ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಏಷ್ಯಾಡ್​ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಪ್ರಥಮ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಸಿಂಧು!

ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್​ ಫೈನಲ್​ ಪ್ರವೇಶಿಸಿದ ಮೊದಲ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಐತಿಹಾಸಿಕ ಚಿನ್ನದ ಪದಕ ಬೇಟೆಗಿಳಿದಿದ್ದ ಭಾರತದ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು, ವಿಶ್ವದ ನಂಬರ್​ ಒನ್​ ಆಟಗಾರ್ತಿ ಚೈನೀಸ್​ ತೆಪೆಯ ತೈ ಜು ಯಿಂಗ್ ಎದುರು 13-21, 16-21 ನೇರ ಸೆಟ್​ಗಳ ಮೂಲಕ ಸೋಲನುಭವಿಸಿದರು.
ನಿನ್ನೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಜಪಾನಿನ ಮಾಜಿ ವಿಶ್ವ ಚಾಂಪಿಯನ್ ಅಕಾನೆ ಯೆಮಗುಚಿ ವಿರುದ್ಧ 21-17, 15-21, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಏಷ್ಯಾಡ್​ ಫೈನಲ್ಸ್​ಗೆ ಐತಿಹಾಸಿಕ ಪ್ರವೇಶ ಪಡೆದಿದ್ದರು.
ಸಿಂಧು ಸಾಧನೆಗೆ ದೇಶವೇ ಮೆಚ್ಚುಗೆಯ ಸುರಿಮಳೆ ಸುರಿಸಿದ್ದು, ಕ್ರೀಡಾ ಸಚಿವ ರಾಜ್ಯವರ್ಧನ್​ ರಾಥೋಡ್​ ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಏಷ್ಯಾಡ್ ಬ್ಯಾಡ್ಮಿಂಟನ್​ನ ಮಹಿಳಾ ಸಿಂಗಲ್ಸ್​ನಲ್ಲಿ ಭಾರತ ಈವರೆಗೂ ಪದಕ ಸಾಧನೆ ಮಾಡಿರಲಿಲ್ಲ. ಆದರೆ, ಹಾಲಿ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ್ದು, ಸಿಂಧು ಮೂಲಕ ಐತಿಹಾಸಿಕ ಸ್ವರ್ಣವನ್ನು ನಿರೀಕ್ಷಿಸಿತ್ತು. 1982ರ ಏಷ್ಯಾಡ್​ನಲ್ಲಿ ಸಯ್ಯದ್ ಮೋದಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಬಂದಿರಲಿಲ್ಲ. (ಏಜೆನ್ಸೀಸ್​)
PV Sindhu scripts HISTORY!
Our stellar shuttler  @Pvsindhu1,  has clinched India's FIRST EVER SILVER in Badminton at the  #ASIANGAMES, . A match that will go down the history of Indian Badminton. Hats off to you  @Pvsindhu1,  🎉👏✌🏻🇮🇳 #AsianGames2018,   #KheloIndia,   pic.twitter.com/63ku3NiBGv,
— Rajyavardhan Rathore (@Ra_THORe)  August 28, 2018,
