ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಆಧಾರ್​ಗೆ ಸಾಂವಿಧಾನಿಕ ಸಿಂಧುತ್ವ,

ಭಾರತದ ನ್ಯಾಯಾಂಗ ಇತಿಹಾಸದ ಪುಟಗಳಲ್ಲಿ ಬುಧವಾರ ದಾಖಲೆ ದಿನವಾಗಿ ಸೇರ್ಪಡೆಯಾಯಿತು. ಆಧಾರ್ ಕಾರ್ಡ್​ನ ಸಿಂಧುತ್ವ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಸುಪ್ರೀಂಕೋರ್ಟ್, ಆಧಾರ್​ನ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದ್ದು ಒಂದೆಡೆಯಾದರೆ ಎಸ್​ಸಿ, ಎಸ್​ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಷರತ್ತುಬದ್ಧ ಸಮ್ಮತಿ ನೀಡುವ ಮೂಲಕ ಮತ್ತೊಂದು ಜಿಜ್ಞಾಸೆಗೂ ತೆರೆ ಎಳೆಯಿತು. ಮತ್ತೊಂದೆಡೆ ಸಾಂವಿಧಾನಿಕ ಮಹತ್ವ ಪಡೆದಿರುವ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕೆ ಸಮ್ಮತಿಸುವ ಐತಿಹಾಸಿಕ ನಿರ್ಧಾರ ಪ್ರಕಟಿಸಿತು.
ಒಂದು ದೇಶ, ಒಂದೇ ಆಧಾರ
ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿ ಉದ್ದೇಶದಿಂದ ಸಂಗ್ರಹಿಸುವ ಮಾಹಿತಿಗಳು ಖಾಸಗಿತನದ ಉಲ್ಲಂಘನೆ ಆಗದೆಂದು ಸ್ಪಷ್ಟಪಡಿಸುವ ಮೂಲಕ ಸುಪ್ರೀಂಕೋರ್ಟ್ ಬುಧವಾರ ಆಧಾರ್ ಕಾರ್ಡ್​ನ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1 ಬಹುಮತದಲ್ಲಿ ಆಧಾರ್ ಕಾಯ್ದೆಯನ್ನು ಸಿಂಧುಗೊಳಿಸಿತು.
ಆಧಾರ್ ಯೋಜನೆಯನ್ನು ದೇಶಕ್ಕೆ ಪರಿಚಯಿಸಿದ್ದ ಹಳೆಯ ಪಕ್ಷವೇ ಅದರಿಂದಾಗುವ ಲಾಭ ತಿಳಿದುಕೊಂಡಿಲ್ಲ. ಆಧಾರ್​ನಿಂದ ಪ್ರತಿವರ್ಷ 90 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಸುಪ್ರೀಂಕೋರ್ಟ್ ಆದೇಶ ಐತಿಹಾಸಿಕ.
| ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ
ಸುಪ್ರೀಂ ತೀರ್ಪೆನು?
ಆಧಾರ್ ಮಾಹಿತಿಗಳ ಸಂರಕ್ಷಣೆಗಾಗಿ ಕೇಂದ್ರ ಶೀಘ್ರ ಕಠಿಣ ಕಾನೂನು ರಚಿಸಬೇಕು
ಅಕ್ರಮವಾಸಿಗಳಿಗೆ ಆಧಾರ್ ಕಾರ್ಡ್ ಸಿಗದಂತೆ ನೋಡಿಕೊಳ್ಳಬೇಕು
ಖಾಸಗಿ, ಕಾಪೋರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿ ನೀಡುವುದಕ್ಕೆ ಅವಕಾಶವಿದ್ದ ಆಧಾರ್ ಕಾಯ್ದೆಯ ಸೆಕ್ಷನ್ 57 ರದ್ದು

ಸುಪ್ರೀಂ ನಿರ್ಧಾರ ದೂರಗಾಮಿ ಆಧಾರ
ಜಾರಿಗೆ ಬಂದಾಗಿನಿಂದಲೂ ಒಂದಿಲ್ಲೊಂದು ಗೊಂದಲ, ವಿವಾದಕ್ಕೆ ತುತ್ತಾಗಿದ್ದ ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುವ ಮೂಲಕ ಜನರಲ್ಲಿದ್ದ ಆತಂಕವನ್ನು ತುಸು ದೂರಮಾಡಿದೆ. ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿ ಕಾರಣದಿಂದ ಸಂಗ್ರಹಿಸಿರುವ ಮಾಹಿತಿಗಳು ಖಾಸಗಿತನದ ಉಲ್ಲಂಘನೆಯಾಗುವುದಿಲ್ಲ. ಈ ಮಾಹಿತಿಗಳ ಸಂರಕ್ಷಣೆಗೆ ಶೀಘ್ರವೇ ಕಠಿಣ ಕಾನೂನು ರಚಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸುವ ಮೂಲಕ ವೈಯಕ್ತಿಕ ಮಾಹಿತಿ ಸೋರಿಕೆ ತಡೆಗೆ ಕ್ರಮ ಕೈಗೊಂಡಿದೆ. ಸುದೀರ್ಘ ವಿಚಾರಣೆ ಬಳಿಕ ಸಿಜೆಐ ದೀಪಕ್ ಮಿಶ್ರಾ, ಎ.ಕೆ.ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಇಲ್ಲಿವೆ.
