ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಶ್ರಾವಣ ಬಂತು ನಾಡಿಗೆ… ಬಂತು ಬೀಡಿಗೆ

ಶ್ರಾವಣ ಮತ್ತೆ ಬಂದಿದೆ. ತನ್ನ ಆಗಮನಕ್ಕೆ
ಸಾಕ್ಷಿಯಾಗಿ ಕೆರೆ-ಕೊಳ್ಳಗಳನ್ನು ತುಂಬಿಸಿದೆ. ಹೃದಯಗಳಿಗೆ ಮುದ ತಂದಿದೆ. ‘ಎಷ್ಟು
ಹೋಲಿಕೆಯ ಕೊಟು ಹೊಗಳಿ ಮನವು ತಣಿಯದು; ರೂಪಗಳಿಗೆ ಚಿತ್ರಗಳಿಗೆ ಉಪಮೆಗಳಿಗೆ ಗಣಿಯದು’ ಎಂದು
ಕವಿ ದ.ರಾ.ಬೇಂದ್ರೆ ಅವರು ಬಣ್ಣಿಸಿರುವ ಪರಿಯೇ ಶ್ರಾವಣದ ಮಹತ್ವವನ್ನು ಸಾರುತ್ತದೆ. ಇಂಥ
ಶ್ರಾವಣ, ಸಾಹಿತಿಗಳ ಕಣ್ಣಲ್ಲಿ ಹೇಗೆ ಕಾಣಿಸುತ್ತದೆ, ಈ ಮಾಸದಲ್ಲಿ ಆರಂಭ ವಾಗುವ ಹಬ್ಬಗಳ
ಸಾಲು, ಅವುಗಳ ಧಾರ್ವಿುಕ ಹಿನ್ನೆಲೆ, ಚಲನ ಚಿತ್ರಗಳಲ್ಲಿ ಅದನ್ನು ಬಣ್ಣಿಸಿದ ಬಗೆ ಇವುಗಳ
ನೋಟ ಇಲ್ಲಿದೆ.

ಕಾವ್ಯ ಸ್ಫುರಿಸುವ ಶಕ್ತಿ

| ಸುನಂದಾ ಕಡಮೆ

ಶ್ರಾವಣ ಎಂದ ಕೂಡಲೇ ಮಳೆ ಮಳೆ ಮಳೆ. ಇದು ನಿರಂತರ ಬರುವ ಹಬ್ಬಗಳ ಮಾಸವೂ ಹೌದು.
ಹಬ್ಬಗಳೆಂದರೆ ಭರಪೂರ ಸಿಹಿ ಅಡುಗೆ, ಕಜ್ಜಾಯ. ಅವೆಲ್ಲ ಮಳೆ ಸುರಿವ ತಂಪಿನ ವಾತಾವರಣದಲ್ಲಿ
ನಮ್ಮ ಶರೀರಕ್ಕೆ ಅಗತ್ಯವಾಗಿರುವ ಉಷ್ಣ ಪದಾರ್ಥದ ಬೆಲ್ಲದಡುಗೆಯನ್ನು ಒದಗಿಸುವುದಕ್ಕಾಗಿಯೂ
ಕಟ್ಟಿಕೊಂಡ ಸಂಪ್ರದಾಯ. ಹಸಿರನುಟ್ಟ ಶ್ರಾವಣವು ಅನೇಕ ಕವಿಗಳನ್ನು ಅನೇಕ ಬಗೆಯಲ್ಲಿ
ಕೆಣಕುತ್ತ, ಕಾವ್ಯವನ್ನು ಉದ್ದೀಪಿಸುವ ಪ್ರೇರಕ ಶಕ್ತಿಯೂ, ಸ್ಪೂರ್ತಿಯ ಸೆಲೆಯೂ ಆಗಿದೆ.

ಚೆನ್ನವೀರ ಕಣವಿಯವರು ಹಬ್ಬಗಳ ಮಹತ್ವವನ್ನು ಹೇಳುತ್ತಲೇ ‘ಧಾರವಾಡದಲ್ಲಿ ಮಳೆಗಾಲ’ ಎಂಬ
ಪದ್ಯದಲ್ಲಿ

ಗಣಪತಿಯು ಇಲಿಯೇರಿ ಭರ್ಜರಿ ವೇಷದಲ್ಲಿಯೆ ಬಂದನು

ಗರಿಕೆ ಪತ್ರೆಯ ಪೂಜೆ ಸಂದಿತು ಕಡಬು ಹೋಳಿಗೆ ತಿಂದನು

ಘಟಸ್ಥಾಪನೆಯಾಯ್ತು ಮೋಡದ ಕೊಡವು ಬುಡಮೇಲಾಯಿತು

ಸೀಗೆ ಹುಣ್ಣಿವೆಗೆ ಮಸಾರಿಯು ಹಸಿರು ಪುಚ್ಚವ ತೆರೆಯಿತು

ಗೌರಿ ಹುಣ್ಣಿವೆ ಹಾಲ್ಗುಡಿದು ಬಿಳಿ ಜೋಳ ಧ್ವಜವನೆತ್ತಿತು

ಗೋಧಿ ಹೊಡೆಗಚ್ಚಿರಲು ಕಡಲೆಯ ಮಡಿಲು ಹೂಮಿಡಿ ತುಂಬಿತು

ಎನ್ನುತ್ತಾರೆ. ಶ್ರಾವಣವೆಂದರೆ ಕಣವಿಯವರಿಗೆ ಹೊಸ ಹುಟ್ಟು. ಪುತಿನ ಅವರದೊಂದು ಪದ್ಯದಲ್ಲಿ
ಬರುವಂತೆ

ಮಳೆಯು ನಾಡ ತೊಯ್ಯುತಿರೆ, ಮಂಜಿಗಿರುಳು ಬೆದರುತಿರೆ

ಸೋನೆ ತಿರೆಯ ತೊಯ್ಯುತಿರೆ, ಮಿಂಚೆ ತಿಮಿರ ನಡುಗುತಿರೆ

ಮುದವು ಮೊಳೆದು ನಮೆವುದು…

ಹೀಗೆ ಮಳೆಯಿಂದಲೇ ಮಳೆಯ ಹಬ್ಬಗಳ ಮುದವೊಂದು ಶ್ರಾವಣದಲ್ಲಿ ಹೆಜ್ಜೆಯಿಡುವುದು. ಅವರೇ
ಇನ್ನೊಂದು ಪದ್ಯದಲ್ಲಿ ಹೇಳುವಂತೆ