, 8:02 AM
ದಾಖಲೆಯ ಸ್ವರ್ಣ ಗೆದ್ದ ನೀರಜ್, ಜಕಾರ್ತ: ದೇಶದ ಮೊಟ್ಟಮೊದಲ ವಿಶ್ವ ಚಾಂಪಿಯನ್ ಅಥ್ಲೀಟ್ ನೀರಜ್ ಚೋಪ್ರಾ ಭರ್ಜರಿ ನಿರ್ವಹಣೆಯೊಂದಿಗೆ ಏಷ್ಯಾಡ್​ನಲ್ಲಿ ಭಾರತಕ್ಕೆ   8ನೇ ಸ್ವರ್ಣ ಗೆಲ್ಲಿಸಿಕೊಟ್ಟಿದ್ದಾರೆ. ಜಾವೆಲಿನ್ ಥ್ರೋ ವಿಭಾಗದಲ್ಲಿ ಏಷ್ಯಾಡ್ ಸ್ವರ್ಣ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡ ನೀರಜ್ ಚೋಪ್ರಾ ಈ ಹಾದಿಯಲ್ಲಿ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ದಾಖಲಿಸಿದ್ದಲ್ಲದೆ, ರಾಷ್ಟ್ರೀಯ ದಾಖಲೆಯನ್ನೂ ಬರೆದರು. ಕೇವಲ 1.09 ಮೀಟರ್​ನಿಂದ ನೀರಜ್ ಏಷ್ಯಾಡ್ ದಾಖಲೆ ತಪ್ಪಿಸಿಕೊಂಡರು. ಸೋಮವಾರ ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿದ ಭಾರತದ ಕ್ರೀಡಾಪಟುಗಳು ಐದು ಪದಕ ಗೆದ್ದುಕೊಂಡರು. ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಸ್ವರ್ಣ ಸಾಧನೆ ದಿನದ ಹೈಲೈಟ್ ಎನಿಸಿದರೆ, ಪುರುಷರ 400 ಮೀ ಹರ್ಡಲ್ಸ್​ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ತಮಿಳುನಾಡಿನ ಧಾರುಣ್ ಅಯ್ಯಸ್ವಾಮಿ ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ 3 ಸಾವಿರ ಮೀಟರ್ ಸ್ಟೀಪಲ್​ಚೇಸ್​ನಲ್ಲಿ ಸುಧಾ ಸಿಂಗ್ ಹಾಗೂ ಮಹಿಳೆಯರ ಲಾಂಗ್ ಜಂಪ್​ನಲ್ಲಿ ನೀನಾ ವಾರಕಿಲ್ ರಜತ ಜಯಿಸಿದರು. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಲ್ ಇಂಡಿಯನ್ ಫೈನಲ್ ನಿರೀಕ್ಷೆ ಹುಸಿಯಾಗಿದ್ದು, ಸೆಮಿಫೈನಲ್​ನಲ್ಲಿ ಸೋತ ಸೈನಾ ನೆಹ್ವಾಲ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಪಿವಿ ಸಿಂಧು ಸ್ವರ್ಣ ಗೆಲುವಿನ ಆಸೆ ಜೀವಂತವಿಟ್ಟಿದ್ದಾರೆ.
 20 ವರ್ಷದ ನೀರಜ್ ಚೋಪ್ರಾ ಸ್ಪರ್ಧೆಯ ವೇಳೆ ಎಷ್ಟು ವಿಶ್ವಾಸದಿಂದ ಇದ್ದರೆಂದರೆ, ಅವರ ಮೊದಲ ಥ್ರೋ 83.46 ಮೀಟರ್ ದೂರ ಸಾಗಿತು. ಇದು ಆರು ಥ್ರೋಗಳಲ್ಲಿ ನೀರಜ್ ಎಸೆದ ಅತೀ ಕಡಿಮೆ ಅಂತರವಾಗಿತ್ತು. ವಿಶೇಷವೆಂದರೆ, ಅವರ ಈ ಥ್ರೋ ಸುಲಭವಾಗಿ ಚಿನ್ನದ ಪದಕವನ್ನು ನಿಶ್ಚಿತ ಮಾಡಿತ್ತಾದರೂ, ಉಳಿದ ಥ್ರೋಗಳಲ್ಲೂ ಪ್ರಯತ್ನ ಮುಂದುವರಿಸಿದರು. 