ನ್ಯಾ.ಡಿ.ವೈ. ಚಂದ್ರಚೂಡ್ ಹೇಳಿದ್ದೇನು?
ಆಧಾರ್ ಕಾಯ್ದೆಯನ್ನು ಹಣಕಾಸು ವಿಧೇಯಕ ಹಾಗೂ ಸಂವಿಧಾನದ 110ನೇ ವಿಧಿ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ. ದೇಶದ ಭದ್ರತೆ ಹಾಗೂ ಇತರ ವಿಚಾರಗಳನ್ನಿರಿಸಿಕೊಂಡು ತಂದಿರುವ ಆಧಾರ್ ಕಾಯ್ದೆಯನ್ನು ರಾಜ್ಯಸಭೆಯಿಂದ ದೂರವಿಟ್ಟು ಅನುಮೋದನೆ ಪಡೆಯುವುದು ಸಂವಿಧಾನ ಬಾಹಿರ. ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಾಗಿದೆ.
 ಆಧಾರ್ ಯೋಜನೆಗೆ ಮಾಹಿತಿ ಪಡೆಯುವ ಮುಂಚೆ ನಾಗರಿಕರಿಂದ ಸಮ್ಮತಿಯ ಪತ್ರ ಪಡೆದಿಲ್ಲ.
ಆಧಾರ್ ನೋಂದಣಿ ಸಂದರ್ಭದಲ್ಲಿ ಮಾಹಿತಿ ಸೋರಿಕೆ ಸಾಧ್ಯತೆಯಿದೆ ಎಂದು ಪ್ರಾಧಿಕಾರವೇ ಹೇಳಿರುವಾಗ ನಾಗರಿಕರ ಖಾಸಗಿತನದ ಉಲ್ಲಂಘನೆಯಾಗುತ್ತದೆ.
ಆಧಾರ್ ಕಾಯ್ದೆ ಅಥವಾ ನಿಯಮಗಳಲ್ಲಿ ಎಲ್ಲಿಯೂ ಆಧಾರ್ ಬಳಕೆದಾರರ ಸಮ್ಮತಿ ಬಗ್ಗೆ ಸ್ಪಷ್ಟತೆ ನೀಡಲಾಗಿಲ್ಲ.
ಆಧಾರ್​ನಲ್ಲಿ ಬಯೋಮೆಟ್ರಿಕ್ ಮಾಹಿತಿಯೇ ಪ್ರಮುಖವಾಗಿದ್ದು, ಒಂದೊಮ್ಮೆ ಈ ಮಾಹಿತಿ ಹೊಂದಾಣಿಕೆಯಾಗದಿದ್ದರೆ ಸವಲತ್ತು ನಿರಾಕರಿಸುವುದು ಸಂವಿಧಾನ ಬಾಹಿರ.
ಆಧಾರ್ ಯೋಜನೆಯಿಂದ ನಾಗರಿಕರ ಮೇಲೆ ಕಣ್ಗಾವಲಿಡುವ ಅಪಾಯವಿದೆ.
ಸರ್ಕಾರೇತರ ವ್ಯಕ್ತಿಗಳಿಗೆ ಆಧಾರ್ ಮಾಹಿತಿ ಹಂಚಿಕೆ ಮಾಡಿಕೊಳ್ಳುವುದು ಅಸಾಂವಿಧಾನಿಕ.
ಕಾಯ್ದೆ ರಚನೆಗೂ ಮೊದಲು ಆಧಾರ್ ನೋಂದಣಿ ಮಾಡಿರುವುದು ಕಾನೂನು ಬಾಹಿರ.
ಆಧಾರ್ ಮಾಹಿತಿಗಳು ಎಲ್ಲೆಡೆ ಇರುವುದರಿಂದ ಹೊಸದಾಗಿ ವ್ಯಕ್ತಿಗಳ ಪ್ರೊಫೈಲ್ ತಯಾರಿಸಲು ಅನುವು ಮಾಡಿಕೊಡುತ್ತದೆ, ಇದು ಆತಂಕಕಾರಿ ವಿಚಾರ.
ಮೊಬೈಲ್ ಬಳಕೆದಾರರಿಂದ ಪಡೆದಿರುವ ಎಲ್ಲ ಬಯೋಮೆಟ್ರಿಕ್ ಹಾಗೂ ಆಧಾರ್ ಮಾಹಿತಿಗಳನ್ನು ಟೆಲಿಕಾಂ ಕಂಪನಿಗಳು ಅಳಿಸಿಹಾಕಬೇಕು.