ಸಂಜೆ ಗಾಳಿಗೆ ಜಳಕ ಮಾಡಿಸೆ, ಹನಿತು ಮಳೆ ಹೊಳೆಯೋಡಿತು

ಮುಗಿಲ ರೆಂಬೆಯ ಮೇಲೆ ಮಿಂಚಿನ ಹಕ್ಕಿ ರೆಕ್ಕೆಯ ಕೆದರುತ

ಹೀಗೆ ಪುತಿನ ಕೊಡುವ ಮಳೆಯ ಚಿತ್ರಗಳು ಅದ್ಭುತ. ಶ್ರಾವಣವೆಂದರೆ ಪುತಿನ ಅವರಿಗೆ ಆರ್ದ್ರಗೊಂಡ
ಅಂತರಂಗದ ಭಾವ. ಕೆ.ಎಸ್.ನರಸಿಂಹಸ್ವಾಮಿ ಅವರ ‘ಮುಗಿಲ ದನಿ’ಯಲ್ಲಿ

ಸೋನೆ ಸುರಿಯುವ ಮಿಂಚು ಹರಿಯುವ, ಸಿಡಿಲು ಸೀಳುವ ಇರುಳಿಗೆ

ಬಾನ ಹಣೆಯಲಿ ಬೆಳ್ಳಿ ಕರಗುವ ನವಿಲ ಬಣ್ಣದ ಹಗಲಿಗೆ

ಮುಗಿಲೆ ಮುಗಿಲೇ ನೀನು ಬಾಗಿಲೇ? ಮುಗಿಯದಾಸೆಯ ಬಾಗಿಲೇ?

ಮಳೆಯೆಂದರೆ ಹೀಗೆ ಮುಗಿಯದಾಸೆಯ ಬಾಗಿಲು ತೆರಕೊಂಡಂತೆ. ಶ್ರಾವಣವೆಂದರೆ
ನರಸಿಂಹಸ್ವಾಮಿಯವರಿಗೆ ಒಲವಿನ ಬಾಗಿಲು.

ಸಿದ್ದಯ್ಯ ಪುರಾಣಿಕರು ಕೇಳುವಂತೆ :

ಹುಬ್ಬು ಹಾರಿಸುತಿಹುದು ಮಿಂಚಿನಲಿ ಮೋಡ

ಶೃಂಗಾರ ಚೇಷ್ಟೆಯಿದು ಯಾರ ಕೂಡ?

ಕರಗಿತದೋ ಕರಗಿತದೊ ಸುರಿಯುತಿದೆ ಮೋಡ

ಕಂಡು ಕನಿಕರ ಬಂತೆ ಈ ಜಗದ ಪಾಡ?

ಮಳೆ ಈ ಪ್ರಕೃತಿಯ ಬೆರಗಿನ ಸೃಷ್ಟಿಯೇ ಸರಿ. ಶ್ರಾವಣವೆಂದರೆ ಪುರಾಣಿಕರಿಗೆ ನವರಸಗಳು
ಉಕ್ಕುವ ಹಾಡು. ಕೋ. ಚೆನ್ನಬಸಪ್ಪನವರಿಗೆ ಅರಿವಿನ ಬೆಳಕಲ್ಲಿ ಅರಳುವ ವೈಚಾರಿಕತೆ.

ಶ್ರಾವಣ ಮಾಸದ ಬೆಳಗಿನ ಜಾವದಿ

ಮರವನು ಸುತ್ತುವಳಾರೀ ನಾರಿ?

ಒಣಗುವ ಮರವನು ಬತ್ತುವ ಜಲವನು

ಸುತ್ತುವ ಮೌಢ್ಯವೇ ಈ ಯುಗದಿ?

ಅಂತೆಲ್ಲ ಅವರು ಹೆಂಗಳೆಯರನ್ನು ತಡೆದು ಕೇಳಿದ್ದಿದೆ. ಚಂದ್ರಶೇಖರ ಕಂಬಾರರ ‘ಶ್ರಾವಣದ ಒಂದು
ದಿನ’ ಪದ್ಯದಲ್ಲಿ:

ಮುಗಿಲ ಮುತ್ತುಗಳನ್ನು ಕರಿಮೋಡ ಚಾಣಿಸಿತು

ನೆಲದ ಚಿಪ್ಪೊಳು ಬಿತ್ತು ಅಲ್ಲಿ ಇಲ್ಲಿ

ಧರೆಯೆದ್ದು ಹಸಿರ ಕಣ್ಣರಳಿಸಿತು ಬಯಲಿನಲಿ

ಬೀಳು ಆ ಈ ಕಂಟಿ ಟೊಂಗೆಗಳಲಿ

ಮನೆಯ ಕೈತೋಟದಲಿ ನಂದನವು ತೊದಲಿತೋ

ಮಳೆಬಿಲ್ಲು ಅರಳಿದವು ಬೇಲಿಯಲ್ಲಿ

ತೊಯ್ದ ಗದ್ದೆಯ ತಲೆಯ ಬಾಚಿ ಹೆಣೆಯಿತು ಗಾಳಿ

ಬಿಳಿ ಮೋಡ ನಕ್ಕವೋ ಬುರುಗು ತುಂಬಿ

ಇಲ್ಲಿ ಶ್ರಾವಣವೊಂದು ಜೀವಂತ ಪಾತ್ರವಾಗಿ ಬರುತ್ತದೆ. ಕಂಬಾರರಿಗೆ ಶ್ರಾವಣವೆಂದರೆ ನಿರಂತರ
ಹರಿವ ಜೀವನಪ್ರೀತಿ. ಸಿದ್ದಲಿಂಗ ಪಟ್ಟಣಶೆಟ್ಟಿಯವರು ತಮ್ಮ ‘ಸಂಜೆ’ ಎಂಬ ಪದ್ಯದಲ್ಲಿ
ಶ್ರಾವಣದ ಮಳೆಯನ್ನು ಹೀಗೆ ಅವಲೋಕಿಸುತ್ತಾರೆ:

