ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಯುವಶಕ್ತಿಯ ಹೆಗಲ ಮೇಲೆ ಒಲಿಂಪಿಕ್ಸ್ ಭವಿಷ್ಯ!

ಕ್ರೀಡೆಯಲ್ಲಿ ಭಾರತ ಹೊಸ ಶಕ್ತಿಯಾಗಿ ರೂಪುಗೊಳ್ಳುತ್ತಿರುವ ಹಂತದಲ್ಲಿ ಈಗ ಮತ್ತೊಂದು ರಾಷ್ಟ್ರೀಯ ಕ್ರೀಡಾ ದಿನ (ಆ.29) ಆಚರಿಸುವ ಸಮಯ ಬಂದಿದೆ. ಹಾಕಿ ಕ್ರೀಡೆಯ ದಂತಕಥೆ ಧ್ಯಾನ್​ಚಂದ್​ರ ಜನ್ಮದಿನವನ್ನೇ ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ಒಲಿಂಪಿಕ್ಸ್ ಕನಸು, ಸಾಧನೆ, ಪರಿಶ್ರಮದ ಮೇಲೊಂದು ನೋಟ…
| ರಘುನಾಥ್ ಡಿ.ಪಿ.
ಆರು ಗ್ರಾಮ್ ಚಿನ್ನ ಒಂದಿಡೀ ದೇಶದ ಮೌಲ್ಯವನ್ನು ಎತ್ತಿ ಹಿಡಿಯುವ ವಿಸ್ಮಯವೇ ಒಲಿಂಪಿಕ್ಸ್! ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇರುವ ಮೌಲ್ಯವೇ ಇಂಥದ್ದು. ಹಾಗಾಗಿಯೇ ಒಲಿಂಪಿಕ್ಸ್​ನಲ್ಲಿ ಗೆಲ್ಲುವ ಪದಕ ಹಾಗೂ ಗೆದ್ದ ಕ್ರೀಡಾಪಟುಗಳಿಗೆ ಆಯಾ ದೇಶ ತೋರುವ ರಾಜಮರ್ಯಾದೆ ಎಣಿಕೆಗೆ ನಿಲುಕದ್ದು. ಶತಕೋಟಿ ಜನರಿರುವ ದೇಶವಾಗಿದ್ದರೂ ಭಾರತ ಈವರೆಗೂ ಒಲಿಂಪಿಕ್ಸ್ ಕಣದಲ್ಲಿ ಗೆದ್ದಿರುವ ಸ್ವರ್ಣ ಕೇವಲ 9. ಇದರಲ್ಲಿ ಒಂದೇ ಒಂದು ವೈಯಕ್ತಿಕ ಸ್ವರ್ಣ. ಸ್ಪರ್ಧಿಸಿರುವ 34 ಒಲಿಂಪಿಕ್ಸ್​ಗಳಿಂದ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 28 ಮಾತ್ರ. ಭಾರತ ಯುವಜನರ ದೇಶ. ಶೇ.50ಕ್ಕೂ ಹೆಚ್ಚು ಜನಸಂಖ್ಯೆ ಯುವ ಜನರಿಂದಲೇ ಕೂಡಿದೆ. ದೇಶದ ಪ್ರಗತಿಯಲ್ಲೂ ಇವರ ಪಾತ್ರ ಬಹುಮುಖ್ಯ. ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಇವರೇ ತುಂಬಿದ್ದಾರೆ. ದೇಶದ ಕ್ರೀಡಾಪ್ರಗತಿಯಲ್ಲಿ ಇವರೇ ಪ್ರಮುಖ ಅಸ್ತ್ರ. ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುವ ಇವರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ನೂರಾರು ಯುವ ಕ್ರೀಡಾಪಟುಗಳು ಮಿಂಚುತ್ತಿದ್ದಾರೆ. ಏಕಾಗ್ರತೆಯೇ ಮೂಲ ಮಂತ್ರವಾಗಿರುವ ಶೂಟಿಂಗ್​ನಂಥ ಕ್ರೀಡೆಯಲ್ಲಿ ಶೂಟರ್​ಗಳು ವಿಶ್ವಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಹೈಸ್ಕೂಲ್ ಓದುವ ವಯಸ್ಸಿನಲ್ಲಿ ಹವ್ಯಾಸಕ್ಕಾಗಿ ಗನ್ ಹಿಡಿದು ಅದನ್ನೇ ವೃತ್ತಿಯಾಗಿಸಿಕೊಂಡವರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರಿದ್ದಾರೆ. ಒಲಿಂಪಿಕ್ಸ್​ನಂಥ ಪ್ರತಿಷ್ಠಿತ ಕೂಟದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ವೈಯಕ್ತಿಕ ಸ್ವರ್ಣ ಹಾಗೂ ಬೆಳ್ಳಿ ಪದಕ ಪದಕ ಬಂದಿದ್ದೇ ಶೂಟಿಂಗ್​ನಿಂದ. ಅಭಿನವ್ ಬಿಂದ್ರಾ ಎಂಬ (2008ರ ಬೀಜಿಂಗ್​ನಲ್ಲಿ ಅವರು ಚಿನ್ನ ಗೆದ್ದಾಗ ಅವರಿಗೆ 25 ವಯಸ್ಸು) ಶೂಟರ್ ತಮ್ಮ ಉಪಸ್ಥಿತಿಯಿಂದಲೇ ಇತರ ದೇಶಗಳ ಶೂಟರ್​ಗಳಿಗೆ ಎಚ್ಚರಿಕೆ ಗಂಟೆ ಮೊಳಗಿಸಿದರು. ಇದಕ್ಕೂ ಮೊದಲು 2004ರ ಅಥೆನ್ಸ್ ಒಲಿಂಪಿಕ್ಸ್​ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ (ಇಂದಿನ ಕೇಂದ್ರ ಕ್ರೀಡಾ ಸಚಿವ) ಡಬಲ್ ಟ್ರಾ್ಯಪ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಇದು ಭಾರತದ ಪಾಲಿಗೆ ಒಲಿಂಪಿಕ್ಸ್​ನಲ್ಲಿ ಮೊದಲ ವೈಯಕ್ತಿಕ ರಜತ ಪದಕವಾಗಿತ್ತು. ಅವರಿಬ್ಬರ ಸಾಧನೆಯೇ ಇಂದಿನ ಶೂಟರ್​ಗಳಿಗೆ ಪ್ರೇರಣಾ ಶಕ್ತಿಯಾಗಿದೆ. ಏಡ್ಯಾಷ್, ಕಾಮನ್​ವೆಲ್ತ್ ಗೇಮ್ಸ್​ನಂಥ ಪ್ರತಿಷ್ಠಿತ ಕೂಟದಲ್ಲಿ ಭಾರತ ಪದಕ ಪಟ್ಟಿಯಲ್ಲಿ ಗೌರವಾನ್ವಿತ ಸ್ಥಾನ ಪಡೆಯುವಲ್ಲಿ ಶೂಟರ್​ಗಳ ಪಾತ್ರ ದೊಡ್ಡದು. ಇದಕ್ಕೂ ಮೊದಲೇ ಅಂಜಲಿ ಭಾಗ್ವತ್, ಜಸ್ಪಾಲ್ ಠಾಣಾರಂಥ ಅನೇಕ ಶೂಟರ್​ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು.
