ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಕೇರೆ ಹಾವಿಗೆ ಯಾರೂ ಕೇರೇ ಮಾಡುವುದಿಲ್ಲ

ಎಚ್.ಡುಂಡಿರಾಜ್

ರ್ಪಾನಲ್ಲಿ ಏನನ್ನೋ ಯೋಚಿಸುತ್ತಾ ವಾಕಿಂಗ್ ಮಾಡುತ್ತಿರುವ ನಿಮ್ಮ ಮಿತ್ರನನ್ನು
ಹೆದರಿಸಬೇಕಾ? ಸದ್ದುಮಾಡದೆ ಹಿಂದಿನಿಂದ ಹೋಗಿ ‘ಹಾವು’ ಅನ್ನಿ ಸಾಕು. ಆತ ಎಷ್ಟೇ
ಧೈರ್ಯಶಾಲಿಯಾಗಿದ್ದರೂ ಒಮ್ಮೆ ಬೆಚ್ಚಿ ಬೀಳುವುದು ಖಂಡಿತ. ‘ಹಾವು’ ಅಂದಾಕ್ಷಣ ನಾವು
ಹೌಹಾರುವುದಕ್ಕೆ ಕಾರಣ ಅದು ಕಚ್ಚಿದರೆ ಎಂಬ ಭಯ. ಅಂದ ಹಾಗೆ ಹಾವನ್ನು ತುಳಿದಾಗ ಜನರು
‘ಅಯ್ಯೋ ಹಾವು’ ಎಂದು ಹೆದರಿ ಹಾರುವುದರಿಂದಲೇ ‘ಹೌಹಾರು’ ಎಂಬ ಶಬ್ದ ಹುಟ್ಟಿರಬೇಕು. ಅದರ
ಮೂಲ ರೂಪ ‘ಹಾವು ಹಾರು’ ಅಂತ ಇರಬಹುದೆಂದು ನನ್ನ ಊಹೆ!

ವಿಷದ ಹಾವು ಕಚ್ಚಿದಾಗ ತಕ್ಷಣ ಸೂಕ್ತ ಚಿಕಿತ್ಸೆ ಮಾಡದಿದ್ದರೆ ಸಾವು ಸಂಭವಿಸುವುದು ನಿಜ.
ಹಾಗಂತ ಎಲ್ಲ ಹಾವುಗಳೂ ವಿಷಯುಕ್ತ ಮತ್ತು ಅವುಗಳು ಕಚ್ಚಿದರೆ ಮನುಷ್ಯ ಸಾಯುತ್ತಾನೆ ಎಂದು
ತಿಳಿಯಬಾರದು.

ಹೈಸ್ಕೂಲಿನಲ್ಲಿ ಕಲಿತು ಮರೆತ ಜೀವಶಾಸ್ತ್ರವನ್ನು ಒಂದಿಷ್ಟು ನೆನಪು ಮಾಡಿಕೊಳ್ಳೋಣ. ಹಾವು
ಸರೀಸೃಪ ಎಂಬ ವರ್ಗಕ್ಕೆ ಸೇರಿದ ಪ್ರಾಣಿ. ಇದರಲ್ಲಿ 3600ರಷ್ಟು ಪ್ರಬೇಧಗಳಿದ್ದು ಬಹುಪಾಲು
ಹಾವುಗಳು ವಿಷಯುಕ್ತವಲ್ಲ. ವಿಷಕಾರಿಯಾದ ಹಾವಿನ ಪ್ರಬೇಧಗಳು ಸುಮಾರು 725 ರಷ್ಟಿವೆ.
ಅವುಗಳಲ್ಲಿ ಒಬ್ಬ ವ್ಯಕ್ತಿಯನ್ನು ಒಮ್ಮೆ ಕಚ್ಚಿ ಕೊಲ್ಲುವಷ್ಟು ವಿಷವುಳ್ಳ ಹಾವುಗಳ
ಪ್ರಬೇಧಗಳು 250ಕ್ಕಿಂತ ಹೆಚ್ಚಿಲ್ಲ. ವಿಷಯ ಹೀಗಿದ್ದರೂ ಮನುಷ್ಯರು ಎಲ್ಲ ಹಾವುಗಳೂ ವಿಷಕಾರಿ
ಅನ್ನುವ ಹಾಗೆ ವಿಷಕಾರುತ್ತಾರೆ!