ಬುಟ್ಟಿ ತುಂಬಿರುವ ಕವಳೆ ಹಣ್ಣುಗಳನ್ನು ಸುರುವಿದಂತೆ ಕೆಳಗಿಳಿವ ಮಳೆ

ನಕ್ಷೆಯಲಿ ಭಾರತದ ರಾಜ್ಯಗಳ ಬರೆದಂತೆ

ಚೆಲ್ಲುವರೆದಿಹ ಮೋಡದಾಚೆ ಮನೆ ಚಿಕ್ಕ ಮಗು

ಅಕಾರಣ ಸಂತಸವು ನಕ್ಕಂತೆ ಇಳಿಜಾರಿನಲಿ ಆಟವಾಡುವ ಬಿಸಿಲು

ಅನ್ನದಲಿ ಮಜ್ಜಿಗೆಯ ಸಿಹಿಸಾರನುಂಡಂತೆ ತೊಯ್ದ ನೆಲ

ಪಟ್ಟಣಶೆಟ್ಟರಿಗೆ ಶ್ರಾವಣ ಇಷ್ಟೊಂದು ಹಿತವಾಗಿದೆ. ಶ್ರಾವಣವೆಂದರೆ ಅವರಿಗೆ ದೈನಿಕದ ಸಚಿತ್ರ
ಸನ್ನಿಧಿ. ಜಿಎಸ್ಸೆಸ್ ಅವರ ‘ಮಬ್ಬಿನಿರುಳು’ ಪದ್ಯದಲ್ಲಿ:

ಮುಗಿಲು ಉಗಿವ ಎಂಜಲಂತೆ ಸೋನೆ ಮಳೆ ಸಿಡಿಯುತಿರಲು

ನಿಲುವುದೆಂದೊ ನಿಲುವುದೆಂದೊ ಭೂತದ ಮಳೆ

ನೆರಳ ಪಾತ್ರ ಕೆಸರ ಹೆಜ್ಜೆ ಕೇಳಿಕೆ

ಬೆಳಗು ಬಂದು ನಿಲಿಸಬಹುದೇ ಸಲಿಸಿ ತನ್ನ ಕಾಣಿಕೆ?

ಮಬ್ಬಿನಿರುಳು ದಬ್ಬುತಲಿದೆ ಹೇಗೊ ತನ್ನ ಕಾಲವ

ಕುರುಡು ಮೋಡ ಹರಡುತಲಿದೆ ಬನ ತುಂಬ ಜಾಲವ

ಇಲ್ಲಿ ಮಳೆಗಾಲದಲ್ಲಿ ಮನೆಯಿಂದ ಹೊರಗಡಿಯಿಟ್ಟರೆ ತೋರುವ ಕೆಸರ ಹೆಜ್ಜೆಯನ್ನು
ನೆನಪಿಸುತ್ತದೆ. ಶ್ರಾವಣವೆಂದರೆ ಜಿಎಸ್​ಎಸ್ ಅವರಿಗೆ ಭೂಮಿ ಹೆಣೆಯುವ ಒಂದು ಮಾಯಾಜಾಲ.
ಇಂಥದೇ ನೆನಪನ್ನು ಉಕ್ಕಿಸುವ ಜಯಂತ ಕಾಯ್ಕಿಣಿ ತಮ್ಮದೊಂದು ಪದ್ಯದಲ್ಲಿ:

ಕಾಲಿಟ್ಟಲ್ಲೆಲ್ಲ ಹಾವಸೆಯ ಜಾರು

ಪಕಳೆಗಳ ಕಿತ್ತು ಕಿತ್ತು ಅರಳಿಸಿದ ಮೊಗು

ತೊಯ್ದ ಪೇಟೆಯಲ್ಲಿ ಕರೆಯುತ್ತಿದೆ ಒದ್ದೆ ಬೆಳಕು

ಎಂಬಲ್ಲಿಯೂ,

ಅವರದೇ ಇನ್ನೊಂದು ಕವಿತೆ

ನೋವುಂಟು ಶ್ರಾವಣಕ್ಕೆ

ನಿದ್ದೆಯಿಂದ ತಿವಿದೆಬ್ಬಿಸಿ ಶಾಲೆಗೆ ಎಳೆದಂಥ

ಪುಟ್ಟ ಹುಡುಗ ಚಿಟ್ಟೆ ಹಿಂದೆಲಾರಿಯೆಡೆಗೆ ಬಂದಂಥ

ಕವಿತೆಯಲ್ಲಿ ಶಬ್ದ ಕರಗದೇ ಉಳಿದಂಥ ನೋವುಂಟು ಶ್ರಾವಣಕ್ಕೆ ಎಂಬಲ್ಲಿಯೂ ತದ್ವಿರುದ್ಧವಾದ
ಅರ್ಥ ವ್ಯತ್ಯಾಸಗಳನ್ನು ನಾವು ಕಾಣಬಹುದು.  ಶ್ರಾವಣವೆಂದರೆ ಜಯಂತಣ್ಣನಿಗೆ ಒದ್ದೆ ಒದ್ದೆ
ಬೆಳದಿಂಗಳು.

ವರಕವಿ ಬೇಂದ್ರೆಯವರು ಶ್ರಾವಣದ ಕವಿ. ಅವರ ಒಂದು ಕವನ ಸಂಕಲನಕ್ಕೆ ಕೊಟ್ಟ ಹೆಸರೇ ಮತ್ತೆ
‘ಶ್ರಾವಣ ಬಂತು’ ಎಂದು. ಬೇಂದ್ರೆಯಜ್ಜನ ಸ್ವಂತ ಜೀವನದಲ್ಲಿಯೂ ಶ್ರಾವಣ ವಿವಿಧ ಬಗೆಯ ನೋವು
ನಲಿವಿನ ಎಳೆಗಳನ್ನು ನೇಯ್ದಿದೆ. ಧಾರವಾಡದಲ್ಲಿಯ ಶ್ರಾವಣದ ಸೌಂದರ್ಯದ ಕುರಿತು ಅವರು ಅನೇಕ
ಪದ್ಯಗಳನ್ನು ರಚಿಸಿದ್ದಾರೆ. ಅವರ ಹಾಡುಪಾಡು ಪದ್ಯದಲ್ಲಿ

ಶ್ರಾವಣ ಬಂತು ಘಟ್ಟಕ್ಕ ರಾಜ್ಯ ಪಟ್ಟಕ್ಕ

ಬಾನ ಮಟ್ಟಕ್ಕ ಏರ್ಯಾವ ಮುಗಿಲು

ಶ್ರಾವಣದ ಸರ್ವವ್ಯಾಪಿ ಶಕ್ತಿಯ ಬಣ್ಣನೆಯನ್ನು ನಾವಿಲ್ಲಿ ನೋಡಬಹುದು. ‘ನಾದಲೀಲೆ’ಯಲ್ಲಿ ಕೂಡ

‘ನಗುವ ತುಟಿಯ ನೆನೆದ ಎವೆಯ ತರಳ ನೀನು ಶ್ರಾವಣಾ’

ಎನ್ನುತ್ತ ಶ್ರಾವಣದ ತರಳ ಸೌಂದರ್ಯವನ್ನು ವರ್ಣಿಸಿದ್ದಾರೆ.