2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ವಿಜಯ್ ಕುಮಾರ್ ಹಾಗೂ ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ಇದಾದ ಬಳಿಕ ಭಾರತೀಯ ಶೂಟಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ಆರಂಭಗೊಂಡಿತು. ಶ್ರೀಮಂತರು ಹಾಗೂ ಸೇನೆಯಲ್ಲಿದ್ದ ಸೇನಾನಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಕ್ರೀಡೆ ಭಾರತದ ಮೂಲೆಮೂಲೆಗೂ ತಲುಪಿತು. ಮನು ಭಾಕರ್, ಸೌರಭ್ ಚೌಧರಿ, ಅನಿಶ್ ಭನ್ವಾಲ್, ಅಲೆನ್ ವಿಲನ್, ಶಾರ್ದೂಲ್ ವಿಹಾನ್ ಹಾಗೂ ಕರ್ನಾಟಕದ ಮೇಘನಾ ಸಜ್ಜನರ್​ರಂಥ ಯುವ ಶೂಟರ್​ಗಳು ಬೆಳಕಿಗೆ ಬಂದಿದ್ದು ಇದಕ್ಕೆ ಸಾಕ್ಷಿ.
ಯುವ ಕ್ರೀಡಾಪಟುಗಳ ನೆರವಿಗೆ ನಿಂತ ಟಾಪ್
2014ರಲ್ಲಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಕ್ರೀಡಾಪಟುಗಳಿಗೋಸ್ಕರ ಆರಂಭಿಸಿದ ಹೊಸ ಯೋಜನೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್). ಒಲಿಂಪಿಕ್ ದರ್ಜೆಯ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ನೇರವಾಗಿ ಕೇಂದ್ರದಿಂದಲೇ ನೆರವು ನೀಡುವ ಯೋಜನೆ ಇದು. ಕ್ರೀಡಾಪಟುಗಳ ಅಭ್ಯಾಸ, ಕೂಟಗಳಿಗೆ ಪ್ರಯಾಣ, ಫಿಟ್​ನೆಸ್​ಗಾಗಿ ಸರ್ಕಾರವೇ ಹಣ ನೀಡುತ್ತದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯಿಂದ ಹಣ ಪಡೆದುಕೊಳ್ಳುವ ಟಾಪ್ ಅದನ್ನು ನೇರವಾಗಿ ಅಥ್ಲೀಟ್​ಗಳಿಗೆ ವರ್ಗಾಯಿಸುತ್ತದೆ. ಇದರಲ್ಲಿ ಫೆಡರೇಷನ್​ಗಳ ಯಾವುದೇ ಪಾತ್ರ ಇರುವುದಿಲ್ಲ. ಪ್ರತಿ ವರ್ಷ ಹಾಗೂ ಆಯಾ ಕ್ರೀಡಾಕೂಟಗಳ ಬಳಿಕ ಕ್ರೀಡಾಪಟುಗಳ ನಿರ್ವಹಣೆಯನ್ನು ಪರಾಮರ್ಶೆ ಮಾಡಲಾಗುತ್ತದೆ. ಉತ್ತಮ ನಿರ್ವಹಣೆ ನೀಡಿದವರನ್ನು ಉಳಿಸಿಕೊಂಡರೆ, ಸತತವಾಗಿ ಕಳಪೆ ನಿರ್ವಹಣೆ ತೋರಿದ ಆಟಗಾರರನ್ನು ಕೈಬಿಡಲಾಗುತ್ತದೆ. ಆದರೆ, ಭವಿಷ್ಯದಲ್ಲಿ ಇದು ಕೇವಲ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಬಲ್ಲ ಕ್ರೀಡಾಪಟುಗಳ ನೆರವಿಗೆ ಇರುವ ಯೋಜನೆಯಾಗಿ ಉಳಿದುಕೊಳ್ಳುವ ಎಲ್ಲ ಸೂಚನೆಗಳು ಸಿಕ್ಕಿವೆ. ಪ್ರಸ್ತುತ ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳೂ ಟಾಪ್​ನಿಂದ ನೆರವು ಪಡೆಯುತ್ತಿದ್ದಾರೆ.