‘ಹಾವಿನ ದ್ವೇಷ ಹನ್ನೆರಡು ವರ್ಷ’ ಅನ್ನುತ್ತೇವೆ. ಹಾವಿನ ಮೇಲಿನ ಮನುಷ್ಯನ ದ್ವೇಷಕ್ಕೆ
ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾಭಾರತದಲ್ಲಿ ಬರುವ, ಲೆಕ್ಕವಿಲ್ಲದಷ್ಟು ಹಾವುಗಳು
ಬೆಂಕಿಗೆ ಆಹುತಿಯಾದ ಜನಮೇಜಯನ ಸರ್ಪಯಾಗವೇ ಇದಕ್ಕೆ ಸಾಕ್ಷಿ. ಹಾಗೆ ನೋಡಿದರೆ ಹಾವುಗಳನ್ನು
ದ್ವೇಷಿಸುವುದಕ್ಕೆ ಕಾರಣವೇ ಇಲ್ಲ. ವಿಕಾಸ ವಾದದ ಪ್ರಕಾರ ‘ಮಂಗನಿಂದ ಮಾನವ’ ಎಂಬಂತೆ
ಹಲ್ಲಿಯಿಂದ ಹಾವು. ಅವುಗಳ ತಂಟೆಗೆ ಹೋಗದಿದ್ದರೆ ಹಾವುಗಳು ಮನೆಯಲ್ಲಿರುವ ಒಳಗೆ
ಹಲ್ಲಿಗಳಷ್ಟೇ ನಿರಪಾಯಕಾರಿ. ಹಾವಿನ ದೇಹದಲ್ಲಿ ವಿಷ ಇರುವುದು ನಮ್ಮನ್ನು ಕಚ್ಚಿ
ಸಾಯಿಸುವುದಕ್ಕಲ್ಲ. ಅದರ ಆಹಾರವಾದ ಕಪ್ಪೆ, ಇಲಿ, ಹೆಗ್ಗಣ, ಹಕ್ಕಿ ಕೊಂದು
ನಿಷ್ಕಿ›ಯಗೊಳಿಸುವುದಕ್ಕೆ. ವಿಷದ ಹಾವನ್ನು ತುಳಿದರೆ ಅಥವಾ ಹಿಂಸಿಸಿದರೆ ಮಾತ್ರ ಆತ್ಮ
ರಕ್ಷಣೆಗಾಗಿ ಕಚ್ಚುತ್ತದೆ. ಇಲಿ ಹೆಗ್ಗಣಗಳ ಕಾಟವನ್ನು ಕಡಿಮೆ ಮಾಡುವ ಮೂಲಕ ಹಾವುಗಳು
ಮನುಷ್ಯರಿಗೆ ಉಪಕಾರಿಯಾಗಿವೆ.

ದೇವರುಗಳು ನಮ್ಮ ಹಾಗೆ ಹಾವನ್ನು ದ್ವೇಷಿಸುವುದಿಲ್ಲ. ಡನ್​ಲಪ್, ಕರ್ಲಾನ್ ಮುಂತಾದ
ಕಂಪನಿಗಳ ಅತ್ಯುತ್ತಮ ಬೆಡ್ ದೊರಕುವ ಈ ಕಾಲದಲ್ಲೂ ಶ್ರೀಮನ್ನಾರಾಯಣನು ಹಾವಿನ
ಹಾಸಿಗೆಯಲ್ಲೇ ಮಲಗುತ್ತಾನೆ. ಸರ್ಪಗಳನ್ನು ಆಭರಣಗಳನ್ನಾಗಿ ಮಾಡಿಕೊಂಡದ್ದರಿಂದ ಹರನಿಗೆ
ನಾಗಾಭರಣ ಎನ್ನುವ ಹೆಸರು ಬಂದಿದೆ. ಅಂದಹಾಗೆ ನಾಗಾಭರಣ ಅಂದಾಗಲೆಲ್ಲ ನನಗೆ ಈ ಚುಟುಕು
ನೆನಪಾಗುತ್ತದೆ.

ಕೊರಳಲಿ ಸರ್ಪವ

ಧರಿಸುವ ಆ ಶಿವ

ಆಹಾ! ನಾಗಾಭರಣ

ಪಾರ್ಥಿವ ದೇಹದ

ಮೂಗಲಿ ಹತ್ತಿ

ಓಹೋ! ಮೂಗಾಭರಣ!

ನಾವೆಲ್ಲ ಕೆಲವೊಮ್ಮೆ ಹಗ್ಗವನ್ನು ಹಾವು ಅಂತ ತಿಳಿದು ಹೆದರಿಕೊಳ್ಳುತ್ತೇವೆ. ಗಣಪತಿಯ
ಹೊಟ್ಟೆ ಒಡೆದು ಹೋದಾಗ ಆತ ಹಾವನ್ನು ಹಗ್ಗವೆಂದು ತಿಳಿದು ಅದನ್ನೇ ಹೊಟ್ಟೆಗೆ ಕಟ್ಟಿಕೊಂಡ.
ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ನನಗೂ ಹಾವುಗಳ ಬಗ್ಗೆ ಹೆದರಿಕೆ ಇತ್ತು. ವಿದ್ಯುತ್
ಸಂಪರ್ಕವಿಲ್ಲದ್ದರಿಂದ ಕತ್ತಲಾದ ಬಳಿಕ ಹಾವಿನ ಭಯದಿಂದ ಹೊರಗೆ ಕಾಲಿಡುತ್ತಲೇ ಇರಲಿಲ್ಲ.
ರಾತ್ರಿ ಹೆಂಡತಿ ಮನೆಗೆ ಹೋಗುವ ಗಂಡಸರು ಕೈಯಲ್ಲಿ ದೊಡ್ಡ ಮೂರು ಸೆಲ್ಲಿನ ಟಾರ್ಚ್ ಅಥವಾ
ತೆಂಗಿನ ಗರಿಗಳಿಂದ ಮಾಡಿದ ಸೂಡಿಯನ್ನು ಉರಿಸಿಕೊಂಡು ಕೋಲಿನಿಂದ ನೆಲಕ್ಕೆ ಬಡಿದು ಸದ್ದು
ಮಾಡುತ್ತಾ ಹೋಗುತ್ತಿದ್ದರು. ಅಕ್ಕಪಕ್ಕದ ಊರುಗಳಿಗೆ ಹೋಲಿಸಿದರೆ ನಮ್ಮ ಊರಲ್ಲಿ ಹಾವಿನ
ಹಾವಳಿ ಕಡಿಮೆ. ಊರಿನ ಸುತ್ತಲೂ ಹೊಳೆ ಇದ್ದದ್ದೇ ಇದಕ್ಕೆ ಕಾರಣ. ಆದರೂ ಮಳೆಗಾಲದಲ್ಲಿ ನೆರೆ
ಬಂದಾಗ ಬೇರೆ ಊರಿನ ಹಾವುಗಳು ತೇಲಿಕೊಂಡು ನಮ್ಮ ಊರಿಗೆ ಬರುತ್ತಿದ್ದವು. ಹಾವು ಕಚ್ಚಿ
ಸತ್ತವರ ಸುದ್ದಿ, ಅದರ ಕಡಿತದಿಂದ ಕಾಲು ಕೊಳೆತು ಕೊನೆಗೆ ಕಾಲನ್ನು ತುಂಡರಿಸಿದ ಪ್ರಸಂಗ
ಕೇಳಿದಾಗ ಹಾವಿನ ಅಂಜಿಕೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಮನೆಯ ಅಂಗಳದಲ್ಲಿ ಹಾವು
ಕಪ್ಪೆಯನ್ನು ನುಂಗಿದಾಗ ಕೇಳಿಬರುತ್ತಿದ್ದ ಕಪ್ಪೆಯ ಆರ್ತನಾದ, ನಾಯಿ ವಿಚಿತ್ರವಾಗಿ
ಬೊಗಳುವುದು, ರಾತ್ರಿ ಕೊಟ್ಟಿಗೆಗೆ ಹಾವು ಬಂದಾಗ ದನ ಕರುಗಳು ಕೂಗುವುದು ಇವುಗಳೆಲ್ಲ
ನಮ್ಮನ್ನು ಭಯಭೀತರನ್ನಾಗಿ ಮಾಡುತ್ತಿದ್ದವು.

