ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಗಾಂಧಿಗೆ ಮೋದಿ ಸ್ವಚ್ಛತೆಯ ಕೊಡುಗೆ, ಶಾಸ್ತ್ರಿ ಮತ್ತು ಇತರೇ ವಿಚಾರಗಳಿಗಾಗಿ ಲೇಖನ ಪೂರ‍್ತಿ ಓದಿ

ಸ್ವಚ್ಛ ಭಾರತದ ಮಂತ್ರವೀಗ ರಾಷ್ಟ್ರಾದ್ಯಂತ ಅನುರಣನಗೊಳ್ಳುತ್ತಿದೆ. 130 ಕೋಟಿ ಜನಸಂಖ್ಯೆಯ ದೇಶದಲ್ಲಿ ಸ್ವಚ್ಛತೆಯ ಸವಾಲನ್ನು ಶೀಘ್ರ ಸಾಕಾರಗೊಳಿಸಲು ಸಾಧ್ಯವಿಲ್ಲವಾದರೂ ಈ ನಿಟ್ಟಿನಲ್ಲಿ ಕ್ರಮಿಸಿರುವ ದಾರಿ ಆಶಾವಾದ ಹುಟ್ಟಿಸಿದೆ. ನಮ್ಮ ಓಣಿ, ಪ್ರದೇಶ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕೆಂಬ ಅರಿವು ಜನಮಾನಸದಲ್ಲಿ ಹೆಚ್ಚುತ್ತಿದೆ, ಬಯಲುಶೌಚದಂಥ ಪ್ರವೃತ್ತಿಗೆ ವ್ಯಾಪಕ ಪ್ರಮಾಣದಲ್ಲಿ ಕಡಿವಾಣ ಬೀಳುತ್ತಿದೆ. 2019ರಲ್ಲಿ ದೇಶ ಗಾಂಧಿ ಅವರ 150ನೇ ಜಯಂತಿ ಆಚರಿಸಲಿದ್ದು, ಆ ಹೊತ್ತಿಗೆ ಸ್ವಚ್ಛತೆಯ ಮತ್ತಷ್ಟು ಮೈಲಿಗಲ್ಲುಗಳನ್ನು ತಲುಪುವತ್ತ ದಿಟ್ಟ ಹೆಜ್ಜೆಗಳನ್ನು ಇರಿಸಲಾಗಿದೆ.
ಪ್ರಧಾನಿ ಹೇಳಿದ್ದೇನು?
ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿಯಾಗಿ ಮೊದಲ ಸ್ವಾತಂತ್ರೊ್ಯೕತ್ಸವ ಭಾಷಣ ಮಾಡುವಾಗ ‘ಸ್ವಚ್ಛ ಭಾರತ’ ಯೋಜನೆಯನ್ನು ನರೇಂದ್ರ ಮೋದಿ ಘೋಷಿಸಿದರು. ಗಾಂಧಿ ಜಯಂತಿಯಾದ ಅ.2ರಂದು ಖುದ್ದು ಪೊರಕೆ ಹಿಡಿದು 5 ವರ್ಷಗಳ ಅಭಿಯಾನಕ್ಕೆ ಚಾಲನೆ ನೀಡಿದರು. ಗಾಂಧಿ ಅವರ 150ನೇ ಹುಟ್ಟುಹಬ್ಬಕ್ಕೆ ‘ಸ್ವಚ್ಛ ಭಾರತ’ವನ್ನು ಕೊಡುಗೆಯಾಗಿ ನೀಡುವ ಸಂಕಲ್ಪವನ್ನು ಪ್ರಧಾನಿ ಮಾಡಿದರು. ಈ ಸಂದರ್ಭದಲ್ಲಿ ದೇಶದ ಜನತೆ, ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರಿಗೆ ವರ್ಷಕ್ಕೆ 100 ಗಂಟೆಯನ್ನು ‘ಸ್ವಚ್ಛ ಭಾರತ’ಕ್ಕಾಗಿ ವಿನಿಯೋಗಿಸಿ ಎಂದು ಕರೆ ನೀಡಿದರು. 2019ರ ಅ.2ರಂದು ದೇಶಾದ್ಯಂತ ಗಾಂಧಿಯವರ 150ನೇ ಜಯಂತಿ ಆಚರಣೆ ನಡೆಯಲಿದೆ.
   
ಬಾಪೂ ಕನಸನ್ನು ನನಸಾಗಿಸೋಣ
ಇಂದು ನಾವು ನಮ್ಮ ಪ್ರೀತಿಯ ಬಾಪೂ ಅವರ 150ನೇ ಜಯಂತಿ ಆಚರಣೆಯ ಪ್ರಾರಂಭಕ್ಕೆ ನಾಂದಿ ಹಾಡುತ್ತಿದ್ದೇವೆ. ಸಮಾನತೆ, ಘನತೆ, ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಜೀವನವನ್ನು ಅನ್ವೇಷಿಸುವ ವಿಶ್ವದಾದ್ಯಂತದ ಲಕ್ಷಾಂತರ ಜನರಿಗೆ ಅವರು ಭರವಸೆಯ ಬೆಳಕಾಗಿದ್ದಾರೆ. ಮಾನವ ಸಮಾಜದ ಮೇಲೆ ಅವರು ಮೂಡಿಸಿರುವ ಛಾಪು ಹೋಲಿಕೆಗೆ ನಿಲುಕದ್ದು.
ನಮ್ಮ ಮುಂದಿನ ಪೀಳಿಗೆಗಾಗಿ ಶುದ್ಧ ಮತ್ತು ಹಚ್ಚ ಹಸಿರಿನ ಪರಿಸರ ಉಳಿಸಲು ನಾವು ಏನು ಮಾಡಬಹುದು ಎಂಬುದನ್ನು ಚಿಂತಿಸೋಣ. ಸುಮಾರು 8 ದಶಕಗಳ ಹಿಂದೆ, ಮಾಲಿನ್ಯದ ಭೀತಿ ಹೆಚ್ಚಾಗಿಲ್ಲದ ಕಾಲದಲ್ಲೂ ಗಾಂಧಿ ಸೈಕಲ್ ತುಳಿಯುತ್ತಿದ್ದರು. ಅವರು ಗುಜರಾತ್ ವಿದ್ಯಾಪೀಠದಿಂದ ಸಬರಮತಿಗೆ ಸೈಕಲ್​ನಲ್ಲಿ ಹೋಗುತ್ತಿದ್ದುದನ್ನು ಅಹಮದಾಬಾದ್​ನಲ್ಲಿರುವವರು ಸ್ಮರಿಸುತ್ತಾರೆ. ನಾವು ಇಂದು ಈ ಸ್ಪೂರ್ತಿಯನ್ನು ಅನುಕರಿಸಲು ಸಾಧ್ಯವಿಲ್ಲವೇ?
