ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಕೊಡಗಲ್ಲಿ ಏನಾಗಬೇಕು?

|ಕೇಶವ ಎಸ್​. ಕೊರ್ಸೆ
ಆಗಬಾರದ ದುರಂತ ಕೊಡಗಿನಲ್ಲಿ ಘಟಿಸಿದೆ. ಕುಸಿದ ಗುಡ್ಡಗಳು ಹಾಗೂ ಪ್ರವಾಹ ತುಂಬಿದ ಕಣಿವೆಗಳ ನಡುವೆ ಜನರ ಬದುಕು ಛಿದ್ರವಾಗಿದೆ. ಒಮ್ಮೆಲೆ ಇಂಥ ದುರಂತವಾದರೂ ಏಕೆ ಘಟಿಸಿತು? ಈ ಪ್ರಶ್ನೆಗೆ ಉತ್ತರಗಳನ್ನು ತಜ್ಞರ ಮೂಲಕ ಅಧ್ಯಯನಮಾಡಿಸಿ ಪಡೆಯುವುದಾಗಿ ಸಿಎಂ ಹೇಳಿದ್ದಾರೆ, ಸ್ವಾಗತಾರ್ಹ.
ಆದರೆ, ಈ ಅವಘಡಗಳಿಗೆ ಕಾರಣ ಹುಡುಕಲು ಕ್ಲಿಷ್ಟವಾದ ತಂತ್ರಜ್ಞಾನವೇ ಬೇಕೆಂದೇನೂ ತೋರುವುದಿಲ್ಲ. ಇಲ್ಲಿನ ನೆಲದ ರಚನೆ ಹಾಗೂ ಜಲದ ಹರಿವನ್ನು ಹತ್ತಿರದಿಂದ ಗಮನಿಸುವ ವಿವೇಕ ಮೂಡಿದರೆ ಸಾಕೆನಿಸುತ್ತದೆ. ಕೊಡಗಿನಲ್ಲಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ನಡೆದ ದೊಡ್ಡ ಸ್ಥಿತ್ಯಂತರವೆಂದರೆ ವ್ಯಾಪಕವಾದ ಅರಣ್ಯನಾಶ ಮತ್ತು ಅತಿಕ್ರಮಣ. ಇದರಲ್ಲಿ ಕೇರಳದ ದಿಕ್ಕಿನಿಂದ ಬಂದ ವಲಸಿಗರ ಪಾತ್ರ ಹೆಚ್ಚಿರುವುದನ್ನು ಒಪ್ಪಿಕೊಳ್ಳಬೇಕು. ಕಾಡನ್ನು ಸವರಿ, ಶುಂಠಿ ಹಾಗೂ ರಬ್ಬರ್ ಬೆಳೆಯುವ ಪರಿಪಾಠ ಎಲ್ಲೆಡೆ ಹಬ್ಬಿತು. ಹಾಡುಹಗಲೇ ಪ್ರತಿಹಳ್ಳಿಯಲ್ಲೂ ಗಗನದೆತ್ತರದ ಮರಗಳನ್ನು ಕಡಿದು ಅತಿಕ್ರಮಿಸುವುದನ್ನು ಕೊಡಗಿನ ಜನ ನೋಡಿದ್ದಾರೆ. ಭಾರಿ ಸದ್ದು ಮಾಡುವ ನೆಲಕೊರೆಯುವ ಯಂತ್ರಗಳು ಗುಡ್ಡಗಳನ್ನು ಎಲ್ಲಿ ಬೇಕಾದರಲ್ಲಿ ಕೊರೆಯುವ, ಕಣಿವೆಗಳನ್ನು ಬೇಕಾದಹಾಗೆ ಹುಗಿಯುವ ಚಿತ್ರಗಳನ್ನು ಸಂಶೋಧಕರು ದಾಖಲಿಸಿದ್ದಾರೆ. ಆದರೆ, ಆಡಳಿತಶಾಹಿ ಮಾತ್ರ ಇದನ್ನು ನಿಲ್ಲಿಸುವ ಪ್ರಯತ್ನಮಾಡಲಿಲ್ಲ, ಈ ಕುರಿತು ಧ್ವನಿ ಎತ್ತಿದವರ ಕಾಳಜಿ ಅರ್ಥಮಾಡಿಕೊಳ್ಳಲಿಲ್ಲ. ಅತಿಕ್ರಮಿಸಿದವರನ್ನು ಓಟಿಗಾಗಿ ಓಲೈಸುವುದು ಮುಖ್ಯವಾಯಿತೇ ಹೊರತು, ದೀರ್ಘಕಾಲೀನ ಪರಿಸರ ಸುಸ್ಥಿರತೆಯಲ್ಲ!
