ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ತಾಲಿಬಾನ್ ಖಾನ್​ನಿಂದ ಬರಬಹುದಾದ ಇನ್​ಸ್ವಿಂಗರ್​ಗಳು!

ಝುುಲ್ಪಿಕರ್ ಅಲಿ ಭುಟ್ಟೋರನ್ನು ಹೊರತುಪಡಿಸಿ ಪಾಕಿಸ್ತಾನದ ಹಿಂದಿನ ಎಲ್ಲ ಪ್ರಧಾನಮಂತ್ರಿಗಳಿಗೆ ಹೋಲಿಸಿದರೆ ಇಮ್ರಾನ್ ಖಾನ್ ಅತ್ಯಂತ ಚಾಲಾಕಿ, ಮೇಲಾಗಿ ‘ಆಲೋಚಿಸಬಲ್ಲ’ ನಾಯಕ. ಹೀಗಾಗಿ, ಸೇನೆ ಮತ್ತು ಮೂಲಭೂತವಾದಿ ಸಂಘಟನೆಗಳ ಲಾಗಾಯ್ತಿನ ಭಾರತ-ವಿರೋಧಿ ನೀತಿಗಳನ್ನು ಖಾನ್ ಮತ್ತಷ್ಟು ಹರಿತವಾಗಿ, ಕುಟಿಲವಾಗಿ ಕಾರ್ಯಗತಗೊಳಿಸಬಹುದು.
ಪಾಕಿಸ್ತಾನದಲ್ಲಿ ಕಳೆದವಾರ ನಡೆದ ಸಾರ್ವತ್ರಿಕ ಚುನಾವಣೆ ನಿರೀಕ್ಷೆಯಂತೆ ಅತಂತ್ರ ಸಂಸತ್ತನ್ನು ಸೃಷ್ಟಿಸಿದೆ. ಚುನಾವಣೆ ನಡೆದ 270 ಸ್ಥಾನಗಳಲ್ಲಿ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್​ರ ‘ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್’ (ಪಿಟಿಐ) 115 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ ಈ ಚುನಾವಣೆವರೆಗೂ ಅಧಿಕಾರದಲ್ಲಿದ್ದ, ಬಂಧಿತ ಮಾಜಿ ಪ್ರಧಾನಿ ನವಾಜ್ ಷರೀಫ್​ರ ‘ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್’ (ಪಿಎಂಎಲ್-ಎನ್) 64 ಸ್ಥಾನಗಳನ್ನೂ, 2008-13ರ ಅವಧಿಯಲ್ಲಿ ಅಧಿಕಾರ ನಡೆಸಿದ, ಬಿಲಾವಲ್ ಭುಟ್ಟೋ ನೇತೃತ್ವದ ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ 43 ಸ್ಥಾನಗಳನ್ನೂ ಗಳಿಸಿವೆ. ಈ ಸಂಖ್ಯೆಯ ಗೊಂದಲ ಸದ್ಯಕ್ಕೆ ಸರಿಹೋಗುವಂತಿಲ್ಲ. ಇಮ್ರಾನ್ ಖಾನ್ ತಾವು ಗೆದ್ದಿರುವ 5 ಸ್ಥಾನಗಳಲ್ಲಿ 4ನ್ನು ಕಾನೂನಿಗನ್ವಯವಾಗಿ ತ್ಯಜಿಸಬೇಕಾಗಿದೆ. ಹಾಗೆಯೇ 2 ಕ್ಷೇತ್ರಗಳಿಂದ ಗೆದ್ದಿರುವ ಮತ್ತೊಬ್ಬ ಪಿಟಿಐ ನಾಯಕ ಗುಲಾಂ ಸರ್ವಾರ್ ಖಾನ್ ಒಂದನ್ನು ತ್ಯಜಿಸಬೇಕು. ಪಕ್ಷದ ಮಗದೊಬ್ಬ ನೇತಾರ, ಖೈಬರ್-ಪಖ್ತೂನ್​ಖ್ವಾ (ವಾಯವ್ಯ ಗಡಿನಾಡು) ಪ್ರಾಂತ್ಯದ ಮಾಜಿ ಮುಖ್ಯಮಂತ್ರಿ ಪರ್ವೇಜ್ ಖಟಕ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಾದರೆ ಅವರೀಗ ಜಯಿಸಿರುವ ನ್ಯಾಷನಲ್ ಅಸೆಂಬ್ಲಿ ಸ್ಥಾನವನ್ನು