ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಬಾರಿಸು ಕನ್ನಡ ಡಿಂಡಿಮವ: ಸಾಧಕ ಕನ್ನಡಿಗರು

ವಿಶ್ವ ಭೂಪಟದಲ್ಲಿ ಕರ್ನಾಟಕ ತನ್ನದೇ ಛಾಪು ಮೂಡಿಸಿದೆ. ಅನೇಕ ಕನ್ನಡಿಗರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸದ್ದು ಗದ್ದಲವಿಲ್ಲದೆ ಸಾಧನೆ ಮಾಡುತ್ತಿದ್ದಾರೆ. ಕರುನಾಡ ಕಂಪನ್ನು ಜಾಗತಿಕ ಮಟ್ಟದಲ್ಲೂ ಪಸರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮೆರೆದವರ ಸಂಕ್ಷಿಪ್ತ ವಿವರ ನೀಡುವ ಪ್ರಯತ್ನವಿದು. ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕ ಕನ್ನಡಿಗರನ್ನು ಮೆಚ್ಚಿ ಪ್ರೋತ್ಸಾಹಿಸುವುದು ಹೆಮ್ಮೆಯ ಸಂಗತಿ...
ವಯಸ್ಸಿನ ಹಂಗು ಮೀರಿದ ಸಿದ್ದಯ್ಯ ಸಾಧನೆ
ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ 80ರ ಹರೆಯದ ಕೆ.ಮಾದಯ್ಯ ಅಥ್ಲೆಟಿಕ್ಸ್‌ನಲ್ಲಿ ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಅಕ್ಟೋಬರ್‌ನಲ್ಲಿ ನಡೆದ 32ನೇ ಮಲೇಷ್ಯಾ ಅಂತರರಾಷ್ಟ್ರೀಯ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 80 ರಿಂದ 85 ವಯಸ್ಸಿನ ವಿಭಾಗದ ಸ್ಪರ್ಧೆಗಳಲ್ಲಿ ಎರಡು ಚಿನ್ನ (5,000 ಮೀ. ನಡಿಗೆ ಮತ್ತು 1,500 ಮೀ. ಓಟ) ಹಾಗೂ ಎರಡು ಬೆಳ್ಳಿ ಪದಕ (400 ಮೀಟರ್‌ ಮತ್ತು 800 ಮೀಟರ್‌) ಗೆದ್ದಿದ್ದಾರೆ.
1938ರ ಸೆಪ್ಟೆಂಬರ್‌ 6ರಂದು ಜನಿಸಿದ ಮಾದಯ್ಯ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಹಾಸನ ಮತ್ತು ಕೊಳ್ಳೇಗಾಲದಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತರಾದವರು. ನಿವೃತ್ತಿ ನಂತರ ಕರ್ನಾಟಕ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಮತ್ತು ಇಂಡಿಯಾ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಸದಸ್ಯರಾಗಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಆರಂಭಿಸಿದರು. 2015ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲೂ 5,000 ಮೀಟರ್‌ ನಡಿಗೆಯಲ್ಲಿ ಎರಡನೇ ಮತ್ತು ಟ್ರಿಪಲ್‌ ಜಂಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ 50ಕ್ಕೂ ಹೆಚ್ಚು ಪದಕಗಳಿಗೆ ಅವರು ಕೊರಳೊಡ್ಡಿದ್ದಾರೆ.


***
ಶಿಕ್ಷಕನಿಂದ ವಿದೇಶಾಂಗ ಆಡಳಿತಕ್ಕೆ ‘ಶಂಭು ಹಕ್ಕಿ‘
