ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮೂರು

1947ರಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಬೆಳಕು ಕಂಡಿತು. ನಾವೀಗ 72ನೇ ಸ್ವಾತಂತ್ರ್ಯೋ ತ್ಸವ ಆಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಹಸ್ರಾರು ಜನರು ಜೀವವನ್ನೇ ಕೊಟ್ಟಿದ್ದಾರೆ. ಲಕ್ಷಾಂತರ ದೇಶಪ್ರೇಮಿಗಳು ಸೆರೆವಾಸ ಅನುಭವಿಸಿದ್ದಾರೆ. ಅದೆಷ್ಟೋ ಮಹಾತ್ಮರ ನೆತ್ತರು ಹರಿದಿದೆ, ತ್ಯಾಗ-ಬಲಿದಾನಗಳು ನಡೆದಿವೆ. ಆಸ್ತಿ-ಪಾಸ್ತಿ, ಕುಟುಂಬ ಸರ್ವಸ್ವವನ್ನು ದೇಶಕ್ಕೆ ಸಮರ್ಪಿಸಿದವರಿದ್ದಾರೆ. ಇಂಥ ಐತಿಹಾಸಿಕ ಸಂಗ್ರಾಮಕ್ಕೆ ಕರ್ನಾಟಕದ ಹಲವು ಗ್ರಾಮಗಳೂ ಸಾಕ್ಷಿಯಾಗಿದ್ದಲ್ಲದೆ, ಹೋರಾಟಕ್ಕೆ ಪ್ರೇರಕ ಶಕ್ತಿಗಳಾಗಿವೆ. ಅಂಥ ಕೆಲ ಊರುಗಳ ವಿವರ ಇಲ್ಲಿದೆ.
ಸ್ವಾಭಿಮಾನದ ಶಿವಪುರ ಸತ್ಯಾಗ್ರಹ
1938ರ ಏಪ್ರಿಲ್​ನಲ್ಲಿ ಸಿದ್ದಲಿಂಗಯ್ಯ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಗ್ರಾಮದ ಶಿಂಷಾ ನದಿ ದಂಡೆ ಮೇಲೆ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಲು ತೀರ್ವನಿಸಲಾಯಿತು. ನಾಯಕರು ಧ್ವಜವಂದನೆ ಆಯೋಜಿಸಿದ್ದರು. ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಧ್ವಜಾರೋಹಣ ನಿಷೇಧಿಸಿದ್ದರು. 1938ರ ಏ.11, 12, 13ರಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ನೇತೃತ್ವದಲ್ಲಿ ಮೈಸೂರು ಯೂತ್ ಲೀಗ್ ಸಮಾವೇಶ ನಡೆಯಿತು. ಮರುದಿನ ಸಿದ್ದಲಿಂಗಯ್ಯ ಧ್ವಜಾರೋಹಣ ಮಾಡಿದ ತಕ್ಷಣವೇ ದಸ್ತಗಿರಿ ಮಾಡಲಾಯಿತು. ಎಚ್.ಸಿ. ದಾಸಪ್ಪ ಅಧ್ಯಕ್ಷತೆ ಸ್ವೀಕರಿಸಿದರು. ಆಜ್ಞೆ ಉಲ್ಲಂಘಿಸಿದ ಕಾರಣಕ್ಕೆ ಪುರುಷರನ್ನು ದಸ್ತಗಿರಿ ಮಾಡಿದಾಗ ಮಹಿಳೆಯರು ತಮ್ಮನ್ನೂ ದಸ್ತಗಿರಿ ಮಾಡುವಂತೆ ಧೈರ್ಯ ಮೆರೆದರು. ರಾಷ್ಟ್ರಧ್ವಜ ರಕ್ಷಿಸುವಲ್ಲಿ ವೀರಸ್ವರ್ಗ ಸೇರಿ ಎಂದು ಬಳ್ಳಾರಿ ಸಿದ್ದಮ್ಮ ಯುವಕರಿಗೆ ಕರೆ ನೀಡಿದ್ದರು. ಧ್ವಜ ರಕ್ಷಣೆಗೆ ಬಂದಿದ್ದ ಸ್ವಯಂಸೇವಕ ತಂಡದ ನಾಯಕಿಯಾಗಿ ಟಿ.ಸುನಂದಮ್ಮ ಇದ್ದರು. ಹೋರಾಟಕ್ಕೆ ತಿರುಮಲೇಗೌಡರು 7 ಎಕರೆ ಜಾಗ ಬಿಟ್ಟು ಕೊಟ್ಟಿದ್ದರು. 1974 ಫೆ.14ರಂದು ವಿಧಾನಸೌಧ ನಿರ್ವತೃ ಕೆಂಗಲ್ ಹನುಮಂತಯ್ಯ ಮೈಸೂರಿಗೆ ತರಳುವಾಗ ಶಿವಪುರದ ರೈಲ್ವೆ ಸ್ಟೇಷನ್ ವೃತ್ತದ ಬಳಿ ಕಾರು ನಿಲ್ಲಿಸುತ್ತಾರೆ. ಆಗವರಿಗೆ ತಾವು ಯುವ ವಕೀಲರಾಗಿ ಪಾಲ್ಗೊಂಡಿದ್ದ 1938ರ ಧ್ವಜ ಸತ್ಯಾಗ್ರಹ ನೆನಪಿಗೆ ಬರುತ್ತದೆ. ಅದರ ನೆನಪಿಗಾಗಿ ಇಲ್ಲೊಂದು ಸ್ಮಾರಕ ಭವನ ನಿರ್ವಿುಸಲು ನಿರ್ಧರಿಸುತ್ತಾರೆ. ಹಲವರ ಸಹಾಯ ಪಡೆದು ಸೌಧ ನಿರ್ವಿುಸಿ, 1979 ಸೆ.29ರಂದು ಉದ್ಘಾಟಿಸಲಾಯಿತು. ಈ ಸಮಾರಂಭಕ್ಕೆ ಅಂದಿನ ಸಿಎಂ ದೇವರಾಜ ಅರಸು ಕಾರಣಾಂತರಗಳಿಂದ ಬರಲಿಲ್ಲ. ಕೇಂದ್ರ ರೈಲ್ವೆ ಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ ಪಾಲ್ಗೊಂಡಿದ್ದರು.