ತ್ಯಜಿಸಬೇಕು. ಅಂದರೆ ಪಿಟಿಐ ಒಂದರಿಂದಲೇ 6 ಸ್ಥಾನಗಳು ತೆರವಾಗುತ್ತವೆ ಮತ್ತು ಹೀಗೆ ತೆರವಾಗುವ ಇತರ ಪಕ್ಷಗಳ ಸ್ಥಾನಗಳೂ ಸೇರಿದರೆ ಆ ಸಂಖ್ಯೆ 25ನ್ನು ದಾಟುತ್ತದೆ. ಅಂದರೆ ಇನ್ನು 6 ತಿಂಗಳುಗಳಲ್ಲಿ ಇನ್ನೊಂದು ಮಿನಿ ಚುನಾವಣೆ ನಡೆದು ನ್ಯಾಷನಲ್ ಅಸೆಂಬ್ಲಿಯಲ್ಲಿ ಪಕ್ಷಗಳ ಅಂತಿಮ ಬಲಾಬಲ ಹೇಗಿರುತ್ತದೆಯೋ ಈಗಲೇ ಊಹಿಸಲಾಗದು. ಇಷ್ಟಾಗಿಯೂ, ಇಂದಿನ ಬಲಾಬಲಗಳ ಆಧಾರದ ಮೇಲೆ ಅತಿದೊಡ್ಡ ಪಕ್ಷವಾಗಿರುವ ಪಿಟಿಐ ಅನ್ನು ಸರ್ಕಾರ ರಚಿಸಲು ರಾಷ್ಟ್ರಾಧ್ಯಕ್ಷರು ಆಹ್ವಾನಿಸುವುದು ನಿರೀಕ್ಷಿತ. ಆ ಪ್ರಕಾರ ತಾವು ಪ್ರಧಾನಮಂತ್ರಿಯಾಗಿ ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಪಿಟಿಐ ನಾಯಕ ಇಮ್ರಾನ್ ಖಾನ್ ಘೊಷಿಸಿದ್ದಾರೆ. ಈ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ, ಭಾರಿ ಪ್ರಮಾಣದಲ್ಲಿ ಅಕ್ರಮಗಳು ಜರುಗಿವೆ; ಹೀಗಾಗಿ ಈ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಪಿಎಂಎಲ್-ಎನ್ ಮತ್ತು ಪಿಪಿಪಿ ತಕರಾರೆತ್ತಿವೆ. ಧಾರ್ವಿುಕ ಪಕ್ಷಗಳ ಒಕ್ಕೂಟದ ಅಧ್ಯಕ್ಷ ಮೌಲಾನಾ ಫಜಲ್-ಉರ್ ರಹಮಾನ್ ಮರುಚುನಾವಣೆಗಾಗಿ ಆಂದೋಳನವನ್ನೇ ಆರಂಭಿಸುವುದಾಗಿ ಘೊಷಿಸಿದ್ದಾರೆ. ಆದರೆ ಇದಾವುದಕ್ಕೂ ಬೆಂಬಲ ಸಿಗುವುದು ಅಸಾಧ್ಯ. ಇದಕ್ಕೆ ಮುಖ್ಯಕಾರಣ ಆಪಾದನೆಗಳಲ್ಲಿ ಹುರುಳಿಲ್ಲ ಎನ್ನುವುದಲ್ಲ; ಪಿಟಿಐ ಬೆನ್ನಿಗೆ ಸೇನೆ ಬಲವಾಗಿ ನಿಂತಿದೆ ಎನ್ನುವುದು ಪಾಕ್ ರಾಜಕೀಯದ ಇಂದಿನ ವಾಸ್ತವ. ಹೀಗಾಗಿ ಇತರ ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲ ಗಳಿಸಿ ಪಿಟಿಐ ಸರ್ಕಾರ ರಚಿಸುವುದು ನಿಶ್ಚಿತ. ಅದಕ್ಕಾಗಿ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ಹೀಗಾಗಿಯೇ, ಪಾಕಿಸ್ತಾನಿಯರಂತೆಯೇ ಹೊರಜಗತ್ತೂ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಎಂದು ಗುರುತಿಸತೊಡಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ಇಮ್ರಾನ್ ಖಾನ್ ಜತೆ ದೂರವಾಣಿಯಲ್ಲಿ ಮಾತಾಡಿ ಅವರನ್ನು ಅಭಿನಂದಿಸಿದ್ದಾರೆ.
