ಕನ್ನಡ ಭಗವದ್ಗೀತೆ ಎಂದೇ ವಿಖ್ಯಾತವಾದ ‘ಮಂಕುತಿಮ್ಮನ ಕಗ್ಗ’ ಪ್ರಕಟವಾಗಿ ಇಂದಿಗೆ 75 ವರ್ಷ. ಕಗ್ಗದ ಹೆಸರನ್ನು ಕೇಳದವರಿಲ್ಲ. ‘ಬ್ರಹ್ಮಪುರಿಯ ಭಿಕ್ಷುಕ’, ‘ಡಿ.ವಿ.ಜಿ. ಬೆಲೆಬಾಳುವ ಬರಹಗಳು’ ಹಾಗೂ ಇತ್ತೀಚೆಗೆ ‘ಡಿ.ವಿ.ಜಿ. ಸಾರಸಂಗ್ರಹ’ ಗ್ರಂಥಗಳ ಮೂಲಕ ಡಿ.ವಿ. ಗುಂಡಪ್ಪನವರ ಸಾಹಿತ್ಯದ ಅನುಸಂಧಾನ ನಡೆಸುತ್ತಲೇ ಬಂದಿರುವ ಬಹುಶ್ರುತ ವಿದ್ವಾಂಸ, ಶತಾವಧಾನಿ ಡಾ|| ರಾ. ಗಣೇಶ್ ಇಲ್ಲಿ ಕಗ್ಗದ ಮಾಂತ್ರಿಕತೆಯನ್ನು ತೆರೆದಿಟ್ಟಿದ್ದಾರೆ.
| ಶತಾವಧಾನಿ ಡಾ|| ರಾ. ಗಣೇಶ್
ಬ್ರಹ್ಮಪುರಿಯ ಭಿಕ್ಷುಕ ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗವನ್ನು ಪ್ರಕಟಿಸಿ ಎಪ್ಪತ್ತೈದು ಮಳೆಗಾಲಗಳು ಉರುಳಿಹೋಗಿವೆ. ಆದರೂ ಅವು ಕಗ್ಗದ ಹೊಳಪನ್ನು ಮಾತ್ರ ಕರಗಿಸಲಾಗದೆ ಸುಮ್ಮನೆ ಸುರಿದು ಸಪ್ಪಗೆ ಸಮುದ್ರ ಸೇರಿವೆ. ಒಂದು ಮಾತಿನಲ್ಲಿ ಹೇಳುವುದಾದರೆ, ಕನ್ನಡಸಾಹಿತ್ಯದ ಮಟ್ಟಿಗೆ ಕಗ್ಗವೊಂದು ಫೆನೋಮಿನನ್; ಅದೊಂದು ಘಟನೆ, ಅದೊಂದು ವಿದ್ಯಮಾನ, ಅದೊಂದು ವರ್ತಮಾನ.
ಡಿ.ವಿ.ಜಿ.ಯವರ ಶಿಷ್ಯತಲ್ಲಜರಾದ ನಾಡೋಜಎಸ್. ಆರ್. ರಾಮಸ್ವಾಮಿಯವರು ಹೇಳುವಂತೆ ನಮ್ಮೀ ಕಾಲಕ್ಕೆ ಕಗ್ಗವೊಂದು ‘ಇಂಡಸ್ಟ್ರಿ’ಯಾಗಿ ಬೆಳೆದಿದೆ. ಕಗ್ಗವನ್ನು ಹಾಡಿದವರೆಷ್ಟು ಮಂದಿ! ಅದನ್ನು ಕುರಿತು ಮಾತನಾಡಿದವರೆಷ್ಟು ಮಂದಿ! ಅದಕ್ಕೆ ಟೀಕೆ-ಟಿಪ್ಪಣಿ-ಭಾಷ್ಯಗಳನ್ನು ಬರೆದವರೆಷ್ಟು ಮಂದಿ! ಕಗ್ಗವನ್ನು ಕುರಿತು ಬಂದ ವ್ಯಾಖ್ಯಾನಗ್ರಂಥಗಳಿಗೆ ಕೊನೆ-ಮೊದಲಿಲ್ಲ. ಇದನ್ನು ಅವಲಂಬಿಸಿ ಹೊರಬಿದ್ದ ಧ್ವನಿಮುದ್ರಿಕೆ-ಸಾಂದ್ರಸ್ಥಾಲಿಗಳಿಗೆ ಆದಿ-ಅಂತ್ಯಗಳಿಲ್ಲ. ಭಾಷಣ, ನಾಟಕ, ಚರ್ಚಾಸ್ಪರ್ಧೆ, ಚಲನಚಿತ್ರಗಳಲ್ಲಿಯೂ ಕಗ್ಗವು ವಿಸ್ತರಿಸಿಕೊಂಡಿದೆ. ಈಚೆಗಂತೂ ನೃತ್ಯಕ್ಕೆ ಕೂಡ ಅಳವಡಿಸಿ ರಸಿಕರಂಜನೆ ಮಾಡಿದವರಿದ್ದಾರೆ. ಹೆಚ್ಚೇನು, ಕಗ್ಗದ ಮಾಂತ್ರಿಕತೆ ಎಂಥದ್ದೆಂದರೆ ಇತ್ತೀಚೆಗೆ ಮ್ಯಾಜಿಕ್ ಪ್ರಪಂಚದಲ್ಲಿಯೂ ಅದನ್ನಳವಡಿಸಿ ಗೆದ್ದವರಿದ್ದಾರೆ! ಮುಖ್ಯವಾಗಿ ಉಪನ್ಯಾಸಕರಿಗೆ, ಪ್ರವಚನಕಾರರಿಗೆ, ವ್ಯಕ್ತಿತ್ವವಿಕಸನದ ಬರೆಹಗಾರರಿಗೆ ಕಗ್ಗವೇ ಅನ್ನ-ಸಾರು, ಕಗ್ಗವೇ ಹಿಟ್ಟು-ರೊಟ್ಟಿ.
