ಈ ಲೇಖನ ನಿಮಗೆ
ಇಷ್ಟವಾದರೆ ಒಂದು
ಇ-ಮೈಲ್ ಕಳಿಸಿ
ಇಷ್ಟವಾಗದಿದ್ದರೆ
ಆಕಳಿಸಿ!
ಹೌದು. ನನ್ನ ಭಾಷಣ ಅಥವಾ ಕವನ ವಾಚನವನ್ನು ಕೇಳಿ ನೀವು ಆಕಳಿಸಿದರೆ ನನಗೆ ಖಂಡಿತ ಬೇಸರವಾಗುತ್ತದೆ. ಆದರೆ ಈ ಲೇಖನವನ್ನು ಓದಿ ಆಕಳಿಸಿದರೆ ಬೇಸರವಾಗುವುದಿಲ್ಲ. ಏಕೆಂದರೆ ನೀವು ಓದುತ್ತಿರುವ ಲೇಖನದ ವಿಷಯವೇ ಆಕಳಿಕೆ. ‘ನಿಮ್ಮ ಲೇಖನಕ್ಕೆ ಉಪಚುನಾವಣೆ, ಶಬರಿಮಲೆ ಮಂದಿರದೊಳಗೆ ಮಹಿಳೆಯರ ಪ್ರವೇಶ, ಮಿ- ಟೂ ಮುಂತಾದ ಬಿಸಿ ಬಿಸಿ ವಿಷಯಗಳನ್ನು ಬಿಟ್ಟು ಆಕಳಿಕೆ ಎಂಬ ಟಾಪಿಕ್ ಯಾಕೆ ಪಿಕ್ ಮಾಡಿಕೊಂಡಿರಿ?’ ಅಂತ ನೀವು ಕೇಳಬಹುದು. ನೀವು ಸೂಚಿಸಿರುವ ಆ ವಿಷಯಗಳೆಲ್ಲ ಈಗ ಬಿಸಿಯಾಗಿರುವುದು ನಿಜ. ಆದರೆ ಕೆಲವು ದಿನಗಳಲ್ಲಿ ಅವು ಹಳಸಲಾಗುತ್ತವೆ. ಆಕಳಿಕೆ ಹಾಗಲ್ಲ. ಹಿಂದೆ ಇತ್ತು. ಈಗ ಇದೆ. ಮುಂದೆಯೂ ಇರುತ್ತದೆ. ‘ಹೃದಯಗೀತೆ’ ಚಿತ್ರಕ್ಕಾಗಿ ಕವಿ ಎಂ.ಎನ್.ವ್ಯಾಸರಾವ್ ಬರೆದ ‘ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ’ ಎಂಬ ಹಾಡಿನ ಧಾಟಿಯಲ್ಲಿ
ಯಾರಾದರು ಗೆಲ್ಲಲಿ ಆಕಳಿಕೆ ಶಾಶ್ವತ
ಕೋರ್ಟೆನೇ ಹೇಳಲಿ ಆಕಳಿಕೆ ಶಾಶ್ವತ
ನದಿ ಕೆರೆಗಳು ಬತ್ತಲಿ ಆಕಳಿಕೆ ಶಾಶ್ವತ
ಆಕಳಿಸುವ ಬನ್ನಿರಿ ಮಿ ಟೂ ಅನ್ನುತ
ಎಂದು ಹಾಡಬಹುದು.