ಕಳೆದ 4 ವರ್ಷಗಳಲ್ಲಿ 130 ಕೋಟಿ ಭಾರತೀಯರು ಸ್ವಚ್ಛ ಭಾರತ ಅಭಿಯಾನದ ರೂಪದಲ್ಲಿ ಗಾಂಧಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನ ಪರಿಶ್ರಮದಿಂದಾಗಿ ಇಂದು ನಾಲ್ಕು ವರ್ಷ ಪೂರೈಸುತ್ತಿರುವ ಸ್ವಚ್ಛ ಭಾರತ ಅಭಿಯಾನ, ಶ್ಲಾಘನಾರ್ಹ ಫಲಶ್ರುತಿಯೊಂದಿಗೆ ಸಂಚಲನಾತ್ಮಕ ಸಾಮೂಹಿಕ ಆಂದೋಲನವಾಗಿ ರೂಪುಗೊಂಡಿದೆ. 85 ದಶಲಕ್ಷ ಕುಟುಂಬಗಳು ಪ್ರಥಮ ಬಾರಿಗೆ ಶೌಚಗೃಹ ಬಳಕೆ ಮಾಡುತ್ತಿವೆ. ನಾಲ್ಕುವರ್ಷಗಳ ಅಲ್ಪಾವಧಿಯಲ್ಲಿ ನೈರ್ಮಲ್ಯದ ವ್ಯಾಪ್ತಿ ಶೇ.39ರಿಂದ ಶೇ.95ಕ್ಕೆ ಹೆಚ್ಚಳವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು 4.5 ಲಕ್ಷ ಗ್ರಾಮಗಳು ಬಯಲು ಶೌಚಮುಕ್ತವಾಗಿವೆ.
ಸ್ವಚ್ಛ ಭಾರತ ಅಭಿಯಾನ ಗೌರವ ಮತ್ತು ಉತ್ತಮ ಭವಿಷ್ಯಕ್ಕಾಗಿ ಮೀಸಲಾಗಿದೆ. ಪ್ರಕೃತಿಯ ಕರೆಗಾಗಿ ಬಯಲಲ್ಲಿ ಕುಳಿತುಕೊಳ್ಳುವಾಗ ಪ್ರತಿದಿನ ಬೆಳಗ್ಗೆ ಕೋಟ್ಯಂತರ ಮಹಿಳೆಯರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಈಗ ಇಲ್ಲ. ಕೆಲವು ದಿನಗಳ ಹಿಂದೆ, ರಾಜಸ್ಥಾನದ ಒಬ್ಬ ಸೋದರ ‘ಮನ್ ಕಿ ಬಾತ್’ ಕಾರ್ಯಕ್ರಮದ ವೇಳೆ ನನಗೆ ಕರೆ ಮಾಡಿದ್ದರು. ಆತ ತನ್ನೆರಡು ಕಣ್ಣುಗಳಿಂದ ನೋಡುವ ಶಕ್ತಿ ಹೊಂದಿರಲಿಲ್ಲ, ಆದರೂ ಆತ ಸ್ವಂತ ಶೌಚಗೃಹ ಹೇಗೆ ತನ್ನ ಜೀವನದಲ್ಲಿ ಧನಾತ್ಮಕ ಬದಲಾವಣೆ ತಂದಿದೆ ಎಂಬುದನ್ನು ವಿವರಿಸಿದರು. ಅವರಂಥ ಹಲವು ಅಂಗವಿಕಲರು ಬಯಲು ಶೌಚ ಪ್ರದೇಶಕ್ಕೆ ಹೋಗುವಾಗ ಆಗುತ್ತಿದ್ದ ತೊಂದರೆಯನ್ನು ತಪ್ಪಿಸಲಾಗಿದೆ. ಆತನಿಂದ ನಾನು ಪಡೆದ ಆಶೀರ್ವಾದ ಸದಾ ನನ್ನ ಸ್ಮರಣೆಯಲ್ಲಿ ಉಳಿಯುತ್ತದೆ.
ಬಾಪು ಅವರ ಮೆಚ್ಚಿನ ಹಾಡುಗಳಲ್ಲಿ ಒಂದೆಂದರೆ-‘ವೈಷ್ಣವ ಜನ ತೋ ತೇನೆ ಕಹಿಯೆ ಜೆ, ಪೀರ್ ಪರಾಯಿ ಜಾನೆ ರೇ’- ಇದರರ್ಥ ಏನೆಂದರೆ, ಮತ್ತೊಬ್ಬರ ನೋವನ್ನು ಅನುಭವಿಸುವುದೇ ಉತ್ತಮ ಆತ್ಮ. ಈ ಸ್ಪೂರ್ತಿ ಅವರನ್ನು ಇತರರಿಗಾಗಿ ಜೀವಿಸುವಂತೆ ಮಾಡಿತು. ಇಂದು ನಾವು 130 ಕೋಟಿ ಭಾರತೀಯರು ಬಾಪೂ ಅವರು ದೇಶಕ್ಕಾಗಿ ಕಂಡ ಕನಸನ್ನು ನನಸು ಮಾಡಲು ಒಗ್ಗೂಡಿ ಶ್ರಮಿಸಲು ಬದ್ಧರಾಗಿದ್ದೇವೆ.