ಬೇಂದ್ರೆಯವರಿಗೆ ಪ್ರಕೃತಿ ಮತ್ತು ಅಧ್ಯಾತ್ಮಿಕ ಚಿಂತನೆ ಎರಡೂ ಒಂದೇ ಬಿಂದುವಿನಲ್ಲಿ
ಅನುಸಂಧಾನಗೊಳ್ಳುವ ಸೂಕ್ಷ್ಮ ಅರಿವಾಗಿತ್ತು. ಅದಕ್ಕೆ ಪೂರಕವಾಗಿ ಹುಟ್ಟಿದ ಗಂಗಾವತರಣ
ಪದ್ಯದಲ್ಲಿ ಬಂಧನದೊಳಿದ್ದವರ ಬಂಧನವ ಬಿಡಿಸುವ ಬಂದಿಕಾರ ಶ್ರಾವಣ

ಎಂಬಲ್ಲಿ ಶ್ರಾವಣದ ಅಷ್ಟಮಿಯಲ್ಲಿ ಹುಟ್ಟಿ ಬಂದ ಕೃಷ್ಣ ತನ್ನ ತಂದೆ ತಾಯಿಯರ ಸೆರೆಯನ್ನು
ಬಿಡಿಸಿದ ಎನ್ನುತ್ತಾರೆ. ಬೇಂದ್ರೆಯವರು ಪ್ರತಿ ವರ್ಷ ಶ್ರಾವಣ ಹೊತ್ತು ತರುವ ಸಂದೇಶವನ್ನು
ಅನೇಕ ರೀತಿಯಲ್ಲಿ ಆಲಿಸುತ್ತಿದ್ದರು. ನಿರಂತರ ಗತಿಶೀಲವಾದ ಜೀವನ ದರ್ಶನವೊಂದು ಅವರಿಗೆ
ಶ್ರಾವಣದ ಪ್ರತಿಮೆಯ ಮೂಲಕ ಕಂಡಿತ್ತು ಎಂದು ಕೀರ್ತಿನಾಥ ಕುರ್ತಕೋಟಿ ಒಂದೆಡೆ
ವಿಶ್ಲೇಷಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅವರ ‘ಸಣ್ಣ ಸೋಮವಾರ’ದಲ್ಲಿಯೂ

ತಪ್ಪಿ ಉಳಿದ ಕೋಗಿಲಾ

ನಡುವೇನ ಕೂಗತದ

ಶ್ರಾವಣದ ಜಡಿಯೊಳಗ ಸಿಕ್ಕು

ಇಂತೆಲ್ಲ ರೂಪಕಗಳು ಸಂಸಾರದಲ್ಲಿ ತೊಡಗಿಕೊಂಡ ಜೀವಗಳ ಪ್ರತೀಕಗಳಾಗುತ್ತವೆ. ಶ್ರಾವಣದ
ಕುರಿತು ಬೇಂದ್ರೆಯವರ ತನ್ಮಯತೆ ಅಂಥದ್ದು. ಅವರಿಗೆ ಶ್ರಾವಣದ ಮಳೆ ಹಸಿರು, ಹೂವು, ಚಿಟ್ಟೆ
ಮೊದಲಾದವುಗಳಿಂದ ತುಂಬಿಕೊಂಡು ನಲಿಯುವ ಸ್ವರ್ಗ ಸಮಾನವಾದಂತಹ ಭೂಮಿ. ನಿಜವಾಗಿಯೂ
ಶ್ರಾವಣವೆಂದರೆ ಇವೆಲ್ಲವನ್ನೂ ಮೀರಿಸುವ ಒಂದು ಸಂಪನ್ನ ಪ್ರಕೃತಿಯ ಲಯ, ಸಮೃದ್ಧಿಯ ಆಲಯ,
ನಿಸರ್ಗ ತುಂಬುವ ಅಪ್ಪಟ ಕವಿಸಮಯ, ಕವಿ ಮನಸ್ಸಿಗೆ ಅಪರಿಮಿತ ಆದಾಯ.

ಚಲನಚಿತ್ರದಲ್ಲೂ ಶ್ರಾವಣ ಪರ್ವ

| ಕೆ.ಕಲ್ಯಾಣ, ಚಲನಚಿತ್ರ ಗೀತರಚನೆಕಾರ

ಈ ಪ್ರಕೃತಿಯ ಒಳಗೆ ಪ್ರತಿಯೊಂದು ಕಾಲಘಟ್ಟದಲ್ಲಿಯೂ ಬದಲಾವಣೆಗಳು ಮತ್ತು ಪರಿವರ್ತನೆಗಳು
ಆಗುತ್ತಲೇ ಇರಬೇಕು, ಆಗುತ್ತಲೇ ಇರುತ್ತವೆ…