ಕೆಲವು ತಿಂಗಳುಗಳ ಹಿಂದೆ ಇದೇ ಅಂಕಣದಲ್ಲಿ ನಾನು ಗೊರಕೆಯ ಬಗ್ಗೆ ಬರೆದದ್ದು ನಿಮಗೆ ನೆನಪಿರಬಹುದು. ಅದರ ಮುಂದಿನ ವಾರ ಆಕಳಿಕೆಯ ಕುರಿತು ಬರೆಯಲು ಸಿದ್ಧತೆ ಮಾಡಿಕೊಂಡಿದ್ದೆ. ಕಾರಣಾಂತರದಿಂದ ಅದು ಮುಂದೆ ಹೋಗಿ ನಂತರ ಮನಸ್ಸಿನಿಂದ ಮರೆಯಾಗಿತ್ತು. ಮೊನ್ನೆ ‘ಜಾಗತೀಕರಣ, ಸೃಜನಶೀಲತೆ ಮತ್ತು ಅಸಹಿಷ್ಣುತೆಯ ಸವಾಲುಗಳು’ ಎಂಬ ವಿಚಾರ ಸಂಕಿರಣದಲ್ಲಿ ಕುಳಿತಿದ್ದಾಗ ನಿರಂತರವಾಗಿ ಆಕಳಿಕೆ ಬಂದು ಅದರ ಬಗ್ಗೆ ನಾನಿನ್ನೂ ಬರೆದಿಲ್ಲ ಎನ್ನುವುದನ್ನು ನೆನಪಿಸಿತು. ಆದ್ದರಿಂದ ಇನ್ನೂ ಮುಂದೂಡುವುದು ತರವಲ್ಲವೆಂದು ಈ ವಾರ ಆಕಳಿಕೆಯ ಬಗ್ಗೆ ಬರೆಯಲು ತೀರ್ವನಿಸಿದೆ.
ಗೊರಕೆ ಮತ್ತು ಆಕಳಿಕೆ ಎಂಬ ಎರಡೂ ಪದಗಳ ಕೊನೆಯಲ್ಲಿ ‘ಕೆ’ ಅಕ್ಷರವಿರುವುದು ಕಾಕತಾಳೀಯವಾಗಿರಲಾರದು. ಏಕೆಂದರೆ ಅವುಗಳ ನಡುವೆ ಕೆಲವು ಸಾಮ್ಯಗಳಿವೆ. ಆಕಳಿಕೆ ಹಾಗೂ ಗೊರಕೆ ಈ ಎರಡೂ ಕ್ರಿಯೆಗಳನ್ನು ನಡೆಸಲು ಬಾಯಿ ತೆರೆಯಬೇಕು. ಅವೆರಡೂ ನಿದ್ರೆಯ ಹತ್ತಿರದ ಸಂಬಂಧಿಗಳು. ಗೊರಕೆ ನಿದ್ರಿಸಿದ ಮೇಲೆ ಬಂದರೆ ಆಕಳಿಕೆ ಸಾಮಾನ್ಯವಾಗಿ ನಿದ್ರಿಸುವುದಕ್ಕಿಂತ ಮೊದಲು ಬರುತ್ತದೆ. ಕೆಲವೊಮ್ಮೆ ನಿದ್ರೆಯಿಂದ ಎದ್ದ ನಂತರವೂ ಆಕಳಿಕೆಯ ಆಗಮನವಾಗುವುದುಂಟು. ಸುದೀರ್ಘ ನಿದ್ರೆಯ ಬಳಿಕ ಕೆಲವರು ಒಮ್ಮೆ ಮೈಮುರಿದು ಆಕಳಿಸಿ ಆಮೇಲೆಯೇ ಏಳುವುದನ್ನು ಅಭ್ಯಾಸಮಾಡಿಕೊಂಡಿರುತ್ತಾರೆ. ಗೊರಕೆ, ಆಕಳಿಕೆ ಎರಡೂ ಶಬ್ದವನ್ನು ಉಂಟು ಮಾಡುತ್ತವೆ. ಇವೆರಡರ ನಡುವೆ ಕೆಲವು ವ್ಯತ್ಯಾಸಗಳೂ ಉಂಟು. ಆಕಳಿಕೆ ಪಕ್ಕದಲ್ಲಿ ಮಲಗಿದವರಿಗೆ ಗೊರಕೆಯಷ್ಟು ತೊಂದರೆ ಕೊಡುವುದಿಲ್ಲ. ಗೊರಕೆಯ ಅವಧಿ ದೀರ್ಘ. ಆಕಳಿಕೆಯ ಅವಧಿ ಕೇವಲ ಎಂಟು ಸೆಕೆಂಡುಗಳಷ್ಟು ಅಲ್ಪ. ಹೀಗಾಗಿ ಗೊರಕೆ ಶಾಸ್ತ್ರೀಯ ಸಂಗೀತವಾದರೆ ಆಕಳಿಕೆಯನ್ನು ಭಾವಗೀತೆ ಅನ್ನಬಹುದು. ಕೃಷ್ಣ ಗೀತೆಯನ್ನು ಬೋಧಿಸುತ್ತಿದ್ದಾಗ ಅರ್ಜುನ ಆಕಳಿಸಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ!
ಆಕಳಿಕೆ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಆದರೂ ನಿಘಂಟಿನಲ್ಲಿ ಅದರ ಅರ್ಥ ಹೇಗೆ ಹೇಳಿದ್ದಾರೆಂದು ತಿಳಿಯುವ ಕುತೂಹಲದಿಂದ ನನ್ನ ಬಳಿ ಇರುವ ಕನ್ನಡ ರತ್ನಕೋಶವನ್ನು ತಿರುವಿ ಹಾಕಿದೆ. ಅಲ್ಲಿ ಆಕಳು ಸಿಕ್ಕಿತು. ಆದರೆ ಎಷ್ಟು ಹುಡುಕಿದರೂ ಆಕಳಿಕೆ ಸಿಗಲಿಲ್ಲ. ಬಿಕ್ಕಳಿಕೆ, ತೂಕಡಿಕೆ, ಗೊರಕೆಗಳ ಅರ್ಥವನ್ನು ಹಾಕಿರುವ ನಿಘಂಟುಕಾರರು ಆಕಳಿಕೆಯನ್ನು ಯಾಕೆ ಬಿಟ್ಟರೆಂಬುದು ತಿಳಿಯಲಿಲ್ಲ. ಆಕಳಿಕೆಯ ಅರ್ಥವನ್ನು ನೋಡಲೇಬೇಕೆಂಬ ಹಠದಿಂದ ಇನ್ನೊಂದು ದೊಡ್ಡ ನಿಘಂಟನ್ನು ನೋಡಿದೆ. ಅಲ್ಲಿ ಆಕಳಿಕೆ=ಆಗುಳ್ ಅಂದಿತ್ತು. ಆಗುಳ್ ಎಂಬ ಪದವನ್ನು ನಾನು ಎಲ್ಲೂ ಕೇಳಿರಲಿಲ್ಲ. ಅದರ ಅರ್ಥವನ್ನು ನೋಡಿದೆ. ಆಗುಳ್(ಳಿ)=ಆಕಳಿಕೆ; ಆಕಳಿಸುವುದು ಎಂದಿತ್ತು. ಸಣ್ಣ ನಿಘಂಟಿನಲ್ಲಿ ಆಗುಳ್ ಇದೆಯಾ ಅಂತ ಹುಡುಕಿದೆ. ಅಲ್ಲೂ ಆಗುಳ್(ಳಿ) (ನಾ) ಆಕಳಿಸುವುದು ಎಂದು ಅಚ್ಚಾಗಿತ್ತು. ಗೊರಕೆ ಎಂಬ ಪದಕ್ಕೆ ‘ನಿದ್ರಿಸುವಾಗ ಉಸಿರಾಟದಿಂದಾಗುವ ಶಬ್ದ’ ಎಂದು ವಿವರವಾದ ಅರ್ಥವನ್ನು ನೀಡಿರುವ ನಿಘಂಟುಕಾರರು, ಆಕಳಿಕೆಯ ಅರ್ಥವನ್ನು ಕೊಡುವಾಗ ಯಾಕೋ ಕೊಂಚ ಉದಾಸೀನ ತೋರಿಸಿದ್ದಾರೆ ಅನ್ನಿಸುತ್ತದೆ. ಆದರೆ ಖ್ಯಾತ ಹಾಸ್ಯ ಸಾಹಿತಿ ನಾ.ಕಸ್ತೂರಿಯವರು ಹಾಗೆ ಮಾಡಿಲ್ಲ. ಅವರು ತಮ್ಮ ಅನರ್ಥಕೋಶದಲ್ಲಿ ಆಕಳಿಕೆ ಎಂಬ ಪದಕ್ಕೆ ಈ ಕೆಳಗಿನಂತೆ ವ್ಯಾಖ್ಯಾನ ನೀಡಿದ್ದಾರೆ.
1.ಉಪನ್ಯಾಸ ಕೇಳುತ್ತ ಕುಳಿತಿರುವ ಆಕಳು, ಸಾಕು ನಿಲ್ಲಿಸು ಎಂದು ಸೂಚನೆ ಕೊಡುವ ರೀತಿ.