ಸುರಪುರ ಸಂಗ್ರಾಮ ವೀರರು
200 ವರ್ಷ ದೇಶವನ್ನಾಳಿದ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ನಡೆದ ಅವಿರತ ಹೋರಾಟದಲ್ಲಿ ಯಾದಗಿರಿ ಜಿಲ್ಲೆ ಸುರಪುರ ಪಾತ್ರ ಪ್ರಮುಖವಾಗಿತ್ತು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಸಂಸ್ಥಾನದ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ದಕ್ಷಿಣ ಭಾರತದ ಅರಸರ ಮುಂದಾಳತ್ವ ವಹಿಸಿ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಅಲ್ಲದೆ ಹಿಂದು-ಮುಸ್ಲಿಮರು ಕೂಡಿ ಆಂಗ್ಲರ ವಿರುದ್ಧ ಹೋರಾ ಡಿದ್ದರು. ಔರಂಗಜೇಬ್ ಕ್ರಿ.ಶ.1705ರಲ್ಲಿ ಸುರಪುರ ಸಂಸ್ಥಾನದ ಮೇಲೆ ದಾಳಿ ನಡೆಸಿದಾಗ ಅಂದಿನ ಅರಸು ರಾಜಾ ಪಿತಂಬರ ಪಿಡ್ಡ ನಾಯಕ ಆತನನ್ನು ಸೋಲಿಸಿದ್ದ. ಅಲ್ಲದೆ ಔರಂಗಜೇಬ್ ಇದೇ ನೆಲದಲ್ಲಿ ಕೊನೆಯುಸಿರೆಳೆದಿದ್ದು ಎನ್ನುತ್ತದೆ ಇತಿಹಾಸ. ಇನ್ನು ದತ್ತು ಪುತ್ರರಿಗೆ ಹಕ್ಕಿಲ್ಲ ಎಂದು ಬ್ರಿಟಿಷ್ ಸರ್ಕಾರ ಕಾಯ್ದೆ ತಂದಾಗ ಕಿತ್ತೂರು ರಾಣಿ ಚೆನ್ನಮ್ಮ ಜತೆ ನಡೆದ ಕಾಳಗದಲ್ಲಿ ಕ್ಯಾಪ್ಟನ್ ಥ್ಯಾಕರೆ ಮೃತಪಟ್ಟ. ಆ ಚೆನ್ನಮ್ಮರನ್ನು ಬ್ರಿಟಿಷರು ಸೆರೆ ಹಿಡಿದು ಬೈಲಹೊಂಗಲ ಜೈಲಿನಲ್ಲಿಡುತ್ತಾರೆ. ಈ ವೇಳೆ ಸಂಗೊಳ್ಳಿ ರಾಯಣ್ಣ ಸುರಪುರ ಸಂಸ್ಥಾನಕ್ಕೆ ಬಂದು ರಾಜಾ ನಾಲ್ವಡಿ ವೆಂಕಟಪ್ಪ ನಾಯಕನ ಜತೆ ರ್ಚಚಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಸುರಪುರದ ಸೈನ್ಯದ ನೆರವು ಪಡೆಯುತ್ತಾನೆ. ಸುರಪುರ ಅರಸರ ಮತ್ತು ಬ್ರಿಟಿಷರ ಮಧ್ಯದ ಭೀಕರ ಕಾಳಗದಲ್ಲಿ ಆಂಗ್ಲರ ಅಧಿಕಾರಿ ಕ್ಯಾಪ್ಟನ್ ನ್ಯೂಬೆರಿ ಸತ್ತಿದ್ದು, ಆತನ ಸಮಾಧಿ ಇಂದಿಗೂ ರುಕ್ಮಾಪುರದಲ್ಲಿ ಇದೆ. ಬ್ರಿಟಿಷ್ ಅಧಿಕಾರಿಗಳ ಅನೇಕ ಸಮಾಧಿಗಳು ಸುರಪುರದಲ್ಲಿದ್ದು, ಗತ ಇತಿಹಾಸವನ್ನು ನೆನಪಿಸುತ್ತಿವೆ.
ಕರಭಾರಕ್ಕೆ ಸಿಡಿದೆದ್ದ ಭೀಮರಾಯರು!