ಘಳಿಗೆಗಳು, ಮಾಸಗಳು, ಪರ್ವಗಳು ತನ್ನ ಹಿಂದಿನ ಸ್ವರೂಪವನ್ನು ತೆಗೆದು, ಅದುವರೆಗಿನ
ಮುಖವಾಡವನ್ನು ಕಳಚಿ, ಹೊಸದೊಂದು ರೂಪಕ್ಕೆ, ರೂಪಕಕ್ಕೆ ತನ್ನನ್ನು ತೆರೆದುಕೊಳ್ಳುತ್ತಲೇ
ಇರುತ್ತವೆೆ. ಆಸ್ವಾದಿಸೋ ಮನಸ್ಸುಗಳ ಮೇಲೆ, ತೋಚಿದ್ದು ಬರೆದುಕೊಳ್ಳುತ್ತಲೇ ಇರುತ್ತವೆೆ.
ಅದಕ್ಕೊಂದು ಚಿಕ್ಕ ಪ್ರಾಸಂಗಿಕ ಅಂದರೆ ಆಷಾಢದ ನಂತರ ಬಂದಿಳಿದ ಶ್ರಾವಣ… ಅನನ್ಯ ಚಿಗುರುಗಳ
ಸಂಭ್ರಮಕ್ಕೆಇದೀಗ ನಾಂದಿ ಹಾಡಿದೆ ಪ್ರಕೃತಿ. ಯಥಾವತ್ತಾಗಿ… ನಮ್ಮೀ ಚಿತ್ರರಂಗದಲ್ಲೂ ಸಹ…
ಸಹಜವಾಗಿ ನಾಲ್ಕು ವಾರಗಳಿಗೊಮ್ಮೆ ಒಂದೊಂದು ಚಲನಚಿತ್ರ ಬಿಡುಗಡೆಯಾಗುತ್ತಿದ್ದುದು
ಮರೆತುಹೋಗಿ, ಪ್ರತಿವಾರಕ್ಕೆ ಹತ್ತು ಹತ್ತು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಬದಲಾದ
ಶ್ರಾವಣದ ಸಂಕೇತವೇ ತಾನೆ? ಸೋಲು, ಗೆಲುವನ್ನು ಬದಿಗಿಟ್ಟು, ವ್ಯಾಪಾರ ವಹಿವಾಟುಗಳನ್ನು
ದೂರವಿರಿಸಿ ನೋಡಿದ್ದೇ ಆದರೆ, ಅದೆಂಥಾ ಪ್ರತಿಭಾ ಸ್ಪೋಟ, ಅದೆಂಥಾ ಕಲಾವಿದ, ತಂತ್ರಜ್ಞ,
ಕಾರ್ವಿುಕರ ಕ್ರಿಯಾಶೀಲ ಪರ್ವ! ಇಲ್ಲಿ ಎಲ್ಲರೂ ನಮ್ಮವರೇ, ನಮ್ಮೊಳಗಿದ್ದವರೇ,
ಗಗನದೆತ್ತರಕ್ಕೇರುತ್ತಿರುವ ಚಿಗುರು ಚೈತ್ರಗಳೇ ತಾನೇ?

ಹಾಗಾಗಿ ನಮ್ಮ ಕನ್ನಡ ಚಲನಚಿತ್ರರಂಗಕ್ಕೆ ಈಗಿನ ಯುಗಾಂತರ್ಗತವಂತೂ ಸಂಪೂರ್ಣ ಶ್ರಾವಣಮಯವೇ.
ಇಂಥಾ ಸಂದರ್ಭದಲ್ಲಿ ವಸಂತನಿಗೆ ಸಂಬಂಧಪಟ್ಟಂಥ ಹಲವು ಹಾಡು, ಸಿನಿಮಾಗಳು ನೆನಪಾಗುತ್ತಿವೆ.
ವರನಟ ಡಾ. ರಾಜ್​ಕುಮಾರ್ ಅವರು ಹಾಡಿದ ‘ಶ್ರಾವಣ ಮಾಸ ಬಂದಾಗ, ಆನಂದ ತಂದಾಗ, ವಿರಹ ಗೀತೆ
ಇನ್ನಿಲ್ಲಾ… ಪ್ರಣಯಗೀತೆ ಬಾಳೆಲ್ಲಾ… ಹಾಡು; ‘ಸಮಯದ ಗೊಂಬೆ’ ಚಿತ್ರದ ‘ಕೋಗಿಲೆ ಹಾಡಿದ
ಕೇಳಿದೆಯಾ….’, ಹಾಡು, ‘ಗುರಿ’ ಚಿತ್ರದ ‘ವಸಂತಕಾಲ ಬಂದಾಗ, ಮಾವು ಚಿಗುರಲೇಬೇಕು, ಕೋಗಿಲೆ
ಹಾಡಲೇಬೇಕು…’, ಅಂದಿದ್ದಾಗಲೀ, ರವಿಚಂದ್ರನ್-ಹಂಸಲೇಖರ ಕೆ.ಜೆ.ಯೇಸುದಾಸ್ ಅವರ ಧ್ವನಿಯ
‘ಒಹೋ ವಸಂತಾ…’ ಸಾಲುಗಳಾಗಲೀ; ‘ಶ್ರಾವಣ ಸಂಜೆ’ ಚಿತ್ರದ ‘ಆಕಾಶವೇ ಈ ಶ್ರಾವಣ’ ಹಾಡಾಗಲೀ;
ಎಸ್.ನಾರಾಯಣ್ ಅವರ ‘ಚೈತ್ರದ ಪ್ರೇಮಾಂಜಲಿ’ಯಾಗಲೀ; ‘ವಸಂತ ಕಾವ್ಯ’ ಎಂಬ ಹೆಸರಿನ
ಚಿತ್ರವಾಗಲೀ; ಅಣ್ಣಾವ್ರ ‘ವಸಂತಗೀತ’ ಚಿತ್ರವಾಗಲೀ; ವಿಜಯ ರಾಘವೇಂದ್ರ ಅಭಿನಯದ ‘ಶ್ರಾವಣ’
ಚಿತ್ರ, ಅಂಬರೀಷ್ ಅವರ ‘ಮತ್ತೆ ವಸಂತ’ ಚಿತ್ರ ‘ಮೀರಾ ಮಾಧವ ರಾಘವ’ ಚಿತ್ರದ ‘ವಸಂತ ವಸಂತ
ಬ್ಯೂಟಿಫುಲ್ ವಸಂತ’ ಹಾಡಾಗಲೀ… ಲೆಕ್ಕವಿಡುತ್ತಾ ಹೋದಂತೆಲ್ಲಾ ಕನಿಷ್ಠ 500 ಕೋಗಿಲೆಗಳ
ಹಾಡುಗಳು ಕಿವಿಯಂಚಿನಲ್ಲಿ ಹಾದುಹೋಗಿ ಬರುತ್ತವೆ.