ಸೋಮವಾರ ರಾತ್ರಿ 9 ಗಂಟೆಗೆ ನಡೆದ ಈ ದೂರವಾಣಿ ಸಂಭಾಷಣೆಯಲ್ಲಿ ಮೋದಿ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತದೆಂಬ ಆಶಯವನ್ನು ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಸರ್ಕಾರದ ವಿದೇಶಾಂಗ ನೀತಿಯ ಅಡಿಗಲ್ಲಾದ ‘ನೆರೆನಾಡುಗಳಿಗೆ ಪ್ರಥಮ ಆದ್ಯತೆ’ ಎಂಬ ನಿಲುವು ಮತ್ತು ಸ್ವದೇಶಿ ನೀತಿಯ ಮೂಲಭೂತ ಅಂಶವಾದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಿಲುವನ್ನು ವಿದೇಶಾಂಗ ನೀತಿಗೂ ಅನ್ವಯಿಸಿ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ವಿಕಸನಕ್ಕೆ ಭಾರತ ಸಹಕರಿಸುವುದಾಗಿಯೂ ಭಾವಿ ಪ್ರಧಾನಮಂತ್ರಿಗೆ ಆಶ್ವಾಸನೆ ನೀಡಿದರು. ಈ ಹಿನ್ನೆಲೆಯಲ್ಲಿ, ಇಮ್ರಾನ್ ಖಾನ್ ರಾಜಕೀಯ ನೇತಾರನಾಗಿ ಬೆಳೆದುಬರಲು ಅನುಸರಿಸಿದ ಮಾರ್ಗಗಳ ಪರಿಚಯ ಮತ್ತು ಅವುಗಳಿಂದಾಗಿಯೇ ಅವರ ಆಡಳಿತದಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳು ಯಾವ ಹಾದಿ ಹಿಡಿಯಬಹುದೆನ್ನುವ ಒಂದು ಪೂರ್ವಾವಲೋಕನ ಈ ಲೇಖನದ ವಸ್ತುವಿಷಯ.
ತನ್ನ ಘಾತಕ ಇನ್​ಸ್ವಿಂಗರ್​ಗಳಿಂದ ವಿಶ್ವದ ಎಲ್ಲ ಬ್ಯಾಟಿಂಗ್ ದಿಗ್ಗಜರನ್ನು ಕಂಗಾಲುಗೊಳಿಸಿದ, ತನ್ನ ನಾಯಕತ್ವದಲ್ಲಿ ಪಾಕಿಸ್ತಾನದ ಕಿರೀಟವನ್ನು ವಿಶ್ವಕಪ್ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಟ್ರೋಫಿಗಳಿಂದ ಅಲಂಕರಿಸಿದ ಇಮ್ರಾನ್ ಖಾನ್ ಒಬ್ಬ ಅಧ್ಯಯನಶೀಲ ಬುದ್ಧಿಜೀವಿಯೂ ಆಗಿರುವ ಸೂಚನೆ ಅವರ ಆತ್ಮಕತೆ ’ಕಚkಜಿಠಠಿಚ್ಞ: ಅ ಕಛ್ಟಿಠಟ್ಞಚ್ಝ ಏಜಿಠಠಿಟ್ಟಢ’ಯಲ್ಲಿ ದೊರೆಯುತ್ತದೆ. ಭಾರತೀಯ ಉಪಖಂಡದ ಜನತೆ ತಮ್ಮ ಆತ್ಮಸ್ಥೈರ್ಯವನ್ನೇ ಕಳೆದುಕೊಂಡದ್ದು ವಸಾಹತುಶಾಹಿಯ ಅತ್ಯಂತ ದೊಡ್ಡ ದುಷ್ಪರಿಣಾಮ ಎಂದು ಬರೆಯುವ ಖಾನ್ ಅದನ್ನು ಹೀಗೆ ವಿಶದೀಕರಿಸುತ್ತಾರೆ-‘ಅಧೀನಕ್ಕೊಳಗಾದ ರಾಷ್ಟ್ರವೊಂದರಲ್ಲಿ ಬೇರೂರುವ ಕೀಳರಿಮೆಯ ಮನೋಭಾವ ಆ ರಾಷ್ಟ್ರದ ಜನತೆ ತಮ್ಮ ಆಕ್ರಮಣಕಾರರಲ್ಲಿನ ಅತಿ ಕೆಟ್ಟ ಅಂಶಗಳನ್ನು ಅನುಕರಿಸುವುದಕ್ಕೆ ಹಾಗೂ ತಮ್ಮದೇ ಮಹಾನ್ ಪರಂಪರೆಗಳನ್ನು ನಿರ್ಲಕ್ಷಿಸುವುದಕ್ಕೆ ಕಾರಣವಾಗುತ್ತದೆ’.