2009ರಿಂದ ಇವತ್ತಿನವರೆಗಿನ ಎಲ್ಲ ಆಧಾರ್ ಯೋಜನೆಗಳು ಸಂವಿಧಾನದ ಮಾನ್ಯತೆಯಿಲ್ಲದೆ ನಡೆಯುತ್ತಿವೆ.
ಮೂವರು ಜಡ್ಜ್​ಗಳು, 9 ಪ್ರಶ್ನೆಗಳಿಗೆ ಉತ್ತರ
 ಕಣ್ಗಾವಲಿನ ರಾಜ್ಯ ನಿರ್ಮಾಣ ಆಧಾರ್ ಯೋಜನೆಯ ಉದ್ದೇಶವಲ್ಲ. ಆಧಾರ್ ಕಾರ್ಯವೈಖರಿಯಿಂದ ಅದು ಸಾಬೀತಾಗಿದೆ. ಕಾಯ್ದೆಯಲ್ಲಿನ ಅಂಶಗಳು ಸಂವಿಧಾನಕ್ಕೆ ಪೂರಕವಾಗಿವೆ. ಕೇಂದ್ರ ಸರ್ಕಾರವೇ ಡೇಟಾ ಸುರಕ್ಷತೆಗೆ ಕಾಯ್ದೆ ತರುತ್ತಿರುವುದು ಸ್ವಾಗತಾರ್ಹ. ಆದರೆ ಶೀಘ್ರವಾಗಿ ಕಾಯ್ದೆ ರಚಿಸಬೇಕು.
 ಆಧಾರ್ ಯೋಜನೆಗೆ ಕಾಯ್ದೆಯ ಹಿನ್ನೆಲೆಯಿದೆ. ದೇಶದ ಹಿತಕ್ಕಾಗಿ ಈ ಯೋಜನೆ ಅನುಷ್ಠಾನವಾಗಿದೆ. ಸರ್ಕಾರದ ಹೇಳಿಕೆ ಪ್ರಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ದೇಶದ ಹಿತಕ್ಕಾಗಿ ಸರ್ಕಾರವು ಕಾಯ್ದೆಗೆ ಬದ್ಧವಾಗಿ ಯೋಜನೆ ರೂಪಿಸಿದೆ. ಇದರಲ್ಲಿ ಖಾಸಗಿತನದ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಈ ಯೋಜನೆ ನೆಪದಲ್ಲಿ ಯಾವುದೇ ಸರ್ಕಾರಿ ಯೋಜನೆಗಳ ಫಲಾನುಭವಿಗೆ ಸವಲತ್ತು ನಿರಾಕರಿಸುವುದನ್ನು ಕೋರ್ಟ್ ಆಕ್ಷೇಪಿಸುತ್ತದೆ. ಅಷ್ಟಕ್ಕೂ ಇದು ವಿಶಿಷ್ಟ ಗುರುತಿನ ಯೋಜನೆಯಾಗಿದ್ದು, ಇದನ್ನು ನಕಲು ಮಾಡಿ ವ್ಯಕ್ತಿಯ ಇನ್ನೊಂದು ಪ್ರೊಫೈಲ್ ರಚಿಸಲು ಸಾಧ್ಯವೇ ಇಲ್ಲ.
ಪಾಲಕರ ಒಪ್ಪಿಗೆ ಪಡೆಯದೇ ಮಕ್ಕಳನ್ನು ಕಾಯ್ದೆ ವ್ಯಾಪ್ತಿಗೆ ತರಕೂಡದು. ಅವರು ಪ್ರೌಢಾವಸ್ಥೆಗೆ ಬಂದ ಕೂಡಲೇ ಸಮ್ಮತಿ ಇರದಿದ್ದರೆ ಇದರಿಂದ ಹೊರಹೋಗುವ ಅವಕಾಶವನ್ನು ನೀಡಬೇಕು. ಆದರೆ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ನೀಡುವ ವಿಚಾರದಲ್ಲಿ ಆಧಾರ್ ಕಡ್ಡಾಯ ಮಾಡಕೂಡದು.
ಕಾಯ್ದೆಯ ಎಲ್ಲ ಸೆಕ್ಷನ್​ಗಳು ಸಂವಿಧಾನಬಾಹಿರವಲ್ಲ. ಸೆಕ್ಷನ್ 33(1), 33(2), 47 ಹಾಗೂ 57 ಮಾತ್ರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ.
ಸಂವಿಧಾನದ ಬದ್ಧತೆ, ಉತ್ತಮ ಆಡಳಿತಕ್ಕೆ ಈ ಕಾಯ್ದೆ ಪೂರಕವಾಗಿದೆ.