ಮರೆತಂಥ ಅದೆಷ್ಟೋ ಪ್ರಮುಖ ಹಾಡುಗಳು ಇಲ್ಲಿ ಅಜರಾಮರವಾಗಿದೆ. ಈ ನಡುವೆ ಪ್ರಖ್ಯಾತ ಗಾಯಕ
ಸಿ.ಅಶ್ವತ್ಥ ಅವರ ‘ಶ್ರಾವಣ ಬಂತು ಹಾಡಿಗೆ… ನಾಡಿಗೆ… ಕಾಡಿಗೆ… ಯಂತೂ ಕೇಳಿರದ ಕನ್ನಡಿಗರೇ
ಇಲ್ಲ.

ಹಾಗೆಯೇ, ‘ಚಂದ್ರ ಚಕೋರಿ’ ಚಿತ್ರದ ‘ಕುಹೂ ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ’
ಎನ್ನುತ್ತಲೇ, ಒಮ್ಮೆ ಕೈಯಲ್ಲಿ ಕೋಗಿಲೆಗಳನ್ನು ಹಿಡಿದು ಇಡೀ ಭಾರತೀಯ ಚಿತ್ರರಂಗವನ್ನು
ಸಿಂಹಾವಲೋಕನ ಮಾಡಿದ್ದೇ ಆದಲ್ಲಿ ನಮ್ಮ ಕನ್ನಡದ ಚಲನಚಿತ್ರಗಳಲ್ಲಿ ಬಳಕೆಯಾದಷ್ಟು ವಸಂತ,
ಶ್ರಾವಣ ಹಾಗೂ ಕೋಗಿಲೆಗಳ ಪ್ರಸ್ತಾಪ ಬೇರೆ ಯಾವುದೇ ಭಾಷೆಗಳಲ್ಲೂ ಆಗಿಲ್ಲ.

ಕಾರಣ ಸರಳ. ಕನ್ನಡಿಗರಾಗಲೀ, ಕನ್ನಡ ಚಲನಚಿತ್ರಗಳಾಗಲೀ ಸದಾ ಕಾಲ ಹೊಸತನ್ನೇ ಹಂಚುವವರು,
ಹೊಸತನದಿಂದಲೇ ಪ್ರಗತಿಗೆ ಬಂದವರು, ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ
ಕಲಾಚಾರಗಳಲ್ಲಿನ ಚಿಗುರು, ಹಸಿರು, ಪ್ರಫುಲ್ಲತೆ ಎಂದೆಂದಿಗೂ ನೇರವಾಗಿ ಹಾಡುಗಳ ರೂಪವನ್ನು
ಪಡೆದುಕೊಂಡು ಬಿಡುತ್ತವೆ. ಹಾಗಾಗಿ ನಮ್ಮತನ ಎಂದರೆ ಅದೊಂದು ಸಮೃದ್ಧ ಮರ, ಅಜರಾಮರ.
ಪ್ರತಿಯೊಬ್ಬರಿಗೂ ಈ,  ಶ್ರಾವಣದ ಹೊಸ್ತಿಲೊಳಗೆ ಸ್ವಾಗತ, ಸುಸ್ವಾಗತ…

ಎಲ್ಲಾ ‘ಗತ’ಗಳನ್ನು ಮರೆತು ಹೊಸ ಪಥದತ್ತ ನಿಮ್ಮೆಲ್ಲರ ಬದುಕಿನ ‘ರಥ ಸಾಗುತ್ತಿರಲಿ,
ನೀವಿಡುವ ಪ್ರತಿ ಹೆಜ್ಜೆಗಳಲ್ಲೂ ನಲಿವಿನ ತೋರಣ ಕಟ್ಟುವಂತಾಗಲಿ… ಗೆಲುವಿನ ಹೂರಣ
ಮೈದುಂಬಲಿ, ಪ್ರತಿ ಚಿಗುರೊಳಗಿರುವ ಬೇರುಗಳ ಹಸ್ತರೇಖೆ, ಯಶೋಮಾರ್ಗದತ್ತ ನಡೆಯಲಿ.

ಹಬ್ಬಗಳ ಮಾಸ

| ಮನೋಹರ ಜೋಶಿ

ಭರತಭೂಮಿಯು ತನ್ನದೇ ಆದ ವಿಶಿಷ್ಟ ಧಾರ್ವಿುಕ ಸಂಪ್ರದಾಯ ಹೊಂದಿದ್ದು, ಪ್ರತಿ ಮಾಸದಲ್ಲೂ
ಹಬ್ಬ ವ್ರತ ನಿಯಮಗಳನ್ನು ಹೊಂದಿರುವ ದೇವಭೂಮಿ. ಕುಟುಂಬದವರೆಲ್ಲ ಒಂದೆಡೆ ಸೇರುವುದು, ಒಡೆದ
ಮನಸುಗಳನ್ನು ಒಂದುಗೂಡಿಸುವುದು, ದ್ವೇಷ ಅಸೂಯೆಗಳನ್ನು ಹೋಗಲಾಡಿಸುವುದು ಹಾಗೂ
ಸಂಭ್ರಮಿಸುವುದು ಭಾರತೀಯರ ಹಬ್ಬಗಳ ಮುಖ್ಯ ಉದ್ದೇಶ. ಆಷಾಢದಲ್ಲಿ ಮೋಡಗಳು ಶ್ಯಾಮ
ಮೈಬಣ್ಣದಿಂದ ಕೂಡಿಕೊಂಡು ಹಾರಾಡುತ್ತಿದ್ದರೆ, ಶ್ರಾವಣಮಾಸದಲ್ಲಿ ಈ ಮೋಡಗಳೆಲ್ಲ ಒಟ್ಟಾಗಿ
ಸೇರಿ ಜಿಟಿಜಿಟಿ ಮಳೆ ಸುರಿಸುವುದನ್ನು ನೋಡುವುದೇ ಹಬ್ಬ. ಇಡೀ ಪ್ರಕೃತಿಯು ಹಸಿರು ಸೀರೆ
ಉಟ್ಟಂತೆ ಸಂಭ್ರಮಿಸಿದರೆ, ಗಿಡ ಬಳ್ಳಿಗಳಲ್ಲಿ ಹೊಸ ಹೂವುಗಳಿಗೆ ಅರಳುವ ಸಡಗರ. ಮಕ್ಕಳಿಗೆ
ನಲಿದಾಡುವ ಸಂಭ್ರಮವಾದರೆ, ಮನೆಯ ಹಿರಿಯರಿಗೆ ಹಬ್ಬದ ತಯಾರಿಯ ಉತ್ಸಾಹ. ಒಟ್ಟಿನಲ್ಲಿ ಶ್ರಾವಣ
ನಮ್ಮೆಲ್ಲರಿಗೂ ಮುದ ನೀಡುವ ಸಂಭ್ರಮದ ಮಾಸ. ಶ್ರಾವಣಮಾಸದಿಂದಲೇ ಇಡೀ ವರ್ಷದ
ಹಬ್ಬ-ವ್ರತಗಳಿಗೆ ಚಾಲನೆ ಸಿಕ್ಕಂತಾಗುತ್ತದೆ.

ಶ್ರಾವಣ ಸೋಮವಾರ

ಶ್ರಾವಣ ಮಾಸ ಆರಂಭವಾಯಿತೆಂದರೆ ವಿಶೇಷವಾಗಿ ಶಿವನ ಆಲಯಗಳಲ್ಲಿ ಬಿಲ್ವಪತ್ರೆಗಳಿಂದ ಶಿವನನ್ನು
ಭಕ್ತಿಪೂರ್ವಕವಾಗಿ ಅರ್ಚಿಸಿ ಶ್ರಾವಣ ಸೋಮವಾರ ಆಚರಿಸುವುದು ರೂಢಿ ಯಲ್ಲುಂಟು.
ಶಿವದೇಗುಲಗಳಲ್ಲಿ ಅಹೋರಾತ್ರಿ ಭಜನೆ ಮಾಡುವ ಮೂಲಕ ಜಾಗರಣೆಯಿದ್ದು ಆಚರಿಸುವ ವ್ರತವಿದು.
ಕೊನೆಯ ಸೋಮವಾರ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ.

ಮಂಗಳಗೌರಿ ವ್ರತ

ವಿವಾಹಿತ ಮಹಿಳೆಯರು ಮೊದಲ ವರ್ಷದಿಂದ ಪ್ರಾರಂಭಿಸಿ 5 ವರ್ಷಗಳವರೆಗೆ ಆಚರಿಸುವ ವ್ರತವಿದು.
ಶ್ರಾವಣಮಾಸದಲ್ಲಿ ಬರುವ ಎಲ್ಲ ಮಂಗಳವಾರಗಳಂದು ಸೌಭಾಗ್ಯ ಹಾಗೂ ಉತ್ತಮ ಸಂತಾನ ಪ್ರಾಪ್ತಿಗಾಗಿ
ಈ ವ್ರತವನ್ನು ಆಚರಿಸುತ್ತಾರೆ.

ನಾಗಚತುರ್ಥಿ

ಹೆಣ್ಣುಮಕ್ಕಳ ಹಬ್ಬವೆಂದು ಕೂಡ ಕರೆಸಿಕೊಳ್ಳುವ ಶ್ರಾವಣ ಶುಕ್ಲ ಚತುರ್ಥಿಯು ನಾಗಚತುರ್ಥಿ,
ನಾಗಚೌತಿ ಎಂದು ಪ್ರಸಿದ್ಧವಾಗಿದೆ. ಉತ್ತರ ಕರ್ನಾಟಕದ ಕಡೆ ಈ ದಿನದಂದು ಮನೆಯಲ್ಲಿ ಬೆಳ್ಳಿ,
ತಾಮ್ರ ಅಥವಾ ಮಣ್ಣಿನಿಂದ ತಯಾರಿಸಿದ ನಾಗಪ್ರತಿಮೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಬೆಲ್ಲ
ಮತ್ತು ನೀರಿನ ಮಿಶ್ರಣ, ಹಾಲು ಎರೆಯುವ ಸಂಪ್ರದಾಯವಿದೆ. ತಂಬಿಟ್ಟು ಮತ್ತು ಎಳ್ಳಿನ
ಉಂಡೆಯನ್ನು ನಿವೇದಿಸಿ, ಅಣ್ಣತಮ್ಮಂದಿರ ಶ್ರೇಯೋಭಿವೃದ್ಧಿಗಾಗಿ ಹೆಣ್ಣುಮಕ್ಕಳು ಉಪವಾಸ
ಮಾಡುವ ಸಂಪ್ರದಾಯವಿದೆ.

ನಾಗಪಂಚಮಿ

ಈ ದಿನ ಸ್ತ್ರೀಪುರುಷರೆಲ್ಲ ಅಭ್ಯಂಜನ ಮಾಡಿ ಹುತ್ತಕ್ಕೆ ಹಾಲಿನಿಂದ ಅಭಿಷೇಕ ಮಾಡಿ ಆ
ಮಣ್ಣಿನಿಂದ ಮನೆಯ ಹೆಬ್ಬಾಗಿಲಿನ ಎಡ-ಬಲ ಗೋಡೆಗಳ ಮೇಲೆ ನಾಗದೇವತೆಯ ಚಿತ್ರ ಬರೆದು
ಪೂಜಿಸುವರು. ಅರಿಶಿಣ-ಕುಂಕುಮ, ಹೂವುಗಳಿಂದ ಹೊಸ್ತಿಲ ಪೂಜೆ ಸಲ್ಲಿಸಿ ಮನೆಯೊಳಗೇ
ಪ್ರತಿಷ್ಠಾಪಿಸುವ ನಾಗಪ್ರತಿಮೆಗಳಿಗೆ ಹಾಲಿನಿಂದ ಅಭಿಷೇಕ ಮಾಡುತ್ತಾರೆ. ಅಲ್ಲದೆ ಅರಳಿಟ್ಟು,
ತಂಬಿಟ್ಟುಗಳಿಂದ ತಯಾರಿಸಿದ ತಿನಿಸುಗಳನ್ನು ನಿವೇದಿಸುತ್ತಾರೆ.