ಸ್ವಚ್ಛತೆಗಾಗಿ ಸಹಭಾಗಿತ್ವದ ಹೆಜ್ಜೆ
2019ರ ವೇಳೆಗೆ ಸ್ವಚ್ಛ ಭಾರತ ಸಾಧಿಸುವ ದೂರದೃಷ್ಟಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ 4 ವರ್ಷಗಳ ಹಿಂದೆ ಯೋಜನೆಗೆ ಚಾಲನೆ ನೀಡಿದರು. 2019ರ ಅಕ್ಟೋಬರ್ 2, ಸ್ವಚ್ಛತೆಯನ್ನು ರಾಷ್ಟ್ರೀಯ ಆದ್ಯತೆಯನ್ನಾಗಿ ಪ್ರತಿಪಾದಿಸಿದ ಗಾಂಧಿಯವರ 150ನೇ ಜಯಂತಿ ಸಹ ಹೌದು. ಕಳೆದ 4 ವರ್ಷಗಳಲ್ಲಿ ಭಾರತ ಸ್ವಚ್ಛತೆಯ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ, ಅದು 8.6 ಕೋಟಿಗೂ ಅಧಿಕ ಕೌಟುಂಬಿಕ ಶೌಚಗೃಹಗಳನ್ನು ನಿರ್ವಿುಸಿದೆ ಮತ್ತು ಸುಮಾರು 4.70 ಲಕ್ಷ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೊಷಿಸಿದೆ.
ಸಿಂಗಾಪುರ ಕೂಡ ಸ್ವಚ್ಛತೆಯ ಈ ಪಯಣದಲ್ಲಿ ಮುನ್ನಡೆದಿದೆ. ಸ್ವಾತಂತ್ರಾ್ಯನಂತರ, ನಮ್ಮ ಜನರಿಗೆ ಸ್ವಚ್ಛ ಮತ್ತು ಹಸಿರು ಜೀವನಯೋಗ್ಯ ವಾತಾವರಣ ದೊರಕಿಸಲು ಶ್ರಮಪಟ್ಟಿದ್ದೇವೆ. ಆರಂಭದಲ್ಲಿ ಅದೆಷ್ಟೋ ಮನೆಗಳಿಗೆ ಚರಂಡಿ ವ್ಯವಸ್ಥೆಯೇ ಇರಲಿಲ್ಲ. ಮಲವನ್ನು ಬಕೆಟ್​ಗಳಲ್ಲಿ ಸಂಗ್ರಹಿಸಿ ಅದನ್ನು ಟ್ರಕ್​ಗಳ ಮೂಲಕ ತ್ಯಾಜ್ಯ ಘಟಕಗಳಿಗೆ ಸಾಗಿಸಲಾಗುತ್ತಿತ್ತು. ಮನುಷ್ಯ ತ್ಯಾಜ್ಯವನ್ನು ನದಿಗಳು ಹಾಗೂ ಹಳ್ಳಕೊಳ್ಳಗಳ ಪಕ್ಕದಲ್ಲಿ ಸುರಿಯಲಾಗುತ್ತಿತ್ತು. ಇದರಿಂದಾಗಿ ನೀರು ವಿಷಕಾರಿಯಾಗುವುದಲ್ಲದೆ ಮಾಲಿನ್ಯ ಉಂಟಾಗುತ್ತಿತ್ತು. ನೈರ್ಮಲ್ಯದ ವಾತಾವರಣ ಇಲ್ಲದ್ದರಿಂದ ಜಲಸಂಬಂಧಿ ಸಾಂಕ್ರಾಮಿಕ ರೋಗಗಳು ಎದುರಾದವು.
ನಮ್ಮ ಸಂಸ್ಥಾಪಕರು ಈ ಸಮಸ್ಯೆಗಳ ಪರಿಹಾರಕ್ಕೆ ದಿಟ್ಟ ನಿರ್ಧಾರಗಳನ್ನು ಕೈಗೊಂಡರು. ಅವರು, ಸ್ವಚ್ಛ ಸಿಂಗಾಪುರ ರಾಷ್ಟ್ರೀಯ ಅಭಿಯಾನವನ್ನು ಕೈಗೆತ್ತಿಕೊಂಡರು. ಅಭಿಯಾನದಡಿ ಪ್ರತಿಯೊಂದು ಮನೆಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಯಿತು. ನದಿಗಳನ್ನು ಸ್ವಚ್ಛಗೊಳಿಸಲಾಯಿತು. ವಿಶೇಷವಾಗಿ ನಾವು ಸಿಂಗಾಪುರದ ನದಿಯನ್ನು ಸ್ವಚ್ಛಗೊಳಿಸಿದೆವು. ಈ ಪ್ರಕ್ರಿಯೆಯಲ್ಲಿ ಹಿನ್ನೀರಿನಲ್ಲಿದ್ದ ಸಹಸ್ರಾರು ಕೈಗಾರಿಕೆಗಳನ್ನು, ಹಂದಿ ಸಾಕಾಣಿಕೆ ಕೇಂದ್ರಗಳನ್ನು ತೆರವು ಮಾಡಲಾಯಿತು. ಇಂದು ಸ್ವಚ್ಛವಾಗಿರುವ ಸಿಂಗಾಪುರದ ನದಿ ನಗರದಲ್ಲಿ ಮರೀನಾ ಜಲಾಶಯದವರೆಗೆ ಹರಿಯುತ್ತಿದೆ. ಅದು ನಮ್ಮ ರಾಷ್ಟ್ರೀಯ ಜಲಪೂರೈಕೆಯೂ ಆಗಿದೆ.
ಭಾರತ, ಸಿಂಗಾಪುರಕ್ಕಿಂತ ಅತ್ಯಂತ ಭಿನ್ನವಾದ ದೇಶ. ಇಲ್ಲಿನ ಗಂಗಾ ನದಿ ಸಿಂಗಾಪುರದ ನದಿಗಿಂತ ಸಾವಿರಪಟ್ಟು ಉದ್ದವಿದೆ. ಆದರೂ ಭಾರತ, ಸಿಂಗಾಪುರದ ಸ್ವಚ್ಛತಾ ಪಯಣದಲ್ಲಿ ಹಲವು ಸಮಾನ ಅಂಶಗಳನ್ನು ಕಾಣಬಹುದಾಗಿದೆ.
