ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಫುಟ್​ಬಾಲ್ ವಿಶ್ವಕಪ್​ಗೆ ಫ್ರೆಂಚ್ ಕಿಸ್, ಫ್ರಾನ್ಸ್ ವಿಶ್ವಸಾಮ್ರಾಟ

ಫ್ರಾನ್ಸ್ ತಂಡ 20 ವರ್ಷಗಳ ಬಳಿಕ 2ನೇ ಬಾರಿ ಫಿಫಾ ವಿಶ್ವಕಪ್​ಗೆ ಮುತ್ತಿಕ್ಕಿದೆ. ಮಾಸ್ಕೋದಲ್ಲಿ ಭಾನುವಾರ ನಡೆದ 21ನೇ ಆವೃತ್ತಿಯ ಟೂರ್ನಿಯ ಫೈನಲ್​ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಮಿರುಗುವ ವಿಶ್ವಕಪ್ ವಶಪಡಿಸಿಕೊಂಡಿದೆ. 1998ರಲ್ಲಿ ತವರಲ್ಲೇ ನಡೆದ ವಿಶ್ವಕಪ್​ನಲ್ಲಿ ಫ್ರಾನ್ಸ್ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿತ್ತು.
# 2 ಬಾರಿ ಗೆದ್ದ 6ನೇ ತಂಡ
# 20 ವರ್ಷಗಳ ಬಳಿಕ ಪ್ರಶಸ್ತಿ ಜಯ
# ಡಿಡಿಯರ್ ಡೆಶಾಂಪ್ಸ್ ಆಟಗಾರ, ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ಸಾಧಕ
ರಷ್ಯಾ ವಿಶ್ವಕಪ್ ಅಂಕಿ-ಅಂಶ
# ಪಂದ್ಯ: 64
# ಗೋಲು: 169
# ಗೋಲು ಸರಾಸರಿ: 3
# ಗರಿಷ್ಠ ಗೋಲು: ಬೆಲ್ಜಿಯಂ (16)
# ಗೋಲ್ಡನ್ ಬೂಟ್: ಹ್ಯಾರಿ ಕೇನ್ (6 ಗೋಲು, ಇಂಗ್ಲೆಂಡ್)
ಫ್ರಾನ್ಸ್ ಹಾದಿ
# ಸೆಮಿಫೈನಲ್: ಬೆಲ್ಜಿಯಂ ವಿರುದ್ಧ 1-0 ಜಯ
# 8ರ ಘಟ್ಟ: ಉರುಗ್ವೆ ವಿರುದ್ಧ 2-0 ಜಯ
# 16ರ ಘಟ್ಟ: ಅರ್ಜೆಂಟೀನಾ ವಿರುದ್ಧ 4-3 ಜಯ
# ಲೀಗ್: ಡೆನ್ಮಾರ್ಕ್ ವಿರುದ್ಧ 0-0 ಡ್ರಾ
# ಲೀಗ್: ಪೆರು ವಿರುದ್ಧ 1-0 ಗೆಲುವು
# ಲೀಗ್: ಆಸ್ಟ್ರೇಲಿಯಾ ವಿರುದ್ಧ 2-1 ಜಯ
ಮುಂದಿನ ಫಿಫಾ ವಿಶ್ವಕಪ್
# 2022 ನವೆಂಬರ್ 21-ಡಿಸೆಂಬರ್ 18
# ಆತಿಥೇಯ ದೇಶ: ಕತಾರ್ (8 ನಗರ)
ಫುಟ್​ಬಾಲ್ ವಿಶ್ವಕಪ್​ಗೆ ಫ್ರೆಂಚ್ ಕಿಸ್
ಮಾಸ್ಕೋ: ವಿಶ್ವಕಪ್ ಫುಟ್​ಬಾಲ್ ಟೂರ್ನಿಯಲ್ಲಿ 20 ವರ್ಷಗಳ ಬಳಿಕ ಫ್ರಾನ್ಸ್ ನಿರೀಕ್ಷೆ ಸಾಕಾರವಾಗಿದೆ. ಕ್ರೊವೇಷಿಯಾದ ಪ್ರಬಲ ಚಕ್ರವ್ಯೂಹವನ್ನು ಎಚ್ಚರಿಕೆಯಿಂದಲೇ ಭೇದಿಸಿದ ಫ್ರಾನ್ಸ್, ಕಾಲ್ಚೆಂಡು ಜಗತ್ತಿನ ನೂತನ ಸಾಮ್ರಾಟ ಎನಿಸಿದೆ. 1998ರಲ್ಲಿ ತನ್ನದೇ ನೆಲದಲ್ಲಿ ಮೊದಲ ಬಾರಿಗೆ ಚಿನ್ನದ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಫ್ರಾನ್ಸ್ ತಂಡವನ್ನು ಅಂದು ಮುನ್ನಡೆಸಿದ್ದ ಡಿಡಿಯರ್ ಡೆಶಾಂಪ್ಸ್ ತರಬೇತಿಯಲ್ಲಿ ಈ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಅದರೊಂದಿಗೆ 2 ಹಾಗೂ ಅದಕ್ಕಿಂತ ಹೆಚ್ಚಿನ ಬಾರಿ ವಿಶ್ವಕಪ್ ಟ್ರೋಫಿ ಜಯಿಸಿದ 6ನೇ ತಂಡ ಎನ್ನುವ ಸಾಧನೆ ಮಾಡಿತು. ಆಟಗಾರ ಹಾಗೂ ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ಸಾಧಕ ಎನ್ನುವ ಗೌರವ ಡಿಡಿಯರ್ ಡೆಶಾಂಪ್ಸ್ ಪಾಲಾಯಿತು.
ಲಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಲೆಸ್ ಬ್ಲ್ಯೂಸ್ ಖ್ಯಾತಿಯ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಷಿಯಾ ತಂಡವನ್ನು ಸೋಲಿಸಿತು. ಮೊದಲ ಅವಧಿಯಲ್ಲಿ ಫ್ರಾನ್ಸ್ ಬಾರಿಸಿದ ಎರಡೂ ಗೋಲುಗಳು ಕ್ರೊವೇಷಿಯಾದ ಪ್ರಮಾದದಿಂದ ಬಂದರೆ, 2ನೇ ಅವಧಿಯಲ್ಲಿ ಪೌಲ್ ಪೋಗ್ಬಾ ಹಾಗೂ ಕೈಲಿಯನ್ ಬಾಪೆ ಬಾರಿಸಿದ ಗೋಲು ಫ್ರೆಂಚರ ವಿಶ್ವಕಪ್ ವಿಜಯವನ್ನು ಖಚಿತಪಡಿಸಿತು. ಪಂದ್ಯ ಆರಂಭವಾದ ಕ್ಷಣದಿಂದಲೂ ಫ್ರಾನ್ಸ್​ನ ಪ್ರಬಲ ರಕ್ಷಣಾ ವಿಭಾಗದ ಮೇಲೆ ಬೆನ್ನುಬೆನ್ನಿಗೆ ದಾಳಿ ನಡೆಸುತ್ತಿದ್ದ ಕ್ರೊವೇಷಿಯಾ, 18ನೇ ನಿಮಿಷದಲ್ಲಿ ಹಿನ್ನಡೆ ಕಂಡಿತು. ಪೆನಾಲ್ಟಿ ಆವರಣದ ಮುಂದೆ ಬ್ರೊಜೋವಿಕ್, ಗ್ರಿಜ್​ವುನ್ ಮೇಲೆ ಫೌಲ್ ಎಸಗಿದ್ದರಿಂದ ರೆಫ್ರಿ ಫ್ರೀ ಕಿಕ್ ನೀಡಿದರು. ಈ ಅವಕಾಶದಲ್ಲಿ ಗ್ರಿಜ್​ವುನ್ ಬಾರಿಸಿದ ಚೆಂಡನ್ನು ಕ್ಲಿಯರ್ ಮಾಡುವ ಯತ್ನದಲ್ಲಿ ಎಡವಿದ ಕ್ರೊವೇಷಿಯಾದ ಸ್ಟ್ರೈಕರ್ ಮಾರಿಯೋ ಮಾಂಡ್ಜುಕಿಕ್ ತಮ್ಮದೇ ಗೋಲುಪೆಟ್ಟಿಗೆಗೆ ಚೆಂಡನ್ನು ಸೇರಿಸಿದರು. ಹಿಂದಿನ ಮೂರೂ ನಾಕೌಟ್ ಪಂದ್ಯಗಳಲ್ಲಿ ಮೊದಲು ಹಿನ್ನಡೆ ಕಂಡಿದ್ದ ಕ್ರೊವೇಷಿಯಾ ಆ ಬಳಿಕ ಗೋಲು ಬಾರಿಸಿತ್ತು. ಈ ಬಾರಿಯೂ ಅದೇ ಸ್ಥಿತಿ ಮರುಕಳಿಸಿತು. 28 ನಿಮಿಷದಲ್ಲಿ ಫ್ರಾನ್ಸ್ ಗೋಲು ಪೆಟ್ಟಿಗೆಯ ಆವರಣದಲ್ಲಿ ಮುನ್ಪಡೆ ಆಟಗಾರರ ಸಂಘಟಿತ ಪ್ರಯತ್ನದ ನೆರವಿನಿಂದ ಇವಾನ್ ಪೆರಿಸಿಕ್ ಗೋಲು ಸಿಡಿಸಿದರು. ಫ್ರೀ ಕಿಕ್ ಅವಕಾಶದಲ್ಲಿ ಮಾಂಡ್ಜುಕಿಕ್ ಮಾಡಿದ ಪ್ರಯತ್ನವನ್ನು ಕ್ಲಿಯರ್ ಮಾಡುವಲ್ಲಿ ಫ್ರಾನ್ಸ್ ವಿಫಲವಾಯಿತು. ವಿಡಾ ಚೆಂಡನ್ನು ಪೆರಿಸಿಕ್​ಗೆ ನೀಡಿದರು. ಸ್ವಲ್ಪ ಹೊತ್ತು ಯೋಚನೆ ಮಾಡಿ ಚೆಂಡನ್ನು ಡ್ರಿಬಲ್ ಮಾಡಿದ ಪೆರಿಸಿಕ್, ಎಡಗಾಲಿನಿಂದ ಚೆಂಡನ್ನು ಒದ್ದು ಗುರಿ ಸೇರಿಸಿದರು.