ಮನೆಯ ಸದಸ್ಯರಲ್ಲಿ ಯಾರಾದರೊಬ್ಬರು ‘ಹಾವು’ ಅಂದರೆ ಸಾಕು ಎಲ್ಲರೂ ಅಲ್ಲಿಗೆ ಓಡಿ ಬಂದು ಅದು
ಯಾವ ಹಾವಿರಬಹುದು ಎಂಬ ಚರ್ಚೆ ಶುರುವಾಗುತ್ತಿತ್ತು. ಸಣ್ಣಕ್ಕಿ ವಾಸನೆ ಬಂದರೆ ನಾಗರ ಹಾವು,
ಉದ್ದಿನ ವಡೆ ವಾಸನೆ ಬಂದರೆ ಕುದ್ರಾಳ ಎಂಬ ವಿಷದ ಹಾವು ಎಂದೆಲ್ಲ ವಾಸನೆಯ ಮೂಲಕವೇ ಅದರ
ಜಾತಿಯನ್ನು ಗುರುತಿಸುತ್ತಿದ್ದರು. ಕೋಲನ್ನು ನೆಲಕ್ಕೆ ಅಪ್ಪಳಿಸಿದಾಗ ಹಾವು ಸರಸರನೆ
ಓಡಿದರೆ ಅದು ನಿರಪಾಯಕಾರಿಯಾದ ಕೇರೆ ಹಾವು ಎನ್ನುವುದು ಖಾತ್ರಿಯಾಗಿ ನೆಮ್ಮದಿಯ ನಿಟ್ಟುಸಿರು
ಬಿಡುತ್ತಿದ್ದರು.

ಕೇರೆ ಹಾವಿಗೆ ನಮ್ಮ ಕುಂದಾಪ್ರ ಕನ್ನಡದಲ್ಲಿ ‘ಹೈಂಸಾರ’ ಅನ್ನುತ್ತಾರೆ. ಕಾರಿನಲ್ಲಿ
ಹೋಗುವಾಗ ರಸ್ತೆ ತೀರಾ ಅಂಕು ಡೊಂಕಾಗಿದ್ದಾರೆ ನನ್ನ ಹೆಂಡತಿ ‘ಎಂಥ ಮಾರಾಯ್ರೆ. ಈ ರಸ್ತೆ
ಹೈಂಸಾರ್ ಹಾವ್ ಕಣೆಗೆ ಇತ್ತಲೆ!’ ಎನ್ನುವುದುಂಟು. ಕೇರೆ ಹಾವು ರೈತರಿಗೆ
ಉಪಕಾರಿಯಾದ್ದರಿಂದಲೋ ಏನೋ ಅದಕ್ಕೆ ಒಳ್ಳೇ ಹಾವು ಅನ್ನುವ ಹೆಸರೂ ಇದೆ. ಆದರೂ ಅದನ್ನು
ಕಂಡಾಗ ಕಿಡಿಗಳು ಸಾಯಿಸಿ, ಸತ್ತ ಹಾವನ್ನು ಕೋಲಿನಲ್ಲಿ ಎತ್ತಿ ಹಿಡಿದು ಶೌರ್ಯ ಪ್ರದರ್ಶನ
ಮಾಡುತ್ತಾರೆ. ಕೋಲು ತೋರಿಸಿ ಹೆದರಿಸಿದಾಗಲೂ ಹಾವು ನಿಧಾನವಾಗಿ ಹರಿದಾಡಿದರೆ ಅದು
ನಾಗರಹಾವಿರಬಹುದೆಂಬ ಅನುಮಾನ ಮೂಡುತ್ತದೆ. ಇದ್ದಕ್ಕಿದ್ದಂತೆ ಹೆಡೆಯೆತ್ತಿ
ಬುಸುಗುಡತೊಡಗಿದಾಗ ಬಂದದ್ದು ಸರ್ಪ ಎನ್ನುವುದು ಖಾತ್ರಿಯಾಗಿ ಆತಂಕದ ವಾತಾವರಣ
ಉಂಟಾಗುತ್ತದೆ. ಆಗ ಅದನ್ನು ಓಡಿಸಲು ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಅನ್ನುವಂತೆ
ಕಾರ್ಯಾಚರಣೆ ನಡೆಸಬೇಕು. ಏಕೆಂದರೆ ನಾಗರಹಾವನ್ನು ಕೊಂದರೆ ಸರ್ಪದೋಷ ಮುಂದಿನ
ಪೀಳಿಗೆಯವರನ್ನೂ ಬಾಧಿಸುತ್ತದೆ ಅನ್ನುವ ನಂಬಿಕೆ ಇದೆ.