ಭಾರತದಲ್ಲಿ ಸ್ವಚ್ಛ ಭಾರತ ಯೋಜನೆ ಅನುಷ್ಠಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇಲ್ಲಿ ಪ್ರಮುಖ ಭಾಗೀದಾರರಾದ ಕೈಗಾರಿಕೆಗಳು ಮತ್ತು ಶಾಲೆಗಳು ಉತ್ತಮ ಫಲಿತಾಂಶ ತೋರಿವೆ. ಶಾಲೆಗಳಲ್ಲಿ ಕುಡಿಯುವ ನೀರು, ನೈರ್ಮಲ್ಯೀಕರಣ ಮತ್ತು ಸ್ವಚ್ಛತೆ ಕುರಿತಂತೆ ಯುನಿಸೆಫ್ ಬಿಡುಗಡೆ ಮಾಡಿದ 2018ರ ಜಾಗತಿಕ ವರದಿಯಲ್ಲಿ ಭಾರತದ ಬಹುತೇಕ ಎಲ್ಲ ಶಾಲೆಗಳಲ್ಲೂ ಶೌಚಗೃಹ ವ್ಯವಸ್ಥೆಯನ್ನು ನಿರ್ವಿುಸಲಾಗಿದೆ ಎಂಬ ಅಂಶವನ್ನು ಪ್ರಮುಖವಾಗಿ ಹೇಳಲಾಗಿದೆ.
ಸಿಂಗಾಪುರ ಮತ್ತು ಭಾರತ ಎರಡಕ್ಕೂ ಮೌಲ್ಯಯುತ ಅಂತಾರಾಷ್ಟ್ರೀಯ ಸಹಕಾರವಿದೆ. ಅನುಭವಗಳ ಹಂಚಿಕೆ  ಮತ್ತು ಕಲಿಕೆಯಿಂದ ನಾವೆಲ್ಲ ಪ್ರಯೋಜನ ಪಡೆಯಬಹುದಾಗಿದೆ.
ಭಾರತದ ನಗರ ಮತ್ತು ಪಟ್ಟಣ ಯೋಜನಾ ಸಂಸ್ಥೆಯ ಜತೆ ಸಿಂಗಾಪುರ ಸಹಭಾಗಿತ್ವ ಸಾಧಿಸಿದ್ದು, ಆ ಮೂಲಕ ನಗರ ಯೋಜನೆ, ನೀರು ಹಾಗೂ ತ್ಯಾಜ್ಯ ನಿರ್ವಹಣೆ ಕುರಿತಂತೆ ನೂರು ಅಧಿಕಾರಿಗಳಿಗೆ ತರಬೇತಿ  ನೀಡಲಿದೆ.

ಬಯಲಾದೀತೇ ಶಾಸ್ತ್ರಿ ಸಾವಿನ ರಹಸ್ಯ?
53 ವರ್ಷಗಳ ಬಳಿಕವೂ ಲಾಲ್ ಬಹಾದುರ್ ಶಾಸ್ತ್ರಿ ಸಾವು ನಿಗೂಢವಾಗಿಯೇ ಉಳಿದಿದೆ. ಕೇಂದ್ರ ಸರ್ಕಾರ ನೇತಾಜಿ ಸಾವಿನ ಕೆಲ ರಹಸ್ಯ ಕಡತಗಳನ್ನು ಬಹಿರಂಗಗೊಳಿಸಿದ ರೀತಿಯಲ್ಲೇ, ಶಾಸ್ತ್ರೀಜಿ ಸಾವಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಿಡುಗಡೆ ಮಾಡಲಿ ಎಂಬ ಜನಾಗ್ರಹವೂ ಹೆಚ್ಚುತ್ತಿದೆ. ಈ ಮಧ್ಯೆ, ಧೀಮಂತ ನಾಯಕ ಶಾಸ್ತ್ರಿಯವರ ಜನ್ಮದಿನದ ಪ್ರಯುಕ್ತ ಇಂದು ದೇಶಾದ್ಯಂತ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಕಡತ ಬಹಿರಂಗಕ್ಕೆ ಕೇಂದ್ರೀಯ ಮಾಹಿತಿ ಆಯೋಗ ಸೂಚನೆ
ಲಾಲ್ ಬಹಾದುರ್ ಶಾಸ್ತ್ರಿ ನಿಧನಕ್ಕೆ ಸಂಬಂಧಿಸಿದ ಎಲ್ಲ ರಹಸ್ಯ ಕಡತಗಳನ್ನು ಸಾರ್ವಜನಿಕವಾಗಿಸುವ ನಿಟ್ಟಿನಲ್ಲಿ, ಆ ಕಡತಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮುಂದೆ ಮಂಡಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ) ಸೂಚಿಸಿದೆ. ಈ ಸಂಬಂಧ ಪ್ರಧಾನಿ ಕಾರ್ಯಾಲಯ, ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯಕ್ಕೆ ಸಲಹೆ-ಸೂಚನೆಗಳನ್ನು ರವಾನಿಸಿದೆ. ಆರ್​ಟಿಐ ಅರ್ಜಿ ವಿಚಾರಣೆ ವೇಳೆ ಮಾಹಿತಿ ಆಯೋಗ ಈ ಆದೇಶ ನೀಡಿದೆ.
ತಾಷ್ಕೆಂಟ್​ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಅಯೂಬ್ ಖಾನ್ ಜತೆ ಮಾತುಕತೆ ನಡೆಸಿ, ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಸಮಯದಲ್ಲಿ (1966 ಜನವರಿ 11) ಶಾಸ್ತ್ರಿ ಅವರು ಅನುಮಾನಾಸ್ಪದವಾಗಿ ಹೋಟೆಲ್ ಕೋಣೆಯಲ್ಲೇ ಮೃತಪಟ್ಟರು. ಆ ಸಂದರ್ಭದಲ್ಲಿ ಶವಪರೀಕ್ಷೆ ನಡೆಸಲಾಗಿತ್ತೇ, ಇಲ್ಲವೇ ಎಂದು ಪ್ರಶ್ನಿಸಿ ಆರ್​ಟಿಐ ಕಾರ್ಯಕರ್ತ ನವ್​ದೀಪ್ ಗುಪ್ತಾ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು ಪ್ರತಿಕ್ರಿಯೆ ಹೀಗಿದೆ: ‘ಶಾಸ್ತ್ರಿ ಸಾವಿನ ಕುರಿತಂತೆ ಹಲವು ಅನುಮಾನಗಳು, ಗಂಭೀರ ಪ್ರಶ್ನೆಗಳು ಜೀವಂತವಾಗಿವೆ. ಅಲ್ಲದೆ, ಕೆಲ ದಾಖಲೆಗಳು ಕಾಣೆಯಾಗಿವೆ. ಹೀಗಿರುವಾಗ ಶಾಸ್ತ್ರಿಯವರ ನಿಗೂಢ ಸಾವಿನ ಸಂಬಂಧದ ರಹಸ್ಯ ಕಡತಗಳನ್ನು ಪ್ರಧಾನಿ ಹಾಗೂ ಗೃಹ ಸಚಿವರ ಮುಂದಿರಿಸಬೇಕೆಂದು ಸೂಚಿಸಿದ್ದೇವೆ’.