ಅಥ್ಲೆಟಿಕ್ಸ್​ನ ಮಹಾ ನಿರೀಕ್ಷೆ ಹಿಮಾ, ನೀರಜ್
ಫಿನ್ಲೆಂಡ್​ನ ಟಾಂಪರೆಯಲ್ಲಿ ನಡೆದ 2018ರ 20 ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್​ಗೂ ಮುನ್ನ 18 ವರ್ಷದ ಹಿಮಾ ದಾಸ್ ಎನ್ನುವ ಹುಡುಗಿಯ ಪರಿಚಯವೇ ಭಾರತಕ್ಕಿರಲಿಲ್ಲ. ಧಿಂಗ್ ಎಕ್ಸ್​ಪ್ರೆಸ್ ಎಂದೇ ಪ್ರಖ್ಯಾತಿ ಪಡೆದಿರುವ ಹಿಮಾ, 20 ವಯೋಮಿತಿ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಶ್ರೇಯ ಪಡೆದುಕೊಂಡಿದ್ದಾರೆ. ಅದಲ್ಲದೆ, ಪ್ರಸ್ತುತ ಮಹಿಳೆಯರ 400 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನೂ ಹೊಂದಿರುವ ಹಿಮಾ, ಏಷ್ಯನ್ ಗೇಮ್ಸ್​ನಲ್ಲೂ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಭವಿಷ್ಯದ ನಿರೀಕ್ಷೆಯಾಗಿ ಉಳಿದುಕೊಂಡಿದ್ದಾರೆ. ಮಹಿಳೆಯರ 100 ಮೀ. ಓಟದಲ್ಲಿ 22 ವರ್ಷದ ದ್ಯುತಿ ಚಂದ್ ಮೇಲೆಯೂ  ನಿರೀಕ್ಷೆ ಇಡಬಹುದು. ಒಡಿಶಾ ಆಟಗಾರ್ತಿಯ 100 ಮೀ. ಓಟದ ಟೈಮಿಂಗ್ ಒಲಿಂಪಿಕ್ ದರ್ಜೆಯಲ್ಲಿ ಇಲ್ಲದೆ ಇದ್ದರೂ, ಮುಂದಿನ ಎರಡು ವರ್ಷಗಳ ಅಭ್ಯಾಸದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವಂಥ ಟೈಮಿಂಗ್ ದಾಖಲಾಗಲಿದೆ ಎನ್ನುವ ವಿಶ್ವಾಸ ಇವರಲ್ಲಿದೆ. ಯಾವುದೇ ವಿಭಾಗದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಎನ್ನುವ ಗೌರವ ಪಡೆದ ಅಥ್ಲೀಟ್ ನೀರಜ್ ಚೋಪ್ರಾ. 2016ರಲ್ಲಿ ನಡೆದ 20 ವಯೋಮಿತಿ ವಿಶ್ವ ಅಥ್ಲೆಟಿಕ್ಸ್​ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಹರಿಯಾಣದ ಯುವ ಅಥ್ಲೀಟ್ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಆ ಬಳಿಕ ಏಷ್ಯನ್ ಚಾಂಪಿಯನ್​ಷಿಪ್, ಸೌತ್ ಏಷ್ಯನ್ ಗೇಮ್ಸ್‌ ಹಾಗೂ ಕಾಮನ್ವೆಲ್ತ್ ಗೇಮ್ಸ್​ನಲ್ಲೂ ಸ್ವರ್ಣ ಪದಕ ಸಾಧನೆ ಮಾಡಿರುವ ಇವರ ಮೇಲೆ 2020ರ ಟೋಕಿಯೋ ಒಲಿಂಪಿಕ್ಸ್​ನ ದೊಡ್ಡ ನಿರೀಕ್ಷೆ ಇದೆ.