ಇಂತಹ ಅಧ್ಯಯನಶೀಲ, ಬುದ್ಧಿಜೀವಿಯೊಬ್ಬ ಪಕ್ಕಾ ರಾಜಕಾರಣಿಯೂ ಆಗಬಲ್ಲ ಎನ್ನುವುದನ್ನು ಖಾನ್​ರ ಬದುಕಿನ ಎರಡನೆಯ ಅರ್ಧಭಾಗ ಸವಿವರವಾಗಿ ಸಾರುತ್ತದೆ. ಇಮ್ರಾನ್ ಖಾನ್ 22 ವರ್ಷಗಳ ಹಿಂದೆ 1996ರಲ್ಲಿ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಾಗ ನಗೆಯಾಡಿದವರೇ ಹೆಚ್ಚು. 90ರ,  ದಶಕದುದ್ದಕ್ಕೂ ಬೆನಝಿರ್ ಭುಟ್ಟೋ ಮತ್ತು ನವಾಜ್ ಷರೀಫ್ ಒಬ್ಬರು ಇನ್ನೊಬ್ಬರನ್ನು ಉರುಳಿಸಲು ರಾಷ್ಟ್ರಾಧ್ಯಕ್ಷರ ಜತೆ ಸೇರಿ ಮತ್ತೆಮತ್ತೆ ಪಿತೂರಿ ನಡೆಸುತ್ತಿದ್ದುದು ನಿಮಗೆ ನೆನಪಿರಬಹುದು. ಅದರಂತೆಯೇ, ಬೆನಝೀರ್ ಸರ್ಕಾರ ಉರುಳಿದ ಸಂದರ್ಭದಲ್ಲಿ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ (ನ್ಯಾಯಕ್ಕಾಗಿ ಪಾಕಿಸ್ತಾನಿ ಚಳವಳಿ) ಪಕ್ಷವನ್ನು ಹುಟ್ಟುಹಾಕಿದಾಗ ಜನರನ್ನು ಸೆಳೆಯಲು ಆ ಮಾಜಿ ಕ್ರಿಕೆಟಿಗ ಅನುಸರಿಸಿದ ಮಾರ್ಗ ಭ್ರಷ್ಟಾಚಾರದ ವಿರುದ್ಧ ಸಮರ. ಆ ದಿನಗಳಲ್ಲಿ, ಭ್ರಷ್ಟಾಚಾರದ ವಿಷಯದಲ್ಲಿ ಪಾಕಿಸ್ತಾನಕ್ಕೆ ಏಷ್ಯಾದಲ್ಲಿ ಪ್ರಥಮ ಸ್ಥಾನವನ್ನೂ, ಜಾಗತಿಕವಾಗಿ ದ್ವಿತೀಯ ಸ್ಥಾನವನ್ನೂ ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆ ದಯಪಾಲಿಸಿತ್ತು. ದೇಶದಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕುವುದು, ಭ್ರಷ್ಟಾಚಾರಿಗಳನ್ನು ನೇಣಿಗೇರಿಸುವುದು ತಮ್ಮ ಪಕ್ಷದ ಗುರಿ ಎಂದು ಪುಂಖಾನುಪುಂಖವಾಗಿ ಭಾಷಣಗಳನ್ನು ಮಾಡಿದ ಇಮ್ರಾನ್ ಖಾನ್​ರತ್ತ, ಕೆಲವೇ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಜನತೆ ಗಮನವನ್ನೇ ಕೊಡಲಿಲ್ಲ. ಪರಿಣಾಮವಾಗಿ, ಪಾಕಿಸ್ತಾನದಲ್ಲಿನ ವಾಸ್ತವಗಳಿಗೆ ಅನುಗುಣವಾದ ವ್ಯಾವಹಾರಿಕ ನೀತಿಯೊಂದರ ಅಗತ್ಯವನ್ನು ಖಾನ್ ತಕ್ಷಣ ಅರಿತುಕೊಂಡರು. ಆಗ ಅವರು ಮೊರೆಹೋದದ್ದು ಇಸ್ಲಾಮ್ೆಡೆಗೆ. ತಾವೊಬ್ಬ ಇಸ್ಲಾಮಿನ ಕಟ್ಟಾ ಅನುಯಾಯಿ ಎಂದು ಎಲ್ಲೆಲ್ಲಿಯೂ ಘೊಷಿಸಿಕೊಂಡಿದ್ದಲ್ಲದೆ ತಮ್ಮೆಲ್ಲ ಸಾರ್ವಜನಿಕ ಭಾಷಣಗಳಲ್ಲಿ ಕುರಾನ್​ನ ಉಕ್ತಿಗಳನ್ನೂ, ಸೂಫಿ ಸೂಕ್ತಿಗಳನ್ನೂ ಧಾರಾಳವಾಗಿ ತುಂಬುತ್ತ ತಾವೊಬ್ಬ ಪಕ್ಕಾ ‘ಪಾಕಿಸ್ತಾನಿ ರಾಜಕಾರಣಿ’ ಎನ್ನುವುದನ್ನು ಜಗತ್ತಿಗೆ ಸಾರಿಬಿಟ್ಟರು. ಪಾಕಿಸ್ತಾನಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಹಾಗೂ
ಆಕ್ಸ್​ಫರ್ಡ್​ನಲ್ಲಿ ಶಿಕ್ಷಣ ಪಡೆದ ಇಮ್ರಾನ್ ಖಾನ್ ಹೀಗೆ ಇಸ್ಲಾಮಿನತ್ತ ವಾಲಿದ್ದನ್ನು ಇತಿಹಾಸಕಾರ ವಿಲಿಯಂ ಡ್ಯಾಲ್​ರಿಂಪಲ್ ‘ಮಧ್ಯವಯಸ್ಸಿನ ಸಮಸ್ಯೆ’ ಎಂದು ಹಗುರವಾಗಿ ವರ್ಣಿಸಿದರೂ ಆ ಮಾಜಿ ಕ್ರಿಕೆಟ್ ದಿಗ್ಗಜ ಎದುರಾಳಿ ಬ್ಯಾಟ್ಸ್​ಮನ್​ಗಳ ಮನಸ್ಥಿತಿಯನ್ನು ಕರಾರುವಾಕ್ಕಾಗಿ ಅರಿಯುತ್ತಿದ್ದಂತೆಯೇ ಪಾಕಿಸ್ತಾನಿಯರ ನಾಡಿಮಿಡಿತವನ್ನೂ ಚೆನ್ನಾಗಿಯೇ ಅರಿತಿದ್ದರು ಎನ್ನುವುದನ್ನು ನಾವು ಗುರುತಿಸಲೇಬೇಕು. ವರ್ಷಗಳ ನಂತರ ಪಾಕಿಸ್ತಾನಿ ಪತ್ರಕರ್ತೆ ಮದೀಹಾ ತಹೀರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರವಾದಿ ಮಹಮದ್ ತಮಗೆ ಮಾದರಿ ಎಂದು ಖಾನ್ ಹೇಳಿದ್ದು ಅವರ ಇಸ್ಲಾಮ್ ನಿಷ್ಠೆ ತಾತ್ಕಾಲಿಕವಲ್ಲ ಎನ್ನುವುದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿತು. ಇಂತಹ ಮನೋಭಾವದ ‘ರಾಜಕಾರಣಿ’ ಇಮ್ರಾನ್ ಖಾನ್, ಶರಿಯಾ ಕಾನೂನುಗಳನ್ನು ಪ್ರತಿಪಾದಿಸತೊಡಗಿದ್ದು ಹಾಗೂ ಇಸ್ಲಾಮಿಕ್ ಮೂಲಭೂತವಾದಿ ತಾಲಿಬಾನ್ ಬಗ್ಗೆ ಪ್ರೀತಿ ವ್ಯಕ್ತಪಡಿಸತೊಡಗಿದ್ದು ಸಹಜವೇ ಆಗಿತ್ತು. ಶರಿಯಾ ಕಾನೂನುಗಳು ಆಚರಣೆಯಲ್ಲಿರುವ ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದ ಬುಡಕಟ್ಟು ಪ್ರದೇಶಗಳಲ್ಲಿ ಕಂಡುಬರುವ ಅಪರಾಧರಹಿತ ಸ್ಥಿತಿಯನ್ನು ರಾತ್ರಿಗಳಲ್ಲಿ ನ್ಯೂಯಾರ್ಕ್ ನಗರದಲ್ಲಿ ತಾಂಡವವಾಡುವ ಅರಾಜಕತೆಯ ಜತೆ ಹೋಲಿಸಿದರೆ ದೇಶಕ್ಕೆ ಶರಿಯಾ ಕಾನೂನುಗಳ ಅಗತ್ಯ ಮನದಟ್ಟಾಗುತ್ತದೆ ಎಂದು ಖಾನ್ ಅಭಿಪ್ರಾಯ ಪಡುವುದಾಗಿ ವಿಲಿಯಂ ಡ್ಯಾಲ್​ರಿಂಪಲ್ ಬರೆಯುತ್ತಾರೆ. ಇದಕ್ಕೆ ಪುಷ್ಟಿ ದೊರೆಯುವುದು ಖಾನ್​ರ ನೇರ ಮಾತುಗಳಲ್ಲೇ. 2002ರಲ್ಲಿ ಕಾರ್ವಿುಕರ ಸಮಾವೇಶವೊಂದರಲ್ಲಿ ಭಾಷಣಮಾಡುತ್ತ, ತಾವು ತಾಲಿಬಾನ್​ನ ನ್ಯಾಯವ್ಯವಸ್ಥೆಯಿಂದ ಪ್ರಭಾವಿತರಾಗಿರುವುದಾಗಿಯೂ, ಅಧಿಕಾರಕ್ಕೆ ಬಂದರೆ ಅಂತಹುದೇ ನ್ಯಾಯವ್ಯವಸ್ಥೆಯನ್ನು ಪಾಕಿಸ್ತಾನದಾದ್ಯಂತ ಜಾರಿಗೆ ತರುವುದಾಗಿಯೂ ಖಾನ್ ಬಹಿರಂಗವಾಗಿಯೆ ಘೊಷಿಸಿದರು. ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ಸಂಘರ್ಷವನ್ನು ‘ವಸಾಹತೀಕರಣದ ವಿರುದ್ಧದ ಸಮರ’ ಎಂದು ಬಣ್ಣಿಸುವ ಖಾನ್ ಪಾಕಿಸ್ತಾನಿ ನಗರಗಳಲ್ಲಿ ತಾಲಿಬಾನಿಗಳು ತಮ್ಮ ಕಚೇರಿಗಳನ್ನು ತೆರೆಯಲು ಅವಕಾಶವಿರಬೇಕೆಂದೂ ಘೊಷಿಸಿದ್ದಾರೆ. ಖಾನ್​ರ ಈ ಬಗೆಯ ತಾಲಿಬಾನ್-ಪ್ರೇಮದಿಂದಾಗಿ ಅವರಿಗೆ ‘ತಾಲಿಬಾನ್ ಖಾನ್’ ಎಂಬ ಹೆಸರೇ ಬಂದುಬಿಟ್ಟಿದೆ.