ದಿನವೊಂದರಲ್ಲಿ ಯಾರೇ ಆಗಲಿ, ಮುಂಜಾನೆ ಎದ್ದು ಸುಪ್ರಭಾತಪ್ರಸಾರಗಳಿಗೆಂದು ದೂರದರ್ಶನಕ್ಕೋ ಆಕಾಶವಾಣಿಗೋ ಕಣ್ಣು-ಕಿವಿಗಳನ್ನೊಡ್ಡಿದಾಗ ಒಂದಲ್ಲ ಒಂದು ಕಡೆ ಕಗ್ಗದ ಉಲ್ಲೇಖ ದಕ್ಕದಿರದು. ಇನ್ನು ಬಿಸಿಬಿಸಿ ಚಹಾ-ಕಾಫಿ ಸೇವಿಸುತ್ತ ಕನ್ನಡಪತ್ರಿಕೆಗಳನ್ನು ತಿರುವಿಹಾಕುವಾಗ ಒಂದಿಲ್ಲೊಂದು ಮೂಲೆಯಲ್ಲಿ ಕಗ್ಗದ ಸೊಲ್ಲುಗಳು ಕಣ್ಸೆಳೆಯದಿರವು. ಅನಂತರ ಶಾಲೆಗೋ ಆಫೀಸಿಗೋ ಬಸ್ಸಿನಲ್ಲಿ ಪಯಣಿಸುವಾಗ ನಿಲ್ದಾಣಗಳಲ್ಲಿ, ವಾಹನಗಳೊಳಗೆ ಆಗೊಮ್ಮೆ ಈಗೊಮ್ಮೆ ಕಗ್ಗದ ಫಲಕಗಳು ಕಾಣದಿರವು. ಅನುದಿನದ ಜೀವನಯಾತ್ರೆಯಲ್ಲಿ ದುಡಿಯುವಾಗ ಮೇಲಧಿಕಾರಿಯೋ ಸಹೋದ್ಯೋಗಿಯೋ ಗುರುವೋ ಗೆಳೆಯನೋ ಕಗ್ಗದ ಯಾವೊಂದು ಸಾಲನ್ನಾದರೂ ಹೇಳಿ ಮನಸ್ಸನ್ನು ಹಗುರಗೊಳಿಸದಿರರು, ಅಥವಾ ಗೊಣಗಿಕೊಂಡು ಗಮನಸೆಳೆಯದಿರರು. ಇನ್ನು ಸ್ವಂತ ವಾಹನದಲ್ಲಿ ಸಾಗುವಾಗಲಂತೂ ಯಾವುದೇ ಎಫ್.ಎಂ. ಛಾನೆಲ್ಲಿನಲ್ಲಿ ಆರ್.ಜೆ.ಗಳ ವದನಾರವಿಂದಗಳು ಕಗ್ಗದ ಆಣಿಮುತ್ತುಗಳನ್ನು ಸಂದರ್ಭನಿರಪೇಕ್ಷವಾಗಿ ಸುರಿಸದಿರವು. ಸಂಜೆಯ ಹೊತ್ತಿಗೆ ಮತ್ತಾವುದೋ ಕಾರ್ಯಕ್ರಮಕ್ಕೆ ತೆರಳಿದಾಗ ಅಲ್ಲಿಯ ಉಪನ್ಯಾಸಕರೋ ನಿರೂಪಕರೋ ತಮ್ಮ ಬಡಕಲುಮಾತಿನ ಬೆನ್ನುಹುರಿ ಗಟ್ಟಿಯಾಗಿಸಲು ಕಗ್ಗದ ಸಾಲುಗಳನ್ನು ಬಳಸಿಕೊಳ್ಳದಿರರು. ದಿನವಿಡೀ ದುಡಿದು ಬಳಲಿದ ಮೈ-ಮನಸ್ಸುಗಳು ಹಾಸಿಗೆಯ ಮೇಲುರುಳಿ, ಬಗೆ ಹಗುರಾಗಲೆಂದು ತೋಳಿಗೆ ಭಾರವಾಗದಂತೆ ಓದಿಕೊಳ್ಳಲು ಕೈಚಾಚಿದಾಗ ಮೊದಲಿಗೆ ಎಟುಕುವುದೇ ಕಗ್ಗ. ಹೀಗೆ ಶ್ರೀಸಾಮಾನ್ಯನೊಬ್ಬನ ಅನುದಿನದ ಬದುಕಿನಲ್ಲಿ ಹೆಜ್ಜೆಹೆಜ್ಜೆಗೂ ಬಂದು ಕಾಡುವ, ಕೆಣಕುವ, ಕಲಿಸುವ, ನಲಿಸುವ, ಒಲಿಸುವ, ಜೀವಿಸುವ ಕೃತಿ ಕನ್ನಡಿಗರ ಮಟ್ಟಿಗೆ ಕಗ್ಗವಲ್ಲದೆ ಮತ್ತೊಂದಲ್ಲ.