ರಾಜ್ಯಸಭೆಯ ಮಹತ್ವವನ್ನು ಕೋರ್ಟ್ ಪರಿಗಣಿಸುತ್ತದೆ. ಆದರೆ ಸರ್ಕಾರದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಕಾಯ್ದೆಯಾಗಿದ್ದರೆ ಲೋಕಸಭಾ ಅಧ್ಯಕ್ಷರು ಹಣಕಾಸು ವಿಧೇಯಕವನ್ನಾಗಿ ಪರಿಗಣಿಸಬಹುದಾಗಿದೆ. ಕಾಯ್ದೆಯಲ್ಲಿನ ಬಹುತೇಕ ಅಂಶಗಳು ಹಣಕಾಸು ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಇತರೆ ವಿಚಾರಗಳನ್ನು ಈಗಾಗಲೇ ಕೋರ್ಟ್ ರದ್ದುಪಡಿಸಿದೆ. ಹೀಗಾಗಿ ಆಧಾರ್ ಕಾಯ್ದೆಯು ಹಣಕಾಸು ವಿಧೇಯಕ ಹಾಗೂ ಸಂವಿಧಾನ ವಿಧಿ 110ರ ವ್ಯಾಪ್ತಿಗೆ ಬರುತ್ತದೆ. ಲೋಕಸಭೆ ಅಧ್ಯಕ್ಷರ ತೀರ್ಮಾನ ಸಮರ್ಪಕವಾಗಿದೆ.
ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 139ಎಎ ಸೇರ್ಪಡೆಯು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಕಾಯ್ದೆ ಹಾಗೂ ಆಧಾರ್ ಯೋಜನೆ ಪರಿಶೀಲನೆ ಬಳಿಕ ಖಾಸಗಿತನದ ಉಲ್ಲಂಘನೆ ಎಂದು ಎನಿಸಿಲ್ಲ. ಪುಟ್ಟಸ್ವಾಮಿ ಆದೇಶದಲ್ಲಿಯೂ ಇದನ್ನೇ ವಿವರಿಸಲಾಗಿದೆ.
ಈ ಅಂಶವು ವ್ಯಕ್ತಿಯ ಖಾಸಗಿತನಕ್ಕೆ ನೇರ ಧಕ್ಕೆ ತರುತ್ತದೆ. ಆಧಾರ್ ಸಂಖ್ಯೆ ಜೋಡಣೆ ಮಾಡಿಲ್ಲ ಎಂದು ವ್ಯಕ್ತಿಯ ಬ್ಯಾಂಕ್ ಖಾತೆ ನಿರ್ವಹಿಸಲು ಅವಕಾಶ ನೀಡದಿರುವುದು ಸಂವಿಧಾನ ಬಾಹಿರ. ಅಷ್ಟಕ್ಕೂ ಕಪ್ಪು ಹಣ ಇರಿಸುವವರು ಅಥವಾ ಅಕ್ರಮ ಹಣ ವರ್ಗಾವಣೆಗೆ ಮಾಡುವವರು ಬ್ಯಾಂಕನ್ನು ಅವಲಂಬಿಸಿರುವುದಿಲ್ಲ.
ದೂರಸಂಪರ್ಕ ಇಲಾಖೆ ಹೊರಡಿಸಿರುವ ಈ ಸುತ್ತೋಲೆಗೆ ಯಾವುದೇ ಕಾನೂನು ಮಾನ್ಯತೆಯಿಲ್ಲ. 0ಅದಲ್ಲದೇ ಆಧಾರ್ ಕಾಯ್ದೆಯಲ್ಲಿ ಇದಕ್ಕೆ ಸುರಕ್ಷತೆಯೂ ಇಲ್ಲ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಆಧಾರ್ ಜೋಡಣೆ ಕಾನೂನು ಬಾಹಿರ.
 ನ್ಯಾ.ಅಶೋಕ್ ಭೂಷಣ್ ಹೇಳಿದ್ದೇನು?
ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ಇಬ್ಬರು ನೀಡಿರುವ ಆದೇಶಕ್ಕೆ ಬಹುತೇಕ ಸಮ್ಮತಿ.
ಮಾಹಿತಿ ಕಲೆ ಹಾಕುವುದು ಹಾಗೂ ಸಂಗ್ರಹಿಸಿಡುವುದು ಮೂಲಭೂತ ಹಕ್ಕಿಗೆ ವಿರೋಧವಾಗಿಲ್ಲ.
ಭದ್ರತಾ ಕಾರಣಗಳಿಗೆ ಮಾಹಿತಿ ಕಲೆಹಾಕುವುದು ಅನಿವಾರ್ಯ. ಇದನ್ನು ಅಸಾಂವಿಧಾನಿಕ ಎನ್ನಲಾಗದು.
ಸೆಕ್ಷನ್ 47ರಲ್ಲಿನ ಅಂಶಗಳು ಕಾನೂನು ಬದ್ಧವಾಗಿವೆ.
 ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮರ್ಪಕವಾಗಿದೆ.
ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಏನು?
ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಜೋಡಣೆ ಬೇಡ
ಸರ್ಕಾರದ ಯೋಜನೆಗಳಿಗೆ ಆಧಾರ್ ಕಡ್ಡಾಯಕ್ಕೆ ವಿರೋಧ
ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕೆ ಆಧಾರ್ ಕಡ್ಡಾಯದಿಂದ ಮಕ್ಕಳ ಸುಳ್ಳು ಲೆಕ್ಕ ನಿಯಂತ್ರಿಸಲಾಗುತ್ತಿತ್ತು. ಇನ್ನು ಈ ಯೋಜನೆಗೂ ಅವಕಾಶವಿಲ್ಲ.
ಭದ್ರತಾ ಕಾರಣಗಳಿಗೆ ಆಯ್ದ ವ್ಯಕ್ತಿಗಳ ಮಾಹಿತಿ ಹಂಚಿಕೆ.
ಮುಂದಿನ ಹಾದಿಯೇನು?
ಸಂವಿಧಾನ ಪೀಠವು ಅಸಿಂಧು ಗೊಳಿಸಿರುವ ಕಾಯ್ದೆಯ ಸೆಕ್ಷನ್ ಕುರಿತು ಮರುಪರಿಶೀಲನಾ ಅರ್ಜಿ
ಆಧಾರ್ ಕಾಯ್ದೆಗೆ ತಿದ್ದುಪಡಿ ಮೂಲಕ ಬೇರೆ ರೂಪದಲ್ಲಿ ಕಾಯ್ದೆಯ ಅಂಶಕ್ಕೆ ಮರುಜೀವ
ನ್ಯಾಯಪೀಠ ಅಸಿಂಧುಗೊಳಿಸಿರುವ ಅಂಶಗಳಿಗೆ ಇನ್ನಷ್ಟು ಕಾನೂನು ಬಲ ನೀಡಿ ತಿದ್ದುಪಡಿ

ಆಧಾರ್ ಮಾಹಿತಿ ನೀಡಿದವರ ಕಥೆಯೇನು?
ಈಗಾಗಲೇ ಖಾಸಗಿ ಸಂಸ್ಥೆ, ಬ್ಯಾಂಕ್ ಹಾಗೂ ಇತರ ವೇದಿಕೆಗಳಲ್ಲಿ ಹಂಚಿಕೆ ಯಾಗಿರುವ ಆಧಾರ್ ಮಾಹಿತಿಯ ಕಥೆಯೇನು ಎನ್ನುವ ಬಗ್ಗೆ ಆದೇಶದಲ್ಲಿ ಸ್ಪಷ್ಟತೆಯಿಲ್ಲ. ಸಾರ್ವಜನಿಕರು ಆಧಾರ್ ಜೋಡಣೆ ಮಾಡಿರುವುದನ್ನು ಹಿಂಪಡೆಯಬಹುದೇ ಎಂಬ ಬಗೆಗೂ ಮಾಹಿತಿ ನೀಡಿಲ್ಲ. ಆದರೆ ನ್ಯಾ.ಚಂದ್ರಚೂಡ್ ಮಾತ್ರ ಈ ಕುರಿತು ಉಲ್ಲೇಖಿಸಿದ್ದು, 6 ತಿಂಗಳಲ್ಲಿ ಎಲ್ಲ ಮಾಹಿತಿ ಅಳಿಸಿಹಾಕಬೇಕು ಎಂದಿದ್ದಾರೆ. ಆದರೆ ಸರ್ಕಾರವೇ ಈ ಕುರಿತು ನೀತಿ ರೂಪಿಸಬೇಕಿದೆ.
ಸ್ವಾಗತಾರ್ಹ ಎಂದ ನ್ಯಾ.ಪುಟ್ಟಸ್ವಾಮಿ
ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಮೂಲ ಅರ್ಜಿದಾರ, ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ, ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸಂಪೂರ್ಣವಾಗಿ ನೋಡಿಲ್ಲ. ಆದರೆ, ಇದೊಂದು ಅವಿಭಜಿತ ಮತ್ತು ಬಹುಮತದ ತೀರ್ಪು ಆಗಿದ್ದು, ಅದನ್ನು ಸ್ವಾಗತಿಸುತ್ತೇನೆ. ಆದಾಯ ತೆರಿಗೆಗೆ ಆಧಾರ್ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಅಂಶ. ಆಧಾರ್ ಕಾಯ್ದೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಕೆಲವೊಂದು ಸೆಕ್ಷನ್​ಗಳನ್ನು ರದ್ದುಪಡಿಸಿದೆ. ಅದರ ಅನುಸಾರ ಕಾಯ್ದೆಗೆ ತಿದ್ದುಪಡಿ ತರುವ ಕಾರ್ಯವಾಗಬೇಕು ಎಂದರು.