ಕಾಡಿನ ಹಸಿರುಕವಚ ಹಾಗೂ ಅದು ಮೇಲ್ಮೈಮಣ್ಣಿನಡಿಯಲ್ಲಿ ಸೃಷ್ಟಿಸಿದ್ದ ಬೇರಿನಬಲೆ ಮಾಯವಾದಂತೆಲ್ಲ, ಸಡಿಲ ಜಂಬಿಟ್ಟಿಗೆ ಮಣ್ಣಿಂದ ಆವೃತವಾಗಿರುವ ಇಲ್ಲಿನ ಗುಡ್ಡಗಳು ಒಮ್ಮೆಲೆ ಬಂದ ಮಳೆನೀರನ್ನು ಹಿಡಿದಿಡಲು ಸೋತು, ಬಿರಿಯುತ್ತಿವೆ. ಬಿರಿದ ಮಣ್ಣಿನಗುಡ್ಡ ಕಣಿವೆಗೆ ಜರಿದು ಪ್ರವಾಹವನ್ನು ಸೃಷ್ಟಿಸುತ್ತಿದೆ! ‘ನೀವಾದರೂ ನೋಡಬೇಕಿತ್ತಲ್ಲ?’ ಎಂದು ಅರಣ್ಯ ಇಲಾಖೆಯವರನ್ನು ಕೇಳಿದರೆ, ‘ಏನ್ಮಾಡೊದು ಸಾರ್, ಇಲ್ಲಿರುವ ಬಹುಪಾಲು ಅರಣ್ಯ ಸರ್ಕಾರಿ ರೆವಿನ್ಯೂ ಭೂಮಿಯಲ್ಲಿದೆ. ಈ ಡೀಮ್ಡ್ ಅರಣ್ಯವನ್ನು ರಕ್ಷಿಸಲು ಕಂದಾಯ ಇಲಾಖೆ ಮನಸ್ಸು ಮಾಡಿದರೆ ಮಾತ್ರ ಸಾಧ್ಯ’ ಎಂದು ಉತ್ತರಿಸುತ್ತಾರೆ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ವಿಸ್ತಾರವಾದ ಬಾಣೆ, ಜುಮ್ಮಾ, ಬನ, ಕಾನು ಇತ್ಯಾದಿ ಕಾಡಿನ ಪ್ರದೇಶ ಒತ್ತುವರಿಗೆ ಅರಣ್ಯ ಇಲಾಖೆಯ ಹಂಗಿಲ್ಲದಿರುವುದು ಅತಿಕ್ರಮಣದಾರರಿಗೆ ಇನ್ನಷ್ಟು ಸುಲಭವಾಯಿತು. ಪರಂಪರಾನುಗತವಾಗಿ ಇಲ್ಲಿರುವ ಮೂಲ ಅರಣ್ಯನಿವಾಸಿಗಳು ಬದುಕು ಸಾಗಿಸಲು ಅವಶ್ಯವಿರುವ ಮೂರ್ನಾಲ್ಕು ಎಕರೆ ಕೃಷಿಭೂಮಿ ದೊರಕಿಸಿಕೊಳ್ಳಲೂ ಒದ್ದಾಡುತ್ತಿರುವಾಗ, ಬಲಾಢ್ಯ ವಲಸಿಗರು ನೂರಾರು ಎಕರೆ ಅರಣ್ಯವನ್ನು ಸುಲಭವಾಗಿ ಅತಿಕ್ರಮಿಸಲು ಸಾಧ್ಯವಾದದ್ದು ಪ್ರಜಾಪ್ರಭುತ್ವದ ವಿಪರ್ಯಾಸ. ಈ ಸಮಾಜ-ಆರ್ಥಿಕ-ರಾಜಕೀಯ ಪರಿಸ್ಥಿತಿಯೇ ಈ ಪರಿಯ ಅರಣ್ಯನಾಶ ಮತ್ತು ಭೂನಾಶಕ್ಕೆ ಕಾರಣ.
