ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸಮಾಜಕ್ಕೆ ಶಕ್ತಿ ತುಂಬಿದ ರಿಯಲ್ ಹೀರೋಗಳು ರವೀಂದ್ರ ಎಸ್. ದೇಶಮುಖ್

ಅಂದು ಆ ವೈದ್ಯ ಹೊರಟದ್ದು ಖ್ಯಾತ ಸಮಾಜಸೇವಕ ಬಾಬಾ ಆಮ್ಟೆ ಅವರನ್ನು ಭೇಟಿಯಾಗಲು. ದಾರಿಮಧ್ಯೆ ದಟ್ಟ ಕಾನನದ ನಡುವೆ ಒಬ್ಬ ಯುವಕನನ್ನು ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಸರಪಳಿಗಳಿಂದ ಬಂಧಿಸಿಡಲಾಗಿತ್ತು. ಆತನನ್ನು ಗಾಡಿಯಲ್ಲಿ ಕೂರಿಸಿಕೊಂಡು ಆಮ್ಟೆಯವರ ಆಶ್ರಮಕ್ಕೆ ಕರೆದೊಯ್ದಾಗ, ಬಾಬಾರ ಪುತ್ರ ಪ್ರಕಾಶ್ ಆಮ್ಟೆ ಆತನ ಸರಪಳಿಗಳನ್ನು ಬಿಡಿಸಿ, ಊಟ ನೀಡಿದರು. ನಸುಕಿನ ಜಾವ ಖುದ್ದು ಬಾಬಾ ಆಮ್ಟೆ ಆ ಸರಪಳಿಗಳನ್ನು ಬಿಗಿದುಕೊಂಡು ಕುಳಿತಿದ್ದರು! ವೈದ್ಯರು ಈ ದೃಶ್ಯ ಕಂಡಾಗ ಕಕ್ಕಾಬಿಕ್ಕಿ. ‘ಆ ಯುವಕ ಎಂಥ ಯಾತನೆ ಅನುಭವಿಸಿರಬಹುದು ಎಂದು ತಿಳಿಯಲು ಹೀಗೆ ಮಾಡಿದೆ, ಸಮಾಜ ಇಷ್ಟು ಕ್ರೂರವಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ?’ ಎಂದವರು ಪ್ರಶ್ನಿಸಿದರಲ್ಲದೆ ‘ಇಂಥವರಿಗಾಗಿ (ಮಾನಸಿಕ ಅಸ್ವಸ್ಥರಿಗಾಗಿ) ನೀವು ಸ್ವಲ್ಪ ಹೆಚ್ಚೇ ಕೆಲಸ ಮಾಡಬೇಕು’ ಎಂದರು.
ಬಾಬಾ ಆಮ್ಟೆಯವರ ಆ ಒಂದು ಮಾತು ಮತ್ತು ಆ ಯುವಕನ ಸ್ಥಿತಿ ಇವರ ಜೀವನವನ್ನೇ ಬದಲಿಸಿತು. ಪ್ರಸಕ್ತ 2000ಕ್ಕೂ ಅಧಿಕ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರು ಚೇತರಿಸಿಕೊಳ್ಳುವಂತೆ ಮಾಡಿರುವ ಆ ವೈದ್ಯ ಡಾ.ಭರತ್ ವಾಟವಾನಿ. ವಿಶೇಷವೆಂದರೆ ಇವರ ಪತ್ನಿ ಡಾ.ಸ್ಮಿತಾ ವಾಟವಾನಿ ಕೂಡ ಈ ಬದಲಾವಣೆಯ ಕೈಂಕರ್ಯದಲ್ಲಿ ಪತಿಯೊಂದಿಗೆ ಕೈಜೋಡಿಸಿದ್ದಾರೆ. ಮಹಾರಾಷ್ಟ್ರದ ಕರ್ಜತ್​ನಲ್ಲಿ ಇವರ ‘ಶ್ರದ್ಧಾ ಪುನರ್ವಾಸ್ ಫೌಂಡೇಷನ್’ ಮಾನಸಿಕ ರೋಗಿಗಳಿಗೆ ಮಕ್ಕಳಂತೆ ಆರೈಕೆ ಮಾಡುತ್ತ, ಅವರನ್ನು ಜೀವನದ ಗತ ಆಘಾತಗಳಿಂದ, ನೋವುಗಳಿಂದ ಆಚೆ ತರಲು ಯತ್ನಿಸುತ್ತಿದೆ. ಮಾತ್ರವಲ್ಲ, ಅಸಂಖ್ಯ ರೋಗಿಗಳನ್ನು ಮುಖ್ಯವಾಹಿನಿಗೆ ಕರೆತಂದು, ಅವರು ಹೊಸಜೀವನ ಆರಂಭಿಸುವಂತೆ ಮಾಡಿದೆ.