ಗದಗ ಜಿಲ್ಲೆಯ ಮುಂಡರಗಿಯ ಭೀಮರಾಯರು ‘ಬಂಡಾಯದ ಭೀಮರಾಯರು’ ಎಂದೇ ಪ್ರಖ್ಯಾತರಾಗಿದ್ದರು. ಭೀಮರಾಯರು 1857-58ರಲ್ಲಿ ಹೂವಿನಹಡಗಲಿಯ ಮಾಮ್ಲೇದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರು ರೈತರ ಮೇಲೆ ಕರ ವಸೂಲಿ ನೀತಿ ಆರಂಭಿಸಿದರು. ಆ ಸಂದರ್ಭದಲ್ಲಿ ಮಳೆ ಇಲ್ಲದೇ ಬರ ಬಿದ್ದಿದ್ದರಿಂದ ರೈತರು ತೀವ್ರ ಸಂಕಷಕ್ಕೆ ಸಿಲುಕಿದ್ದರು. ಹೀಗಿದ್ದರೂ ಆಂಗ್ಲರು ಕರ ವಸೂಲಿ ಮಾಡಲೇಬೇಕೆಂಬ ಆದೇಶಿಸಿದ್ದನ್ನು ಖಂಡಿಸಿದ ಭೀಮರಾಯರು ಮಾಮ್ಲೇದಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೋರಾಟ ಆರಂಭಿಸಿದರು. ಇವರಿಗೆ ಹಮ್ಮಿಗಿ ಕೆಂಚನಗೌಡ ಬಹದ್ದೂರ ದೇಸಾಯಿ, ಸೊರಟೂರಿನ ವೆಂಕಟಾದ್ರಿ ದೇಸಾಯಿ, ನರಗುಂದ ಬಾಬಾಸಾಹೇಬರು ಸಾಥ್ ನೀಡಿದರು. ಜನಜಾಗೃತಿ ಮೂಡಿಸಿದರು. ಬಳಿಕ ಕೊಪ್ಪಳ ಕೋಟೆಯಲ್ಲಿ ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಮುಂಡರಗಿ ಭೀಮರಾಯರು, ಹಮ್ಮಿಗಿಯ ಕೆಂಚನಗೌಡ ಬಹದ್ದೂರ ದೇಸಾಯಿ ವೀರಮರಣವನ್ನಪ್ಪಿದರು. ಸ್ವಾತಂತ್ರ್ಯ್ಕಾಗಿ ಇವರು ಮನೆ ಬಿಟ್ಟು ಹೋರಾಟ ಮಾಡಿದ್ದರು.
ಗಾಂಧಿ ಸೇವಾ ಸಮ್ಮೇಳನಕ್ಕೆ ನೆಲೆ ಒದಗಿಸಿದ್ದ ಹುದಲಿ
ಗಾಂಧೀಜಿ ಒಂದು ವಾರ ನೆಲೆಸಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಬೆಳಗಾವಿಯ ಹುದಲಿಯಲ್ಲಿ ಇವತ್ತಿಗೂ ಖಾದಿ ಖದರ್ ಉಳಿದಿದೆ. ಬಾಲಗಂಗಾಧರ್ ತಿಲಕ್ ಜತೆ ಸ್ವಾತಂತ್ರ್ಯ್ಕಾಗಿ ಹೋರಾಡಿದ್ದ ಗಂಗಾಧರರಾವ್ ದೇಶಪಾಂಡೆ ಅವರ ಪ್ರಯತ್ನದ ಫಲವಾಗಿ 1937ರ ಏ.16ರಿಂದ 22ರ ವರೆಗೆ ಹುದಲಿಯಲ್ಲಿ ಗಾಂಧಿಸೇವಾ  ಸಮ್ಮೇಳನ ನಡೆದಿತ್ತು. ಇದರಲ್ಲಿ ಪಾಲ್ಗೊಂಡ ಗಾಂಧೀಜಿ, ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಆಚಾರ್ಯ ಕೃಪಲಾನಿ, ಅಬ್ದುಲ್ ಗಫಾರ್ ಖಾನ್ ಮತ್ತಿತರ ಗಣ್ಯರು ಗಡಿನಾಡ ಜನತೆಯಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು. ದೇಶಾದ್ಯಂತದ 10 ಸಾವಿರ ಜನರು ಪಾಲ್ಗೊಂಡಿದ್ದರು. ಆಗ ಒಂದು ವಾರ ಇದೇ ಪುಣ್ಯಭೂಮಿಯಲ್ಲಿ ನೆಲೆಸಿದ್ದ ಗಾಂಧೀಜಿ, ಸ್ವಾತಂತ್ರ್ಯ ಸಮಗ್ರ ಚಿತ್ರಣವನ್ನು ಜನರಿಗೆ ನೀಡಿದ್ದರು. ಸುಲಧಾಳ ರೈಲ್ವೆ ನಿಲ್ದಾಣದಲ್ಲಿಳಿದು ಕಾಲ್ನಡಿಗೆಯಲ್ಲಿ ಗ್ರಾಮ ಪ್ರವೇಶಿಸಿದ್ದ ಅವರು, ಸ್ವಾತಂತ್ರ್ಯ್ಕಾಗಿ ಏನೇನು ಮಾಡಬೇಕೆಂದು ರ್ಚಚಿಸಿದ್ದರು ಎಂದು ಪೂರ್ವಜರು ಮಾಹಿತಿ ಕೊಡುತ್ತಾರೆ. ಖಾದಿ ಕ್ರಾಂತಿ ಹಾಗೂ ಮಹಾತ್ಮ ಗಾಂಧೀಜಿ ಭೇಟಿ ಹಿನ್ನೆಲೆಯಲ್ಲಿ ಗಾಂಧಿ ಸ್ಮಾರಕ ಭವನ ನಿರ್ವಿುಸಲಾಗಿದೆ. ಅಲ್ಲಿ ಗಾಂಧೀಜಿ ಭೇಟಿ ಮತ್ತು ಗಾಂಧಿ ಸಮ್ಮೇಳನದ ಅಪರೂಪದ ಭಾವಚಿತ್ರಗಳಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವೇಳೆ 182 ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿದ್ದರು. ಈ ಪೈಕಿ ಹಲವರು ಸೆರೆವಾಸವನ್ನೂ ಅನುಭವಿಸಿದ್ದರು. ಹುದಲಿಯ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘದಿಂದ ವಾರ್ಷಿಕ 5.4 ಕೋಟಿ ರೂ. ಮೌಲ್ಯದ ಖಾದಿ ಉತ್ಪನ್ನಗಳು ಮಾರಾಟವಾಗುತ್ತಿವೆ. ಅಮೆಜಾನ್, ಫ್ಲಿಪ್​ಕಾರ್ಟ್​ಗಳಲ್ಲೂ ನಮ್ಮ ಉತ್ಪನ್ನಗಳು ಲಭ್ಯ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ಬಿಲಕುಂದಿ.
