ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮನ್ನಾ ಅಸ್ಪಷ್ಟ, ಸವಾಲಿನ ಸಂಕಷ್ಟ, |ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಚೊಚ್ಚಲ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಸಾಲಮನ್ನಾ ಘೋಷಣೆಯ ಒಳಮರ್ಮಕ್ಕೆ ಆರ್ಥಿಕ ತಜ್ಞರೇ ತಬ್ಬಿಬ್ಬಾಗಿದ್ದಾರೆ! ಸಾಲಮನ್ನಾದ 34 ಸಾವಿರ ಕೋಟಿ ರೂ.ಗಳ ಹೊರೆ ಇಳಿಸಿಕೊಳ್ಳುವುದಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಸ್ಪಷ್ಟತೆ ಇಲ್ಲವೆಂಬುದು ಒಂದಾದರೆ, ಮನ್ನಾ ಜಾರಿಗೆ ಬ್ಯಾಂಕ್​ಗಳ ಸಮ್ಮತಿ ದೊರೆಯುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಹಾಗೂ ಹೀಗೂ ಘೋಷಣೆ ಅನುಷ್ಠಾನಗೊಂಡಿದ್ದೇ ಆದಲ್ಲಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವೂ ಕಾಡಲಾರಂಭಿಸಿದೆ.
ರಾಜ್ಯದ 40 ಲಕ್ಷ ರೈತರಿಗೆ 34 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಘೋಷಿಸಿರುವುದರಿಂದ ಅಷ್ಟು ಪ್ರಮಾಣದ ಸಾಲ ತೀರಿಸಲು ಹಣ ಎಲ್ಲಿಂದ ತರಲಾಗುವುದೆಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದರಿಂದಾಗಿ ಮನ್ನಾ ಭಾಗ್ಯ ನಿಜಕ್ಕೂ ಜಾರಿಯಾಗುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕುಮಾರಸ್ವಾಮಿ ಅವರ ಈ ನಡೆ ಆರ್ಥಿಕ ಶಿಸ್ತು ಹಳಿ ತಪ್ಪಿಸುವ ಆತಂಕದ ಜತೆಗೆ ದೂರಗಾಮಿ ಪರಿಣಾಮಗಳ ಅಪಾಯದ ಸುಳಿಗೂ ಸಿಲುಕಿಸಿದೆ. ರಾಜ್ಯಕ್ಕೆ ಇರುವುದು ಸೀಮಿತ ಸಂಪನ್ಮೂಲ. ಅದರ ಜತೆಗೆ ಬದ್ಧತಾ ವೆಚ್ಚಗಳ ಅಭಿವೃದ್ಧಿ ಫಲಿತಾಂಶಗಳನ್ನು ಜೋಡಣೆ ಮಾಡುವ ಗಂಭೀರ ಸವಾಲಿಗೂ ಮುನ್ನುಡಿ ಬರೆದಿದೆ.
ನೆರೆ ರಾಜ್ಯ ಉದಾಹರಣೆ: ನೆರೆ ರಾಜ್ಯವೊಂದರಲ್ಲಿ 2014ರಲ್ಲಿ ಇದೇ ರೀತಿ ಬ್ಯಾಂಕ್​ಗಳು ನೆರವಿಗೆ ಬರಬಹುದೆಂಬ ನಿರೀಕ್ಷೆಯಲ್ಲಿಯೇ ಸಾಲಮನ್ನಾ ಮಾಡಲಾಗಿತ್ತು. ಕಂತುಗಳಲ್ಲಿ ಅಸಲು ಸಹ ಪಾವತಿ ಮಾಡಲಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಬ್ಯಾಂಕ್​ಗಳು ಬಡ್ಡಿ ಪಾವತಿಸುವಂತೆ ರೈತರಿಗೆ ನೋಟಿಸ್ ನೀಡಿದ್ದವು ಎಂಬುದನ್ನು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ಅಂತಹ ಸ್ಥಿತಿ ಎದುರಾದರೆ ಏನು ಮಾಡುವುದು ಎಂಬುದು ಅಧಿಕಾರಿಗಳ ಆತಂಕವೂ ಆಗಿದೆ.
ಸುಸ್ತಿದಾರರೆಷ್ಟು?
ಸರ್ಕಾರ 2017ರ ಡಿ.31ರ ತನಕ ಇರುವ ಸುಸ್ತಿಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಆದರೆ ಸುಸ್ತಿಸಾಲದ ಬಗ್ಗೆಯೇ ಗೊಂದಲಗಳಿವೆ. ಸಹಕಾರ ವಲಯದಲ್ಲಿ ಹಿಂದಿನ ಸರ್ಕಾರ 8165 ಕೋಟಿ ರೂ. ಮನ್ನಾ ಮಾಡಿರುವುದರಿಂದ ಸುಸ್ತಿದಾರರ ಸಂಖ್ಯೆ ಹೆಚ್ಚಿರಲು ಸಾಧ್ಯವಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ತುಂಬಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಇರಲು ಹೇಗೆ ಸಾಧ್ಯವೆಂಬ ಪ್ರಶ್ನೆಯನ್ನು ರೈತ ಮುಖಂಡರು ಎತ್ತುತ್ತಿದ್ದಾರೆ.
ಆರ್ಥಿಕ ಸ್ಥಿತಿ ಪ್ರಪಾತಕ್ಕೆ
ರಾಜ್ಯದ ಸಾಲದ ಪ್ರಮಾಣ ಮತ್ತೆ ಹೆಚ್ಚಳವಾಗುವತ್ತ ಸಾಗಿದೆ. 2017-18ರಲ್ಲಿ ಜಿಎಸ್​ಡಿಪಿಯ ಶೇ. 19.22 ಇತ್ತು. ಅದು ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿ ಶೇ. 20.36ರಷ್ಟು ಆಗಬಹುದೆಂಬ ಅಂದಾಜು ಮಾಡಲಾಗಿತ್ತು. ಆದರೆ ಈಗ ಶೇ. 20.75ಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿಯಲ್ಲಿಯೇ ವಿತ್ತೀಯ ಕೊರತೆ ಸಹ ಹೆಚ್ಚುತ್ತಿದೆ. ಅದು ರಾಜ್ಯದ ಆರ್ಥಿಕ ಸ್ಥಿತಿ ಸಾಗುವ ದಿಕ್ಕಿನ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.
ಹೆಚ್ಚುತ್ತಿವೆ ಸಹಾಯಧನ
ರಾಜ್ಯ ನೀಡುವ ವಿವಿಧ ಸಹಾಯಧನಗಳು ಸಹ ಹೆಚ್ಚಾಗುತ್ತಿವೆ. ಕಳೆದ ವರ್ಷ 23,476 ಕೋಟಿ ರೂ.ಗಳಿದ್ದ ಸಹಾಯಧನ ಮೊತ್ತ ಈ ವರ್ಷ 24403.78 ಕೋಟಿ ರೂ.ಗಳಿಗೆ ತಲುಪಲಿದೆ.
ಸಾಲಮನ್ನಾವನ್ನು ಕಂತುಗಳಲ್ಲಿ ಪಾವತಿಸುವುದಕ್ಕೆ ಹಾಗೂ ಬಡ್ಡಿ ಮನ್ನಾಕ್ಕೆ ಬ್ಯಾಂಕ್​ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷೆ ಮಾಡುತ್ತಿದ್ದೇವೆ. ಸಂಪನ್ಮೂಲ ಕ್ರೋಡೀಕರಣಕ್ಕೂ ವ್ಯವಸ್ಥೆ ಮಾಡುತ್ತಿದ್ದೇವೆ. ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ಎಚ್ಚರವಹಿಸುತ್ತೇವೆ.