ಪುಟ್ಟಸ್ವಾಮಿ ಹಿನ್ನೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯವರಾದ ನ್ಯಾ. ಕೆ.ಎಸ್. ಪುಟ್ಟಸ್ವಾಮಿ ಹುಟ್ಟಿದ್ದು 1926ರಲ್ಲಿ. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದ ಇವರು 1952ರಲ್ಲಿ ವೃತ್ತಿ ಜೀವನ ಆರಂಭಿಸಿದರು. 1977ರಿಂದ 1988ರವರೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಪುಟ್ಟಸ್ವಾಮಿ, ನಿವೃತ್ತಿ ಬಳಿಕ ಬೆಂಗಳೂರಿನ ಸಿಎಟಿ ಪೀಠದ ಉಪಾಧ್ಯಕ್ಷರಾಗಿ, ಆಂಧ್ರಪ್ರದೇಶ ಆಡಳಿತಾತ್ಮಕ ನ್ಯಾಯ ಮಂಡಳಿ ಅಧ್ಯಕ್ಷರಾಗಿ, ಆಂಧ್ರಪ್ರದೇಶ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಆಧಾರ್​ನಿಂದ ಕಣ್ಗಾವಲು ರಾಜ್ಯ ನಿರ್ಮಾಣವಾಗುವುದಿಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬಡವರಿಗೆ ಸರ್ಕಾರಿ ಸವಲತ್ತುಗಳು ಸಿಗಲು ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ.
| ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಸಚಿವ
ಕಾಂಗ್ರೆಸ್ ಪಾಲಿಗೆ ಆಧಾರ್ ಎನ್ನುವುದು ಅಭಿವೃದ್ಧಿಗೆ ಪೂರಕವಾಗಿತ್ತು. ಆದರೆ ಬಿಜೆಪಿಗೆ ಜನರ ಮೇಲಿನ ಕಣ್ಗಾವಲಿಗೆ ಸೀಮಿತವಾಗಿತ್ತು. ಆಧಾರ್ ಕಲ್ಪನೆ ಹಾಗೂ ಕಾಂಗ್ರೆಸ್ ನಿಲುವು ಬೆಂಬಲಿಸಿದ್ದಕ್ಕೆ ಸುಪ್ರೀಂ ಕೋರ್ಟ್​ಗೆ ಧನ್ಯವಾದ.
| ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
ಕಾಯ್ದೆಯ ಯಾವ ಸೆಕ್ಷನ್ ಅಸಿಂಧು
ಸೆ.33(1): ಜಿಲ್ಲಾ ಕೋರ್ಟ್ ಆದೇಶ ಪಡೆದು ವ್ಯಕ್ತಿಯ ಆಧಾರ್ ಮಾಹಿತಿ ಹಂಚಿಕೆ. ಕೋರ್ಟ್ ಅಭಿಪ್ರಾಯ: ಇದು ಸಂವಿಧಾನ ಬಾಹಿರ ಅಂಶವಾಗಿದ್ದು, ವ್ಯಕ್ತಿಯ ಅಭಿಪ್ರಾಯ ಪಡೆದು ಮಾಹಿತಿ ಹಂಚಿಕೆ ಮಾಡಲು, ಉನ್ನತ ಕೋರ್ಟ್​ಗಳಿಗೆ ಮೇಲ್ಮನವಿ ಹೋಗುವಂತೆ ತಿದ್ದುಪಡಿ ಮಾಡಬಹುದು.
ಸೆ. 33(2): ರಾಷ್ಟ್ರೀಯ ಭದ್ರತಾ ಕಾರಣಗಳಿಗೆ ಕೇಂದ್ರದ ಜಂಟಿ ಕಾರ್ಯದರ್ಶಿ ನಂತರದ ಹುದ್ದೆಯ ಅಧಿಕಾರಿಗಳು ಮಾಹಿತಿ ಪರಿಶೀಲಿಸಬಹುದು. ಕೋರ್ಟ್ ಅಭಿಪ್ರಾಯ: ದೇಶದ ಭದ್ರತೆ ದೃಷ್ಟಿಯಿಂದ ಇಂತಹ ಅವಕಾಶಗಳ ಅಗತ್ಯವಿದೆ. ಆದರೆ ಇದನ್ನು ಸರ್ಕಾರಕ್ಕೆ ಸೀಮಿತಗೊಳಿಸಿದರೆ ದುರುಪಯೋಗವಾಗುವ ಸಾಧ್ಯತೆಯಿದೆ. ಜಂಟಿ ಕಾರ್ಯದರ್ಶಿ ಜತೆಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಯನ್ನು ಸೇರಿಸಿ ತಿದ್ದುಪಡಿ.
ಸೆ. 47: ಮಾಹಿತಿ ಸೋರಿಕೆ ಕುರಿತು ಆಧಾರ್ ಪ್ರಾಧಿಕಾರ ಮಾತ್ರ ಪ್ರಾಥಮಿಕ ವಿಚಾರಣೆ ನಡೆಸಿ ದೂರು ನೀಡಬಹುದಾಗಿದೆ. ಕೋರ್ಟ್ ಅಭಿಪ್ರಾಯ: ಪ್ರತಿಯೊಬ್ಬ ಆಧಾರ್ ಬಳಕೆದಾರರಿಗೂ ದೂರು ಸಲ್ಲಿಕೆಯ ಅವಕಾಶ ನೀಡಬೇಕು.