ಪೆರಿಸಿಕ್ ಪ್ರಮಾದ
ಸಮಬಲದ ಗೋಲಿಗೆ ನೆರವಾಗಿದ್ದ ಪೆರಿಸಿಕ್​ರಿಂದಲೇ ಫ್ರಾನ್ಸ್ 2ನೇ ಬಾರಿ ಮುನ್ನಡೆ ಕಂಡಿತು. 38ನೇ ನಿಮಿಷದಲ್ಲಿ ಫ್ರಾನ್ಸ್​ಗೆ ಸಿಕ್ಕ ಫ್ರೀ ಕಿಕ್​ನಲ್ಲಿ ಪೆರಿಸಿಕ್ ಹ್ಯಾಂಡ್​ಬಾಲ್ ಪ್ರಮಾದ ಮಾಡಿದರು. ವಿಎಆರ್ ಪರಿಶೀಲನೆ ಮೂಲಕ ರೆಫ್ರಿ ಪೆನಾಲ್ಟಿ ತೀರ್ಪು ನೀಡಿದರು. ಅಂಟೋಯಿನ್ ಗ್ರಿಜ್​ವುನ್ ಯಾವುದೇ ತಪು್ಪ ಮಾಡದೆ ಚೆಂಡನ್ನು ಗುರಿ ಮುಟ್ಟಿಸಿದರು.
ವಿಶ್ವಕಪ್ ಫೈನಲ್​ನಲ್ಲಿ ಜಂಟಿ 2ನೇ ಗರಿಷ್ಠ ಗೋಲು ದಾಖಲಾದವು. 1930ರಲ್ಲಿ ಉರುಗ್ವೆ-ಅರ್ಜೆಂಟೀನಾ (4-2), 1938ರಲ್ಲಿ ಇಟಲಿ-ಹಂಗೆರಿ (4-2) ಹಾಗೂ 1966ರಲ್ಲಿ ಇಂಗ್ಲೆಂಡ್-ಜರ್ಮನಿ (4-2) ನಡುವಿನ ವಿಶ್ವಕಪ್ ಫೈನಲ್​ನಲ್ಲಿಯೂ 6 ಗೋಲು ಸಿಡಿದಿದ್ದವು. 1958ರಲ್ಲಿ ಬ್ರೆಜಿಲ್ ಹಾಗೂ ಸ್ವೀಡನ್ (5-2) ನಡುವಿನ ಫೈನಲ್​ನಲ್ಲಿ 7 ಗೋಲು ಸಿಡಿದಿರುವುದು ವಿಶ್ವಕಪ್ ದಾಖಲೆ.
ಕೈಲಿಯನ್ ಬಾಪೆ ದಾಖಲೆ
ವಿಶ್ವಕಪ್ ಫೈನಲ್​ನಲ್ಲಿ ಗೋಲು ಬಾರಿಸಿದ 2ನೇ ಕಿರಿಯ ಆಟಗಾರ ಕೈಲಿಯನ್ ಬಾಪೆ. 1958ರಲ್ಲಿ ಸ್ವೀಡನ್ ವಿರುದ್ಧ ಪೀಲೆ 17 ವರ್ಷ 249ನೇ ದಿನದಲ್ಲಿ ಗೋಲು ಬಾರಿಸಿದ್ದು ಸಾಧನೆಯಾಗಿದ್ದರೆ, ಬಾಪೆ 19 ವರ್ಷ 207ನೇ ದಿನದಲ್ಲಿ ಗೋಲು ಬಾರಿಸಿದರು. ಅದಲ್ಲದೆ, ವಿಶ್ವಕಪ್ ಫೈನಲ್ ಆಡಿದ 3ನೇ ಕಿರಿಯ ಆಟಗಾರ ಬಾಪೆ.