2ನೇ ಯತ್ನ ಫೌಲ್ ಆದರೆ, 3ನೇ ಯತ್ನದಲ್ಲಿ ನೀರಜ್ ಎಸೆದ ಜಾವೆಲಿನ್ ಬರೋಬ್ಬರಿ 88.06 ಮೀಟರ್ ದೂರ ಸಾಗಿ ನೆಲಕ್ಕೆ ಕುಕ್ಕಿತು. ಇದು ರಾಷ್ಟ್ರೀಯ ದಾಖಲೆ ಅಲ್ಲದೆ, ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೂ ಆಗಿದೆ. ಇದಕ್ಕೂ ಮುನ್ನ ದೋಹಾದಲ್ಲಿ ನಡೆದ ಐಎಎಎಫ್ ಡೈಮಂಡ್ ಲೀಗ್ ಚರಣದಲ್ಲಿ 4ನೇ ಸ್ಥಾನ ಗಳಿಸಿಕೊಟ್ಟ 87.43 ಮೀಟರ್ ದೂರ ನಿರ್ವಹಣೆ ಅವರ ವೈಯಕ್ತಿಕ ಶ್ರೇಷ್ಠ ಹಾಗೂ ರಾಷ್ಟ್ರೀಯ ದಾಖಲೆಯಾಗಿತ್ತು. ನಂತರದ ಥ್ರೋಗಳಲ್ಲಿ ಕ್ರಮವಾಗಿ 83.25 ಮೀಟರ್, 86.36 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್, ಕೊನೇ ಯತ್ನವನ್ನು ಫೌಲ್ ಮಾಡಿದರು. ಚೀನಾದ ಲಿಯು ಕ್ವಿಜೆನ್ 82.22 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕ ಜಯಿಸಿದರೆ, ಪಾಕಿಸ್ತಾನದ ನದೀಮ್ ಅರ್ಶದ್ 80.75 ಮೀಟರ್ ಸಾಧನೆಯೊಂದಿಗೆ ಕಂಚಿನ ಪದಕ ಜಯಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೊಬ್ಬ ಅಥ್ಲೀಟ್ ಶಿವಪಾಲ್ ಸಿಂಗ್ 74.11 ಮೀಟರ್​ನೊಂದಿಗೆ 8ನೇ ಸ್ಥಾನ ಪಡೆದರು. ಮೊದಲ ಯತ್ನದ ಬಳಿಕ ಶಿವಪಾಲ್ ಸಿಂಗ್ ಭುಜದ ಗಾಯ ಕಾಡಿತು. ಅಂತಿಮ ಯತ್ನದಲ್ಲಿ ಸ್ಪರ್ಧೆ ಮಾಡಿದರೂ, ಅದು ಫೌಲ್ ಆಯಿತು. ಏಷ್ಯಾಡ್​ನಲ್ಲಿ ನೀರಜ್​ಗೆ ಬಹುದೊಡ್ಡ ಸವಾಲು ನೀಡಬಲ್ಲ ಅಥ್ಲೀಟ್ ಆಗಿದ್ದ ಚೀನಾ ತೈಪೆಯ ಚೆಂಗ್ ಚಾವೋ ಸನ್, ಕನಿಷ್ಠ 80 ಮೀಟರ್ ಮಾರ್ಕ್ ದಾಟುವಲ್ಲಿ ವಿಫಲರಾದರು.
 ನೀರಜ್ ಚೋಪ್ರಾ ಮೈಲಿಗಲ್ಲು
# ಜಾವೆಲಿನ್ ಥ್ರೋ ವಿಭಾಗದಲ್ಲಿ ಸ್ವರ್ಣ ಗೆದ್ದ ದೇಶದ ಮೊದಲ ಅಥ್ಲೀಟ್
# ಹಾಲಿ ವರ್ಷ ಏಷ್ಯಾದ ಅಗ್ರ 6 ಥ್ರೋಗಳು ನೀರಜ್ ಹೆಸರಲ್ಲಿದೆ
# ಹಾಲಿ ವರ್ಷ ನೀರಜ್ ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಜಯಿಸಿದ್ದಾರೆ
# ಏಷ್ಯಾಡ್​ನ ನೀರಜ್​ನ ನಾಲ್ಕೂ ಥ್ರೋಗಳಿಗೆ ಅಗ್ರ 4 ಸ್ಥಾನ
2 ಹಾಲಿ ಏಷ್ಯಾಡ್​ನ ಅಥ್ಲೆಟಿಕ್ಸ್ ನಲ್ಲಿ ಭಾರತ 2 ಸ್ವರ್ಣ ಸಾಧನೆ ಮಾಡಿದ್ದು, 2014ರ ಸಾಧನೆ ಸರಿಗಟ್ಟಿದೆ. 1982ರಲ್ಲಿ 3 ಸ್ವರ್ಣ ಮಾಡಿದ್ದು ಶ್ರೇಷ್ಠ ಸಾಧನೆ.
3 ಏಷ್ಯಾಡ್​ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತ ಗೆದ್ದ 3ನೇ ಪದಕ ಹಾಗೂ ಮೊದಲ ಸ್ವರ್ಣ ಇದು. 1951ರ ಗೇಮ್ಸ್​ನಲ್ಲಿ ಬೆಳ್ಳಿ ಹಾಗೂ 1982ರ ಗೇಮ್ಸ್​ನಲ್ಲಿ ಕಂಚಿನ ಪದಕ ಜಯಿಸಿತ್ತು.
ಪದಕ ಅಟಲ್​ಜೀಗೆ ಅರ್ಪಣೆ!