ಮಂಕುತಿಮ್ಮನ ಕಗ್ಗವನ್ನು ವೇದೋಪನಿಷತ್ತುಗಳಂತೆ, ಗೀತೆ-ಸಹಸ್ರನಾಮಗಳಂತೆ ಕಂಠಸ್ಥ ಮಾಡಿ ನಿತ್ಯಪಾರಾಯಣಕ್ಕೇ ತೊಡಗಿದ ಶ್ರದ್ಧಾಳುಗಳು ಅನೇಕರಿದ್ದಾರೆ. ಇದರ ಪದ್ಯಗಳನ್ನು ಪಠನ-ವಾಚನಗಳ ಮೂಲಕ, ವ್ಯಾಖ್ಯಾನ-ಲೇಖನಗಳ ಮೂಲಕ ಜನತೆಗೆ ಮುಟ್ಟಿಸುವ ಕಾಯಕದಲ್ಲಿ ಇಹ-ಪರಗಳ ಸಾರ್ಥಕ್ಯವನ್ನು ಕಂಡ ಮೂರು-ನಾಲ್ಕು ತಲೆಮಾರುಗಳೇ ಇವೆ. ಕಗ್ಗವು ಹಲವು ಭಾಷೆಗಳಿಗೆ ಅನುವಾದವಾಗಿದೆ. ಇಂಗ್ಲಿಷ್ನಲ್ಲಿಯೇ ನಾಲ್ಕು ಅನುವಾದಗಳಿವೆ. ಈಚಿನ ಕನ್ನಡಲೇಖಕರು ತಮ್ಮ ಕೃತಿಗಳಿಗೆ ಆಂಗ್ಲಾನುವಾದಗಳನ್ನು ತಾವೇ ಮುಗಿಬಿದ್ದು ಮಾಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಸಿಕರು ತಾವಾಗಿ ಮುಂದೆಬಂದು ಕಗ್ಗದ ಆಂಗ್ಲಾನುವಾದವನ್ನು ಮಾಡಿದ ಸಂಗತಿ ಸುಂದರವೈಸದೃಶ್ಯ. ಹೀಗೆ ಕಗ್ಗವನ್ನು ಶ್ರೇಯಸ್ಸಿಗೆ ಬಳಸಿಕೊಂಡವರಿಗಂತೂ ನೆಮ್ಮದಿ ಕಟ್ಟಿಟ್ಟ ಬುತ್ತಿ. ಆದರೆ ಪ್ರೇಯಸ್ಸಿಗೆ ಬಳಸಿಕೊಂಡವರಿಗೂ ಜೇಬು ಭರ್ತಿಯಾಗಿರುವುದು ಲೋಕವಿಖ್ಯಾತ.
ಡಿ.ವಿ.ಜಿ.ಯವರು ತಮ್ಮ ಯಾವುದೇ ಕೃತಿಯನ್ನು ಅದರ ಪ್ರತಿಯೊಂದು ಮುದ್ರಣಕಾಲದಲ್ಲಿಯೂ ಪರಿಷ್ಕರಿಸುತ್ತಿದ್ದರು. ಇದು ಅವರ ಪ್ರಗತಿಶೀಲಮನಸ್ಸಿಗೆ ಸುಂದರದೃಷ್ಟಾಂತ. ಹೀಗಾಗಿ ಕಗ್ಗದ ಒಂದೆರಡು ಮುದ್ರಣಗಳಲ್ಲಿ ಅಷ್ಟಿಷ್ಟು ಪರಿಷ್ಕಾರಗಳಾದುವು. ಆಗ ಮಂಕುತಿಮ್ಮನ ಅಭಿಮಾನಿಗಳೆಲ್ಲ ಅವರ ಬಳಿ ಬಂದು ಅಕ್ಕರೆಯಿಂದ ಧಮಕಿ ಹಾಕಿದ್ದರಂತೆ: ‘ಸ್ವಾಮಿ, ನಾವೆಲ್ಲ ಕಷ್ಟಪಟ್ಟು ಬಾಯಿಪಾಠ ಮಾಡಿದ್ದರೆ, ನೀವದನ್ನೆಲ್ಲ ತಿದ್ದಿ ಮತ್ತೆ ನಮಗೆ ಕೆಲಸ ಕೊಡುತ್ತಿದ್ದೀರಿ; ನಿಮ್ಮ ತಿದ್ದಾವಣೆಗೆ ಕೊನೆ-ಮೊದಲಿಲ್ಲವೇ?’
ಈ ಪ್ರೀತಿಯ ಪ್ರತಿಯೋಗಿತೆಗೆ ಗುಂಡಪ್ಪನವರೂ ಬಾಗಬೇಕಾಯಿತು! ಹೀಗಾಗಿ ಕಗ್ಗವೊಂದು ಅಪೌರುಷೇಯತೆಯ ಮಟ್ಟವನ್ನು ಮುಟ್ಟಿತು. ಕರ್ತೃವಿನ ಪ್ರಮೇಯವನ್ನೂ ಮತ್ತೆ ಸಹಿಸದ ಕೃತಿಯಲ್ಲವೇ ಅಪೌರುಷೇಯ! ಅಷ್ಟೇಕೆ, ಮುಂದೆ ಅವರು ಮಂಕುತಿಮ್ಮನ ಕಗ್ಗವನ್ನು ವಿಸ್ತರಿಸಲಾಶಿಸಿ ನೂರಾರು ಪದ್ಯಗಳನ್ನು ಅದೇ ಅಂಕಿತದಲ್ಲಿ ಬರೆದರಾದರೂ ಓದುಗರು ಈ ಕೃತಿಯ ಸ್ವಯಂಪೂರ್ಣತೆಯ ಗುಂಗಿನಿಂದ ಹೊರಬರದ ಕಾರಣ ವಾಚಕಲೋಕದ ಅಭಿರುಚಿಯನ್ನು ಆದರಿಸಿ ಡಿ.ವಿ.ಜಿ. ‘ಮರುಳಮುನಿಯನ ಕಗ್ಗ’ವೆಂಬ ಮತ್ತೊಂದು ಕೃತಿಯಾಗಿಯೇ ಆ ಪದ್ಯಗಳನ್ನು ಹವಣಿಸಬೇಕಾಯಿತು. ಹೀಗೆ ಮರುಳಮುನಿಯನು ಮಂಕುತಿಮ್ಮನಿಗೆ ತಮ್ಮನಾದನೇ ಹೊರತು, ಆತ್ಮವಾಗಲಿಲ್ಲ. ಇದು ಕಗ್ಗದ ಬಗೆಗೆ ಕನ್ನಡಿಗರಿಟ್ಟುಕೊಂಡ ಮತಸದೃಶಶ್ರದ್ಧೆಗೆ ಮನನೀಯದೃಷ್ಟಾಂತ.