ಮುಂಬೈ ಮೂಲದ ಡಾ. ಭರತ್ ಮತ್ತು ಸ್ಮಿತಾ ಖ್ಯಾತ ಮನೋವೈದ್ಯರಾಗಿ ವೃತ್ತಿಜೀವನದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಆದರೆ, ತಮ್ಮ ಶಿಕ್ಷಣ, ಜ್ಞಾನದ ಉಪಯೋಗ ಸಮಾಜದ ಏಳ್ಗೆಗೆ ವಿನಿಯೋಗ ಆಗಬೇಕು ಅದರಲ್ಲೂ ಸಮಾಜದಲ್ಲಿ ನಿರ್ಲಕ್ಷಿತರಾಗಿರುವ ಮಾನಸಿಕ ರೋಗಿಗಳ ಆರೈಕೆಗೆ ಉಪಯೋಗವಾಗಬೇಕು ಎಂಬ ಸಂಕಲ್ಪದಿಂದ ದೊಡ್ಡ ಬದಲಾವಣೆಯನ್ನೇ ಸಾಕಾರಗೊಳಿಸಿದ್ದಾರೆ. 1988ರಲ್ಲಿ ‘ಶ್ರದ್ಧಾ ಪುನರ್ವಾಸ್ ಫೌಂಡೇಷನ್’ ಸ್ಥಾಪಿಸಿದ್ದು, ಎರಡು ದಶಕಗಳ ಪಯಣದಲ್ಲಿ ಸಮಾಜದ ಸಿಹಿ-ಕಹಿ ಅನುಭವಗಳನ್ನು ಕಂಡಿದ್ದಾರೆ. ಕರ್ಜತ್​ನಲ್ಲಿ ಕಟ್ಟಡವಾಗುವ ಮೊದಲು ಮುಂಬೈಯ ಸಣ್ಣ ಮನೆಯಲ್ಲಿ ಇವರು ಸೇವಾಕಾರ್ಯ ನಿರ್ವಹಿಸಬೇಕಾದರೆ ಇನ್ನಿಲ್ಲದ ಕಿರುಕುಳ ಅನುಭವಿಸಬೇಕಾಯಿತು. ಬಡಾವಣೆಯ ಜನರೇ ‘ಇವರು ಹುಚ್ಚರನ್ನು ತಂದು ನಮಗೆ ಕಷ್ಟ ಕೊಡುತ್ತಿದ್ದಾರೆ’ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಕೆಲವರಂತೂ ಸ್ಮಿತಾ ಅವರ ಮೇಲೆ ಹಲ್ಲೆಗೂ ಯತ್ನಿಸಿದರು. ನ್ಯಾಯಾಲಯದಲ್ಲಿ ವೈದ್ಯ ದಂಪತಿಗೆ ಗೆಲುವು ದೊರಕಿತಲ್ಲದೆ, ನ್ಯಾಯಾಧೀಶರೇ ಇವರ ಕೆಲಸವನ್ನು ಶ್ಲಾಘಿಸಿ, ‘ಇಂಥವರ ಸಂಖ್ಯೆ ಹೆಚ್ಚಬೇಕಿದೆ’ ಎಂದರು. ಅದೆಷ್ಟೋ ಸಂಬಂಧಿಕರು, ‘ಉಚ್ಚಶಿಕ್ಷಣ ಪಡೆದಿರುವ ನಿಮಗೇಕೆ ಈ ಹುಚ್ಚರ ಸಹವಾಸ’ ಎಂದು ಹಂಗಿಸಿದರು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಾನಸಿಕ ಅಸ್ವಸ್ಥರಿಗೆ ಪ್ರೀತಿ, ವಾತ್ಸಲ್ಯ ಜತೆಗೆ ಜೀವನದ ಕೌಶಲಗಳನ್ನು ತುಂಬುತ್ತಿದ್ದಾರೆ. ಇಂಥವರಿಗೂ ಸಮಾಜದಲ್ಲಿ ಬದುಕುವ ಸಮಾನ ಹಕ್ಕಿದೆ ಎಂಬುದನ್ನು ದರ್ಶಿಸಿದ್ದಾರೆ. ಎರಡು ಸಾವಿರಕ್ಕೂ ಅಧಿಕ ರೋಗಿಗಳ ಕಾಯಿಲೆ ಗುಣಪಡಿಸಿ ಅವರನ್ನು ಅವರ ಕುಟುಂಬಗಳಿಗೆ ಸೇರಿಸಿದ್ದಾರೆ. ದೇಶದ ಬಹುತೇಕ ಎಲ್ಲ ರಾಜ್ಯಗಳ ಮತ್ತು ನೆರೆಯ ನೇಪಾಳದ ರೋಗಿಗಳು ಕೂಡ ‘ಶ್ರದ್ಧಾ’ದಲ್ಲಿ ಜೀವನದ ಹೊಸಮುಖ ಕಾಣುತ್ತಿದ್ದಾರೆ. ಈ ಅನನ್ಯ ಸೇವೆಗಾಗಿಯೇ ಡಾ. ಭರತ್ ಅವರಿಗೆ ಈ ಬಾರಿಯ ಮ್ಯಾಗ್ಸೆಸೆ ಪ್ರಶಸ್ತಿ ಅರಸಿಕೊಂಡು ಬಂದಿದೆ.
***
‘ನಾನು ಕನಸುಗಳಲ್ಲಿ, ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ, ನಾನು ನಿಜಜೀವನದಲ್ಲಿ ಕಾರ್ಯನಿರ್ವಹಿಸುತ್ತೇನೆ ಮತ್ತು ಏನಾದರೂ ಬದಲಾವಣೆ ತರಬೇಕು ಎಂಬ ತುಡಿತ ಹೊಂದಿದ್ದೇನೆ. ಹಾಂ, ಮತ್ತೊಮ್ಮೆ ಕೇಳಿಸಿಕೊಳ್ಳಿ ನಾನು ಫುಂಗ್​ಸುಕ್ ವಾಂಗ್ಡು ಅಲ್ಲ, ನಾನು ಸೋನಂ ವಾಂಗ್​ಚುಕ್’ -ಹೀಗೆಂದು ಸ್ಪಷ್ಟ ದನಿಯಲ್ಲಿ ಹೇಳುವ ಸೋನಂ ಭಾರತದಲ್ಲಿ ಸಿನಿಮಾ ಮತ್ತು ಕ್ರಿಕೆಟ್​ಗೆ ಅವಶ್ಯಕತೆಗಿಂತ ಹೆಚ್ಚೇ ಪ್ರಾಧಾನ್ಯ ನೀಡುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಶಿಕ್ಷಣ, ಸಂಸ್ಕೃತಿ, ಪರಿಸರ ಹೀಗೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತ ಲದಾಖ್​ನ ಹಿಂದುಳಿದ ಪ್ರದೇಶಗಳಲ್ಲಿ, ಬೆಟ್ಟದ ತುದಿಗಳಲ್ಲಿ ಅಭಿವೃದ್ಧಿಯ ಬೆಳಕು ಬೀರುವಂತೆ ಮಾಡಿದ್ದಾರೆ. ಆಮೀರ್ ಖಾನ್ ನಟಿಸಿರುವ ‘ತ್ರೀ ಈಡಿಯಟ್ಸ್’ ಚಿತ್ರದ ಫುಂಗ್​ಸುಕ್ ವಾಂಗ್ಡು ಪಾತ್ರಕ್ಕೆ ಸೋನಂ ಪ್ರೇರಣೆ. ಆದರೆ, ‘ಚಿತ್ರಕ್ಕಿಂತ ಲದಾಖ್​ನ ದನಿಗಳು, ಇಲ್ಲಿನ ಕೆಲಸಗಳು ಮಾತನಾಡಬೇಕು’ ಎನ್ನುವ ಸೋನಂಗೆ ಈ ಬಾರಿಯ ಮ್ಯಾಗ್ಸೆಸೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಲದಾಖ್​ನ ಶೈಕ್ಷಣಿಕ, ಸಾಂಸ್ಕೃತಿಕ ಚಳವಳಿಯ ಸಂಸ್ಥಾಪಕ ಎಂದೇ ಗುರುತಿಸಲ್ಪಡುವ ಇವರ ಜೀವನಪಯಣ ರೋಚಕ. ಹುಟ್ಟಿದ್ದು ಜಮ್ಮು-ಕಾಶ್ಮೀರದ ಲೇಹ್ ಜಿಲ್ಲೆಯ ಉಲೆಯ್ತೊಕ್ಟೊ ಎಂಬ ಸಣ್ಣಹಳ್ಳಿಯಲ್ಲಿ. ಅಲ್ಲಿ ಶಾಲೆಯೇ ಇಲ್ಲದ್ದರಿಂದ 9ನೇ ವರ್ಷದವರೆಗೂ ತಾಯಿಯೇ ಮನೆಯಲ್ಲಿ ಗಣಿತ, ವಿಜ್ಞಾನ ಹೇಳಿಕೊಟ್ಟರು. ತಂದೆ ರಾಜಕಾರಣಿ. 1975ರಲ್ಲಿ ಅವರಿಗೆ ಜಮ್ಮು-ಕಾಶ್ಮೀರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದ್ದರಿಂದ ಕುಟುಂಬ ಶ್ರೀನಗರಕ್ಕೆ ಸ್ಥಳಾಂತರವಾಯಿತು. ಆದರೆ, ಲದಾಖಿ ಗ್ರಾಮೀಣ ಭಾಷೆಯಷ್ಟೇ ಗೊತ್ತಿದ್ದ ಸೋನಂಗೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವೇ ಆಯಿತು. ಮನೆಯಲ್ಲಿ ಯಾರಿಗೂ ತಿಳಿಸದೆ 1977ರಲ್ಲಿ ದೆಹಲಿಗೆ ಓಡಿಹೋದ ಸೋನಂ ಅಲ್ಲಿಯ ವಿಶೇಷ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕರನ್ನು ಭೇಟಿ ಮಾಡಿ, ತಮ್ಮ ಸ್ಥಿತಿ ವಿವರಿಸಿ ಅದೇ ಶಾಲೆಯ ವಿದ್ಯಾರ್ಥಿಯಾಗಿ ಸೇರಿಕೊಂಡರು. ಮುಂದೆ, ಶ್ರೀನಗರಕ್ಕೆ ಬಂದಾಗ ತಂದೆ ಹೇಳಿದ್ದು ‘ಸಿವಿಲ್ ಇಂಜಿನಿಯರಿಂಗ್’ ಓದು ಅಂತ. ಇವರ ಆಸಕ್ತಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಡೆ. ಹಾಗಾಗಿ, ಸ್ವಂತ ಖರ್ಚಿನಲ್ಲೇ ಮೆಕ್ಯಾನಿಕಲ್  ಇಂಜಿನಿಯರಿಂಗ್ (1983-87) ವ್ಯಾಸಂಗ ಪೂರ್ಣಗೊಳಿಸಿದ ಸೋನಂ ಶಿಕ್ಷಣ ಸುಧಾರಣೆಯಲ್ಲಿ ತೊಡಗಿಕೊಂಡರು.
1987ರಲ್ಲಿ ಲದಾಖ್​ಗೆ ಹಿಂದಿರುಗಿ Students’ Educational and Cultural Movement of Ladakh ಎಂಬ ಸಂಸ್ಥೆ ಹುಟ್ಟಿಹಾಕಿದ್ದು ಜೀವನಕ್ಕೆ ಸಿಕ್ಕ ಮಹತ್ವದ ತಿರುವು. ಈ ಸಂಸ್ಥೆಯ ಎಲ್ಲ ಕಟ್ಟಡಗಳಿಗೂ ಸೌರಶಕ್ತಿಯ ಸಂಪರ್ಕವಿದ್ದು, ಕೆಲ ಗ್ರಾಮ, ಮನೆಗಳನ್ನೂ ಸೌರಬೆಳಕಿನಿಂದ ಬೆಳಗಿದ್ದಾರೆ.