ತಾಲಿಬಾನ್ ಬಗೆಗಿನ ಇಮ್ರಾನ್ ಖಾನ್​ರ ಈ ಬಗೆಯ ಮೃದುತ್ವ, ಅವಕಾಶವಾದಿ ರಾಜಕಾರಣವಿರಬಹುದೇ ಎಂಬ ಅನುಮಾನ ಮೂಡಿಸುವ ಪ್ರಕರಣವೂ ಒಂದಿದೆ. 2012ರ ಅಕ್ಟೋಬರ್​ನಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ದನಿಯೆತ್ತಿದ್ದ ಶಾಲಾಬಾಲಕಿ ಮಲಾಲಾ ಯೂಸುಫ್​ರkಾಯ್ ಮೇಲೆ ಉಗ್ರರು ಎಸಗಿದ ದಾಳಿಯನ್ನು ಖಂಡಿಸಿದ ಇಮ್ರಾನ್, ದಾಳಿಯ ಹಿಂದಿದ್ದ ತಾಲಿಬಾನ್ ಅನ್ನು ಖಂಡಿಸಲು ನಿರಾಕರಿಸಿದರು. ಈ ಬಗ್ಗೆ ಟಿವಿ ಚಾನಲ್ ಒಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಣ್ಣೆವೆ ಮಿಟುಕಿಸದೆ ಹೇಳಿದ್ದು ಹೀಗೆ- ‘ನಾನಿಲ್ಲಿ ಕೂತು ತಾಲಿಬಾನ್ ವಿರುದ್ಧ ದೊಡ್ಡದೊಡ್ಡ ಹೇಳಿಕೆಗಳನ್ನು ಕೊಟ್ಟರೆ ಅಲ್ಲಿ (ಗಡಿನಾಡಿನಲ್ಲಿ) ನನ್ನ ಪಕ್ಷದ ಕಾರ್ಯಕರ್ತರನ್ನು ಕಾಪಾಡುವವರಾರು?’.
ಇಂತಹ ಚಾಲಾಕಿ, ನಿಶ್ಚಿತ ಗುರಿಯ ಇಮ್ರಾನ್ ಖಾನ್ ಇಸ್ಲಾಮಾಬಾದ್​ನ ಚುಕ್ಕಾಣಿ ಹಿಡಿದರೆ ಭಾರತ ಏನನ್ನು ನಿರೀಕ್ಷಿಸಬಹುದು? ಏಷ್ಯಾದ ಪ್ರಸಕ್ತ ಭೂ-ರಾಜಕೀಯ ವಾಸ್ತವಗಳು ಇಮ್ರಾನ್ ಖಾನ್ ಸರ್ಕಾರದ ಆದ್ಯತೆಯಾಗಿಸುವುದು ಭಾರತವನ್ನಲ್ಲ, ಬದಲಾಗಿ ಅಫ್ಘಾನಿಸ್ತಾನವನ್ನು ಹಾಗೂ ಚೀನಾವನ್ನು. ಅಮೆರಿಕದ ಒತ್ತಡವನ್ನೂ ಮೀರಿ ಆಫ್ಘನ್ ಶಾಂತಿ ಪ್ರಕ್ರಿಯೆಯಲ್ಲಿ ತಾಲಿಬಾನ್ ಹಿತಾಸಕ್ತಿಯನ್ನು ಹೇಗೆ ಕಾಪಾಡುವುದು ಹಾಗೂ ತಾನು ಪ್ರಾರಂಭದಿಂದಲೂ ವಿರೋಧಿಸುತ್ತ ಬಂದಿರುವ ‘ಚೀನಾ-ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್’ಗೆ ಸಂಬಂಧಿಸಿದಂತೆ ಚೀನಾ ಜತೆಗಿನ ವ್ಯವಹಾರದಲ್ಲಿ ತನ್ನ ಸ್ಥಿತಿ ‘ಹಗ್ಗದ ಮೇಲಿನ ನಡಿಗೆ’ಯಂತೆ ಆಗದಂತೆ ಹೇಗೆ ತಡೆಯುವುದು ಎನ್ನುವುದು ಇಮ್ರಾನ್ ಖಾನ್​ರ ಪ್ರಮುಖ ತಲೆನೋವಾಗಲಿವೆ (ಇವುಗಳ ಬಗ್ಗೆ ಮುಂದೆ ವಿವರವಾಗಿ ಬರೆಯುತ್ತೇನೆ). ಹೀಗಾಗಿ ಭಾರತದತ್ತ ನಿಕಟ ಗಮನ ಹರಿಸುವ ಅಗತ್ಯವಾಗಲೀ, ಸಮಯವಾಗಲೀ ಅವರಿಗೆ ಇರಲಾರದು. ಆದರೂ, ನಾವು