ವರಮಹಾಲಕ್ಷ್ಮೀ ವ್ರತ

ಶ್ರಾವಣಮಾಸದಲ್ಲಿ ಬರುವ ಎಲ್ಲ ಶುಕ್ರವಾರ ಮತ್ತು ಶನಿವಾರಗಳಂದು ಆಚರಿಸುವ ಲಕ್ಷ್ಮೀಪೂಜೆಯ
ವ್ರತವಿದು. ಇದನ್ನು ಮಾಸ ಮಹಾಲಕ್ಷಿ್ಮೕ ವ್ರತವೆಂದೂ, ಸಂಪತ್ತನ್ನು ನೀಡುವ ಲಕ್ಷಿ್ಮೕಯಾದ
ಕಾರಣ ಸಂಪತ್ತು ಶುಕ್ರವಾರ ವ್ರತವೆಂದೂ ಕರೆಯುತ್ತಾರೆ. ಬೆಳ್ಳಿ ಇಲ್ಲವೇ ಮಣ್ಣಿನ ಕಲಶಕ್ಕೆ
ಲಕ್ಷಿ್ಮೕದೇವಿಯ ಮುಖವನ್ನು ಚಿತ್ರಿಸಿ ಮಹಿಳೆಯರು ಪೂಜಿಸುತ್ತಾರೆ.

ಶ್ರಾವಣ ಶನಿವಾರ

ಶ್ರಾವಣಮಾಸದ ಶ್ರವಣಾನಕ್ಷತ್ರವು ತಿರುಪತಿಯ ಶ್ರೀನಿವಾಸನ ಜನ್ಮನಕ್ಷತ್ರ. ಅಂತೆಯೇ ಶನಿವಾರ
ಶ್ರೀನಿವಾಸನ ವಾರವೆಂದೇ ಗುರುತಿಸಿಕೊಂಡಿದೆ. ಹೀಗೆ ಈ ಮಾಸದ ಎಲ್ಲ ಶನಿವಾರಗಳಂದು
ಶ್ರೀನಿವಾಸದೇವರ ವಿಶೇಷ ಪೂಜೆ ಮತ್ತು ದರ್ಶನ ಪಡೆಯುತ್ತಾರೆ.

ಉಪಾಕರ್ಮ / ರಕ್ಷಾಬಂಧನ

ಶ್ರಾವಣಮಾಸದ ಶುಕ್ಲಪಕ್ಷದ ಚತುರ್ದಶೀ ಅಥವಾ ಹುಣ್ಣಿಮೆಯಂದು ಯಜ್ಞೋಪವೀತವನ್ನು
ಧರಿಸಿಕೊಳ್ಳುತ್ತಾರೆ. ಶ್ರಾವಣಮಾಸದ ಹುಣ್ಣಿಮೆಯಂದು ಆಚರಿಸಲಾಗುವ ರಕ್ಷಾಬಂಧನ ಹಬ್ಬವನ್ನು
ರಾಖಿ ಪೂರ್ಣಿಮೆ, ನೂಲು ಹುಣ್ಣಿಮೆ ಎಂದೆಲ್ಲ ಕರೆಯುತ್ತಾರೆ. ತಮ್ಮನ್ನು ಸಹೋದರರು ಸದಾ
ರಕ್ಷಿಸಲೆಂದು ಆಶಿಸಿ ಈ ದಿನ ಸಹೋದರಿಯರು ಅಣ್ಣತಮ್ಮಂದಿರ ಮುಂಗೈಗೆ ರೇಷ್ಮೆಯ ದಾರದ
ಎಳೆಗಳನ್ನು ಕಟ್ಟುತ್ತಾರೆ. ಉತ್ತರ ಭಾರತದಲ್ಲಿ ಇದು ಅತ್ಯಂತ ಜನಪ್ರಿಯ ಹಬ್ಬ.

ಹಯಗ್ರೀವ ಜಯಂತಿ

ಶ್ರಾವಣಮಾಸದ ಹುಣ್ಣಿಮೆಯು ಶ್ರೀಹರಿ ಹಯಗ್ರೀವರೂಪದಿಂದ ಪ್ರಕಟವಾದ ದಿನ. ಹಯಗ್ರೀವರೂಪವು
ತನ್ನ ಒಂದೇ ಉಸಿರಿನಿಂದ ಜಗತ್ತಿಗೆ ಸಮಸ್ತ ವೇದಗಳ ರಾಶಿಯನ್ನು ನೀಡಿದ ದಿನವಿದು.

ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆ

ಕಲಿಯುಗದ ಕಾಮಧೇನು, ಕಲ್ಪತರು ಎಂದೇ ಪ್ರಸಿದ್ಧರಾದ ಮಂತ್ರಾಲಯಪ್ರಭು ಶ್ರೀ
ರಾಘವೇಂದ್ರಸ್ವಾಮಿಗಳು, ಶ್ರಾವಣ ಕೃಷ್ಣಪಕ್ಷದ ಬಿದಿಗೆಯಂದು ಮಂತ್ರಾಲಯಕ್ಷೇತ್ರದಲ್ಲಿ
ಸಶರೀರವಾಗಿ ವೃಂದಾವನ ಪ್ರವೇಶಿಸಿದ ದಿನ. ಈ ದಿನ ಅವರ ವೃಂದಾವನದ ದರ್ಶನ ಪಡೆಯುವ
ಪದ್ಧತಿಯಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ

ಕಲಿಯುಗಕ್ಕೆ ಅತ್ಯಂತ ಹತ್ತಿರದ ಅವತಾರವೆಂದರೆ ಭಗವಾನ್ ಶ್ರೀಕೃಷ್ಣನದು. ಶ್ರಾವಣ
ಕೃಷ್ಣಪಕ್ಷದ ಅಷ್ಟಮಿಯ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಯುಗಪುರುಷ ಶ್ರೀಕೃಷ್ಣ ಜನಿಸಿದ
ದಿನ. ಇದನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತಾರೆ. ಇದನ್ನು ಗೋಕುಲಾಷ್ಟಮಿಯೆಂದೂ
ಕರೆಯಲಾಗುತ್ತದೆ. ರಾತ್ರಿ ಚಂದ್ರೋದಯದ ನಂತರ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ
ಅಘರ್Â ಕೊಡುವರು. ದೇಶದೆಲ್ಲೆಡೆ ಪ್ರಸಿದ್ಧವಾದ ಈ ಹಬ್ಬವನ್ನು ಉತ್ತರ ಭಾರತದ ಕಡೆಗಳಲ್ಲಿ
ಐದು ದಿನಗಳ ಕಾಲ ಆಚರಿಸುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....