ಮಲೆನಾಡಿನ ಉಳಿದ ಗಂಭೀರ ಸಮಸ್ಯೆಗಳೂ ಇಲ್ಲಿವೆ. ಕಣಿವೆಯ ತಪ್ಪಲುಗಳಲ್ಲಿ ಕ್ವಾರಿಗಳು, ನದಿ ತಪ್ಪಲಿನಲ್ಲಿ ಅನುಮತಿರಹಿತ ಮರಳು ಗಣಿಗಾರಿಕೆ, ಎಲ್ಲೆಂದರಲ್ಲಿ ಕಾಡುಸವರಿ ಮಾಡಿದ ರೆಸಾರ್ಟ್​ಗಳು, ಯರಾ›ಬಿರ್ರಿಯಾಗಿ ಕಟ್ಟಿದ ವಾಣಿಜ್ಯ ಕಟ್ಟಡಗಳು! ವೇಗವಾಗಿ ಬೆಳೆಸಿದ ಏಕಪ್ರಭೇದದ ನೆಡುತೋಪುಗಳು… ಎಲ್ಲ.
ಕೊಡಗಿನ ಗುಡ್ಡ-ಕಣಿವೆಯೆಲ್ಲೆಡೆ ನೆಲಬಳಕೆ ಕುರಿತಾದ ಯಾವ ಕನಿಷ್ಠ ಸೂತ್ರವೂ ಇಲ್ಲದೆ ಇತ್ತೀಚಿನ ದಶಕಗಳಲ್ಲಿ ನಡೆದ ಈ ವೇಗದ ಅಭಿವದ್ಧಿಯೇ ಈ ಎಲ್ಲ ಅವಘಡಗಳಿಗೆ ಕಾರಣ.
ಪರಿಹಾರವೇನು?: ಇದೀಗ ಕೊಡಗಿಗೆ ಅವಶ್ಯವಿರುವುದು ಇರುವ ನೆಲವನ್ನು ಸೂಕ್ತವಾಗಿ ಬಳಸುವ ವೈಜ್ಞಾನಿಕ ಮತ್ತು ಪಾರದರ್ಶಕ ಭೂಬಳಕೆ ನೀತಿ. ಉಳಿದ ಕಾಡು ಹಾಗೂ ಜಲಮೂಲಗಳನ್ನು ರಕ್ಷಿಸುತ್ತಲೇ, ನಾಗರಿಕ ಸೌಕರ್ಯ ಒದಗಿಸಲು ಆಗ ಸಾಧ್ಯ. ಹಳ್ಳಿ ಅಥವಾ ಪೇಟೆ- ಎಲ್ಲೇ ಇರಲಿ, ಭೂಬಳಕೆ ನೀತಿಯೊಂದರ ಆಧಾರದಲ್ಲಿಯೇ ಮುಂದಿನ ಅಭಿವೃದ್ಧಿ ರೂಪಿತವಾಗಬೇಕು. ಯಾವ ಜಾಗದಲ್ಲಿ ಅರಣ್ಯವಿರಲೇಬೇಕು, ಎಲ್ಲಿ ಮನೆ-ಊರು ವಿಸ್ತರಿಸಬಹುದು, ಎಲ್ಲಿ ಗುಡ್ಡವನ್ನು ಕತ್ತರಿಸಲೇಬಾರದು-ಇತ್ಯಾದಿ ತೀರ್ವನಗಳನ್ನು ದೀರ್ಘಕಾಲೀನ ಭೂಬಳಕೆ ನೀತಿಯ ಆಧಾರದಲ್ಲಿ ಮಾತ್ರ ಕೈಗೊಳ್ಳುವಂತಾಗಬೇಕು. ಪಶ್ಚಿಮಘಟ್ಟ ಶ್ರೇಣಿಯ ನೆಲ-ಜಲ-ಕಾಡಿನ ಪಾರಿಸಾರಿಕ ರಚನೆಗಳನ್ನು ಪುರಸ್ಕರಿಸಿ, ಈ ಬಗೆಯ ನೀತಿಯನ್ನು ನಗರಾಭಿವದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ರೂಪಿಸಬೇಕಿದೆ. ಜಿಲ್ಲ್ಲಾಪಂಚಾಯತ ರೂಪಿಸಬೇಕಾದ ಅಭಿವೃದ್ಧಿ ಯೋಜನೆಯಲ್ಲಿ ಇವು ಸೇರಬೇಕಿದೆ. ವಿಸ್ತಾರವಾದ ಡೀಮ್ಡ್ ಅರಣ್ಯವನ್ನು ಅತಿಕ್ರಮಣದಿಂದ ರಕ್ಷಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಕಾರ್ಯಕ್ರಮ ರೂಪಿಸಬೇಕಿದೆ.
ಇದರ ಜೊತೆಗೆ, ಕೊಡಗಿಗೀಗ ಬೇಕಾದ್ದು ನೈಸರ್ಗಿಕ ಸಂಪನನ್ಮೂಲಗಳನ್ನು ಸುಸ್ಥಿರವಾಗಿ ಬಳಸುವ ಆರ್ಥಿಕತೆ. ಹುಲಿಯ ರಕ್ಷಿತಾರಣ್ಯ, ಆನೆಯ ಕಾರಿಡಾರ್ ಅಭಿವೃದ್ಧಿ ಇತ್ಯಾದಿ ಯೋಜನೆಗಳು ಇಲ್ಲಿನ ಜೀವಪರಿಸರವನ್ನು ಜತನ ಮಾಡುತ್ತಲೇ ಸ್ಥಳೀಯರ ನೆಲಜಲ ಸುರಕ್ಷತೆಯನ್ನೂ ಕಾಪಾಡಬಲ್ಲವು. ಜಾಗತಿಕ ಮಾರುಕಟ್ಟೆಯಿರುವ ಕಾಫಿ, ಏಲಕ್ಕಿ, ಕಾಳುಮೆಣಸು ಇತ್ಯಾದಿ ಕೃಷಿಯಾಗಲೀ, ಕಾವೇರಿಯ ಜಲಮೂಲ ರಕ್ಷಣೆಯಾಗಲೀ, ಪರಿಸರ ಪ್ರವಾಸೋದ್ಯಮವಾಗಲೀ- ಇಲ್ಲಿನ ಪರಿಸರವನ್ನು ನಿರಂತರವಾಗಿ ಹಾಗೂ ಸುಸ್ಥಿರವಾಗಿ ನಿರ್ವಹಿಸಿದರೆ ಮಾತ್ರ ಸಾಧ್ಯ. ಕಾಡುಕಡಿದು ನಿರ್ವಿುಸುವ ರೈಲುಮಾರ್ಗವೋ ಅಥವಾ ಅವಶ್ಯವಿರದೆಯೂ ಹೊಸದಾಗಿ ನಿರ್ವಿುಸುವ ಹೆದ್ದಾರಿಗಳಿಂದ ಸ್ಥಳೀಯರ ಆರ್ಥಿಕ ಅಭಿವೃದ್ಧಿ ಅಥವಾ ಉದ್ಯೋಗ ನಿರ್ವಣವಾಗದು. ಬದಲಾಗಿ, ಕೊಡಗಿನ ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವಂಥದ್ದು, ನೈಸರ್ಗಿಕ ಸಂಪನ್ಮೂಲಾಧಾರಿತ ಅಭಿವೃದ್ಧಿ ಎಂಬ ವಿವೇಕ ಆಡಳಿತ ಯಂತ್ರದ ಚುಕ್ಕಾಣಿ ಹಿಡಿದವರ ಕಣ್ಣುತೆರೆಸಬೇಕಿದೆ.