ದಾಖಲೆಗಳೇ ನಾಪತ್ತೆ: ಜನತಾ ಪಾರ್ಟಿ ಸರ್ಕಾರದ ಅಧಿಕಾರಾವಧಿಯಲ್ಲಿ ಶಾಸ್ತ್ರಿ ಸಾವಿನ ಸಂಬಂಧ ತನಿಖೆಗಾಗಿ ರಾಜ್ಯಸಭೆ ರಾಜನಾರಾಯಣ ಸಮಿತಿ ರಚಿಸಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ತನಿಖೆಗೆ ಸಂಬಂಧಿಸಿದ ದಾಖಲೆಗಳೇ ಕಾಣೆಯಾಗಿವೆ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು, ‘ಸಂಸತ್ತು ಎಲ್ಲ ದಾಖಲೆಗಳನ್ನು ತುಂಬ ಜಾಗರೂಕತೆಯಿಂದ ಕಾಪಾಡಲು ಬದ್ಧವಾಗಿರುತ್ತದೆ. ಸಂಸತ್ತಿನಲ್ಲಿ ಹೇಳಿದ ಪ್ರತಿಯೊಂದು ಶಬ್ದ ದಾಖಲೆ ಆಗಿ ಉಳಿಯುತ್ತದೆ. ಹೀಗಿರುವಾಗ ಇಂಥ ಮಹತ್ವದ ಕಡತ ಹೇಗೆ ನಾಪತ್ತೆಯಾಯಿತು ಎಂಬುದು ತಿಳಿಯದಂತಾಗಿದೆ’ ಎಂದಿದ್ದಾರೆ.
ದಾಖಲೆ ನೀಡಲು ಸಿದ್ಧ: ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೇಳುವ ಯಾವುದೇ ಮಾಹಿತಿ, ದಾಖಲೆಯನ್ನು ನೀಡಲು ಸಿದ್ಧ ಎಂದು ಉಜ್ಬೇಕಿಸ್ತಾನದ ರಾಯಭಾರಿ ಪ್ರತಿಕ್ರಿಯಿಸಿದ್ದಾರೆ.
ನೇತಾಜಿ ಕಡತಗಳು

2015ರ ಡಿಸೆಂಬರ್ 4ರಂದು ನೇತಾಜಿ ಸುಭಾಷ್​ಚಂದ್ರ ಬೋಸ್ ಸಾವಿಗೆ ಸಂಬಂಧಿಸಿದ 33 ರಹಸ್ಯ ಕಡತಗಳನ್ನು ಬಹಿರಂಗಗೊಳಿಸಲಾಯಿತು. ಆ ಬಳಿಕ, 37 ಮತ್ತೆ 25 ಕಡತಗಳನ್ನು ಬಹಿರಂಗಗೊಳಿಸಿ 2016ರ ಜನವರಿ 23ರಂದು ಒಟ್ಟು 100 ಕಡತಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಜನಸಾಮಾನ್ಯರು ಕೂಡ ಇವುಗಳನ್ನು ವೀಕ್ಷಿಸಬಹುದಾಗಿದೆ. ಆದರೂ, ನೇತಾಜಿ ಸಾವಿನ ರಹಸ್ಯ ಅನಾವರಣಗೊಂಡಿಲ್ಲ ಎಂಬುದು ಬೇರೆ ವಿಷಯ.
ಅಂದು ಏನಾಯಿತು?
ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕ ಸಂಕಷ್ಟವನ್ನು ಸಂಭಾಳಿಸುತ್ತ ವಿವಿಧ ಸುಧಾರಣೆಗಳಿಗೆ ಚಾಲನೆ ಕೊಟ್ಟ ಲಾಲ್ ಬಹಾದುರ್ ಶಾಸ್ತ್ರಿ ಆಕಸ್ಮಾತ್ ಎರಗಿ ಬಂದ ಪಾಕಿಸ್ತಾನಕ್ಕೂ ತಕ್ಕ ಉತ್ತರ ನೀಡಿ ಅಂತಾರಾಷ್ಟ್ರೀಯ ವಲಯದ ಗಮನ ಸೆಳೆದರು. ಆದರೆ, ಕದನ ವಿರಾಮ ಘೊಷಣೆಯ ಬೆನ್ನಲ್ಲಿ ಸೋವಿಯತ್ ಯೂನಿಯನ್ನಿನ ತಾಷ್ಕೆಂಟಿನಲ್ಲಿ ಪಾಕ್ ಅಧ್ಯಕ್ಷರ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಸಮಯದಲ್ಲಿ (1966 ಜನವರಿ 11) ಶಾಸ್ತ್ರಿ ತಾವು ಉಳಿದುಕೊಂಡಿದ್ದ ಹೋಟೆಲಿನ ಕೋಣೆಯಲ್ಲೇ ಕೊನೆಯುಸಿರೆಳೆದರು. ಹೃದಯಾಘಾತದಿಂದ ಶಾಸ್ತ್ರಿ ಮೃತಪಟ್ಟರು ಎಂದು ಆಗ ಕಾಂಗ್ರೆಸ್ ಹೇಳಿತಾದರೂ ಶಾಸ್ತ್ರಿಯವರ ಮೃತದೇಹ ತಾಷ್ಕೆಂಟ್​ನಿಂದ ಭಾರತಕ್ಕೆ ಬಂದಾಗ ಅನೇಕ ಅನುಮಾನಗಳು ಎದ್ದವು. ಇದು ಸ್ವಾಭಾವಿಕ ಸಾವಲ್ಲ ಎಂಬುದನ್ನು ಆಗಲೇ ಕುಟುಂಬ ಸದಸ್ಯರು ಹೇಳಿದ್ದರು.
ಕಾಡುವ ಪ್ರಶ್ನೆಗಳು
ಶಾಸ್ತ್ರಿಯವರ ಕುಟುಂಬ ವೈದ್ಯರಾಗಿದ್ದ ಡಾ.ಆರ್.ಎನ್.ಚುಗ್ ಮತ್ತು ಮನೆಗೆಲಸದಾಳು ರಾಮನಾಥ ಸಾವು ಕಾಕತಾಳೀ ಯವಾಗಿರಲು ಹೇಗೆ ಸಾಧ್ಯ? ಡಾ.ಚುಗ್ ವಿಚಾರಣೆಯಿಂದ ಸಾಕಷ್ಟು ಮಾಹಿತಿಗಳು ಹೊರಬರುತ್ತಿದ್ದವು. ಅಲ್ಲದೆ, ಅವರು ರಾಜನಾರಾಯಣ ಸಮಿತಿ ಮುಂದೆ ಸಾಕ್ಷ್ಯ ಹೇಳಲು ಹೊರಟಿದ್ದಾಗ ಅಪಘಾತದಲ್ಲಿ ಮೃತಪಟ್ಟರು. ರಾಮನಾಥನಿಗೆ ಶಾಸ್ತ್ರಿಯವರ ದಿನಚರಿ, ರಾತ್ರಿ ಹೊತ್ತಿನಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ಔಷಧ ಇತ್ಯಾದಿಗಳ ಮಾಹಿತಿ ಇತ್ತು. ಆತ ಕೂಡ ರಾಜನಾರಾಯಣ ಸಮಿತಿ ಮುಂದೆ ಹಾಜರಾಗಲು ನಿರ್ಧರಿಸಿದ್ದ. ಇದಕ್ಕೂ ಮುಂಚೆ ಶಾಸ್ತ್ರಿ ಪತ್ನಿ ಲಲಿತಾರನ್ನು ಭೇಟಿಯಾಗಿದ್ದ. ಆದರೆ, ಹೇಳಿಕೆ ನೀಡಲು ಹೋಗುವಾಗ ದಾರಿಮಧ್ಯದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ, ಕ್ರಮೇಣ ಅವನ ಜ್ಞಾಪಕಶಕ್ತಿಯೂ ಹೊರಟುಹೋಯಿತು. ಬಳಿಕ ಆತನೂ ಮೃತಪಟ್ಟ. ಇವರಿಬ್ಬರೂ ಹೇಳಿಕೆ ನೀಡಲು ಹೋಗು ವಾಗಲೇ ‘ಅಪಘಾತ’ಕ್ಕೆ ತುತ್ತಾಗಿದ್ದರ ಹಿಂದೆ ಷಡ್ಯಂತ್ರವಿದ್ದಿರಬಹುದೆ ಹೊರತು ಇದು ಕಾಕ ತಾಳೀಯವಾಗಿರಲು ಸಾಧ್ಯವಿಲ್ಲ ಎನ್ನುತ್ತಾರೆ ಶಾಸ್ತ್ರಿಯವರ ಎರಡನೇ ಪುತ್ರ ಸುನೀಲ್ ಶಾಸ್ತ್ರಿ.
ತಾಷ್ಕೆಂಟ್​ನಲ್ಲಿ ಶಾಸ್ತ್ರಿಯವರ ಅಡುಗೆಯವ ಊಟದಲ್ಲಿ ವಿಷ ಬೆರೆಸಿದ್ದ ಎಂದು ಹೇಳಲಾಯಿತು. ಆತನನ್ನು ಬಂಧಿಸಲಾಯಿತಾದರೂ ಸೂಕ್ತ ವಿಚಾರಣೆ ನಡೆಸದೇ ಬಿಡುಗಡೆಗೊಳಿಸಲಾಯಿತು.
ಅಸ್ವಾಭಾವಿಕ ಸಾವು ಕುಟುಂಬದ ವಾದ

1) ವೈಯಕ್ತಿಕ ವಸ್ತುಗಳು ಕಾಣೆ: ಮೊದಲಿನಿಂದಲೂ ದಿನಚರಿ ಬರೆಯುವ ಅಭ್ಯಾಸ ಹೊಂದಿದ್ದ ಶಾಸ್ತ್ರಿಯವರು ಪ್ರಧಾನಿಯಾದ ಬಳಿಕವೂ ಡೈರಿಯಲ್ಲಿ ಆಯಾ ದಿನದ ಕಾರ್ಯಕ್ರಮಗಳ ಬಗ್ಗೆ ನೋಟ್ಸ್ ಗಳನ್ನು ಬರೆದುಕೊಳ್ಳುತ್ತಿದ್ದರು. ಅವರು ತಾಷ್ಕೆಂಟ್​ಗೆ ಹೋದಾಗ ಇದ್ದದ್ದು ಕೆಂಪುಬಣ್ಣದ ಡೈರಿ. ಈ ಡೈರಿಯಲ್ಲಿ ಅವರು ತಾಷ್ಕೆಂಟ್ ಒಪ್ಪಂದದ ಬಗ್ಗೆಯೂ ಉಲ್ಲೇಖಿಸಿದ್ದರು ಎನ್ನಲಾಗಿದೆ. ಆದರೆ, ಶಾಸ್ತ್ರಿಯವರ ಪಾರ್ಥಿವಶರೀರವನ್ನು ಭಾರತಕ್ಕೆ ತೆಗೆದುಕೊಂಡು ಬರುವಾಗ ಈ ಡೈರಿಯನ್ನು ತಂದಿರಲಿಲ್ಲ. ಅದು ಸಿಕ್ಕಿದ್ದರೆ ನಿಗೂಢಗಳು ಕೊನೆಗೊಳ್ಳುತ್ತಿದ್ದವು ಎಂಬುದು ಶಾಸ್ತ್ರಿ ಪುತ್ರ ಅನಿಲ್ ಅಭಿಪ್ರಾಯ. ಶಾಸ್ತ್ರಿಯವರು ಪ್ರತಿನಿತ್ಯ ರಾತ್ರಿ ಹಾಲು ಕುಡಿಯಲು ಥರ್ವಸನ್ನು ಉಪಯೋಗಿಸುತ್ತಿದ್ದರು. ತಾಷ್ಕೆಂಟ್​ಗೆ ಹೋದಾಗಲೂ ಈ ಥರ್ವಸ್ ಇತ್ತು. ಆದರೆ, ಇದನ್ನೂ ಭಾರತಕ್ಕೆ ತರಲಿಲ್ಲ. ಅದನ್ನು ತಂದಿದ್ದರೆ ವಿಷಪ್ರಾಶನದ ಬಗ್ಗೆ ಸ್ಪಷ್ಟ ಸುಳಿವು ಸಿಗುತ್ತಿತ್ತು.