|ಐ.ಎಸ್.ಎನ್. ಪ್ರಸಾದ್,  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ
ಸರ್ಕಾರ ಸುಸ್ತಿ ಸಾಲ ಮನ್ನಾ ಮಾಡುವುದಾಗಿ ಹೇಳಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವೇನು ಆಗುವುದಿಲ್ಲ. ರೈತರು ಈಗಾಗಲೇ ಸಾಲ ಪಾವತಿ ಮಾಡಿರುತ್ತಾರೆ.
|ಕುರುಬೂರು ಶಾಂತಕುಮಾರ್, ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ
ರೈತರ ಸಾಲಮನ್ನಾ ಸ್ವಾಗತಾರ್ಹ. ಆದರೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಮಾಡುತ್ತಾರೆಂದು ಎದುರು ನೋಡುತ್ತಿದ್ದೇವೆ. ಡಾ. ಸ್ವಾಮಿನಾಥನ್ ಸಮಿತಿ ವರದಿ ಜಾರಿಯೇ ರೈತರ ಸಮಸ್ಯೆಗಳಿಗೆ ನಿಜವಾದ ಪರಿಹಾರ.
|ಮಾರುತಿ ಮಾನ್ಪಡೆ, ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ
ದೇಶಾದ್ಯಂತ ಸಾಲಮನ್ನಾ 2.7 ಲಕ್ಷಕ್ಕೆ ಏರಿಕೆ ಸಾಧ್ಯತೆ
ನವದೆಹಲಿ: 2019ರ ಲೋಕಸಭಾ ಚುನಾವಣೆಗೂ ಮುನ್ನ ಭಾರತದಲ್ಲಿ ಸಾಲಮನ್ನಾ ಮೊತ್ತ -ಠಿ;2.7ಲಕ್ಷ ಕೋಟಿಗೆ ಏರುವ ಸಾಧ್ಯತೆ ಇದೆ ಎಂದು ‘ಬ್ಯಾಂಕ್ ಆಫ್ ಅಮೆರಿಕ ಮೆರ್ರಿಲ್ ಲಿಂಚ್’ ವರದಿ ಮಾಡಿದೆ.
ಕರ್ನಾಟಕದ ಸಮ್ಮಿಶ್ರ ಸರ್ಕಾರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಸಾಲಮನ್ನಾ ಮೊತ್ತವೂ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಚುನಾವಣೆಯ ಒಳಗೆ ಗ್ರಾಮೀಣ ಭಾಗದ ಜನತೆಯ ಸಂಕಷ್ಟ ನಿವಾರಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರೈತರ ಸಾಲಮನ್ನಾ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿವೆ ಎಂದು ಅದು ವಿಶ್ಲೇಷಿಸಿದೆ.
ಸಂಪನ್ಮೂಲದ ವಾಸ್ತವ ಏನು…?
ಸಿಎಂ ಕುಮಾರಸ್ವಾಮಿ 16,760 ಕೋಟಿ ರೂ.ಗಳ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಹೇಳಿದ್ದಾರೆ. ಪೆಟ್ರೋಲ್, ಡಿಸೇಲ್, ವಿದ್ಯುತ್ ಹಾಗೂ ಮದ್ಯದ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ. ಇದರಲ್ಲಿ ಪೆಟ್ರೋಲ್ ಹಾಗೂ ಡಿಸೇಲ್​ನಿಂದ 1000 ಕೋಟಿ ರೂ., ವಿದ್ಯುತ್ ಹೆಚ್ಚಳದಿಂದ 1000 ಕೋಟಿ ರೂ., ಹಾಗೂ ಅಬಕಾರಿ ತೆರಿಗೆಯಿಂದ 1000 ಕೋಟಿ ರೂ., ಸಂಗ್ರಹವಾದರೆ ಮೋಟಾರ್ ವಾಹನದಿಂದ 58 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತದೆ. ತೆರಿಗೆಯೇತರ ಆದಾಯ 8000 ಕೋಟಿ ರೂ. ನಿರೀಕ್ಷೆ ಇದೆ. ಆದರೆ ಅದು ಯಾವತ್ತೂ ನಿರೀಕ್ಷೆ ಮಾಡಿದಷ್ಟು ಸಂಗ್ರಹವಾಗಿಲ್ಲ. ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ಕೇಂದ್ರದಿಂದ ನೆರವು, ಗಣಿಗಳ ಹರಾಜು ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದೆ. ಆದರೆ ಇದೆಲ್ಲದಕ್ಕಿಂತ ಸಾಲಕ್ಕೇ ಹೆಚ್ಚಾಗಿ ಮೊರೆ ಹೋಗಬೇಕಾಗಿದೆ. ಆದ್ದರಿಂದಲೇ ಫೆಬ್ರವರಿಗಿಂತ ಈಗ ಸಾಲದ ಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳಲಾಗಿದೆ.  ಆದರೂ ಹೆಚ್ಚುವರಿ ಸಂಪನ್ಮೂಲದ ಗುರಿ ತಲುಪುವುದು ಹೇಗೆ ಎಂಬುದೇ ಪ್ರಶ್ನೆಯಾಗಿದೆ.