ಇಂಥ ಜನಸ್ನೇಹಿ ಅಂಶಗಳನ್ನೇ ಪರಿಸರತಜ್ಞ ಮಾಧವ ಗಾಡ್ಗೀಳ್ ನೇತೃತ್ವದ ಪಶ್ಚಿಮಘಟ್ಟ ಸಮಿತಿ ಸರ್ಕಾರಕ್ಕೆ ಸಲ್ಲಿಸಿತ್ತು. ಸಂಪೂರ್ಣ ಮಲೆನಾಡಿನ ಪರಿಸರ ಸುಸ್ಥಿರತೆ ಮತ್ತು ಜನರ,  ಶ್ರೇಯೋಭಿವೃದ್ಧಿ- ಇವೆರಡನ್ನೂ ಸರಿದೂಗಿಸುವಂಥ ಸೂತ್ರಗಳನ್ನು ಅದು ಹೇಳಿತ್ತು. ನಾಡಿನ ಜನಪ್ರತಿನಿಧಿಗಳು ಅದನ್ನು ಓದಿ ಕೂಡ ನೋಡದೆ, ತಿರಸ್ಕರಿಸಿದ್ದು ದುರಂತ! ರಾಜ್ಯಸರ್ಕಾರವೇ ರಚಿಸಿದ್ದ ಪಶ್ಚಿಮಘಟ್ಟ ಕಾರ್ಯಪಡೆ 2012ರಲ್ಲಿ ನೀಡಿದ ಅಂತಿಮ ಸಮಗ್ರ ವರದಿಯಲ್ಲಿ ಹಲವಾರು ಕಾರ್ಯಸಾಧುವಾದ ಸಲಹೆಗಳಿವೆ. ಅದರಲ್ಲಿ ವೈಜ್ಞಾನಿಕ ಅಧ್ಯಯನಗಳು ಹಾಗೂ ಜನರೊಂದಿಗಿನ ಸಮಾಲೋಚನೆಯ ಆಧಾರದಲ್ಲಿ ರೂಪಿಸಿದ ಮಹತ್ವದ ಪರಿಹಾರಗಳಿವೆ. ಆ ವರದಿಯೂ ಸರ್ಕಾರದ ಅವಜ್ಞೆಯ ಕಪಾಟಿನಲ್ಲಿ ಬಂದಿಯಾಯಿತು! ಇದೀಗ, ಮಲೆನಾಡಿಗೆ ತೀರಾ ಕನಿಷ್ಠಮಟ್ಟದ ರಕ್ಷಣೆಯನ್ನಾದರೂ ನೀಡಬಹುದಾದ ಸಲಹೆಗಳಿದ್ದ ಕಸ್ತೂರಿರಂಗನ್ ಸಮಿತಿಯ ವರದಿಯನ್ನೂ ರಾಜ್ಯ ಸರ್ಕಾರ ತಿರಸ್ಕರಿಸುವ ಸುದ್ದಿ ಹೊರಬಿದ್ದಿದೆ!
ರಾಜ್ಯ ಸರ್ಕಾರಕ್ಕೆ ಇನ್ನಾವ ಬಗೆಯ ತಜ್ಞಸಲಹೆ ಬೇಕು?
( ಲೇಖಕರು ಸಂರಕ್ಷಣಾ ಜೀವಶಾಸ್ತ್ರಜ್ಞರು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...