ಸ್ವಯಂ ಡಿ.ವಿ.ಜಿ.ಯವರಿಗೇ ಕಗ್ಗದ ಆಯುಷ್ಯವನ್ನು ಕುರಿತು ಹೆಚ್ಚಿನ ಕಲ್ಪನೆಗಳಿರಲಿಲ್ಲ. ಅವರ ಮನೋಧರ್ಮವೇ ಅಷ್ಟೆನ್ನಿ. ಬರೆಯುವುದಷ್ಟೇ ತನ್ನ ಕೆಲಸ; ಬರೆಹದ ಬಾಳಿಕೆ ತನಗೆ ಸಂಬಂಧವಿಲ್ಲದ್ದೆಂಬುದು ಅವರ ಶ್ರದ್ಧೆ.
ಆದರೆ ಕಗ್ಗವು ಗುಂಡಪ್ಪನವರ ಕೃತಿಕುಟುಂಬದಲ್ಲೊಂದು ಕಿರಿಯ ಸದಸ್ಯನಾಗಿ ಔಪಚಾರಿಕವಾದ ಚಿರಂಜೀವಿತ್ವವನ್ನು ಗಳಿಸಿ, ಕೆಲವೇ ದಶಕಗಳಲ್ಲಿ ಅಕ್ಷರಶಃ ಚಿರಂಜೀವಿಯೇ ಆದದ್ದು ಅಕ್ಷರಲೋಕದ ಅದೃಷ್ಟ. ಇಂಥ ವಾಗರ್ಥವಿಸ್ಮಯದ ಸಾಫಲ್ಯ-ವೈಫಲ್ಯಗಳ, ತಾಳಿಕೆ-ಬಾಳಿಕೆಗಳ, ಸಾಂಗತ್ಯ-ಅಸಾಂಗತ್ಯಗಳ ಬಗೆಗೆ ಈಗಲೂ ಕೆಲವು ‘ಬುದ್ಧಿಜೀವಿ’ಗಳು ತಲೆಕೆಡಸಿಕೊಂಡಿದ್ದಾರೆಂದರೆ ಅವರತ್ತ ಕಗ್ಗದ ರಸಿಕರು ಮರುಕ ತೋರಬೇಕೇ, ನಗೆ ಬೀರಬೇಕೇ? ಉಪೇಕ್ಷೆಗೂ ಅರ್ಹರಲ್ಲದ ಅವಿವೇಕಿಗಳು ಕೆಲವರು ಕಗ್ಗದ ಆಯುಷ್ಯವನ್ನು ಬರೆಯುವ ಬ್ರಹ್ಮರಂತೆ ವರ್ತಿಸುವುದನ್ನು ಕಂಡಾಗ ಮುದುಕಿಯ ಕೋಳಿಯು ಕೂಗದೆ ನೇಸರು ಉದಿಸುವುದಿಲ್ಲವೆಂಬ ಮಾರ್ವಿುಕಕಥೆ ನೆನಪಾಗದಿರದು. ವಸ್ತುತಃ ಅಂಥ ಅಹಂಬ್ರಹ್ಮರ ಅಸ್ತಿತ್ವವಾದರೂ ನೆನೆಪಿಗೆ ಬರುವುದು ಕಗ್ಗದ ಕಾರಣದಿಂದಲೇ.
ಕಗ್ಗದಲ್ಲಿ ಏಕಸೂತ್ರತೆಯಿಲ್ಲ, ಮಣ್ಣಿನ ವಾಸನೆಯಿಲ್ಲ, ಅದು ಅನುಭವದ ಮೂಸೆಯಿಂದ ಹೊರಬಿದ್ದುದಲ್ಲ, ಅದರಲ್ಲಿ ಧ್ವನಿ-ರಸಗಳಿಲ್ಲ, ಹೊಸತೇನೂ ಇಲ್ಲ … ಇತ್ಯಾದಿ ‘ಇಲ್ಲ’ಗಳ ಪಟ್ಟಿ ಒಂದಾದರೆ, ಇದು ಪ್ರತಿಗಾಮಿ, ಮೂಲಭೂತವಾದಿ, ಬಂಡವಾಳಶಾಹಿ, ಪುರೋಹಿತಶಾಹಿ, ಯಜಮಾನಸಂಸ್ಕೃಯ ಪ್ರತೀಕ … (ಸಂಕ್ಷೇಪಿಸಿ ಹೇಳುವುದಾದರೆ ಹಿಂದುತ್ವವಾದಿ) … ಇತ್ಯಾದಿ ‘ಇದೆ’ಗಳ ಪಟ್ಟಿ ಇನ್ನೊಂದು. ಆದರೆ ಈ ಬಗೆಯ ಇಲ್ಲ-ಇದೆಗಳ ಕರ್ತರನ್ನು ಪ್ರಾಮಾಣಿಕರಾದ ಕನ್ನಡಿಗರು ಲೆಕ್ಕವಿರಿಸಿಲ್ಲ. ಅವರಿಗಿಷ್ಟು ಗೊತ್ತು: ಕಗ್ಗದ ಮಾತುಗಳು ನೊಂದ ಮನಸ್ಸಿಗೆ ನೇಹಿಗರಾಗುತ್ತವೆ, ಬೆಂದ ಜೀವಕ್ಕೆ ತಂಪೆರೆಯುತ್ತವೆ, ಧೃತಿಗೆಟ್ಟವರಿಗೆ ಗತಿಯಾಗುತ್ತವೆ, ಮತಿಭ್ರಾಂತರಿಗೆ ಪಥವಾಗುತ್ತವೆ, ಪಥ್ಯವೂ ಆಗುತ್ತವೆ. ಮಾತ್ರವಲ್ಲ, ಉಲ್ಲಾಸದಲ್ಲಿದ್ದವರಿಗೆ ಅಂತಮುಖತೆಯನ್ನು ಕಲ್ಪಿಸುತ್ತವೆ, ಸಾಧನೆಯ ಶಿಖರದಲ್ಲಿದ್ದವರಿಗೆ ನಮ್ರತೆಯನ್ನು ಕಲಿಸುತ್ತವೆ, ಆತ್ಮವಿಶ್ವಾಸಿಗಳಿಗೆ ಅಂಗೀಕಾರಬುದ್ಧಿಯನ್ನು ತುಂಬುತ್ತವೆ. ಹೆಚ್ಚೇನು, ಕಗ್ಗವೊಂದು ಪುಷ್ಪಕವಿಮಾನದಂತೆ: ಯಾವುದೇ ಬಗೆಯ ಮನಸ್ಸಿನವರಿಗೂ ಅಲ್ಲಿ ಅವಕಾಶವುಂಟು; ಅಂತೆಯೇ ಕಗ್ಗದ ರಸಿಕರ ಮನಸ್ಸುಗಳೂ ಪುಷ್ಪಕವಿಮಾನದಂತೆ: ಕಗ್ಗವನ್ನು ಕುರಿತ ಯಾವುದೇ ವಿಚಾರಧಾರೆಗೆ ಅವರಲ್ಲಿ ಎಡೆಯುಂಟು. ಹೀಗೆ ಉಭಯಥಾ ಅದೊಂದು ವ್ಯೋಮಯಾತ್ರೆ. ನೆಲವನ್ನು ಮರೆಯದ, ಮುಗಿಲಿನಲ್ಲಿ ಮರೆಯಾಗದ ಆನಂದಯಾತ್ರೆ.
ಮಂಕುತಿಮ್ಮನ ಕಗ್ಗವು ಸಾಹಿತ್ಯಲೋಕಕ್ಕೆ ಸಮರ್ಪಿತವಾದಾಗ ಅದಕ್ಕೆ ಸಿಕ್ಕ ಸ್ವಾಗತ ಅಭೂತಪೂರ್ವ. ಹಳ್ಳಿ-ದಿಳ್ಳಿಗಳಿಂದ ಅದಕ್ಕೆ ಸಂದ ನಲ್ಮೆಯ ಓದಿಕೆಯೆಂಬ ಕಪ್ಪಕಾಣಿಕೆ ಯಾವ ಸಾಹಿತ್ಯಚಕ್ರವರ್ತಿಗೂ ಭೂತ-ಭವಿಷ್ಯತ್ತುಗಳಲ್ಲಿ ದಕ್ಕಿಲ್ಲದಂಥದ್ದು. ಪಂಡಿತ-ಪಾಮರರ ಯಥಾರ್ಥಪ್ರಶಂಸೆ ಮಹಾಪೂರವಾಗಿ ಹರಿಯಿತು. ಇವುಗಳೇ ಹಲವು ಗ್ರಂಥಗಳಾಗುವಷ್ಟಿವೆ. ಇಂಥ ಸ್ತವನಮಂದಿರಗಳ ಸುವರ್ಣಕಲಶವಾಗಿ ಮಹಾಕವಿ ಕುವೆಂಪು ಅವರ ಒಂದು ಸೊಲ್ಲನ್ನು ಮಾತ್ರ ಉಲ್ಲೇಖಿಸಬಹುದು:
ಹಸ್ತಕ್ಕೆ ಬರೆ ನಕ್ಕೆ ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನದ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ
ಒಂದು ಮಹಾಪ್ರತಿಭೆಗೆ ಮತ್ತೊಂದು ಮಹಾಪ್ರತಿಭೆಯಷ್ಟೇ ಸಮರ್ಥವಾದ – ಸಂಕ್ಷಿಪ್ತವಾದರೂ ಸಮಗ್ರವಾದ – ಸ್ತುತಿಯನ್ನು ಸಲ್ಲಿಸಬಹುದೆಂಬುದಕ್ಕೆ ಇದು ಸೂರ್ಯಸಾಕ್ಷಿ.