2) ನಡೆಯದ ಮರಣೋತ್ತರ ಪರೀಕ್ಷೆ: ಸಾವಿನ ಬಗ್ಗೆ ಅನುಮಾನವಿದ್ದಾಗ ಅಥವಾ ಹೊರದೇಶಗಳಲ್ಲಿ ಮೃತಪಟ್ಟಾಗ ಮರಣೋತ್ತರ ಪರೀಕ್ಷೆ ನಡೆಸುವುದು ಸಾಮಾನ್ಯ. ಆದರೆ, ದೇಶದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಬಹುದು ಎಂಬ ಆತಂಕದಲ್ಲಿ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆಯನ್ನೇ ಮಾಡಲಿಲ್ಲ. ಇದು ಸಾವಿನ ಕಾರಣವನ್ನು ಮುಚ್ಚಿಡುವ ವ್ಯವಸ್ಥಿತ ಪ್ರಯತ್ನವಾಗಿತ್ತು ಎನ್ನುತ್ತಾರೆ ಕುಟುಂಬವರ್ಗದವರು.
3) ದೇಹದ ಮೇಲೆ ಗಾಯದ ಗುರುತು: ಶಾಸ್ತ್ರಿಯವರ ಪಾರ್ಥಿವಶರೀರ ಭಾರತಕ್ಕೆ ಬಂದಾಗ ವಿಮಾನನಿಲ್ದಾಣದಲ್ಲೇ ಇದ್ದ ಅವರ ಪತ್ನಿ ಲಲಿತಾ ಬೆಚ್ಚಿಬಿದ್ದಿದ್ದರು. ಕಾರಣ, ಶಾಸ್ತ್ರಿಯವರ ಹೊಟ್ಟೆಮೇಲೆ ಕಡುನೀಲಿ ಮಚ್ಚೆಗಳು, ಗಾಯದ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿದ್ದವು. ದೇಹ ನೀಲಿಬಣ್ಣಕ್ಕೆ ತಿರುಗಿತ್ತು. ವಿಷ ದೇಹಕ್ಕೆ ಸೇರಿದಾಗ ಮಾತ್ರ ಅದು ನೀಲಿಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ, ಪತಿ ಹೃದಯಾಘಾತದಿಂದ ಸತ್ತಿಲ್ಲ, ಅವರ ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಲಲಿತಾ ಅನುಮಾನಿಸಿದ್ದರು.
4) ತನಿಖೆ ನಡೆಸದ ಕಾಂಗ್ರೆಸ್!: ಶಾಸ್ತ್ರಿ ಅನುಮಾನಾಸ್ಪದ ಸಾವಿನ ಬಗ್ಗೆ ಆಗಿನ ಕಾಂಗ್ರೆಸ್ ಸರ್ಕಾರಗಳು ತನಿಖೆ ನಡೆಸಲು ಮುಂದಾಗಲಿಲ್ಲ. ಜನತಾ ಪಕ್ಷ ಸರ್ಕಾರವು ರಾಜನಾರಾಯಣ ಸಮಿತಿ ರಚಿಸಿತು. ಶಾಸ್ತ್ರಿಯವರ ಕುಟುಂಬ ವೈದ್ಯ ಡಾ.ಆರ್.ಎನ್.ಚುಗ್ ಮತ್ತು ಮನೆಗೆಲಸದಾಳು ರಾಮನಾಥ ಸಮಿತಿ ಮುಂದೆ ಸಾಕ್ಷ್ಯ ಹೇಳುವ ಕೆಲಸಮಯ ಮುನ್ನವೇ ಅಪಘಾತದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರಿಂದ ಸಮಿತಿಗೆ ಮುಂದಿನ ತನಿಖೆ ನಡೆಸಲು ಸಾಧ್ಯವಾಗಲಿಲ್ಲ.
5) ಯಾವ ವ್ಯವಸ್ಥೆಯೂ ಇರಲಿಲ್ಲ: ಸಾಮಾನ್ಯವಾಗಿ ಪ್ರಧಾನಿ ಉಳಿದುಕೊಳ್ಳುವ ಕೋಣೆಯಲ್ಲಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆದರೆ, ತಾಷ್ಕೆಂಟಿನಲ್ಲಿ ಲಾಲ ಬಹಾದುರರು ಉಳಿದುಕೊಂಡಿದ್ದ ಕೋಣೆಗೆ ಬೆಲ್ ಆಗಲಿ, ಫೋನ್ ಸಂಪರ್ಕವಾಗಲಿ ಇರಲಿಲ್ಲ. ಅವರ ಸಹಾಯಕ್ಕೆ ಒಬ್ಬ ನೌಕರನೂ ಇರಲಿಲ್ಲ. ಪ್ರಾಥಮಿಕ ಚಿಕಿತ್ಸೆಯ ಸೌಲಭ್ಯವೂ ಇರಲಿಲ್ಲ. ಶಾಸ್ತ್ರಿಯವರೇ ಬಾಗಿಲವರೆಗೆ ನಡೆದುಕೊಂಡು ಬರಬೇಕಾಯಿತು. ಕೊಲೆಗೆ ಪಿತೂರಿಯಾಗಿ ಹೀಗೆ ಮಾಡಲಾಗಿತ್ತು ಎಂಬುದು ಕುಟುಂಬ ಸದಸ್ಯರ ಆರೋಪ.