ಆಟಗಾರ ಹಾಗೂ ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ವ್ಯಕ್ತಿ ಡಿಡಿಯರ್ ಡೆಶಾಂಪ್ಸ್. ಬ್ರೆಜಿಲ್​ನ ಮಾರಿಯೋ ಜಾಗಲ್ಲೋ ಹಾಗೂ ಜರ್ಮನಿಯ ಫ್ರಾಂಜ್ ಬೆಕನ್​ಬುರ್ ಈ ಸಾಧನೆ ಮಾಡಿದ ಉಳಿದ ಇಬ್ಬರು. ವಿಶ್ವಕಪ್ ಫೈನಲ್​ನಲ್ಲಿ ಸ್ವಗೋಲಿನ ಪ್ರಮಾದ ಮಾಡಿದ ಮೊದಲ ಆಟಗಾರ ಮಾರಿಯೋ ಮಾಂಡ್ಜುಕಿಕ್.
ಗೆದ್ದವರಿಗೆ ಸಿಗುವುದು ಟ್ರೋಫಿಯ ನಕಲು
ವಿಶ್ವ ಚಾಂಪಿಯನ್ ತಂಡಕ್ಕೆ ಸಿಗುವುದು ನೈಜ ಟ್ರೋಫಿಯ ನಕಲು ಮಾತ್ರ. 1974ರಿಂದ ಹೊಸ ಟ್ರೋಫಿಯನ್ನು ಬಳಸಲಾಗುತ್ತಿದೆ. ಫೈನಲ್ ಪಂದ್ಯದ ದಿನ ಗೆದ್ದ ಚಾಂಪಿಯನ್ ತಂಡಕ್ಕೆ ಹಸ್ತಾಂತರ ಮಾಡುವುದು  ನೈಜ ಟ್ರೋಫಿಯಾದರೂ, ಬಳಿಕ ತಂಡಕ್ಕೆ ಅಷ್ಟೇ ಮೌಲ್ಯದ ವಿಶ್ವಕಪ್​ನ ಪ್ರತಿಕೃತಿ ನೀಡಲಾಗುತ್ತದೆ. ನೈಜ ಟ್ರೋಫಿ ಫಿಫಾದ ಮ್ಯೂಸಿಯಂಗೆ ಸೇರಲಿದೆ. ವಿಶ್ವಕಪ್ ಟ್ರೋಫಿಯ ಮೌಲ್ಯ ಅಂದಾಜು 137 ಕೋಟಿ ರೂಪಾಯಿ (20 ಮಿಲಿಯನ್ ಯುಎಸ್ ಡಾಲರ್).
ಮುಂಬರುವ ಏಷ್ಯನ್ ಗೇಮ್ಸ್​ನ ಕ್ರೀಡಾಜ್ಯೋತಿ ರಿಲೇ ಭಾನುವಾರ ನವದೆಹಲಿ ಯಲ್ಲಿ ಆರಂಭಗೊಂಡಿತು.  1951ರಲ್ಲಿ ಏಷ್ಯಾಡ್ ಜನ್ಮತಳೆದ ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಭಾರತದ ಅಗ್ರ ಕ್ರೀಡಾಪಟುಗಳ ಉಪಸ್ಥಿತಿ ಯಲ್ಲಿ ಟಾರ್ಚ್ ರಿಲೇಯ 18,000 ಕಿಮೀ. ಪ್ರಯಾಣಕ್ಕೆ ಚಾಲನೆ ನೀಡಲಾಯಿತು. ಆಗಸ್ಟ್ 18ರಿಂದ 18ನೇ ಆವೃತ್ತಿಯ ಏಷ್ಯಾಡ್ ಆತಿಥ್ಯ ವಹಿಸಿಕೊಳ್ಳಲಿರುವ ಇಂಡೋನೇಷ್ಯಾಗೆ ಕ್ರೀಡಾ ಜ್ಯೋತಿ ತೆರಳಲಿದ್ದು, ಅಲ್ಲಿ ಪ್ರಂಬನನ್ ಹಿಂದು ದೇವಾಲಯದ ಪವಿತ್ರ ಜ್ಯೋತಿಯೊಂದಿಗೆ ವಿಲೀನವಾಗಲಿದೆ. ಬಳಿಕ ದ್ವೀಪರಾಷ್ಟ್ರದ 54 ನಗರಗಳಲ್ಲಿ ಟಾರ್ಚ್ ರಿಲೇ  ಸಾಗಲಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...