‘ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ’ ಎಂದು ಭಕ್ತಿ ಪಂಥದ ಪುರಂದರ ದಾಸರೇ
ಹೇಳಿದ್ದಾರೆ. ಆದರೂ ನಾವು ಸರ್ಪವನ್ನು ಹರಿದಾಡುವ ದೇವರೆಂದು ಹಾಲೆರೆದು ಭಯ ಭಕ್ತಿಯಿಂದ
ಪೂಜಿಸುತ್ತೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತನು ಹಾಕುವುದು, ನಾಗ
ದರ್ಶನ, ಪ್ರತಿಷ್ಠೆ, ಸರ್ಪಸಂಸ್ಕಾರ, ಡಕ್ಕೆ ಬಲಿ, ನಾಗಮಂಡಲ ಮುಂತಾದ ನಾಗದೇವರಿಗೆ
ಸಂಬಂಧಿಸಿದ ಆಚರಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತವೆ. ನಾಗನ
ದರ್ಶನದಲ್ಲಿ ಪಾತ್ರಿ ಎಂದು ಗುರುತಿಸಿಕೊಂಡವರು ತಮ್ಮ ಮೇಲೆ ನಾಗನನ್ನು ಆಹ್ವಾನಿಸಿಕೊಂಡು,
ಸಿಂಗಾರ (ಅಡಿಕೆ) ಹೂವನ್ನು ಮುಖ ಹಾಗೂ ಎದೆಗೆ ಬಡಿದುಕೊಳ್ಳುತ್ತಾ ನಾಗಸ್ವರದ
ಹಿನ್ನೆಲೆಯಲ್ಲಿ ಹಾವಿನಂತೆ ಬುಸುಗುಡುತ್ತಾ ನರ್ತಿಸುವುದು ನೋಡಲು ತುಂಬಾ ಚಂದ.