2.ಮೊಮ್ಮಕ್ಕಳು ಅಜ್ಜಿಯರಿಗೆ ಕಲಿಸುವ ಒಂದು ವಿದ್ಯೆ.
3.ಗ್ರಹಸ್ಥಾಶ್ರಮಗಳಲ್ಲಿ ಪತಿಗಳು ಬಾಯಿ ತೆರೆಯುವುದು ಆಕಳಿಕೆಗೆ ಮಾತ್ರ.
ಕನ್ನಡದಲ್ಲಿ ಆಕಳಿಕೆ ನಾಮಪದವಾದರೆ ಆಕಳಿಸುವುದು ಕ್ರಿಯಾಪದ. ಇಂಗ್ಲೀಷಿನಲ್ಲಿ ಎರಡಕ್ಕೂ ಯಾನ್ (ಢಚಡ್ಞಿ) ಎಂಬ ಒಂದೇ ಪದವನ್ನು ಬಳಸುತ್ತಾರೆ. ಇಂಗ್ಲಿಷ್ ನಿಘಂಟಿನಲ್ಲಿ ಅದಕ್ಕೆ ‘ಆಯಾಸ ಅಥವಾ ಬೇಸರವಾದಾಗ ಬಾಯಿ ತಾನಾಗಿಯೇ ಅಗಲವಾಗಿ ತೆರೆದುಕೊಳ್ಳುವುದು’ ಎಂಬ ಅರ್ಥ ವಿವರಣೆ ಇದೆ. ತುಳು ಭಾಷೆಯಲ್ಲಿ ಯಾನ್ ಅಂದರೆ ನಾನು ಎಂದು ಅರ್ಥ. ಯಾರಾದರೂ ‘ಯಾನ್ ಅಂಚ ಮಲ್ತೆ, ಯಾನ್ ಇಂಚ ಮಲ್ತೆ’ (ನಾನು ಹಾಗೆ ಮಾಡಿದೆ, ನಾನು ಹೀಗೆ ಮಾಡಿದೆ) ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳತೊಡಗಿದರೆ ಕೇಳುವವರಿಗೆ ‘ಯಾನ್’ ಅಂದರೆ ಆಕಳಿಕೆ ಬರುವುದು ಖಂಡಿತ. ಆಕಳಿಸುವಾಗ ನಾವು ಬಾಯಿಯನ್ನು ಆ‰‰ಎಂದು ಹೇಳುತ್ತಾ ದೊಡ್ಡದಾಗಿ ತೆರೆಯುವುದರಿಂದ ಆ ಕ್ರಿಯೆಗೆ ಕನ್ನಡದಲ್ಲಿ ಆ-ಕಳಿಕೆ ಎಂಬ ಶಬ್ದವನ್ನು ಬಳಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಕನ್ನಡ ಅಕ್ಷರಮಾಲೆಯ ಎರಡನೆ ಅಕ್ಷರದಿಂದ ಆರಂಭವಾಗುವ ಶಬ್ದವನ್ನೆ ಆಕಳಿಕೆಗೆ ಕೊಟ್ಟಿರುವುದು ಕನ್ನಡಿಗರಿಗೆ ಆಕಳಿಕೆಯ ಬಗ್ಗೆ ಇರುವ ಕಳಕಳಿ ಹಾಗೂ ಗೌರವಕ್ಕೆ ಸಾಕ್ಷಿ. ಅದೇ ಇಂಗ್ಲೀಷರನ್ನು ನೋಡಿ. ಆಕಳಿಕೆಗೆ ವೈ ಅಕ್ಷರದಿಂದ ಶುರುವಾಗುವ ಯಾನ್ (ಢಚಡ್ಞಿ) ಎಂಬ ಪದವನ್ನು ಉಪಯೋಗಿಸುವ ಮೂಲಕ ಅದು ನಿಘಂಟಿನ, ಕೊನೆಯಲ್ಲಿ ಉಳಿಯುವಂತೆ ಸಂಚು ಮಾಡಿದ್ದಾರೆ.