ಧೀಮಂತ ನಾಯಕ
ಲಾಲ್ ಬಹಾದೂರರು ಹುಟ್ಟಿದ್ದು 1904ರ ಅಕ್ಟೋಬರ್ 2ರಂದು, ಅಜ್ಜನ ಊರಾದ ಮೊಘಲ್​ಸರಾಯ್ ರೈಲ್ವೇ ಕಾಲನಿಯಲ್ಲಿ. ತಂದೆ ಶಾರದಾಪ್ರಸಾದ್, ತಾಯಿ ದುಲಾರಿದೇವಿ. ಇಬ್ಬರು ಸಹೋದರಿಯರು. ಬಹಾದುರರ ತಂದೆ ಸಾಮಾನ್ಯ ಶಿಕ್ಷಕರಾಗಿ, ಬಳಿಕ ಕಂದಾಯ ಇಲಾಖೆಯಲ್ಲಿ ಕರಣಿಕನಾಗಿ ಕಾರ್ಯನಿರ್ವಹಿಸಿದವರು. ಬಹಾದುರರಿಗೆ 18 ತಿಂಗಳಾಗಿರುವಾಗಲೇ ಊರಿಗೆ ಅಂಟಿದ ಮಹಾಮಾರಿ ಪ್ಲೇಗ್​ಗೆ ತಂದೆ ಸಾವಿಗೀಡಾದರು. ಆಮೇಲೆ ಬಹಾದುರ್ ಆರನೇ ತರಗತಿ ಮುಗಿಯುವವರೆಗೆ ಸೋದರಮಾವನ ಮನೆಯಲ್ಲಿಯೇ ಕಳೆದರು. ಮುಂದಿನ ಅಧ್ಯಯನಕ್ಕಾಗಿ ಪವಿತ್ರ ನಗರ ಬನಾರಸಿಗೆ ಬಂದರು. ಬನಾರಸ್ ನಗರದ ಮುನ್ಸಿಪಾಲ್ಟಿಯಲ್ಲಿ ಅವರ ಸಮೀಪ ಸಂಬಂಧಿ ರಘುನಾಥ ಪ್ರಸಾದರು ಪ್ರಧಾನ ಕರಣಿಕರಾಗಿದ್ದರು. ಲಾಲ್​ಜಿ ಜೀವನದಲ್ಲಿಯೂ ಇವರು ಪ್ರೇರಕರಾಗಿದ್ದರು. ಹೀಗೆ ಸಾಗಿದ ಇವರ ಪ್ರಾಮಾಣಿಕ ಬದುಕು ಮುಂದೆ ಸತ್ಯದ ಹಂದರವನ್ನೇ ಕಟ್ಟುತ್ತ ಸಾಗಿತು.
1921-1942ರ ಅವಧಿಯಲ್ಲಿ ನಡೆದ ಬಹುತೇಕ ಎಲ್ಲ ರಾಷ್ಟ್ರೀಯ ಚಳವಳಿಗಳಲ್ಲಿ ಭಾಗಿಯಾದ ಲಾಲ್ ಬಹಾದುರ್ ಶಾಸ್ತ್ರಿ ಏಳು ಸಲ ಸೆರೆವಾಸ ಅನುಭವಿಸಿದರು. ಸೆರೆವಾಸದಲ್ಲಿದ್ದಾಗ ಮುದ್ದಿನ ಮಗಳು ಅನಾರೋಗ್ಯ ಪೀಡಿತಳಾಗುತ್ತಾಳೆ. ಈ ಸುದ್ದಿ ತಲುಪಿ ಶಾಸ್ತ್ರಿ ಅವರು 15 ದಿನಗಳ ಪರೋಲ್ ಮೇಲೆ ಬಿಡುಗಡೆ ಪಡೆದು ಹೊರಬಂದರು. ಮನೆಗೆ ತಲುಪುವಷ್ಟರಲ್ಲಿ ಮಗಳ ಅನಾರೋಗ್ಯ ತೀವ್ರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಳು. ಮಗಳ ಅಂತ್ಯಕ್ರಿಯೆ ಮುಗಿಸಿದ ಕೂಡಲೇ ಮತ್ತೆ ಜೈಲಿನತ್ತ ಹೊರಟ ಶಾಸ್ತ್ರಿಯವರನ್ನು ಕುಟುಂಬದವರು ತಡೆದು, ‘15 ದಿನಗಳ ಕಾಲವಾದರೂ ಮನೆಯಲ್ಲಿರಿ’ ಎಂದರು. ಅದಕ್ಕೊಪ್ಪದ ಶಾಸ್ತ್ರಿಯವರು, ‘ಮಗಳ ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಪರೋಲ್ ಮೇಲೆ ಬಿಟ್ಟಿದ್ದಾರೆ. ಮಗಳೇ ಕೊನೆಯುಸಿರೆಳೆದ ಮೇಲೆ ಇಲ್ಲಿ ಇರುವುದಕ್ಕೆ ಕಾರಣ ಇಲ್ಲ’ ಎಂದು ಉತ್ತರಿಸಿ ವಾಪಸ್ ಜೈಲಿಗೆ ಹೊರಟರು.
ಲಾಲ್ ಬಹಾದುರ್​ಗೆ ಬಾಲಗಂಗಾಧರ ತಿಲಕರೆಂದರೆ ಜೀವ. ಒಂದು ಸಾರಿ 50 ಮೈಲು ದೂರದ ವಾರಾಣಸಿಗೆ ತಿಲಕರ ಭಾಷಣಕ್ಕೆ ಹೋಗಿದ್ದರು. ಹೋಗಲು ದುಡ್ಡು ಬೇಕಲ್ಲ. ಸಾಲ ಮಾಡಿ ಹೋಗಿದ್ದರಂತೆ! ಆ ಭಾಷಣ ಕೃಷ್ಣನ ಪಾಂಚಜನ್ಯದಂತೆ ಕಿವಿಯಲ್ಲಿ ತುಂಬಿಕೊಂಡಿತು ಎಂದವರು ಹೇಳಿಕೊಂಡಿದ್ದಾರೆ. 1921ರಲ್ಲಿ ಗಾಂಧಿ ಅಸಹಕಾರ ಚಳವಳಿಗೆ ಕರೆ ಕೊಟ್ಟಾಗ 17ರ ಈ ಯುವಕ ಶಾಲೆ ತ್ಯಜಿಸಿ ಬೀದಿಗೆ ಇಳಿದಿದ್ದ. 1927ರಲ್ಲಿ ಲಲಿತಾ ದೇವಿಯವರೊಂದಿಗೆ ವಿವಾಹ. ನೂತನ ವಧುವರರಿಗೆ ಮಾವ ಕೊಟ್ಟ ಉಡುಗೊರೆ ಏನು ಗೊತ್ತಾ? ನೂಲುವ ಚರಕ ಮತ್ತು ಒಂದಷ್ಟು ಖಾದಿ ನೂಲಿನ ಉಂಡೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....