ಸೆ. 57: ವ್ಯಕ್ತಿಯ ಗುರುತು ಪತ್ತೆಗಾಗಿ ಖಾಸಗಿ ಸಂಸ್ಥೆಗಳಿಗೆ ಆಧಾರ್ ಮಾಹಿತಿ ಹಂಚಿಕೆ. ಕೋರ್ಟ್ ಅಭಿಪ್ರಾಯ: ಸರ್ಕಾರದ ಈ ಕ್ರಮವು ಸಂವಿಧಾನ ಬಾಹಿರವಾಗಿದ್ದು, ಖಾಸಗಿ ಸಂಸ್ಥೆಗಳ ಜತೆ ದೇಶದ ನಾಗರಿಕರ ಮಾಹಿತಿ ಹಂಚಿಕೆ ಮಾಡಿಕೊಳ್ಳಕೂಡದು.
ಆಧಾರ್ ನಿಯಮ 27: ಆಧಾರ್ ಸಂಖ್ಯೆಯ ವ್ಯವಹಾರಗಳನ್ನು 5 ವರ್ಷ ಸಂಗ್ರಹಿಸಿಡಬೇಕು. ಕೋರ್ಟ್ ಅಭಿಪ್ರಾಯ: ಗರಿಷ್ಠ 6 ತಿಂಗಳವರೆಗೆ ಮಾತ್ರ ಈ ಮಾಹಿತಿಗಳನ್ನು ಸಂಗ್ರಹಿಸಿಡಬಹುದಾಗಿದೆ.
ಕಲಾಪ ಲೈವ್ ಸ್ಟ್ರೀಮಿಂಗ್
ನವದೆಹಲಿ: ಕೋರ್ಟ್​ಗಳಲ್ಲಿ ನಡೆಯುವ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ ಮೂಲಕ ಬಿತ್ತರಿಸುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ. ಕೋರ್ಟ್ ಕಲಾಪ ಪ್ರಸಾರ ಮಾಡುವುದರಿಂದ ವಾದಿ ಮತ್ತು ಪ್ರತಿವಾದಿಗಳಿಗೆ ಅನುಕೂಲವಾಗುತ್ತದೆ. ಪ್ರಸಾರಕ್ಕೆ ಅಗತ್ಯವಾದ ನಿಯಮಗಳನ್ನು ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡುವ ವ್ಯವಸ್ಥೆ ಇದೆ. ಇದನ್ನು ಭಾರತದಲ್ಲೂ ಅಳವಡಿಸಿಕೊಳ್ಳುವುದರಿಂದ ಶೈಕ್ಷಣಿಕವಾಗಿಯೂ ಅನುಕೂಲವಾಗುತ್ತದೆ. ಇದಕ್ಕೆ ಅವಕಾಶ ಕೊಡಬೇಕು ಎಂದು ಹಿರಿಯ ವಕೀಲ ಇಂದಿರಾ ಜೈಸಿಂಗ್, ಕಾನೂನು ವಿದ್ಯಾರ್ಥಿ ಸ್ನೇಹಿಲ್ ತ್ರಿಪಾಠಿ ಹಾಗೂ ಒಂದು ಎನ್​ಜಿಒ ಸದಸ್ಯರು ಸುಪ್ರೀಂಗೆ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳ ಕೊಠಡಿಯಲ್ಲಿ ನಡೆಯುವ ಖಾಸಗಿ ವಿಚಾರಣೆ ಹೊರತಾಗಿ ಭಾರತದಲ್ಲಿ ಮುಕ್ತ ನ್ಯಾಯಾಲಯದ ವ್ಯವಸ್ಥೆ ಇದೆ. ಕಲಾಪಕ್ಕೆ ಹಾಜರಾಗಿ ವಿಚಾರಣೆ ವೀಕ್ಷಿಸುವ ಅವಕಾಶ ವಾದಿ, ಪ್ರತಿವಾದಿಗಳಿಗೆ ಇದೆ. ನೇರ ಪ್ರಸಾರ ವ್ಯವಸ್ಥೆಯಿಂದ ವಾದಿ, ಪ್ರತಿವಾದಿಗಳು ಕೋರ್ಟ್​ಗೆ ಹಾಜರಾಗದೇ ಪ್ರಕರಣದ ವಿಚಾರಣೆ ಕುರಿತು ಮಾಹಿತಿ ಪಡೆಯಬಹುದು. ಇಂತಹ ವ್ಯವಸ್ಥೆ ಜಾರಿ ಮೂಲಕ ಮುಕ್ತ ಕೋರ್ಟ್ ವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಸಿಜೆಐ ದೀಪಕ್ ಮಿಶ್ರಾ ಜತೆಗೆ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ನ್ಯಾಯಪೀಠದಲ್ಲಿದ್ದರು.