ಈ ಬಾರಿ ಪ್ರಶಸ್ತಿ ಸಮಾರಂಭ ಮುಂದೂಡಿಕೆ
ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಸಾಧನೆ ತೋರಿದ ಆಟಗಾರರನ್ನು ಕುರಿತು ಕ್ರೀಡಾ ದಿನಾಚರಣೆಯಂದು ಪ್ರಶಸ್ತಿ ನೀಡುವುದು ವಾಡಿಕೆ. ಉತ್ತಮ ಕ್ರೀಡಾಪಟುಗಳಿಗೆ ಅರ್ಜುನ ಹಾಗೂ ಉತ್ತಮ ಕೋಚ್​ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಕ್ರೀಡಾ ಸಚಿವಾಲಯದಿಂದ ನಡೆಯುವ ಈ ಕಾರ್ಯಕ್ರಮವನ್ನು ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಳ್ಳುವುದು ವಾಡಿಕೆ. ಸಾಮಾನ್ಯವಾಗಿ ರಾಷ್ಟ್ರಪತಿಗಳೇ ಈ ಪ್ರಶಸ್ತಿ ಪ್ರದಾನ ಮಾಡುವರು. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾ ಪ್ರಶಸ್ತಿಗಳನ್ನು ಆ.29ರ ಬದಲಾಗಿ ಸೆಪ್ಟೆಂಬರ್ 25ರಂದು ಪ್ರದಾನ ಮಾಡಲಾಗುತ್ತಿದೆ.
ಧ್ಯಾನ್​ಚಂದ್ ಜನ್ಮದಿನವೇ ಕ್ರೀಡಾದಿನ
ಭಾರತೀಯ ಹಾಕಿ ದಂತಕಥೆ ಧ್ಯಾನ್​ಚಂದ್ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅವರು 1928ರ ಆಮ್ಟರ್​ಡ್ಯಾಂ, 1932ರ ಲಾಸ್ ಏಂಜಲೀಸ್ ಹಾಗೂ 1936ರ ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಜಯಿಸಿದ ಭಾರತ ತಂಡದ ಭಾಗವಾಗಿದ್ದರು. ಧ್ಯಾನ್​ಚಂದ್ ಅವರ ಹೆಸರನ್ನು ಅವಿಸ್ಮರಣೀಯವಾಗಿಸುವ ದೃಷ್ಟಿಯಿಂದ ಕ್ರೀಡಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 1905ರಲ್ಲಿ ಇಂದಿನ ಉತ್ತರ ಪ್ರದೇಶದ ಅಲಹಾಬಾದ್​ನಲ್ಲಿ ಜನಿಸಿದ ಧ್ಯಾನ್​ಚಂದ್, ‘ದ ವಿಜಾರ್ಡ್’, ‘ದ ಮ್ಯಾಗ್ನಿಷಿಯನ್’ ಎಂಬ ಹೆಸರಿನಿಂದ ಕರೆಸಿಕೊಂಡಿದ್ದರು. 1921 ರಿಂದ 1956ರವರೆಗೆ ಭಾರತೀಯ ಸೇನೆಯಲ್ಲಿದ್ದರು.