ಬಾಲ್ಯದಲ್ಲಿ ನಾಗನ ದರ್ಶನವನ್ನು ನಾನು ತುಂಬಾ ಹತ್ತಿರದಿಂದ ಕಂಡಿದ್ದೆ. ಕಾರಣ ನಮ್ಮ
ತಂದೆಯವರು ದರ್ಶನದ ಸಮಯದಲ್ಲಿ ನಾಗನ ಪಾತ್ರಿಗಳಿಗೆ ಹೂವು ಮತ್ತು ತೀರ್ಥ ನೀಡಿ ನಾಗದೇವರು
ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿರುತ್ತಿದ್ದರು. ನಮ್ಮ ಊರಿನಲ್ಲಿ ಕಳ್ಳು ತಯಾರಿಸುವ
ಪೂಜಾರಿಗಳು ಅಧಿಕ ಸಂಖ್ಯೆಯಲ್ಲಿ ಇದ್ದರೂ ದೇವರ ಪೂಜೆ ಮಾಡುವ ಪೂಜಾರಿಗಳು ಅಂತ ಇದ್ದದ್ದು
ನಮ್ಮದೊಂದೇ ಮನೆ. ಹೀಗಾಗಿ ನಾಗರ ಪಂಚಮಿಯಂದು ನಮ್ಮ ಮನೆಯ ಗಂಡಸರಿಗೆ ಭಾರೀ ಡಿಮಾಂಡು.
ಬಾಲಕನಾಗಿದ್ದ ನನ್ನನ್ನೂ ‘ಮಾಣಿ, ನೀನಾರೂ ಸಾಕ್. ಒಂದ್ ಗಳಿಗೆ ಬಾ’ ಎಂದು ಜನರು ಪೂಜೆ
ಮಾಡಲು ಕರೆಯುತ್ತಿದ್ದರು. ನಾನು ಮಂತ್ರ ಗೊತ್ತಿಲ್ಲದಿದ್ದರೂ ತಂತ್ರದ ಬಲದಿಂದ ಪೂಜಾಕರ್ತರು
ಮೆಚ್ಚುವಂತೆ ಪೂಜೆ ಮಾಡಿ ಹತ್ತು ಪೈಸೆ ದಕ್ಷಿಣೆಯನ್ನು ಸೊಂಟಕ್ಕೆ
ಸಿಕ್ಕಿಸಿಕೊಳ್ಳುತ್ತಿದ್ದೆ. ಮನೆಯೊಳಗೆ ಹಾವು ಕಾಣಿಸಿಕೊಂಡರೆ ಜನರು ಅದಕ್ಕೆ ಕಾರಣವೇನೆಂದು
ಕೇಳಲು ನಮ್ಮ ತಂದೆಯವರ ಬಳಿ ಬರುತ್ತಿದ್ದರು. ಕೆಲವೊಮ್ಮೆ ಅನ್ಯ ಧರ್ವಿುಯರೂ ಕೂಡಾ ಗುಟ್ಟಾಗಿ
ನಮ್ಮ ಮನೆಗೆ ಬಂದು ನಾಗನ ಉಪದ್ರಕ್ಕೆ ಪರಿಹಾರ ಸೂಚಿಸಿ ಅನ್ನುತ್ತಿದ್ದರು.

ನಾಗರ ಹಾವಿಗೆ ಹಾಲು

ಬಾಳೆಗೊನೆ, ಸೀಯಾಳ

ಕೇರೆ ಹಾವಿಗೆ ಯಾರೂ

ಕೇರೆ ಮಾಡುವುದಿಲ್ಲ!