ಏಸೂರು ಕೊಟ್ಟರೂ ಈಸೂರು ಕೊಡೆವು
1942ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟ ರೂಪುಗೊಂಡಾಗ ಮೊದಲು ಸ್ಪಂದಿಸಿದ್ದು ಶಿಕಾರಿಪುರ ತಾಲೂಕಿನ ಈಸೂರು ಗ್ರಾಮಸ್ಥರು. ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಘೊಷಣೆಯೊಂದಿಗೆ ಆ ಪುಟ್ಟ ಗ್ರಾಮದ ಜನರು ಬ್ರಿಟಿಷ್ ಸಾಮ್ರಾಜ್ಯಶಾಹಿಗೇ ಸೆಡ್ಡು ಹೊಡೆದರು. ಈಸೂರು ದಂಗೆ ಬಳಿಕ ಸ್ವಾತಂತ್ರ್ಯ ಹೋರಾಟಗಾರರ ನಾಡಾಗಿ ಗುರುತಿಸಿಕೊಂಡಿತು ಶಿಕಾರಿಪುರ. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಶಾನುಭೋಗರು, ಪಟೇಲರನ್ನು ಇಲ್ಲಿನ ಜನ ಬಹಿಷ್ಕರಿಸಿ, ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಕಡತಗಳನ್ನು ಸುಟ್ಟುಹಾಕಿದರು. ಗ್ರಾಮದ ವೀರಭದ್ರಸ್ವಾಮಿ ದೇವಾಲಯ ಎದುರು ರಾಷ್ಟ್ರಧ್ವಜ ಹಾರಿಸಿ ಪ್ರತ್ಯೇಕ ಸರ್ಕಾರ, ಸಂವಿಧಾನ ಘೊಷಿಸಿಕೊಂಡರು. ಕಂದಾಯ ಪಾವತಿಗೆ ನಿರಾಕರಿಸಿದ ಪರಿಣಾಮ ಅಮಲ್ದಾರ್, ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಈಸೂರಿಗೆ ಬಂದು ರಾಷ್ಟ್ರಧ್ವಜವನ್ನು ಕಾಲಿನಿಂದ ಒದ್ದು ಅಪಮಾನಿಸಿದರು. ರೊಚ್ಚಿಗೆದ್ದ ಜನ ಅಧಿಕಾರಿಗಳನ್ನು ಥಳಿಸಿದರು. ಬ್ರಿಟಿಷ್ ಅಧಿಕಾರಿಗಳಿಗೆ 500 ರೂ. ದಂಡ ಹಾಕಿದರು, ಒಂಟಿ ಕಾಲಿನಲ್ಲಿ ನಿಲ್ಲಿಸಿದರು. ಗೋಲಿಬಾರ್​ಗೂ ಅಂಜದೆ ಹಲ್ಲೆ ನಡೆಸಿದ್ದರಿಂದ ಅಧಿಕಾರಿಗಳಿಬ್ಬರು ಸಾವಿಗೀಡಾದರು. ಈ ಘಟನೆ ದೇಶವ್ಯಾಪಿ ಕಾಡ್ಗಿಚ್ಚಿನಂತೆ ಹರಡಿತು. ಇಡೀ ಬ್ರಿಟಿಷ್ ಸಾಮ್ರಾಜ್ಯ ಈಸೂರು ದಂಗೆಯಿಂದ ತಲ್ಲಣಿಸಿ ಹೋಯಿತು. ಅಧಿಕಾರಿಗಳನ್ನು ಸಾಯಿಸಿದವರ ವಿರುದ್ಧ ಪ್ರತೀಕಾರಕ್ಕೆ ಬ್ರಿಟಿಷ್ ಆಡಳಿತ ಮುಂದಾಯಿತು. ಪೊಲೀಸರು ಊರಿಗೆ ನುಗ್ಗಿ ಸಿಕ್ಕವರ ಮೇಲೆ ಹಲ್ಲೆ ನಡೆಸಿದರು. ಲಾಟಿ ಏಟಿಗೂ ಅಳುಕದೆ ಇಲ್ಲಿನ ಜನ ಹೋರಾಡಿದರು. ದಂಗೆ, ಅಧಿಕಾರಿಗಳಿಬ್ಬರ ಹತ್ಯೆ ಆರೋಪದಲ್ಲಿ 24 ಜನರನ್ನು ಬಂಧಿಸಿ, ಐವರಿಗೆ ಗಲ್ಲು, 19 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಕೆ.ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ, ಶಂಕರಪ್ಪ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬಲಿದಾನಗೈದರು.
ವೀರರ ವಿದುರಾಶ್ವತ್ಥ!
ಪೌರಾಣಿಕ ಹಿನ್ನೆಲೆ ಹೊಂದಿರುವ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟದಿಂದ ಗಮನ ಸೆಳೆದಿದ್ದು, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂತಲೇ ಹೆಸರುವಾಸಿ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ವಿದುರಾಶ್ವತ್ಥ ಇದ್ದು, ಧೃತರಾಷ್ಟ್ರನ ಮಂತ್ರಿಯಾದ ವಿದುರನು ಇಲ್ಲಿ ಅಶ್ವತ್ಥ ಗಿಡ ನೆಟ್ಟು ಬೆಳೆಸಿದ ಹಿನ್ನೆಲೆಯಲ್ಲಿ ವಿದುರಾಶ್ವತ್ಥ ಎಂಬ ಹೆಸರು ಬಂತು. ಶಿವಪುರ ಧ್ವಜ ಸತ್ಯಾಗ್ರಹದಿಂದ ಪ್ರೇರಣೆಗೊಂಡ ಹೋರಾಟಗಾರರು ಇಲ್ಲಿ 1938ರ ಏ.25 ರಂದು ಧ್ವಜ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟ ಕೈಗೊಂಡಿದ್ದರು. ಆದರೆ, ಇದಕ್ಕೆ ಅನುಮತಿ ನೀಡದ ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಘೊಷಿಸಿತ್ತು. ಇದಕ್ಕೆ ಜಗ್ಗದ ದೇಶಭಕ್ತರು ವಂದೇಮಾತರಂ ಘೊಷಣೆಗಳೊಂದಿಗೆ ಧ್ವಜಾರೋಹಣ ನೆರವೇರಿಸಿ, ಸತ್ಯಾಗ್ರಹ ನಡೆಸಿದರು. ಇದರಿಂದ ಕೆರಳಿದ ಬ್ರಿಟಿಷ್ ಪೊಲೀಸರು ವಿವೇಚನಾ ರಹಿತರಾಗಿ ಗೋಲಿಬಾರ್ ನಡೆಸಿದಾಗ 32 ಮಂದಿ (ಆಂಗ್ಲರ ವರದಿ ಪ್ರಕಾರ 9 ಮಂದಿ) ಬಲಿಯಾಗಿ ಹಲವರು ಗಾಯಗೊಂಡರು. ಈ ಪ್ರಕರಣವು ಪಂಜಾಬ್​ನ ಜಲಿಯನ್ ವಾಲಾಬಾಗ್ ಮಾದರಿಯಲ್ಲೇ ನಡೆದಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ಆಯಿತು. ಗಾಂಧಿ ಸೂಚನೆಯಂತೆ ಇಲ್ಲಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್, ಆಚಾರ್ಯ ಕೃಪಲಾನಿ ಭೇಟಿ ನೀಡಿದರು. ಹೋರಾಟಗಾರರ ನೆನಪಿಗಾಗಿ ಇಲ್ಲಿ ವೀರಸೌಧ, ಸ್ಥೂಪ, ವೀರಗಲ್ಲು ನಿರ್ವಿುಸಲಾಗಿದೆ. ಸ್ವಾತಂತ್ರ್ಯ ಹೋರಾಟ ನೆನಪಿಸುವ ಚಿತ್ರಪಟ ಗ್ಯಾಲರಿ, ಗ್ರಂಥಾಲಯ ಹಾಗೂ ಬಯಲು ರಂಗ ಮಂದಿರ, ಉದ್ಯಾನ ನಿರ್ವಣದ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗುತ್ತದೆ.