ಐತಿಹಾಸಿಕ ಪದಕ ಗೆದ್ದ ಬೆನ್ನಲ್ಲಿಯೆ ಪ್ರತಿಕ್ರಿಯೆ ನೀಡಿದ ನೀರಜ್ ಚೋಪ್ರಾ, ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸ್ವರ್ಣ ಪದಕವನ್ನು ಅರ್ಪಿಸುವುದಾಗಿ ತಿಳಿಸಿದರು. ‘ಸ್ಪರ್ಧೆ ಅಮೋಘವಾಗಿತ್ತು. ಹಲವು ತಿಂಗಳುಗಳಿಂದ ಈ ಕೂಟಕ್ಕಾಗಿ ವಿಶೇಷ ಸಿದ್ಧತೆ ನಡೆಸಿದ್ದೆ. ಸ್ವರ್ಣ ಪದಕ ಮಾತ್ರವೇ ನನ್ನ ಗುರಿಯಾಗಿತ್ತು. ಶ್ರೇಷ್ಠ ವ್ಯಕ್ತಿ ಅಟಲ್​ಜೀ ಅವರಿಗೆ ನಾನು ಈ ಪದಕವನ್ನು ಅರ್ಪಿಸುತ್ತೇನೆ’ ಎಂದು ಏಷ್ಯಾಡ್​ನ ಆರಂಭೋತ್ಸವದಲ್ಲಿ ಭಾರತದ ಧ್ವಜಧಾರಿಯಾಗಿದ್ದ ನೀರಜ್ ಚೋಪ್ರಾ ಹೇಳಿದರು.
60 ವರ್ಷಗಳ ಬಳಿಕ ಸ್ವರ್ಣ
ಒಂದೇ ವರ್ಷದಲ್ಲಿ ಬರುವ ಕಾಮನ್ವೆಲ್ತ್ ಗೇಮ್್ಸ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಸ್ವರ್ಣ ಸಾಧನೆ ಮಾಡಿದ ಭಾರತದ 2ನೇ ಅಥ್ಲೀಟ್ ನೀರಜ್ ಚೋಪ್ರಾ. 60 ವರ್ಷಗಳ ಹಿಂದೆ ಮಿಲ್ಕಾ ಸಿಂಗ್, 1958ರ ಕಾಮನ್ವೆಲ್ತ್ ಗೇಮ್್ಸ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಸ್ವರ್ಣ ಸಾಧನೆ ಮಾಡಿದ್ದರು. ಈಗ ನೀರಜ್ ಕೂಡ ಇದೇ ಸಾಧನೆ ಮಾಡಿದ್ದಾರೆ.
ರಾಜ್ಯದ ಚೇತನ್​ಗೆ ನಿರಾಸೆ
ಪುರುಷರ ಹೈ ಜಂಪ್ ವಿಭಾಗದಲ್ಲಿ ಕರ್ನಾಟಕದ ಚೇತನ್ ಬಾಲಸುಬ್ರಮಣ್ಯ ನಿರಾಸೆ ಎದುರಿಸಿದರು. 13 ಮಂದಿಯ ಫೈನಲ್​ನಲ್ಲಿ 2.20 ಮೀಟರ್ ಎತ್ತರ ಜಿಗಿದ ಚೇತನ್ 8ನೇ ಸ್ಥಾನ ಪಡೆದುಕೊಂಡರು. 2.30 ಮೀ. ಎತ್ತರ ಜಿಗಿದ ಚೀನಾದ ವಾಂಗ್ ಯು ಚಿನ್ನದ ಪದಕ ಜಯಿಸಿದರು.
ಸ್ವರ್ಣ ಸುತ್ತಿಗೆ ಪಿವಿ ಸಿಂಧು ಕಂಚಿಗೆ ತೃಪ್ತಿಪಟ್ಟ ಸೈನಾ
 ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಷಟ್ಲರ್ ಪಿವಿ ಸಿಂಧು ಏಷ್ಯನ್ ಗೇಮ್್ಸ ಸ್ವರ್ಣ ಪದಕದ ಸುತ್ತಿನಲ್ಲಿ ಸವಾಲನ್ನು ಜೀವಂತ ಉಳಿಸಿಕೊಂಡಿದ್ದಾರೆ. ತನ್ಮೂಲಕ ಅವರು ಐತಿಹಾಸಿಕ ಸಾಧನೆಗೆ ಸನ್ನದ್ಧರಾಗಿದ್ದಾರೆ. ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಸೆಮಿಫೈನಲ್​ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಸೋಮವಾರ ನಡೆದ ಏಷ್ಯಾಡ್ ಬ್ಯಾಡ್ಮಿಂಟನ್​ನ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಸವಾಲು ಗೆದ್ದ ಸಿಂಧು ಫೈನಲ್​ಗೇರಿದರೆ, ಸೈನಾ 17-21, 14-21 ರಿಂದ ವಿಶ್ವ ನಂ.1 ಆಟಗಾರ್ತಿ ಚೀನಾ ತೈಪೆಯ ತೈ ಜು ಯಿಂಗ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು. ವಿಶ್ವ ನಂ.3 ಸಿಂಧು 21-17, 15-21, 21-10ರಿಂದ ಮಾಜಿ ವಿಶ್ವ ಚಾಂಪಿಯನ್ ಜಪಾನ್​ನ ಅಕಾನೆ ಎಮಗುಚಿಯನ್ನು ಸೋಲಿಸಿದರು. ಏಷ್ಯಾಡ್ ಬ್ಯಾಡ್ಮಿಂಟನ್​ನ ಮಹಿಳಾ ಸಿಂಗಲ್ಸ್​ನಲ್ಲಿ ಭಾರತ ಈವರೆಗೂ ಪದಕ ಸಾಧನೆ ಮಾಡಿರಲಿಲ್ಲ. ಆದರೆ, ಹಾಲಿ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ್ದು, ಸಿಂಧು ಮೂಲಕ ಐತಿಹಾಸಿಕ ಸ್ವರ್ಣವನ್ನು ನಿರೀಕ್ಷಿಸುತ್ತಿದೆ. 1982ರ ಏಷ್ಯಾಡ್​ನಲ್ಲಿ ಸಯ್ಯದ್ ಮೋದಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಬಂದಿರಲಿಲ್ಲ.