ನಾನು ಚಿಕ್ಕವನಾಗಿದ್ದಾಗ ನಮ್ಮ ಊರಿನಲ್ಲಿ ಅಂದರೆ ಕುಂದಾಪುರದ ಕಡೆ, ಯಾರಾದರೂ ಸತತವಾಗಿ ಆಕಳಿಸಿದರೆ ‘ನಮ್ಮನ್ನು ಯಾರೋ ತುಂಬಾ ನೆನಪು ಮಾಡಿಕೊಳ್ಳುತ್ತಿದ್ದಾರೆ’ ಅನ್ನುತ್ತಿದ್ದರು. ಈ ನಂಬಿಕೆ ಬೇರೆ ಊರುಗಳಲ್ಲೂ ಇರಬಹುದೆ? ನನಗೆ ಗೊತ್ತಿಲ್ಲ. ಆಕಳಿಕೆ ಯಾಕೆ ಬರುತ್ತದೆ ಎಂಬ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಈ ಲೇಖನದ ಆರಂಭದಲ್ಲಿ ಆಕಳಿಕೆ ಭಾವಗೀತೆಯ ಹಾಗೆ ಎಂದಿದ್ದೆನಲ್ಲವೆ? ಅದು ನಮ್ಮ ದೇಹ ‘ನನಗೆ ಆಯಾಸವಾಗಿದೆ, ಬೇಸರವಾಗುತ್ತಿದೆ, ನಿದ್ದೆ ಬರುತ್ತಿದೆ’ ಎಂಬ ಭಾವನೆಯನ್ನು ತಿಳಿಸುವ ಕ್ರಿಯೆಯಾದ್ದರಿಂದ ಹಾಗೆ ಹೇಳಿದರೆ ತಪ್ಪಿಲ್ಲ. ವೈಜ್ಞಾನಿಕವಾಗಿ ನೋಡಿದರೆ ಆಕಳಿಕೆ ಭಾವಗೀತೆಯಲ್ಲ, ಅಭಾವಗೀತೆ! ಏಕೆಂದರೆ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಅದನ್ನು ಸರಿದೂಗಿಸಲು ದೇಹದಲ್ಲಿ ತಾನಾಗಿ ನಡೆಯುವ ಪ್ರಕ್ರಿಯೆ ಆಕಳಿಕೆ. ಆಕಳಿಸುವಾಗ ಬಾಯಿ ಅಗಲವಾಗಿ ತೆರೆದುಕೊಳ್ಳುವುದರಿಂದ ಗಾಳಿಯಲ್ಲಿರುವ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ಶ್ವಾಸಕೋಶಕ್ಕೆ ಹೋಗುತ್ತದೆ. ಆಮ್ಲಜನಕದ ಕೊರತೆಯ ಹಾಗೆ, ಕೆಲವು ಭಾಷಣಕಾರರ ಕೊರೆತವೂ ಮಿದುಳಿಗೆ ಬೇಸರವನ್ನು ಉಂಟು ಮಾಡುವುದರಿಂದ ಕೇಳುಗರು ಆಕಳಿಸುತ್ತಾರೆ. ಇನ್ನೊಂದು ಸಂಶೋಧನೆಯ ಪ್ರಕಾರ ಆಕಳಿಕೆಯ ಉದ್ದೇಶ ಮಿದುಳಿನ ತಾಪಮಾನವನ್ನು ಕಡಿಮೆ ಮಾಡುವುದು. ಕೆಲವು ಪ್ರಾಣಿಗಳಲ್ಲಿ ಆಕಳಿಕೆ ವೈರಿಗಳಿಂದ ಬರಬಹುದಾದ ಅಪಾಯದಿಂದ ಪಾರಾಗಲು ದೇಹವನ್ನು ಸಜ್ಜುಗೊಳಿಸುವ ಮತ್ತು ತಮ್ಮ ಗುಂಪಿನಲ್ಲಿರುವ ಇತರ ಪ್ರಾಣಿಗಳಿಗೆ ಅಪಾಯದ ಸೂಚನೆಯನ್ನು ನೀಡುವ ಕ್ರಿಯೆ. ಕೋತಿಗಳು ಶತ್ರುಗಳನ್ನು ಹೆದರಿಸಲು ತಮ್ಮ ಹಲ್ಲುಗಳನ್ನು ಕಿರಿದು ಆಕಳಿಸುತ್ತವೆ.