ಇಂದಿನ ‘ಜನಪ್ರಿಯತೆ’ಯ ಅಳತೆಗೋಲಿಗೆ ಕಗ್ಗವು ಸ್ವಲ್ಪವೂ ದಕ್ಕದೆ ಹಿಮಾಚಲಸಮುನ್ನತಿಯಲ್ಲಿ ನಿಂತು ತುಷಾರಸ್ಮಿತವನ್ನು ಬೀರುತ್ತದೆ. ಏಕೆಂದರೆ ನಮ್ಮ ವಿಮರ್ಶಕಶಿಖಾಮಣಿಗಳ ಪ್ರಕಾರ ಕವಿತೆಗೆ ಓದುಗರಿಲ್ಲ; ಅದರಲ್ಲಿಯೂ ಭಾಷೆಯು ಹಳಗನ್ನಡ-ನಡುಗನ್ನಡಗಳ ಜಾಡಿಗೆ ಬಿದ್ದರೆ ಮತ್ತೇಳುವುದೇ ಇಲ್ಲ; ಜೊತೆಗೆ ಛಂದೋಬದ್ಧವಾದರಂತೂ ಅದು ಶ್ರೀಸಾಮಾನ್ಯರ ಸಾಂಗತ್ಯಕ್ಕೆ ಸಲ್ಲುವುದೇ ಇಲ್ಲ; ಎಲ್ಲಕ್ಕಿಂತ ಮಿಗಿಲಾಗಿ ಸನಾತನಧರ್ಮದ ಶ್ರುತಿಗೆ ಸೇರಿಕೊಂಡಾಗ ಅದಕ್ಕೆ ಶ್ರೋತೃಗಳೇ ಸಿಕ್ಕುವುದಿಲ್ಲ … ಇತ್ಯಾದಿ ಇತ್ಯಾದಿ. ಆದರೆ
ಈ ಸಾಹಿತ್ಯಭದ್ರಪೀಠಗಳ ಗುತ್ತಿಗೆದಾರರಿಗೆ ಮತಿಗೆಡುವಂತೆ ಕಗ್ಗವು ಇವಿಷ್ಟೂ ಅಂಶಗಳನ್ನು ತನ್ನೊಳಗಿರಿಸಿಕೊಂಡು ಗೆದ್ದಿದೆ, ಗೆಲ್ಲುತ್ತಲೇ ಇದೆ. ಮಾತ್ರವಲ್ಲ, ವಿಶ್ವವಿದ್ಯಾಲಯಗಳ, ಅಕಾಡೆಮಿ-ಅಧ್ಯಯನಕೇಂದ್ರಗಳ ದಿವಾಂಧರಿಗೂ ಬೋಧ-ಮೋದಗಳನ್ನು ಕರುಣಿಸಬಲ್ಲ ಹೃದಯವೈಶಾಲ್ಯವನ್ನು ಮೆರೆಯುತ್ತಿದೆ.
ಆದುದರಿಂದಲೇ ಕಗ್ಗದ ರೂಪ-ಸ್ವರೂಪಗಳ ಅನುಕರಣೆಗೆ ಹೊರಟ ಕೃತಿಗಳೂ ಅಸಂಖ್ಯ. ದಿಟವೇ, ಎಂಥ ಚೆಲುವಾದ ಅನುಕರಣವೂ ಮೂಲಕೃತಿಯೆಂಬ ಶ್ರೀರಾಮನೆದುರು ಮಾರುತಿಯಂತೆ ಕೈಮುಗಿದು ನಿಲ್ಲುವ ಮಟ್ಟದ್ದೇ ಹೊರತು ಅದಕ್ಕಿಂತ ಮಿಗಿಲಾಗದು. ಆದರೆ ಈ ತಿಕ್ತವಾಸ್ತವವನ್ನೂ ಸಂತೋಷದಿಂದ ಒಪ್ಪಿ ಇಂಥ ಕೃತಿಗಳು ಬಂದಿವೆಯೆಂದರೆ ಕಗ್ಗದ ಸೆಳೆತ ಎಂಥದ್ದು! ಒಂದೇ ವಾಲ್ಮೀಕಿರಾಮಾಯಣವನ್ನು ಅಸಂಖ್ಯಭಾಷೆಗಳಲ್ಲಿ, ಅಸಂಖ್ಯರೂಪಗಳಲ್ಲಿ ಕಾವ್ಯವಾಗಿ, ನಾಟಕವಾಗಿ, ಕಥೆಯಾಗಿ, ಹಾಡಾಗಿ, ಚಿತ್ರವಾಗಿ, ಶಿಲ್ಪವಾಗಿ, ನೃತ್ಯವಾಗಿ, ಸತ್ಯವಾಗಿ ಒಪ್ಪಿಕೊಂಡು ಅಪ್ಪಿಕೊಂಡು ಬಂದ ನಮ್ಮ ಪರಂಪರೆಗೆ ಇದೆಲ್ಲ ಸಹಜ, ಸುಂದರ; ಸ್ವೀಕಾರ್ಯ, ಸತ್ಕಾರ್ಯ. ವಿಮರ್ಶನಾಹಂಕಾರಿಗಳಿಗೆ ಇಂಥ ನಮ್ರತೆಯೆಲ್ಲಿ? ಅದು ನೀಡುವ ನೆಮ್ಮದಿ ಇನ್ನೆಲ್ಲಿ?
ಕಗ್ಗದ ಜನಪ್ರಿಯತೆ ಅಗ್ಗದ ಜನಪ್ರಿಯತೆಯಲ್ಲ. ಅದು ಸಗ್ಗದ ಜನಪ್ರಿಯತೆ, ಜಗ್ಗದ ಜನಪ್ರಿಯತೆ. ಬಹುಜನಪ್ರಿಯತೆಯೂ ಹೌದು, ಮಹಾಜನಪ್ರಿಯತೆಯೂ ಹೌದು. ಒಂದು ಬಾಯಲ್ಲಿ ಜನತೆಗೆ ಒಲಿಯದ ಸಾಹಿತ್ಯಕ್ಕೆ ಬೆಲೆಯೇ ಇಲ್ಲವೆಂದು ಗಳಹುವ ಲಬ್ಧಪ್ರತಿಷ್ಠರು ಜನತೆಯೇ ಅಪ್ಪಿಕೊಂಡಿರುವ ಕಗ್ಗವನ್ನು ಮಾತ್ರ ಮತ್ತೊಂದು ಬಾಯಲ್ಲಿ ಜಗ್ಗಾಡಲು ಹೊರಡುವುದು ಚೋದ್ಯ. ನಾವೀಗ ಕಗ್ಗಕ್ಕೆ ಲೋಕಾದರವುಂಟೇ ಇಲ್ಲವೇ ಎಂದು ಪ್ರಶ್ನೆಮಾಡುವುದು ಸೂರ್ಯನು ಬೆಳಗುತ್ತಿದ್ದಾನೆಯೇ ಇಲ್ಲವೇ ಎಂದು ವಿಚಿಕಿತ್ಸೆ ನಡಸಿದಂತೆ. ಮೊದಲಿಗೆ ಈ ಮಹಾಕೃತಿಯನ್ನು ಮತ್ತೆ ಮತ್ತೆ ಓದಿಕೊಳ್ಳಬೇಕು. ಆ ಬಳಿಕ
ಈ ಕೃತಿಗೆ ಜನಾದರಣೆಯುಂಟಾಗಲು ಕಾರಣವೇನೆಂದು ನಮ್ಮೊಳಗಿನ ಜೀವನವನ್ನೇ ಪ್ರಶ್ನಿಸಿಕೊಳ್ಳಬೇಕು. ಹಾಗೆ ಅಂತರಂಗವನ್ನು ಪರಿಪ್ರಶ್ನಿಸಿಕೊಂಡಾಗ ಕೆಲವೊಂದು ಸತ್ಯಗಳು ಸ್ಪುರಿಸದಿರವು.