ನಿಶ್ಚಿಂತೆಯಿಂದಿರಲೂ ಆಗದು. ಅದರ ಸೂಚನೆ ಚುನಾವಣಾ ಫಲಿತಾಂಶಗಳು ಹೊರಬೀಳತೊಡಗಿದೊಡನೆಯೇ ಸಿಕ್ಕಿವೆ. ಕಳೆದ ಗುರುವಾರ ತಮ್ಮ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವ ಸೂಚನೆ ದೊರೆತೊಡನೆ ಇಮ್ರಾನ್ ಖಾನ್  ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತದೊಂದಿಗಿನ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳುವುದು ತಮ್ಮ ಆದ್ಯತೆಯಾಗಿರುತ್ತದೆಂದು ಹೇಳುವುದರ ಜತೆಗೆ, ಪಾಕಿಸ್ತಾನಿ ಆಳರಸರ ಎಂದಿನ ಚಾಳಿಯಂತೆ, ಕಾಶ್ಮೀರ ಸಮಸ್ಯೆಯ ಪರಿಹಾರ ಮುಖ್ಯವೆಂದು ಹೇಳಿದರು. ಕಾಶ್ಮೀರ ಸಮಸ್ಯೆ ಪಾಕ್ ಸೇನೆಯ ಅಸ್ತಿತ್ವಕ್ಕೇ ಮೂಲಾಧಾರ. ಹಾಗೆಯೇ ಕಾಶ್ಮೀರದಲ್ಲಿನ ಭಯೋತ್ಪಾದನೆ ತಾಲಿಬಾನಿಗಳ ನೀತಿಗೂ ಪೂರಕ. ಅಧಿಕಾರದುದ್ದಕ್ಕೂ ಸೇನೆಯ ಹಂಗಿನಲ್ಲೇ ಇರಬೇಕಾದ, ಅದೇ ಸಮಯದಲ್ಲಿ ತಾಲಿಬಾನ್ ಅನ್ನೂ ಬೆಂಬಲಿಸುವ ಇಮ್ರಾನ್ ಖಾನ್ ಭಾರತದ ಬಗ್ಗೆ ಅವೆರಡಕ್ಕೆ ಸಮ್ಮತವಾಗುವ ನೀತಿಯನ್ನೇ ಅನುಸರಿಸಬೇಕಾಗುತ್ತದೆ. ಅಲ್ಲದೆ, ಝುುಲ್ಪಿಕರ್ ಅಲಿ ಭುಟ್ಟೋರನ್ನು ಹೊರತುಪಡಿಸಿ ಪಾಕಿಸ್ತಾನದ ಹಿಂದಿನ ಎಲ್ಲ ಪ್ರಧಾನಮಂತ್ರಿಗಳಿಗೆ ಹೋಲಿಸಿದರೆ ಖಾನ್ ಅತ್ಯಂತ ಚಾಲಾಕಿ, ಮೇಲಾಗಿ ‘ಆಲೋಚಿಸಬಲ್ಲ’ ನಾಯಕ. ಹೀಗಾಗಿ, ಸೇನೆ ಮತ್ತು ಮೂಲಭೂತವಾದಿ ಸಂಘಟನೆಗಳ ಲಾಗಾಯ್ತಿನ ಭಾರತ-ವಿರೋಧಿ ನೀತಿಗಳನ್ನು ಖಾನ್ ಮತ್ತಷ್ಟು ಹರಿತವಾಗಿ, ಕುಟಿಲವಾಗಿ ಕಾರ್ಯಗತಗೊಳಿಸಬಹುದು. ತನ್ನ ಇನ್​ಸ್ವಿಂಗರ್​ಗಳಿಂದ ಎದುರಾಳಿ ದಾಂಡಿಗರನ್ನು ದಿಕ್ಕೆಡಿಸಿದ ಅಸಾಮಾನ್ಯ ಬೌಲರ್, ಭಾವಿ ಪ್ರಧಾನಿ ಇಮ್ರಾನ್ ಖಾನ್​ರಲ್ಲಿನ್ನೂ ಜೀವಂತವಿದ್ದಾನೆ ಎನ್ನುವುದನ್ನು ನಾವು ನಿರ್ಲಕ್ಷಿಸಬಾರದು. ಆದರೆ, ಅಸಾಮಾನ್ಯ ರಾಜಕೀಯ ದಾಂಡಿಗರೊಬ್ಬರು ನಮ್ಮ ಪ್ರಧಾನಮಂತ್ರಿಯಾಗಿದ್ದಾರೆ ಎನ್ನುವುದು ನಮಗೀಗ ನೆಮ್ಮದಿಯ ವಿಷಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....