ನಿದ್ರೆ ಕಡಿಮೆಯಾದಾಗ, ಆಯಾಸ ಮತ್ತು ಬೇಸರವಾದಾಗ ಆಕಳಿಕೆ ನಮಗೆ ಗೊತ್ತಿಲ್ಲದಂತೆ ತಾನಾಗಿಯೇ ಬರುತ್ತದೆ. ಆದರೆ ಕೆಲವೊಮ್ಮೆ ಮನುಷ್ಯರು ಬೇಕಂತಲೇ ಆಕಳಿಸುವುದುಂಟು. ಉದಾಹರಣೆಗೆ ಮದುವೆಯಾದ ಹೊಸದರಲ್ಲಿ ಮಾವನ ಮನೆಗೆ ಹೋದ ಅಳಿಯಂದಿರಿಗೆ ಊಟವಾದ ನಂತರ ಆದಷ್ಟು ಬೇಗ ಬೆಡ್ ರೂಮ್ ಸೇರಿಕೊಳ್ಳುವ ಆತುರವಿರುತ್ತದೆ. ಆಗ ಮಾವನವರು ಮಳೆ ಬೆಳೆ ಅಂತ ಕೊರೆಯ ತೊಡಗಿದರೆ ತುಸು ಹೊತ್ತಿನಲ್ಲೆ ಅಳಿಯ ಆಕಳಿಸತೊಡಗುತ್ತಾನೆ. ಮಾವ ಅದನ್ನು ಗಮನಿಸದಿದ್ದರೂ ಅತ್ತೆಗೆ ಅರ್ಥವಾಗಿ ‘ಅವರಿಗೆ ನಿದ್ರೆ ಬರ್ತಾ ಇದೆ. ಮಾತಾಡಿದ್ದು ಸಾಕು. ರೂಮಿಗೆ ಹೋಗಿ ಮಲಗಿಕೊಳ್ಳಲಿ’ ಅನ್ನುತ್ತಾರೆ.
ಮುಂಬೈಯಲ್ಲಿ ವಾಸವಾಗಿದ್ದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ವಿ.ಜಿ.ಭಟ್ಟರು ಒಮ್ಮೆ ಕವಿಗೋಷ್ಠಿಯಲ್ಲಿ ಕವನ ಓದುತ್ತಿದ್ದಾಗ ಮುಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಆಕಳಿಸಿದ ಎಂಬ ಕಾರಣಕ್ಕೆ ಬೇಸರದಿಂದ ಹತ್ತು ವರ್ಷ ಕವಿತೆ ಬರೆಯುವುದನ್ನೇ ನಿಲ್ಲಿಸಿದ್ದರಂತೆ. ಆಕಳಿಕೆ ತಾನಾಗಿಯೆ ನಡೆಯುವ ಕ್ರಿಯೆ ಎಂದು ತಿಳಿದುಕೊಂಡರೆ ಪ್ರೇಕ್ಷಕರು ಆಕಳಿಸಿದ್ದಕ್ಕೆ ಕೋಪಿಸಿಕೊಳ್ಳುವ ಅಗತ್ಯವಿಲ್ಲ. ಆದರೂ ಕೆಲವರು ಆಕಳಿಸಿದ ಬಳಿಕ ಏನೋ ದೊಡ್ಡ ತಪ್ಪು ಮಾಡಿದವರಂತೆ ಅಪರಾಧೀ ಪ್ರಜ್ಞೆಯಿಂದ ನರಳುತ್ತಾರೆ. ತಾವು ಆಕಳಿಸಿದ್ದನ್ನು ಯಾರಾದರೂ ನೋಡಿದರೇ ಎಂಬುದನ್ನು ತಿಳಿಯಲು ಸುತ್ತಲೂ ದೃಷ್ಟಿಹಾಯಿಸುತ್ತಾರೆ. ಆಕಳಿಸಿದ ನಂತರ ಬಾಯಿಯ ಮುಂದೆ ಚಿಟಿಕೆ ಹೊಡೆಯುವುದು ನನ್ನ ಅಭ್ಯಾಸ. ಕೆಲವರು ಎರಡೂ ಕೈಗಳನ್ನು ಬಾಯಿಗೆ ಅಡ್ಡವಾಗಿಟ್ಟುಕೊಂಡು ಸಭ್ಯತೆಯಿಂದ ಆಕಳಿಸಿದರೆ, ಇನ್ನು ಕೆಲವರು ಆಕಳಿಸಿದ ನಂತರ ಅದೊಂದು ತಮಾಷೆ ಎಂಬಂತೆ ಕಿರುನಗೆ ಸೂಸುತ್ತಾರೆ. ಬಹಳಷ್ಟು ಜನರಿಗೆ ಆಕಳಿಸಿದ ನಂತರ ಕಣ್ಣುಗಳಲ್ಲಿ ನೀರು ಬರುತ್ತದೆ. ಕೆಲವೊಮ್ಮೆ ಆಕಳಿಕೆ ಸತತವಾಗಿ ಬರುವುದುಂಟು. ವಿಪರೀತ ಅಂದರೆ ನಿಮಿಷಕ್ಕೆ ಒಂದಕ್ಕಿಂತ ಹೆಚ್ಚು ಆಕಳಿಕೆ ಬಂದರೆ ಅದು ರೋಗದ ಲಕ್ಷಣವೆಂದು ತಿಳಿದು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಆಕಳಿಕೆ ಒಂದು ಸಾಂಕ್ರಾಮಿಕ ಪ್ರಕ್ರಿಯೆ ಎಂದು ಕ್ರಿ.ಶ. 1508 ರಷ್ಟು ಹಿಂದೆಯೇ ಎರಾಸ್ಮಸ್ ಎಂಬ ಡಚ್ ಪಾದ್ರಿ ಹೇಳಿದ್ದಾನಂತೆ. ಆಕಳಿಸುವವರನ್ನು ನೋಡಿದರೆ, ಆಕಳಿಕೆಯ ಶಬ್ದ ಕೇಳಿದರೆ, ಅದರ ಬಗ್ಗೆ ಯೋಚಿಸಿದರೆ ಆ ಕಾರಣಕ್ಕೆ ಆಕಳಿಕೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಲೇಖನವನ್ನು ಬರೆಯುವಾಗ ನಾನು ಹಲವು ಸಲ ಆಕಳಿಸಿದ್ದೇನೆ. ಓದುವಾಗ ನೀವೂ ಆಕಳಿಸಿರಬಹುದು. ಅದರಿಂದ ನನಗೆ ಬೇಸರವಾಗುವುದಿಲ್ಲವೆಂದು ಮೊದಲೇ ಹೇಳಿದ್ದೇನೆ. ಆದರೆ ನನ್ನ ಹೆಂಡತಿ ಆಕಳಿಸಿದರೆ ಮಾತ್ರ ನನಗೆ ತುಂಬಾ ಗಾಬರಿಯಾಗುತ್ತದೆ. ಏಕೆಂದರೆ ಅವಳು ಆಕಳಿಸಲು ದೊಡ್ಡದಾಗಿ ಬಾಯಿ ತೆರೆದರೆ ದವಡೆಯ ಸ್ನಾಯುಗಳ ಸಮಸ್ಯೆಯಿಂದಾಗಿ ಕೆಲವೊಮ್ಮೆ ಬಾಯಿ ಮುಚ್ಚಲು ತುಂಬಾ ಕಷ್ಟಪಡುತ್ತಾಳೆ!
ಮುಗಿಸುವ ಮುನ್ನ: ವೃತ್ತಿಯಿಂದ ಅಧ್ಯಾಪಕರಾದವರು ಸಭೆಯಲ್ಲಿ ಭಾಷಣ ಮಾಡುವಾಗ ಸಭಿಕರು ಆಕಳಿಸಿದರೂ ಬೇಗ ಭಾಷಣ ನಿಲ್ಲಿಸುವುದಿಲ್ಲ. ಅವರಿಗೆ ಕ್ಲಾಸಿನಲ್ಲಿ ಬೆಲ್ ಹೊಡೆಯುವ ತನಕ ಪಾಠಮಾಡಿ ಅಭ್ಯಾಸವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಹನಿಗವನ:
ಅಧ್ಯಾಪಕರು ಪಾಠ ನಿಲ್ಲಿಸಲು
ಹೊಡೆಯಬೇಕು ಬೆಲ್ಲು
ರಾಜಕಾರಣಿ ಭಾಷಣ ನಿಲ್ಲಿಸಲು
ಕೊಳೆತ ಮೊಟ್ಟೆ, ಕಲ್ಲು!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