ಪ್ರಮುಖ ಸವಾಲುಗಳೇನು
ಸಾಲಮನ್ನಾದ ಮೊತ್ತವನ್ನು 5 ವರ್ಷಗಳಲ್ಲಿ ತುಂಬುವುದಾಗಿ ಬ್ಯಾಂಕ್​ಗಳ ಮನವೊಲಿಸುವುದು
ಒಂದು ಅವಧಿಯ ತೀರುವಳಿಯಲ್ಲಿ ಬಡ್ಡಿ ಮನ್ನಾಕ್ಕೆ ಅವಕಾಶ ನೀಡಬೇಕೆಂಬ ಸರ್ಕಾರದ ಕೋರಿಕೆಗೆ ಬ್ಯಾಂಕ್​ಗಳಿನ್ನೂ ಉತ್ತರ ನೀಡಿಲ್ಲ
ಬಡ್ಡಿ ಮನ್ನಾ ಹಾಗೂ ಕಂತುಗಳಲ್ಲಿ ಅಸಲು ಪಾವತಿಗೆ ಒಪು್ಪವ ಬಗ್ಗೆಯೂ ಬ್ಯಾಂಕ್​ಗಳು ಗುಟ್ಟು ಬಿಟ್ಟುಕೊಟ್ಟಿಲ್ಲ. ಒಂದೊಮ್ಮೆ ಬ್ಯಾಂಕ್​ಗಳು ಒಪ್ಪದೇ ಹೋದಲ್ಲಿ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗಲಿದೆ.
ಸಾಲಮನ್ನಾ ಮೊತ್ತವನ್ನು ಐದು ವರ್ಷದಲ್ಲಿ ಭರಿಸುವುದಾಗಿ ಸರ್ಕಾರ ಹೇಳಿದೆ. ಅಂದರೆ ವರ್ಷಕ್ಕೆ 6800 ಕೋಟಿ ರೂ.ಗಳ ಅಗತ್ಯವಿದೆ. ಆದರೆ ಈ ಸಾಲಿನಲ್ಲಿ ಸಿದ್ದರಾಮಯ್ಯ ಮನ್ನಾ ಮಾಡಿದ್ದ ಮೊತ್ತದಲ್ಲಿ ಸಹಕಾರ ಸಂಸ್ಥೆಗಳಿಗೆ ತುಂಬ ಬೇಕಾಗಿರುವ ಬಾಕಿ 4000 ಕೋಟಿ ರೂ.ಗಳಿದೆ. ಬ್ಯಾಂಕ್​ಗಳು ಒಪ್ಪಿಗೆ ಸೂಚಿಸಿದರೆ ಈ ವರ್ಷಕ್ಕೆ 10,800 ಕೋಟಿ ರೂ.ಗಳ ಅಗತ್ಯ ಬೀಳುತ್ತದೆ.
ಮೂವರು ರೈತರ ಆತ್ಮಹತ್ಯೆ
ಬೆಂಗಳೂರು: ಸಾಲಮನ್ನಾಗೆ ಷರತ್ತಿನ ಸಮ್ಮತಿ ನೀಡಿರುವ ಬಜೆಟ್ ಘೋಷಣೆ ಯಿಂದಾಗಿ ನಿರಾಸೆಗೊಂಡ ಮೂವರು ರೈತರು ಪ್ರತ್ಯೇಕ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಸಂತೇಮರ ಹಳ್ಳಿ ಸಮೀಪದ ದೇಮಹಳ್ಳಿಯ ಬೆಳ್ಳಪ್ಪ(45) ನೇಣು ಬಿಗಿದುಕೊಂಡರೆ, ಬಾಗಲಕೋಟೆ ಜಮಖಂಡಿ ತಾಲೂಕಿನ ರೈತ ಪಾಂಡಪ್ಪ ರಾಮಪ್ಪ ಅಂಬಿ(52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಸಮೀಪ ಮತ್ತೋರ್ವ ರೈತ ವಿಷ ಕುಡಿದು ಸಾವನ್ನಪ್ಪಿದ್ದಾರೆ. ಬೆಳ್ಳಪ್ಪ ದೇಮಹಳ್ಳಿಯ ಪಿಎಸಿಸಿ ಬ್ಯಾಂಕ್​ನಲ್ಲಿ 40 ಸಾವಿರ ರೂ.ಸಾಲ ಪಡೆದಿದ್ದರು.
ಕೃಷಿ ಜತೆ ಹಪ್ಪಳ, ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಉಮ್ಮತ್ತೂರು ಗ್ರಾಮದ ಕಾವೇರಿ ಕಲ್ಪತರು ಬ್ಯಾಂಕ್​ನಲ್ಲಿ ವ್ಯಾಪಾರಕ್ಕಾಗಿ 45 ಸಾವಿರ ರೂ.ಸಾಲ ಪಡೆದಿದ್ದರು. ಇದಲ್ಲದೆ ಲೇವಾದೇವಿದಾರರಿಂದ ಸುಮಾರು 2 ಲಕ್ಷ ರೂ. ಸಾಲ ಮಾಡಿದ್ದರು. ಗುರುವಾರ ಬಜೆಟ್ ಬಳಿಕ ತಾವು ಪಿಎಸಿಸಿ ಬ್ಯಾಂಕ್​ನಲ್ಲಿ ಪಡೆದ ಸಾಲವು ಮನ್ನಾ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಅರಿತು ಬೇಸರಗೊಂಡಿದ್ದ ಅವರು ನೊಂದು ಗುರುವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ಕುದೇರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಜೆಟ್​ನಲ್ಲಿ 2017ರ ಡಿ.31ರ ಅಂತ್ಯಕ್ಕೆ 2 ಲಕ್ಷ ರೂ. ಸಾಲ ಮನ್ನಾ ಘೊಷಣೆ ಮಾಡಿದ್ದರೂ ಸುಸ್ತಿ ಸಾಲ ಇಲ್ಲದ ಪಾಂಡಪ್ಪ, ವಿವಿಧ ಬ್ಯಾಂಕ್, ಪತ್ತಿನ ಸಹಕಾರಿ ಸಂಘ, ಕೈಗಡವೆಂದು ತನ್ನ ಹಾಗೂ ಕುಟುಂಬ ಸದಸ್ಯರ ಹೆಸರಲ್ಲಿ ಒಟ್ಟು 9 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ ಟ್ರ್ಯಾಕ್ಟರ್ ಮೇಲೆ ಸಾಲಕ್ಕೆ ಅರ್ಜಿ ಹಾಕಿದ್ದರು. ಬಜೆಟ್ ಬಳಿಕ ಹತಾಶೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಲಬುರಗಿ ತಾಲೂಕಿನ ಅಂಕಲಗಾ ಗ್ರಾಮದಲ್ಲಿ ರೈತ ರಾಜಶೇಖರ (45) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸೇರಿ ಖಾಸಗಿಯಾಗಿ 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...