ಕರ್ನಾಟಕದ ಬಾಡೋಲಿ ಅಂಕೋಲಾ
ಕರ್ನಾಟಕದ ಬಾಡೋಲಿ ಎಂಬ ಖ್ಯಾತಿಯ ಅಂಕೋಲಾ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಿದೆ. ಇಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ, ಜಂಗಲ್ ಸತ್ಯಾಗ್ರಹ ದೇಶದ ಗಮನ ಸೆಳೆದಿವೆ. 1930ರ ಏ. 12ರಂದು ಜಿಲ್ಲೆಯ ವಿವಿಧೆಡೆಗಳಿಂದ ಅಂಕೋಲಾಕ್ಕೆ ಆಗಮಿಸಿದ ಸತ್ಯಾಗ್ರಹಿಗಳೊಂದಿಗೆ ಗಾಂಧಿಯವರು ಉಪ್ಪಿಗೆ ತೆರಿಗೆ ವಿಧಿಸುವ ದಂಡೆ ಮುಟ್ಟಿ ಕಾಯ್ದೆ ಭಂಗ ಮಾಡುತ್ತಿದ್ದಂತೆ, ಇಲ್ಲಿನ ಎಂ.ಪಿ. ನಾಡಕರ್ಣಿ ನೇತೃತ್ವದಲ್ಲಿ ಹರಿ ಪೈ, ನಾಯಕ ಮಾಸ್ತರ್ ಸೇರಿ 9 ಜನರ ತಂಡವು, ಅಂಕೋಲಾದ ಪೂಜಗೇರಿಯ ಹಳ್ಳದಿಂದ ತಂದ ನೀರಿನಿಂದ ಉಪ್ಪು ತಯಾರಿಸಿ ಮಾರಾಟ ಮಾಡಿತು. ಅಲ್ಲದೆ, ಉಮಾಬಾಯಿ ಕುಂದಾಪುರ ನೇತೃತ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರೂ ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಇನ್ನೊಂದೆಡೆ  ಪಿ.ಡಿ. ಕರಮರಕರ ನೇತೃತ್ವದಲ್ಲಿ ಕರನಿರಾಕರಣೆ ಚಳವಳಿ ಸಹ ಅಂಕೋಲಾದಲ್ಲಿ ತೀವ್ರತೆ ಪಡೆದಿತ್ತು. ಆಗ ಬ್ರಿಟಿಷ್ ಸರ್ಕಾರದ ಆದೇಶದ ಮೇರೆಗೆ ಪೊಲೀಸರು ಅಂಕೋಲಾದ ವಿವಿಧ ಗ್ರಾಮಗಳಿಗೆ ತೆರಳಿ ಅಕ್ರಮವಾಗಿ ಆಸ್ತಿಗಳನ್ನು ಜಪ್ತಿ ಮಾಡಿದ್ದರಿಂದ ಹಲವರು ನಿರ್ಗತಿಕರಾಗಿದ್ದಲ್ಲದೆ, ಜೈಲು ಸೇರಬೇಕಾಯಿತು. ಚಳವಳಿಗಳಿಗೆ ಶೆಟ್ಗೇರಿ ಗ್ರಾಮವು ಕೇಂದ್ರ ಸ್ಥಾನವಾಗಿದ್ದರಿಂದ ಇದರ ನೆನಪಿಗಾಗಿ ಸತ್ಯಾಗ್ರಹ ಸ್ಮಾರಕ ಭವನ ಸ್ಥಾಪಿಸಲಾಯಿತು. ಬಾಸಗೋಡದಲ್ಲಿಯೂ ಗಾಂಧಿ ಮಂದಿರ ನಿರ್ವಿುಸಲಾಗಿದೆ. ಈ ಚಳವಳಿಯ ಸುವರ್ಣ ಮಹೋತ್ಸವವನ್ನು 1983ರಲ್ಲಿ ಅದ್ದೂರಿಯಾಗಿ ಆಚರಿಸಿದ್ದಲ್ಲದೆ, ಇಲ್ಲಿ ಸ್ವಾತಂತ್ರ್ಯ ಸಂಗ್ರಾಮ ಭವನವನ್ನೂ ನಿರ್ವಿುಸಲಾಗಿದೆ.
ಮುಧೋಳದ ಬದನೆಕಾಯಿ, ಪಡವಲಕಾಯಿ!
ಸ್ವಾತಂತ್ರ್ಯ ಹೋರಾಟದಲ್ಲಿ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳ ಪ್ರಮುಖ ಪಾತ್ರ ವಹಿಸಿದ್ದು, ಸಶಸ್ತ್ರ ಹೋರಾಟಕ್ಕೆ ಬೆಂಬಲ ನೀಡಿತ್ತು. ಇಲ್ಲಿನ ಜನ ಕೈ ಬಾಂಬ್​ಗಳನ್ನು ತರಕಾರಿ ಬುಟ್ಟಿಯಲ್ಲಿಟ್ಟು ತಲೆ ಮೇಲೆ ಹೊತ್ತು ನಿಗದಿತ ಸ್ಥಳದಲ್ಲಿಟ್ಟು ಬರುವ ಮೂಲಕ ಹೋರಾಟದ ಕಿಚ್ಚಿಗೆ ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದರು. ತೆಲಂಗಾಣ, ಕರ್ನಾಟಕ ಗಡಿ ಭಾಗದಲ್ಲಿರುವ ಈ ಗ್ರಾಮದಲ್ಲಿ 8 ಸ್ವಾತಂತ್ರ್ಯ ಹೋರಾಟಗಾರರು ಸಕ್ರಿಯವಾಗಿದ್ದರು. ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರಸ್ಥಾನವಾದ ಮುಧೋಳದಲ್ಲಿ ಹೋರಾಟಗಾರರು ಹೆಚ್ಚು ಎಂದರಿತ ಬ್ರಿಟಿಷ್ ಸರ್ಕಾರ, ನಿಜಾಮ್ ಸರ್ಕಾರಕ್ಕೆ ಮಾಹಿತಿ ನೀಡಿ ನಿಗಾ ವಹಿಸಲು ಸೂಚಿಸಿತ್ತು. ಇದರ ಭಾಗವಾಗಿಯೇ ನಿಜಾಮ್ ಸರ್ಕಾರ ಇಲ್ಲೊಂದು ಪ್ರವಾಸಿ ಮಂದಿರ ಸ್ಥಾಪಿಸಿತ್ತು. ಅಕ್ಕಪಕ್ಕದ ಹಳ್ಳಿಗಳಲ್ಲಿ ಕಚ್ಚಾ ಬಾಂಬ್ ತಯಾರಿಸಿ ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟ, ತೆಲಂಗಾಣದ ವಿಕಾರಾಬಾದ್​ಗಳಿಗೆ ಪೂರೈಸಲಾಗುತ್ತಿತ್ತು. ಕೈಬಾಂಬ್​ಗಳಿಗೆ ಬದನೆಕಾಯಿ ಅಂತಲೂ, ಮಚ್ಚುಗಳಿಗೆ ಪಡವಲಕಾಯಿ ಎಂದು ಹೆಸರಿಟ್ಟಿದ್ದರು. ಈ ಗುಪ್ತ ಕೋಡ್​ವರ್ಡ್ ಬಳಸಿಯೇ ಮೂರು ಬುಟ್ಟಿ ಬದನೆಕಾಯಿ, ಎರಡು ಸೂಡು (ಡಜನ್) ಪಡವಲಕಾಯಿ ಕಳುಹಿಸಿದ್ದೇನೆ ಎಂದು ಹೋರಾಟಗಾರರು ಒಕ್ಕಣಿಕೆ ಬರೆಯುತ್ತಿದ್ದರು. ಅದನ್ನು ನೋಡಿ, ಅಗತ್ಯವಿದ್ದಷ್ಟು ಸರಬರಾಜು ಮಾಡಲು ತಿಳಿಸುತ್ತಿದ್ದರು.
ನೆಲೆ ಕಲ್ಪಿಸಿದ್ದ ಕೊರಡೂರ
ಹಾವೇರಿ ತಾಲೂಕು ಕೊರಡೂರ ಗ್ರಾಮ ಸ್ವಾತಂತ್ರ್ಯ ಹೋರಾಟಗಾರರ ಪಾಲಿನ ಗರಡಿಮನೆಯಂತೆ ಕಾರ್ಯನಿರ್ವಹಿಸಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಲೆಂದೇ ಮೈಲಾರ ಮಹಾದೇವಪ್ಪ ನೇತೃತ್ವದಲ್ಲಿ ಹಲವು ಹೋರಾಟಗಾರರು ಗಾಂಧಿ ಸೇವಾಶ್ರಮವನ್ನು ಸ್ಥಾಪಿಸಿ, ಚಳವಳಿಯಲ್ಲಿ ಧುಮುಕುವವರಿಗೆ ತರಬೇತಿ ಹಾಗೂ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಪೊಲೀಸರ ಗುಂಡೇಟಿಗೆ ಬಲಿಯಾದ ಮೈಲಾರ ಮಹದೇವ, ತಿರಕಪ್ಪ ಮಡಿವಾಳರ, ಶರಣಯ್ಯ ಹಿರೇಮಠ ವಾಸವಾಗಿದ್ದುದು ಇಲ್ಲೇ. ಈ ಸೇವಾಶ್ರಮಕ್ಕೆ ಗಾಂಧಿ, ವಿನೋಭಾ ಭಾವೆ ಭೇಟಿ ನೀಡಿದ್ದರು. ಇಲ್ಲಿ ಸಂಗ್ರಾಮಕ್ಕೆ ರೂಪುರೇಷೆ ಸಿದ್ಧವಾಗುತ್ತಿದ್ದವು. ಸ್ವದೇಶಿ ಚಳವಳಿಯಿಂದ ಪ್ರೇರೇಪಿತರಾದ ಮಹದೇವಪ್ಪ ಈ ಆಶ್ರಮದಲ್ಲಿಯೇ ಚರಕಗಳಿಂದ ಖಾದಿ ಬಟ್ಟೆ ತಯಾರಿಸುತ್ತಿದ್ದರು. ಹೊಸರಿತ್ತಿಯ ಕಂದಾಯ ಇಲಾಖೆ ಮೇಲಿನ ದಾಳಿಗೆ ಸಂಚು ರೂಪುಗೊಂಡಿದ್ದು ಈ ಸೇವಾಶ್ರಮದಲ್ಲಿಯೇ. ಮೈಲಾರ ಮಹದೇವಪ್ಪರ ಮರಣದ ನಂತರ ಅನಾಥವಾಗಿದ್ದ ಸೇವಾಶ್ರಮಕ್ಕೆ ಮಾಜಿ ಶಾಸಕ ಡಾ. ಚಿತ್ತರಂಜನ್ ಕಲಕೋಟಿ ಕಾಯಕಲ್ಪ ಕಲ್ಪಿಸಿದ್ದರು. ಕಲಕೋಟಿಯವರ ತಂದೆ ಕರಿಯಪ್ಪನವರು ನೀನು ವೈದ್ಯನಾದರೆ ಯಾರ ಬಳಿಯಲ್ಲಿಯೂ ಹಣ ಪಡೆಯದೇ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದರಂತೆ. ಅವರ ಮಾತಿನಂತೆಯೇ ಡಾ. ಕಲಕೋಟಿ ಸುಮಾರು 40 ವರ್ಷ ಈ ಸೇವಾಶ್ರಮದಲ್ಲಿಯೇ ವೈದ್ಯ ವೃತ್ತಿ ಪ್ರಾರಂಭಿಸಿ ಯಾರಿಂದಲೂ ಹಣ ಪಡೆಯದೇ ರೋಗಿಗಳಿಗೆ ಚಿಕಿತ್ಸೆ ನೀಡಿದರು ಎನ್ನುತ್ತಾರೆ ಸ್ಥಳೀಯರಾದ ಸಂಗಪ್ಪ ಪೂಜಾರ.