ತ್ರಿವಳಿ ರಜತ ಗೆದ್ದ ಅಥ್ಲೀಟ್ಸ್
  
ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ದಿನದ ಮೊದಲ ಪದಕ ಗೆದ್ದುಕೊಟ್ಟವರು ಧಾರುಣ್ ಅಯ್ಯಸ್ವಾಮಿ. 400 ಮೀ ಹರ್ಡಲ್ಸ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಧಾರುಣ್ 48.96 ಸೆಕೆಂಡ್​ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಇದಕ್ಕೂ ಮುನ್ನ ಮಾರ್ಚ್​ನಲ್ಲಿ ನಡೆದ ಫೆಡರೇಷನ್ ಕಪ್​ನಲ್ಲಿ ಧಾರುಣ್ 49.45 ಸೆಕೆಂಡ್​ನಲ್ಲಿ ಗುರಿ ತಲುಪಿದ್ದು, ಅವರ ವೈಯಕ್ತಿಕ ಶ್ರೇಷ್ಠ ಹಾಗೂ ರಾಷ್ಟ್ರೀಯ ದಾಖಲೆಯಾಗಿತ್ತು. 47.66 ಸೆಕೆಂಡ್​ನಲ್ಲಿ ಗುರಿ ಮುಟ್ಟಿದ ಕತಾರ್ ಸಾಂಬಾ ಅಬ್ದೆರ್​ರೆಹಮಾನ್ ಚಿನ್ನ ಗೆದ್ದುಕೊಂಡರೆ, ಜಪಾನ್​ನ ಅಬೆ ತಕ್ತೋಷಿ 49.12 ಸೆಕೆಂಡ್​ನೊಂದಿಗೆ ಕಂಚು ಜಯಿಸಿದರು. 300 ಮೀಟರ್ ಮಾರ್ಕ್​ವರೆಗೂ 4ನೇ ಸ್ಥಾನದಲ್ಲಿದ್ದ 21 ವರ್ಷದ ಧಾರುಣ್, ಕೊನೇ 100 ಮೀಟರ್​ನಲ್ಲಿ ಇಬ್ಬರು ಸ್ಪರ್ಧಿಗಳನ್ನು ಹಿಂದೆ ಹಾಕಿ ಪದಕ ಜಯಿಸಿದರು. ಇದು, 2010ರ ಬಳಿಕ ಭಾರತ ಈ ವಿಭಾಗದಲ್ಲಿ ಗೆದ್ದ ಮೊದಲ ಪದಕವಾಗಿದೆ. ಅಂದು ಜೋಸೆಫ್ ಅಬ್ರಾಹಂ ಸ್ವರ್ಣ ಪದಕ ಗೆದ್ದಿದ್ದರು. ಆ ಬಳಿಕ ನಡೆದ
  
ಮಹಿಳೆಯರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಅನುಭವಿ ಸುಧಾ ಸಿಂಗ್ 9 ನಿಮಿಷ 40.03 ಸೆಕೆಂಡ್​ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ‘ವಯಸ್ಸಾಗಿರುವ ನನಗೆ ಪದಕ ಗೆಲ್ಲುವ ಶಕ್ತಿ ಇಲ್ಲ ಎಂದು ಹೇಳುತ್ತಿದ್ದ ವ್ಯಕ್ತಿಗಳಿಗೆ ಉತ್ತರ ನೀಡಿದ್ದೇನೆ. ಪದಕ ಗೆದ್ದಿದ್ದಕ್ಕೆ ಸಂಭ್ರಮವಾಗಿದೆ. ಇದಕ್ಕಾಗಿ ಮೊದಲು ಕೋಚ್​ಗೆ ಧನ್ಯವಾದ ಹೇಳುತ್ತೇನೆ’ ಎಂದು 32 ವರ್ಷದ ಸುಧಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ. 2010ರ ಗೇಮ್ಸ್​ನಲ್ಲಿ ಸುಧಾ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
ಅಂಜು ಸ್ಥಾನ ತುಂಬಿದ ನೀನಾ
  
ಭಾರತದ ಖ್ಯಾತ ಲಾಂಗ್ ಜಂಪ್ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಬಳಿಕ, ಮಹಿಳೆಯರ ಲಾಂಗ್​ಜಂಪ್​ನಲ್ಲಿ ಕನಿಷ್ಠ ಏಷ್ಯಾದಲ್ಲೂ ಪದಕ ಗೆಲ್ಲುವಲ್ಲಿ ವಿಫಲವಾಗುತ್ತಿದ್ದ ಭಾರತಕ್ಕೆ ನೀನಾ ವಾರಕಿಲ್ ಉತ್ತರ ನೀಡಿದ್ದಾರೆ. 27 ವರ್ಷದ ಕೇರಳ ಅಥ್ಲೀಟ್ ನೀನಾ ಬೆಳ್ಳಿ ಗೆಲ್ಲುವ ಮೂಲಕ 2006ರ ಬಳಿಕ ಏಷ್ಯಾಡ್ ಲಾಂಗ್​ಜಂಪ್​ನಲ್ಲಿ ಪದಕ ಗೆದ್ದ ಭಾರತದ ಅಥ್ಲೀಟ್ ಎನಿಸಿದ್ದಾರೆ. ಅಂಜು ಬಾಬಿ ಜಾರ್ಜ್ ಅಂದು ಬೆಳ್ಳಿ ಪದಕ ಜಯಿಸಿದ್ದರು. ನಾಲ್ಕನೇ ಯತ್ನದಲ್ಲಿ 6.51 ಮೀ. ದೂರ ಜಿಗಿದ ನೀನಾ 2ನೇ ಸ್ಥಾನ ಪಡೆದರು. 6.55 ಮೀಟರ್ ದೂರ ಜಿಗಿದ ವಿಯೆಟ್ನಾಂನ ಬುಯ್ ಥಿ ಥು ಥಾವೋ ಸ್ವರ್ಣ ಪದಕ ಗೆದ್ದುಕೊಂಡರು. ಆದರೆ, ಇದು ನೀನಾರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಗಿಂತ ಬಹಳ ಕಡಿಮೆ. ಎರಡು ವರ್ಷಗಳ ಹಿಂದೆ ನೀನಾ 6.66 ಮೀಟರ್ ದೂರ ಜಿಗಿದಿದ್ದು ಅವರ ದಾಖಲೆ. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಯನಾ ಜೇಮ್್ಸ 10ನೇ ಸ್ಥಾನ ಪಡೆದರು.
ಟೇಬಲ್ ಟೆನಿಸ್​ನಲ್ಲಿ ಇತಿಹಾಸ
 ಭಾರತ ತಂಡ ಇದೇ ಮೊದಲ ಬಾರಿಗೆ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಏಷ್ಯಾಡ್ ಪದಕ ಪಡೆಯಲಿದೆ. ಪುರುಷರ ತಂಡ ವಿಭಾಗದಲ್ಲಿ ಭಾರತ ತಂಡ ವಿಶ್ವ ನಂ.3 ಜಪಾನ್ ತಂಡವನ್ನು ಅಚ್ಚರಿಯ ರೀತಿಯಲ್ಲಿ 3-1 ರಿಂದ ಮಣಿಸುವ ಮೂಲಕ ಸೆಮಿಫೈನಲ್​ಗೇರಿದ್ದು ಪದಕವನ್ನು ಖಚಿತಪಡಿಸಿ ಕೊಂಡಿದೆ. 2010 ಹಾಗೂ 2014ರ ಏಷ್ಯಾಡ್​ನ ತಂಡ ವಿಭಾಗದಲ್ಲಿ ಜಪಾನ್ ಕಂಚಿನ ಪದಕ ಜಯಿಸಿತ್ತು. ಇನ್ನು ಭಾರತ ತಂಡ ಏಷ್ಯಾಡ್​ನ ಟೇಬಲ್ ಟೆನಿಸ್​ನ ಯಾವುದೇ ವಿಭಾಗದಲ್ಲಿ ಸಂಪಾದಿಸಲಿರುವ ಮೊದಲ ಪದಕ ಇದಾಗಿರಲಿದೆ. ಭಾರತದ ಮಹಿಳಾ ತಂಡ ಕ್ವಾರ್ಟರ್​ಫೈನಲ್​ನಲ್ಲಿ ಎಡವಿದೆ.
