರ್ವಿುಸಿರುವ ಈ ಸೂಪರ್​ಕಂಪ್ಯೂಟರ್ ಅಮೆರಿಕಾದ ಓಕ್ ರಿಜ್ ರಾಷ್ಟ್ರೀಯ ಸಂಶೋಧನಾಲಯದಲ್ಲಿದೆ. ಈ ಸಂಸ್ಥೆಯ ಸದ್ಯದ ನಿರ್ದೇಶಕ ಥಾಮಸ್ ಜಕಾರಿಯಾ ಕೇರಳ ಮೂಲದವರು, ಅವರು ಓದಿದ್ದು ಕರ್ನಾಟಕದ ಸುರತ್ಕಲ್​ನಲ್ಲಿ. ಮೊದಲ ಐನೂರಲ್ಲಿ ಭಾರತದ ಸ್ಥಾನ: ನವೆಂಬರ್ 2017ರ ಅಂಕಿಅಂಶಗಳ ಪ್ರಕಾರ ಟಾಪ್ 500,  ಪಟ್ಟಿಯಲ್ಲಿ ಭಾರತದ ನಾಲ್ಕು ಸೂಪರ್​ಕಂಪ್ಯೂಟರ್​ಗಳಿವೆ. ಈ ಪೈಕಿ ಬೆಂಗಳೂರಿನ ಭಾರತೀಯ ವಿಜ್ಞಾನಮಂದಿರದಲ್ಲಿರುವ ‘ಸಹಸ್ರತ್’ ಸೂಪರ್​ಕಂಪ್ಯೂಟರಿಗೆ 228ನೇ ಸ್ಥಾನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...