ಶೂಟಿಂಗ್​ನಲ್ಲಿ ಯುವ ಶಕ್ತಿ
ಐಎಸ್​ಎಸ್​ಎಫ್ ವಿಶ್ವಕಪ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಕಿರಿಯ ಶೂಟರ್ ಎನ್ನುವ ಸಾಧನೆ ಮಾಡಿದಾಕೆ ಮನು ಭಾಕರ್. ಹರಿಯಾಣದ 16 ವರ್ಷದ ಹುಡುಗಿ 10 ಮೀ. ಏರ್​ಪಿಸ್ತೂಲ್ ವಿಭಾಗದಲ್ಲಿ 2018ರ ಕಾಮನ್ವೆಲ್ತ್ ಗೇಮ್ಸ್​ನಲ್ಲೂ ಮಿಂಚು ಹರಿಸಿದಾಕೆ. 2018ರ ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದರೂ, ಎಳೆಕೈಗಳ ಮೇಲೆ ಒಲಿಂಪಿಕ್ಸ್ ಪದಕದ ನಿರೀಕ್ಷೆ ಇಡಬಹುದು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಐಎಸ್​ಎಸ್​ಎಫ್ ವಿಶ್ವಕಪ್​ನಲ್ಲಿ ಈಗಾಗಲೇ ಎರಡು ಸ್ವರ್ಣ ಪದಕ ಗೆದ್ದಿರುವ ಮನು ಭಾಕರ್, ಅಪ್ಪನ ಆಸೆಯಂತೆ ವೃತ್ತಿಪರ ಶೂಟಿಂಗ್ ಆಯ್ಕೆ ಮಾಡಿಕೊಂಡವರು. 2017ರ ಆರಂಭದಲ್ಲಿ ವೃತ್ತಿಪರ ಶೂಟಿಂಗ್ ಆರಂಭಿಸಿದ್ದ ಈಕೆ, ಈಗಾಗಲೇ ವಿಶ್ವ ಕಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅದರೊಂದಿಗೆ 19 ವರ್ಷದ ತಮಿಳುನಾಡು ಶೂಟರ್ ಎಲಾವಿನಲ್ ವಲಾರಿವನ್ ಕೂಡ ನಿರೀಕ್ಷೆ ಮೂಡಿಸಿದ್ದಾರೆ. 2018ರ ಜೂನಿಯರ್ ವಿಶ್ವಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆದ್ದ ವಲಾರಿವನ್ ಏಷ್ಯನ್ ಗೇಮ್ಲ್ಲಿ ನಿರಾಸೆ ಮೂಡಿಸಿದ್ದಾರೆ. ಎಂಎನ್​ಸಿ ಕಂಪನಿಯಲ್ಲಿ ಲಕ್ಷಗಟ್ಟಲೇ ವೇತನದ ಉದ್ಯೋಗದ ಆಫರ್ ಬಂದರೂ, ಶೂಟಿಂಗ್ ಕ್ರೀಡೆಯನ್ನು ಜೀವನವನ್ನಾಗಿ ಆಯ್ಕೆ ಮಾಡಿಕೊಂಡ ಕರ್ನಾಟಕದ ರೈಫಲ್ ಶೂಟರ್ 23 ವರ್ಷದ ಮೇಘನಾ ಸಜ್ಜನರ್, 19 ವರ್ಷದ ಏಷ್ಯಾಡ್ ಬೆಳ್ಳಿ ವಿಜೇತ ಟ್ರಾ್ಯಪ್ ಶೂಟರ್ ಲಕ್ಷ್ಯ ಶೆರಾನ್ ಭಾರತದ ಭವಿಷ್ಯದ ಶೂಟಿಂಗ್ ಪ್ರತಿಭೆಗಳು.
ಯಾರ ಮೇಲಿದೆ ನಿರೀಕ್ಷೆ?
ಟೇಬಲ್ ಟೆನಿಸ್​ನಲ್ಲಿ 23 ವರ್ಷದ ಮನಿಕಾ ಬಾತ್ರಾ, ಜಿಮ್ನಾಸ್ಟಿಕ್ಸ್​ನಲ್ಲಿ ದೇಶದ ಗಮನಸೆಳೆದ ದೀಪಾ ಕರ್ಮಾಕರ್, ಏಷ್ಯಾಡ್​ನಲ್ಲಿ ಪುರುಷರ ಶಾಟ್​ಪುಟ್ ವಿಭಾಗದ ಸ್ವರ್ಣ ಗೆದ್ದ 23 ವರ್ಷದ ತಜಿಂದರ್ ಸಿಂಗ್ ಟೂರ್, 24 ವರ್ಷದ ರೆಸ್ಲರ್ ಭಜರಂಗ್ ಪೂನಿಯಾ, ಪವನ್ ಕುಮಾರ್, ವಿನೇಶ್ ಪೋಗಟ್ ಸೇರಿದಂತೆ ಹಲವರ ಮೇಲೆ ಒಲಿಂಪಿಕ್ಸ್ ಪದಕದ ನಿರೀಕ್ಷೆಗಳ ಭಾರವಿದೆ.