ಅಯೋಧ್ಯೆ ಸಂಬಂಧಿತ ಪ್ರಕರಣದ ತೀರ್ಪು ಇಂದು
ಸಾಮೂಹಿಕ ಪ್ರಾರ್ಥನೆ (ನಮಾಜ್) ಮಾಡಲು ಮುಸ್ಲಿಂ  ಸಮುದಾಯದವರಿಗೆ ಮಸೀದಿ ಅಗತ್ಯವೇ ಎಂಬ ಕುರಿತು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಲಿದೆ. ಈ ತೀರ್ಪು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪ್ರಕರಣಕ್ಕೆ ದಿಕ್ಸೂಚಿಯಾಗುವ ಸಾಧ್ಯತೆಯಿದೆ.
ಎಲ್ಲಿ ಬೇಕಾದರೂ ಪ್ರಾರ್ಥನೆ ಮಾಡಬಹುದು. ಮಸೀದಿಯೇ ಬೇಕು ಎಂಬುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ 1994ರಲ್ಲಿ ತೀರ್ಪು ನೀಡಿತ್ತು. ಅಗತ್ಯವೆನಿಸಿದಲ್ಲಿ ಮಸೀದಿ ನಿರ್ವಿುಸಲಾಗಿರುವ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಬಹುದು ಎಂದು ಹೇಳಿತ್ತು. ಈ ತೀರ್ಪಿಗೆ ಮುಸ್ಲಿಂ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದರು. ದಶಕಗಳ ಹಿಂದಿನ ಈ ತೀರ್ಪನ್ನು ಆಧರಿಸಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಅಯೋಧ್ಯೆಯಲ್ಲಿನ ವಿವಾದಿತ ಸ್ಥಳವನ್ನು ಹಿಂದು, ಮುಸ್ಲಿಂ ಕಕ್ಷಿದಾರರಿಗೆ ಮೂರು ಭಾಗಗಳನ್ನಾಗಿ ವಿಂಗಡಿಸಿ ಹಂಚಿತ್ತು. ಅಯೋಧ್ಯೆಯಲ್ಲಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿ ನಿರ್ವಣವಾಗಿತ್ತು. ಆದರೆ, ಇಲ್ಲೇ ಶ್ರೀರಾಮ ಜನಿಸಿದ್ದಾಗಿ ನಂಬಿಕೆಯಿದೆ. ಇಲ್ಲಿದ್ದ ದೇಗುಲವನ್ನು ಕೆಡವಿ ಮಸೀದಿ ನಿರ್ವಿುಸಲಾಗಿದೆ ಎಂದು ಆರೋಪಿಸಲಾಗಿತ್ತು. ಕರಸೇವಕರು 1992ರಲ್ಲಿ ಬಾಬ್ರಿ ಕಟ್ಟಡ ಧ್ವಂಸಮಾಡಿದ್ದರು.
ಮೇಲ್ಮನವಿ
ವಿವಾದಿತ ಭೂಮಿಯನ್ನು ಹಿಂದೂ ಮತ್ತು ಮುಸ್ಲಿಂ ನಡುವೆ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಎಲ್ಲ ಕಕ್ಷಿದಾರರು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ನಮಾಜ್ ಸಲ್ಲಿಸಲು ಮಸೀದಿ ಅಗತ್ಯವಿಲ್ಲ ಎಂಬ ತೀರ್ಪನ್ನು ಮರುಪರಿಶೀಲಿಸಲು ಅಥವಾ ಏಳು ಸದಸ್ಯರ ಸಂವಿಧಾನ ನ್ಯಾಯಪೀಠಕ್ಕೆ ಒಪ್ಪಿಸುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತೀರ್ವನಿಸಲಿದೆ.
ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ
ಸಂವಿಧಾನದ 110ನೇ ವಿಧಿ ವ್ಯಾಪ್ತಿಯಲ್ಲಿ ಹಣಕಾಸು ವಿಧೇಯಕ ಎಂದು ಆಧಾರ್ ಕಾಯ್ದೆಗೆ ಮಾನ್ಯತೆ ನೀಡಿರುವುದನ್ನು ಪ್ರಶ್ನಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ನ್ಯಾ.ಚಂದ್ರಚೂಡ್ ಆದೇಶವನ್ನುಮುಂದಿಟ್ಟುಕೊಂಡು 7 ನ್ಯಾಯಮೂರ್ತಿಗಳ ಪೀಠದ ವಿಚಾರಣೆಗೆ ಮನವಿ ಮಾಡಲು ನಿರ್ಧರಿಸಿದೆ. ಆದರೆ ಮುಂದಿನ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾದರೆ ಮೇಲ್ಮನವಿ ಹೋಗುವ ಸಾಧ್ಯತೆಯಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....