ಜೀಣೋದ್ಧಾರ: ಕಳೆದ ವರ್ಷ ಸೇವಾಶ್ರಮಕ್ಕೆ ಜೀಣೋದ್ಧಾರ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಕೆಲ ತಿಂಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ.
ಸ್ವಾತಂತ್ರ್ಯ ಯೋಧರ ಗ್ರಾಮ ಮಸಬಿನಾಳ
ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಮಸಬಿನಾಳ ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಗ್ರಾಮದ ವಿರಕ್ತಮಠದ ಶಿವಾನಂದ ಶಿವಯೋಗಿ ಹಾಗೂ 167 ಸೇನಾನಿಗಳ ಹೋರಾಟದ ಕೊಡುಗೆ ಅವಿಸ್ಮರಣೀಯ. ಮಹಾತ್ಮ ಶಿವಾನಂದ ಶಿವಯೋಗಿಗಳು ಧಾರ್ವಿುಕ ಕಾರ್ಯಕ್ರಮದ ನೆಪದಲ್ಲಿ ಗಡಿನಾಡು ಗಾಂಧಿ ಹರ್ಡೆಕರ ಮಂಜಪ್ಪ, ಬಂಥನಾಳ ಶಿವಯೋಗಿ, ಕೌಜಲಗಿ ಹಣಮಂತರಾಯ ಸೇರಿ ಮುಂಚೂಣಿಯಲ್ಲಿದ್ದ ಹೋರಾಟಗಾರರನ್ನು ಮಠಕ್ಕೆ ಕರೆಸಿ ದೇಶಭಕ್ತಿ ಉಪನ್ಯಾಸ ನೀಡುತ್ತಿದ್ದರು. ಇದರಲ್ಲಿ ಕೌಜಲಗಿ ಹಣಮಂತರಾಯರು ಗಾಂಧಿ ಟೊಪ್ಪಿಗೆ ಹಾಕಿಕೊಂಡು ಪಾಲ್ಗೊಂಡ ಸುದ್ದಿ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟವಾಗಿ ದೇಶಾದ್ಯಂತ ಚರ್ಚೆಗೀಡಾಗಿತ್ತು. ಅವರನ್ನು ಬಂಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಡರಸನ್ ವಿಚಾರಣೆ ನಡೆಸಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮದ ನೂರಾರು ಯುವಕರು ದಂಗೆ ನಡೆಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ಹುಲಕುಂದ ಭೀಮ ಕವಿಗಳ ಗೀಗೀ ಪದಗಳ ಪ್ರಭಾವದಿಂದ ಗ್ರಾಮದ ತಿಪ್ಪಣ್ಣಪ್ಪ ಶಂಕರೆಪ್ಪ ಗುದ್ದಿ 50-60 ಹಾಡುಗಳನ್ನು ರಚಿಸಿ ಹಾಡಿದರು. ‘ಸಿಂಹಗಢ ವಿಜಯ’, ‘ಶಿವ ಸಂಭವ’ ಸೇರಿ ವಿವಿಧ ನಾಟಕಗಳನ್ನು ಯುವಕರು ಅಭಿನಯಿಸಿ ದೇಶಭಕ್ತಿ ಜಾಗೃತಿ ಮೂಡಿಸುತ್ತ ಸ್ವಾತಂತ್ರ್ಯ ಹೋರಾಟದ ಕಿಡಿಗಳಾದರು. 1930-40ರ ಅವಧಿಯಲ್ಲಿ ಮಸಬಿನಾಳದ ತಿಪ್ಪಣ್ಣಪ್ಪ ಗುದ್ದಿ, ಶಿವಪ್ಪ ಮಡಗೊಂಡ, ಮಲ್ಲಪ್ಪ ಕುಂಬಾರ, ಸದಪ್ಪ ಕಾರಜೋಳ, ವೀರಭದ್ರಪ್ಪ ರಂಜಣಗಿ, ಗುರಪ್ಪ ಸಿಂದಗಿ, ಈರಪ್ಪ ಬಡಿಗೇರ, ಶಿವಪ್ಪ ಬಾಗೇವಾಡಿ, ರಾಮಣ್ಣ ಮ್ಯಾಗೇರಿ, ದಾನಪ್ಪ ನಾಟಿಕಾರ, ಇಸ್ಮಾಯಿಲಸಾಬ ಹತ್ತರಕಿಹಾಳ, ಶಿವಪ್ಪ ಹಡಪದ, ರಾಚಪ್ಪ ಬರಡೆ, ಶಂಕರೆಪ್ಪ ನಾಗರಾಳ, ಬಸಪ್ಪ ಬೇವನೂರ, ಬಾಳಪ್ಪ ಬೋಸಗಿ ಸೇರಿ 167ಕ್ಕೂ ಹೆಚ್ಚು ಯುವಕರು ಮನೆ-ಸಂಸಾರ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....