ಕ್ರೀಡೆಗೆ ಹಿಂದೆಂದಿಗಿಂತ ಹೆಚ್ಚಿನ ಮಹತ್ವ
2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಅಭಿನವ್ ಬಿಂದ್ರಾ ಗೆದ್ದ ಚಿನ್ನ ಭಾರತದ ಕ್ರೀಡೆಯ ಚಹರೆಯನ್ನೇ ಬದಲಿಸಿತು ಎನ್ನಬಹುದು. ಅಲ್ಲಿಯವರೆಗೂ ಕ್ರಿಕೆಟ್ ಹೊರತಾಗಿ ಬೇರೆ ಯಾವ ಕ್ರೀಡೆಯನ್ನೂ ಆಸ್ವಾದಿಸುವ ಲಕ್ಷಣವನ್ನೇ ತೋರದ ಭಾರತದ ಕ್ರೀಡಾಭಿಮಾನಿ ಇಂದು ಬ್ಯಾಡ್ಮಿಂಟನ್, ಕಬಡ್ಡಿ, ಫುಟ್​ಬಾಲ್ ಹಾಗೂ ಹಾಕಿ ಕ್ರೀಡೆಯನ್ನೂ ಅಷ್ಟೇ ಉತ್ಸಾಹದಿಂದ ವೀಕ್ಷಿಸುತ್ತಿದ್ದಾನೆ. ಅದರೊಂದಿಗೆ ಯುವ ಕ್ರೀಡಾಪಟುಗಳಿಗೆ ಬೆಂಬಲ ನೀಡಲು ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳೂ ಕೈಜೋಡಿಸಿವೆ. ಕ್ರೀಡಾಪಟುಗಳಿಗೆ ಮಾತ್ರವೇ ಸಹಾಯ ನೀಡಲು ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ (ಒಜಿಕ್ಯು), ಗೋ ಸ್ಪೋರ್ಟ್ಸ್ ಫೌಂಡೇಷನ್ ಇತ್ತೀಚೆಗೆ ಜೆಎಸ್​ಡಬ್ಲ್ಯು ಸ್ಪೋರ್ಟ್ಸ್ ವಿಜಯನಗರದಲ್ಲಿ ಆರಂಭಿಸಿರುವ ಇನ್​ಸ್ಪೈರ್ ಇನ್​ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್, ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನಂಥ ಖಾಸಗಿ ಹಾಗೂ ಮಾಜಿ ಕ್ರೀಡಾಪಟುಗಳ ಸಂಸ್ಥೆಗಳೂ ಕಾರ್ಯ ನಿರ್ವಹಣೆ ಮಾಡುತ್ತಿವೆ. ಅದರಲ್ಲೂ ಗೀತ್​ಸೇಥಿ ಹಾಗೂ ಪ್ರಕಾಶ್ ಪಡುಕೋಣೆ ಆರಂಭಿಸಿದ ಆದಾಯರಹಿತ ಒಜಿಕ್ಯು ಸಂಸ್ಥೆ ಈವರೆಗೂ 51 ಕ್ರೀಡಾಪಟುಗಳಿಗೆ ಹಣಕಾಸು ಸೇರಿದಂತೆ ವಿವಿಧ ರೀತಿಯ ನೆರವುಗಳನ್ನು ನೀಡುತ್ತಿದೆ. ಇದರಲ್ಲಿರುವ ಬಹುಪಾಲು ಕ್ರೀಡಾಪಟುಗಳು ಭವಿಷ್ಯದಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಸೇರಿದಂತೆ  ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲಿಸಿಕೊಡುವ ಸಾಮರ್ಥ್ಯವಿರುವವರು ಎನ್ನುವುದು ವಿಶೇಷ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....