ಉಪಾಂತ್ಯಕ್ಕೇರಿದ ಮಹಿಳಾ ತಂಡ
ಜಕಾರ್ತ: ನಾಯಕಿ ರಾಣಿ ರಾಮ್ಾಲ್ (37, 46, 56ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನೊಂದಿಗೆ ಭಾರತ ಮಹಿಳಾ ಹಾಕಿ
  
ತಂಡ ಏಷ್ಯಾಡ್​ನಲ್ಲಿ ಥಾಯ್ಲೆಂಡ್ ತಂಡವನ್ನು 5-0ಯಿಂದ ಸೋಲಿಸಿದೆ. ಇದರೊಂದಿಗೆ ಸತತ 4ನೇ ಗೆಲುವು ಕಂಡ ಭಾರತ ಸೆಮಿಫೈನಲ್​ಗೆ ಸುಲಭವಾಗಿ ಲಗ್ಗೆಯಿಟ್ಟಿದೆ. ಬಿ ಗುಂಪಿನಲ್ಲಿ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಜಯಿಸುವ ಮೂಲಕ ಭಾರತ ಒಟ್ಟು 12 ಅಂಕ ಸಂಂಪಾದಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತಕ್ಕೆ ಮೊದಲ ಎರಡೂ ಕ್ವಾರ್ಟರ್ ಅವಧಿಯಲ್ಲಿ ಥಾಯ್ಲೆಂಡ್ ಬಲಿಷ್ಠ ಪ್ರತಿರೋಧ ನೀಡಿತು. ಇದರಿಂದ ಭಾರತಕ್ಕೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಭಾರತದ ಕೆಲವು ಪೆನಾಲ್ಟಿ ಕಾರ್ನರ್ ಅವಕಾಶಗಳಿಗೆ ಥಾಯ್ಲೆಂಡ್ ಗೋಲ್ ಕೀಪರ್ ತಡೆ ಹೇರಿದರು. ಆದರೆ 3ನೇ ಕ್ವಾರ್ಟರ್​ನಲ್ಲಿ ಗಂಭೀರವಾದ ಆಟಗಾರ್ತಿಯರು ಲಯಕ್ಕೆ ಮರಳಿದರು. 37ನೇ ನಿಮಿಷದಲ್ಲಿ ರಾಣಿ ಮೊದಲ ಗೋಲಿನ ಖಾತೆ ತೆರೆದರು. ಇವರೊಂದಿಗೆ ಅಂತಿಮವಾಗಿ ಮೋನಿಕಾ(52) ಹಾಗೂ ನವಜೋತ್ ಕೌರ್(55) ಕೂಡ ಗೋಲು ದಾಖಲಿಸಿ ಗೆಲುವಿನಲ್ಲಿ ಕೈ ಜೋಡಿಸಿದರು.
ವಾಲಿಬಾಲ್​ನಲ್ಲಿ ಸೋಲು, ಸೆಪಾಕ್ ಟಕ್ರಾದಲ್ಲಿ ಗೆಲುವು
  
ಭಾರತದ ಮಹಿಳಾ ತಂಡ ಏಷ್ಯಾಡ್ ವಾಲಿಬಾಲ್​ನಲ್ಲಿ ಚೀನಾ ವಿರುದ್ಧ 0-3ರಿಂದ ಸೋಲುವುದರೊಂದಿಗೆ ಸವಾಲು ಮುಗಿಸಿದೆ. 67 ನಿಮಿಷಗಳ ಹೋರಾಟದಲ್ಲಿ ಭಾರತ 18-25, 19-25, 9-25ರಿಂದ ಚೀನಾಗೆ ಶರಣಾಯಿತು. ಭಾರತ ಪುರುಷರ ತಂಡ 7ರಿಂದ 12ರೊಳಗಿನ ಸ್ಥಾನಕ್ಕಾಗಿ ನಡೆಯಲಿರುವ ಕ್ವಾರ್ಟರ್​ಫೈನಲ್ಸ್​ನಲ್ಲಿ ಹಾಂಕಾಂಗ್ ಮತ್ತು ಮಾಲ್ಡೀವ್ಸ್ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಈಗಾಗಲೆ ಏಷ್ಯಾಡ್ ಸವಾಲು ಮುಗಿಸಿರುವ ಭಾರತ ಪುರುಷರ ಸೆಪಾಕ್ ಟಕ್ರಾ ತಂಡ ಗೆಲುವಿನೊಂದಿಗೆ ಹೊರನಡೆದಿದೆ. ಬಿ ಗುಂಪಿನ ಕೊನೇ ಪಂದ್ಯದಲ್ಲಿ ಭಾರತ 2-0ಯಿಂದ ನೇಪಾಳ ತಂಡವನ್ನು ಸೋಲಿಸಿತು. ಭಾರತದ ಪರವಾಗಿ ರೂಪೇಶ್ ಸುನಾರ್, ದೀಪೇಶ್, ಗೋವಿಂದ ಮಾಗರ್, ಸಂಜೀತ್ ಧಿಮಾಲ್ ಮತ್ತು ರಬಿಲ್ ಭಟ್ಟರೈ ಮಿಂಚಿದರು. ಭಾರತದ ಸೈಕ್ಲಿಸ್ಟ್​ಗಳು ಏಷ್ಯಾಡ್​ನಲ್ಲಿ ನೀರಸ ಆರಂಭ ಕಂಡಿದ್ದಾರೆ. ಪುರುಷರ ಹಾಗೂ ಮಹಿಲಾ ಸ್ಪಿ್ರಟ್ ಮತ್ತು ಪರ್ಸ್ಯೂಟ್ ಟೀಮ್ ಅರ್ಹತಾ ಸುತ್ತಿನಲ್ಲಿ ಸೋಲುವ ಮೂಲಕ ಫೈನಲ್​ಗೇರಲು ವಿಫಲಗೊಂಡಿತು.
ಕ್ವಾರ್ಟರ್​ಫೈನಲ್​ಗೆ ವಿಕಾಸ್, ಅಮಿತ್, ಧೀರಜ್
ಸತತ ಮೂರನೇ ಏಷ್ಯಾಡ್ ಪದಕ ನಿರೀಕ್ಷೆಯಲ್ಲಿರುವ ಭಾರತದ ಸ್ಟಾರ್ ಬಾಕ್ಸರ್ ವಿಕಾಸ್ ಕೃಷ್ಣನ್, ಅಮಿತ್ ಪಾಂಗಲ್ ಮತ್ತು ಧೀರಜ್ ಕ್ವಾರ್ಟರ್​ಫೈನಲ್ ಪ್ರವೇಶಿಸಿದ್ದಾರೆ. ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತ ವಿಕಾಸ್ 75 ಕೆ.ಜಿ ವಿಭಾಗದ 16ರ ಘಟ್ಟದ ಮುಖಾಮುಖಿಯಲ್ಲಿ ಪಾಕಿಸ್ತಾನದ ತನ್ವೀರ್ ಅಹ್ಮದ್​ಗೆ ಬಲಿಷ್ಠ ಪಂಚ್ ನೀಡಿ ಜಯಿಸಿದರು. ವಿಕಾಸ್ ಮುಂದಿನ ಪಂದ್ಯವನ್ನು ಗೆದ್ದರೆ ಕನಿಷ್ಠ ಕಂಚು ಖಚಿತಪಡಿಸಿಕೊಳ್ಳುವುದಲ್ಲದೆ ಏಷ್ಯಾಡ್​ನಲ್ಲಿ ಹ್ಯಾಟ್ರಿಕ್ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಎನಿಸಿಕೊಳ್ಳಲಿದ್ದಾರೆ. ಅವರು 2010ರ ಏಷ್ಯಾಡ್​ನಲ್ಲಿ ಸ್ವರ್ಣ ಜಯಿಸಿದ್ದರೆ, 2014ರ ಏಷ್ಯನ್ ಗೇಮ್ಸ್​ನಲ್ಲಿ ಕಂಚು ಪದಕ ಗೆದ್ದಿದ್ದರು. 49 ಕೆಜಿ ವಿಭಾಗದಲ್ಲಿ ಅಮಿತ್ ಪಾಂಗಲ್ ಮಂಗೋಲಿಯಾದ ಎಂಕ್ಮಂಡಖ್ ಖಾರು ವಿರುದ್ಧ ಜಯಿಸಿದರು. ಧೀರಜ್ 64 ಕೆಜಿ ವಿಭಾಗದಲ್ಲಿ ರ್ಕಿಗಿಸ್ತಾನದ ಕೊಬಶೇವ್ ನುರ್ಲಾನ್ ವಿರುದ್ಧ ಜಯ ದಾಖಲಿಸಿದರು. 56 ಕೆಜಿ ವಿಭಾಗದಲ್ಲಿ ಭಾರತದ ಮೊಹಮದ್ ಹುಸೇನುದ್ದೀನ್ ಸೋಲು ಅನುಭವಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....