ಸರ್ಕಾರಿ ಶಾಲೆಗಳ ಸಬಲೀಕರಣ ಗುರಿಯಾಗಿಸಿಕೊಂಡು ಅಲ್ಲಿ ಕೈಗೊಂಡ ಹೊಸ ಪ್ರಯೋಗಗಳು ಯಶಸ್ವಿ ಆಗುತ್ತಿದ್ದಂತೆ ‘ನ್ಯೂ ಹೋಪ್’ ಎಂಬ ಮತ್ತೊಂದು ಶೈಕ್ಷಣಿಕ ಯೋಜನೆಯಡಿ ಒಂದು ಸಾವಿರ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ ಸೋನಂ. ಲದಾಖ್​ನಲ್ಲಿ 10ನೇ ತರಗತಿ ಪಾಸಾಗುವ ವಿದ್ಯಾರ್ಥಿಗಳ ಸಂಖ್ಯೆ ಬರೀ ಶೇ. 5ರಷ್ಟಿತ್ತು. ಆದರೆ, ಸೋನಂ ಮತ್ತು ಅವರ ಸಂಸ್ಥೆಯ ಪ್ರಯೋಗ, ಶ್ರಮದ ಪರಿಣಾಮ ಈ ಸಂಖ್ಯೆ ಶೇ.75ಕ್ಕೆ ಏರಿದೆ. ಬರೀ ಸಂಖ್ಯೆ ಮಾತ್ರ ಹೆಚ್ಚಿಲ್ಲ ಮಕ್ಕಳು ಜ್ಞಾನಾಧಾರಿತ ಶಿಕ್ಷಣ ಪಡೆಯುತ್ತಿದ್ದು, ಸೃಜನಶೀಲತೆಯಿಂದ ಗಮನ ಸೆಳೆದಿದ್ದಾರೆ. ‘ಲದಾಖ್ 2025’ ಎಂಬ ಶೀರ್ಷಿಕೆಯಲ್ಲಿ ಆ ಭಾಗದ ಸಮಗ್ರ ಅಭಿವೃದ್ಧಿಯ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
2011ರಲ್ಲಿ ಫ್ರಾನ್ಸ್​ನ ಗ್ರೆನೊಬಲ್​ನಲ್ಲಿ ವಾಸ್ತುಶಿಲ್ಪ ಅಧ್ಯಯನದಲ್ಲಿ ಉನ್ನತ ವ್ಯಾಸಂಗಗೈದ ಸೋನಂ, ಐಸ್ ಸ್ತೂಪ ಎಂಬ ಮಾನವನಿರ್ವಿುತ ಊಟೆಯನ್ನು ಸಂಶೋಧಿಸಿದ್ದು, ಲದಾಖ್​ಗೆ ದೊಡ್ಡ ವರದಾನವಾಗಿ ಪರಿಣಮಿಸಿದೆ. ಚಳಿಗಾಲದಲ್ಲಿ ಹರಿವ ನೀರನ್ನು ಮಂಜುಗಡ್ಡೆಗಳಾಗಿ ಘನೀಕರಿಸಿ, ಬೃಹತ್ ಊಟೆಗಳನ್ನಾಗಿಸಿ ಬೇಸಿಗೆಯಲ್ಲಿ ಅದೇ ಊಟೆಗಳನ್ನು ಕರಗಿಸಿ ಗದ್ದೆಗಳಲ್ಲಿ ಬೇಸಾಯಕ್ಕೆ ಬಳಸುವುದು ಐಸ್ ಸ್ತೂಪದ ಕ್ರಮ. ಇದುವರೆಗೂ ಲಕ್ಷಾಂತರ ಲೀಟರ್ ನೀರನ್ನು ಹಿಡಿದಿಡಬಲ್ಲ ಐಸ್ ಸ್ತೂಪಗಳ ನಿರ್ವಣವಾಗಿದೆ. ‘ಈಗ ದೇಶಕ್ಕಾಗಿ ಪ್ರಾಣ ನೀಡುವ ಅಗತ್ಯವಿಲ್ಲ, ಜೀವನ ನೀಡುವ ಅಗತ್ಯವಿದೆ’ ಎನ್ನುವ ಸೋನಂ ಜ್ಞಾನ-ಸೇವೆಯ ಶಕ್ತಿಯನ್ನು ದರ್ಶಿಸಿದ್ದು, ಯುವಮನಸ್ಸುಗಳ ಐಕಾನ್ ಆಗಿ ಹೊರಹೊಮ್ಮಿದ್ದಾರೆ.
(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....