ನಾನು ಕಾರ್ಕಳ ತಾಲೂಕಿನ ಅಜೆಕಾರು ಎಂಬ ಗ್ರಾಮೀಣ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಭೂತ
ಬಂಗಲೆಯಂಥ ಹಳೆಯ ಮನೆಯಲ್ಲಿ ವಾಸವಾಗಿದ್ದೆ. ಒಂದು ಮಧ್ಯಾಹ್ನ ನನ್ನ ಹೆಂಡತಿ ಉಪ್ಪರಿಗೆಯ
ಮೇಲೆ ಒಂದು ವರ್ಷದ ನಮ್ಮ ಮಗುವನ್ನು ತೂಗುತ್ತಿರುವಾಗ ತೊಟ್ಟಿಲಿನ ಮೇಲೆ ಹಂಚಿನ
ಮಾಡಿನಲ್ಲಿ ಒಂದು ಹಾವು ಕಾಣಿಸಿತು. ಗಂಡನಿಗೇ ಹೆದರದ ನನ್ನಾಕೆ ಹಾವಿಗೆ ಹೆದರುತ್ತಾಳೆಯೆ?
ಕೋಲು ತೆಗೆದುಕೊಂಡು ಅದನ್ನು ಓಡಿಸಿದಳು. ಮರುದಿನ ಬೆಳಗ್ಗೆ ಉಪ್ಪರಿಗೆ ಗುಡಿಸುತ್ತಿದ್ದಾಗ
ಹಾವು ತುಸು ತೆರೆದಿದ್ದ ನನ್ನ ಮೇಜಿನ ಡ್ರಾಯರಿನಿಂದ ತಲೆ ಹೊರಗೆ ಹಾಕಿತು. ಈ ಬಾರಿ ಆಕೆ
ಹೆದರಿ ಬ್ಯಾಂಕಿನಲ್ಲಿದ್ದ ನನಗೆ ಸುದ್ದಿ ಮುಟ್ಟಿಸಿದಳು. ನಾನು ಬರುವಷ್ಟರಲ್ಲಿ ಅಕ್ಕ
ಪಕ್ಕದವರೆಲ್ಲ ಅಲ್ಲಿ ಸೇರಿದ್ದರು. ನಮ್ಮ ಗದ್ದಲಕ್ಕೆ ಹೆದರಿ ಹಾವು ಓಡಿ ಹೋಯಿತು. ನಾನು
‘ಬರೆಯುವ ಮೇಜಿನೊಳಗೆ ಬಂದಿರುವ ಆ ಹಾವು ನನ್ನ ಅಭಿಮಾನಿಯೇ ಆಗಿರಬೇಕು’ ಅಂತ ನಾನು ತಮಾಷೆ
ಮಾಡಿದೆ. ನನ್ನ ಮಡದಿ ಮಾತ್ರ ಹಾವು ಬರುವ ಮನೆಯಲ್ಲಿ ಇರುವುದು ಹೇಗಪ್ಪಾ ಅಂತ ಚಿಂತಾ
ಕ್ರಾಂತಳಾಗಿದ್ದಳು. ಇದನ್ನು ಗಮನಿಸಿದ ಹಿರಿಯರೊಬ್ಬರು ‘ಚಿಂತೆ ಮಾಡ್ಬೇಡಿ. ಅದು ಕೇರೆ
ಹಾವು. ಮನೆಯೊಳಗೆ ಬಂದರೆ ನಿಮಗೆ ಅದೃಷ್ಟ ತರುತ್ತದೆ’ ಎಂದರು. ಕಾಕತಾಳೀಯವೆಂಬಂತೆ ಆ ವರ್ಷ
ಅಖಿಲ ಭಾರತ ಬಾನುಲಿ ನಾಟಕ ರಚನಾ ಸ್ಪರ್ಧೆಯಲ್ಲಿ ನಾನು ಬರೆದ ನಾಟಕಕ್ಕೆ 10,000 ರೂ.
ಬಹುಮಾನ ಬಂತು. ಅಂದಿನ 10,000 ರೂ ಇಂದು ಒಂದು ಲಕ್ಷಕ್ಕೆ ಸಮ.

ನಾನೀಗ ಬೆಂಗಳೂರು ಎಂಬ ಕಾಂಕ್ರೀಟು ಕಾಡಿನಲ್ಲಿ ವಾಸವಾಗಿರುವುದರಿಂದ ಹಾವಿನ ಭಯವಿಲ್ಲ.
ಆದರೆ ಮನುಷ್ಯರದ್ದೇ ಭಯ!

ಮುಗಿಸುವ ಮುನ್ನ:

ಕಲ್ಲಿನ ನಾಗನ ಮುಂದೆ

ಭಕ್ತಿಯಿಂದ ಇಡುತ್ತೇವೆ

ಹಾಲು ತುಂಬಿದ ಲೋಟ

ನಿಜವಾದ ನಾಗ ಬಂದರೆ

ಭಯಭೀತರಾಗಿ

ನಾಗಾಲೋಟ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....