ಈ ಪ್ರಕಾರ ಕಗ್ಗದ ಸತ್ತ್ವ-ಸ್ವಾರಸ್ಯಗಳಿಗೆ ಮುಖ್ಯಕಾರಣ ಡಿ.ವಿ.ಜಿ.ಯವರ ಬಿರುಕಿಲ್ಲದ ಬದುಕು, ಮತ್ತದನ್ನು ಹೃದಯಂಗಮವಾಗಿ ಹಿಡಿದಿಟ್ಟ ಭಾವ-ಬುದ್ಧಿಗಳ ಬೆಳಕು.
ತುಂಬ ಜನ ಭಾವಿಸಿದಂತೆ ಕಗ್ಗವು ಭಾರತೀಯಪರಂಪರೆಯ ತತ್ತ್ವಜ್ಞಾನವನ್ನು ಶುಕಪಾಠವಾಗಿ ಒಪ್ಪಿಸುವುದಿಲ್ಲ. ಈ ನಿಟ್ಟಿನಲ್ಲಿ ಕಗ್ಗದ ಅಭಿಮಾನಿಗಳೂ ಸ್ವಲ್ಪ ಕುರುಡಾಗಿದ್ದಾರೆ. ಡಿ.ವಿ.ಜಿ.ಯವರು ಕಗ್ಗದಲ್ಲಿ ತಮ್ಮ ಜೀವನದರ್ಶನವನ್ನು ಪ್ರಾಮಾಣಿಕವಾಗಿ, ಸರ್ವಂಕಷವಾಗಿ, ಸುಂದರವಾಗಿ ನಿವೇದಿಸಿದ್ದಾರೆ. ಇದು ಸನಾತನಧರ್ಮದ ಮೂಲತತ್ತ್ವಕ್ಕೆ ಸಂವಾದಿಯಾಗಿರುವುದು ಸಹಜವಾದ ಆಕಸ್ಮಿಕ. ಇದು ಶ್ರೀರಾಮಕೃಷ್ಣರ ‘ವಿಚಿತ್ರಾನುಭವ’ಗಳು ಭೈರವೀಬ್ರಾಹ್ಮಣಿಯ ಮೂಲಕ ಶಾಸ್ತ್ರಗಳಲ್ಲಿ ತಾಳೆಯಾದಂತೆ; ಶ್ರೀರಮಣರ ನಿರ್ವಿಶೇಷಾನುಭವವು ಶಾಂಕರಭಾಷ್ಯಗಳಲ್ಲಿ ವಿದ್ವಾಂಸರಿಗೆ ತೋರಿಕೊಂಡಂತೆ. ಸರ್ವಜ್ಞ, ವೇಮನ, ವಳ್ಳುವ, ಭರ್ತೃಹರಿ, ಚಾಣಕ್ಯ, ಶ್ರೀಕೃಷ್ಣರ ಕೃತಿಗಳಲ್ಲಿ ತೋರುವ ಜೀವನಧರ್ಮವೇ ಇಲ್ಲಿಯೂ ಬಿಂಬಿಸಿದೆ; ವಚನಕಾರರ, ಹರಿದಾಸರ, ಆಳ್ವಾರುಗಳ, ನಾಯನ್ಮಾರುಗಳ, ವಾರಕರೀ ಸಂಪ್ರದಾಯದವರ, ಸಿದ್ಧ-ನಾಥ-ಅವಧೂತರ ಸಂವೇದನೆಗಳಿಲ್ಲಿ ಸ್ಪಂದಿಸಿವೆ. ಅಷ್ಟೇಕೆ, ಬ್ರೌನಿಂಗ್, ಉಮರ್, ಪ್ಲೇಟೋ, ಸಾಕ್ರೆಟೀಸರಂಥ ವಿದೇಶೀಯರ ಭಾವಗಳೂ ಬೆಸೆದಿವೆ. ಆದರೆ ಇವರಿಗಿಂತ ಭಿನ್ನವಾಗಿ ಕಗ್ಗವು ಮೈದಳೆದ ಭಾಷೆ-ಭಣಿತಿಗಳು ತುಂಬ ವಿಶಿಷ್ಟ. ಇಲ್ಲಿರುವುದು ಮತಾತೀತವಾದ ವಿಶ್ವಜನೀನದೃಷ್ಟಿ. ಪ್ರವಾದಿಯ ಅಟ್ಟಹಾಸಕ್ಕೆ ಇಲ್ಲಿ ಎಳ್ಳಷ್ಟೂ ಅವಕಾಶವಿಲ್ಲ. ಇದು ಸರ್ವಾತ್ಮನಾ ಸುಹೃತ್ಸಂಮಿತೆ, ಸ್ವಹೃತ್ಸಂಹಿತೆ; ತನಗೆ ತಾನು ಹೇಳಿಕೊಳ್ಳುವ ಜೀವನಧರ್ಮಸಂಹಿತೆ. ಅಲ್ಲದೆ, ಕಗ್ಗದ ಪ್ರತಿಯೊಂದು ಪದ್ಯವೂ ಸಾಲಂಕಾರ, ರಸಾವಹ. ಇಲ್ಲಿಯ ಉಕ್ತಿವೈಚಿತ್ರ್ಯಳು ಅದೆಷ್ಟು ಸಹಜವೆಂದರೆ ಓದುಗನಿಗೆ ಅವುಗಳ ಚೆಲುವು – ಭೋಜನರಸಿಕನಿಗೆ ಪದಾರ್ಥಗಳ ಸಮಷ್ಟಿರುಚಿಯಂತೆ – ತಾತ್ಪರ್ಯವಾಗಿ ದಕ್ಕುತ್ತಿವೆಯೇ ಹೊರತು ಬಿಡಿಬಿಡಿಯಾಗಿ ಗಮನಕ್ಕೆ ಬರುತ್ತಿಲ್ಲ. ಅಂದರೆ, ಹೃದಯಕ್ಕೆ ತಟ್ಟಿವೆಯೇ ಹೊರತು ಬುದ್ಧಿಗೆ ಮುಟ್ಟಿಲ್ಲ. ಇದು ಸಮರ್ಥಸಾಹಿತ್ಯದ ಸಾರ್ಥಕ್ಯವೂ ಹೌದು. ಧ್ವನಿ-ವಕ್ರತೆಗಳ ಮಾರ್ಗವೇ ಹೀಗೆ: ಸೋತು ಗೆಲ್ಲುವುದು. ಆದರೆ ಗಮನಿಸಬಲ್ಲವರಿಗೆ ಕಗ್ಗದ ಸೊಲ್ಲುಸೊಲ್ಲುಗಳಲ್ಲಿಯೂ ಕಾಣುವ ಶಬ್ದಾರ್ಥಸೌಂದರ್ಯ, ದೃಷ್ಟಾಂತವೈಪುಲ್ಯ, ತತ್ತಾ್ವರ್ಥವೈಶದ್ಯ ಮತ್ತು ಸಮನ್ವಯದೃಷ್ಟಿಗಳು ಬದುಕಿಡೀ ಸವಿಯುವಷ್ಟು, ಸವೆಯದಷ್ಟು.
ಕಗ್ಗಕ್ಕೆ ಯಾವುದೇ ಸಾಂಸ್ಥಿಕ-ಸರ್ವಕಾರೀಯಪುರಸ್ಕಾರಗಳು ಸಿಕ್ಕಲಿಲ್ಲ; ಆದರೆ ಸಮಾಜದ ನಮಸ್ಕಾರ ಇದಕ್ಕೆ ಸಿಕ್ಕಂತೆ ಮತ್ತೊಂದು ಕನ್ನಡಕೃತಿಗೆ ದಕ್ಕಿಲ್ಲ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಮಹಾವಿದ್ವಾಂಸರಾದ ಸೇಡಿಯಾಪು ಕೃಷ್ಣಭಟ್ಟರು ನನಗೊಮ್ಮೆ ತಿಳಿಸಿದ್ದರು: ಆಧುನಿಕಕನ್ನಡಸಾಹಿತ್ಯದಲ್ಲಿ ಮೂರು ಕಾವ್ಯಗಳು ಮಹನೀಯವಾಗಿವೆ. ಅವು ಮಹಾಕಾವ್ಯವಾಗಿ ರಾಮಾಯಣದರ್ಶನ, ಖಂಡಕಾವ್ಯವಾಗಿ ಮೈಸೂರು ಮಲ್ಲಿಗೆ, ಮನನಕಾವ್ಯವಾಗಿ ಮಂಕುತಿಮ್ಮನ ಕಗ್ಗ.
ಇವು ಕನ್ನಡಭಾರತಿಯ ಗಂಗಾ-ಯಮುನಾ-ಸರಸ್ವತಿಗಳು. ಸರಸ್ವತೀ ಗುಪ್ತಗಾಮಿನಿ. ಗುಪ್ತಗಾಮಿನಿಯಾದರೂ ಎಲ್ಲ ನದೀಸಂಗಮಗಳಲ್ಲಿಯೂ ಸಾಕ್ಷಾತ್ಕರಿಸುವ ಕ್ಲೃ್ತವಾಹಿನಿ. ಇದೇ ರೀತಿ ಕಗ್ಗವೂ ಕೂಡ ಕನ್ನಡಿಗರ ಕೂಡಲಿಯಲ್ಲಿ ಮತ್ತೆ ಮತ್ತೆ ಮೈದಳೆಯುವ ಜ್ಯೋತಿರ್ಲಿಂಗ, ಚೈತನ್ಯವಿಸ್ಪುಲಿಂಗ. ಅದಕ್ಕೀಗ ಎಪ್ಪತ್ತೈದು ವರ್ಷಗಳಂತೆ. ಇರಲಿ; ಇದೇನೂ ದೊಡ್ಡ ಸಂಗತಿಯಲ್ಲ. ಕನ್ನಡನುಡಿಯಬ್ಬೆಗೆ ನಿತ್ಯಯೌವನವನ್ನು ಕೊಡುವ ಕೆಲವೇ ಸಂಜೀವನಿಗಳ ಪೈಕಿ ಕಗ್ಗವೂ ಒಂದು, ಕಗ್ಗವೇ ಒಂದು. ಇದನ್ನು ಬೆಳೆದ ಡಿ.ವಿ.ಜಿ.ಯವರ ವ್ಯಕ್ತಿತ್ವ ಹೈಮಾಚಲಸದೃಶ. ಇಲ್ಲಿ ತಾರಾಡಿ ಆ ಜ್ಞಾನಗಿರಿಯನ್ನು ಎತ್ತಿಕೊಳ್ಳಬಲ್ಲವರು ಪ್ರಾಣಪುತ್ರರು. ಆ ಶಕ್ತಿ ನಮ್ಮದಾಗಲಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