ಹಾವೇರಿಯ ಈ ಯುವಕ, ಓದಿದ್ದೆಲ್ಲ ಕರ್ನಾಟಕ ಕಾಲೇಜು ಹಾಗು ವಿಶ್ವವಿದ್ಯಾಲಯದಲ್ಲಿ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅಲ್ಲಿದ್ದಾಗಲೇ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದರು. ಮೊದಲ ಯತ್ನದಲ್ಲಿ ಯಶಸ್ಸಾದರೂ ಇವರಂದುಕೊಂಡ ರ್ಯಾಂಕಿಂಗ್ ಬಂದಿರಲಿಲ್ಲ. ಮತ್ತೆ ಪ್ರಯತ್ನ ಮುಂದುವರಿಸಿದರು. ಉತ್ತಮ ರ್ಯಾಂಕಿಂಗ್‌ ಬಂದ ನಂತರ ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆರಂಭಿಸಿದರು. ಚೈನಾದ ಟೈಪೆಯಲ್ಲಿ ಕಾರ್ಯನಿರ್ವಹಿಸಿದ ಶಂಭು ಇದೀಗ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಡುಗಳ ರಚನೆ, ಸಾಹಿತ್ಯ ಅಧ್ಯಯನ ಇವರ ಹವ್ಯಾಸಗಳು. ಹಾಡುಗಳನ್ನು ಬರೆಯುವುದಷ್ಟೇ ಅಲ್ಲ, ಹಾಡಿಗೆ ಧ್ವನಿಯಾಗುವುದೂ ಇವರ ಪ್ರವೃತ್ತಿ. ಹೋದ ದೇಶದಲ್ಲೆಲ್ಲ ಅಲ್ಲಿಯ ಭಾಷೆ ಕಲಿಯುವುದು, ಆ ಸಾಹಿತ್ಯವನ್ನು ಓದುವುದೂ ಶಂಭು ಅವರ ಇಷ್ಟದ ಕೆಲಸ. ಕನ್ನಡದ ಮಾಧ್ಯಮದಲ್ಲೇ ಓದಿ, ದಿಕ್ಸೂಚಿ ಹಾಗೂ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿರುವ ಶಂಭು ಇದೀಗ ವಾಷಿಂಗ್ಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಯಾಜುದ್ದೀನ್‌ ಪಟೇಲ್‌ (ಕಲಾವಿದ)
ಮೊಹ್ಮದ್‌ ಅಯಾಜುದ್ದೀನ್‌ ಪಟೇಲ್‌, ಡಿಜಿಟಲ್‌ ಯುಗದ ಆರಂಭದಲ್ಲಿಯೇ ಡಿಜಿಟಲ್‌ ಕಲಾವಿದರಾಗಿ ಹೆಸರು ಗಳಿಸಿದವರು. ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರದ ಹುಡುಗ. ಓದಿದ್ದೆಲ್ಲ ಕನ್ನಡ ಮಾಧ್ಯಮದಲ್ಲಿ. ಗ್ರಾಮೀಣ ಹಿನ್ನೆಲೆಯಿಂದ ಬಂದವರ ಮನದ ಭಿತ್ತಿಯಲ್ಲೆಲ್ಲ ಸಂಸ್ಕೃತಿಯ ಸಿರಿವಂತಿಕೆಯನ್ನು ತೋರಿಸುವ ತವಕ. ಚಿತ್ತಭಿತ್ತಿಯ ಚಿತ್ರಗಳನ್ನೆಲ್ಲ ಚಿತ್ತಾರವಾಗಿಸುತ್ತಲೆ ಗುಲ್ಬರ್ಗದ ಐಡಿಯಲ್‌ ಫೈನ್‌ ಆರ್ಟ್‌ ಕಾಲೇಜು ಸೇರಿದರು. ಪದವಿಗಳಿಸಿ, ಶಾರ್ಜಾದಲ್ಲಿ ಗ್ರಾಫಿಕ್‌ ಆರ್ಟಿಸ್ಟ್‌ ಆಗಿ ಕೆಲಸ ಆರಂಭಿಸಿದರು.
ಕಲ್ಬುರ್ಗಿಯ ಮಣ್ಣಿನ ಸೆಳೆತ ಮತ್ತೆ ವಾಪಸ್‌ ಕರೆತಂದಿತು. ಕಲ್ಬುರ್ಗಿಗೆ ಬಂದವರೇ ಅಯಾಜ್‌ ಆರ್ಟ್‌ ಗ್ಯಾಲರಿ ಹಾಗೂ ಸ್ಟುಡಿಯೋ ಆರಂಭಿಸಿದರು. ಡಿಜಿಟಲ್‌ ಕಲೆ, ಲ್ಯಾಂಡ್‌ಸ್ಕೇಪ್‌ಗಳಲ್ಲಿ ಹೈದರಾಬಾದ್‌ ಕರ್ನಾಟಕದ ಸಂಸ್ಕೃತಿ ಹಾಗೂ ಸ್ಮಾರಕಗಳನ್ನು ಪಡಿಮೂಡಿಸತೊಡಗಿದರು. ಇದೀಗ ವಿಶ್ವದ 24 ರಾಷ್ಟ್ರಗಳಲ್ಲಿ ತಮ್ಮ ಪ್ರಾಂತ್ಯದ ಸಂಸ್ಕೃತಿಯನ್ನು ತಮ್ಮ ಕಲೆಯ ಮೂಲಕ ಪ್ರಸಾರ ಮಾಡಿದ್ದಾರೆ. ಸದ್ಯ ಹೈದರಾಬಾದ್‌ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಮಾರ್ಗದರ್ಶನ ನೀಡುತ್ತ, ಅಲ್ಲಿಯ ವಿಶೇಷಗಳನ್ನು ವಿದೇಶಗಳಿಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಎಸ್‌ಎಂಡಿ ಫೌಂಡೇಷನ್‌ ಆಫ್‌ ಇಂಡಿಯಾದಿಂದ ಆಯ್ಕೆಯಾಗಿ ರಷ್ಯಾ ಪ್ರವಾಸವನ್ನು ಮುಗಿಸಿರುವ ಅಯಾಜ್‌ ಸದ್ಯ ಕಲ್ಬುರ್ಗಿಯಲ್ಲಿ  ತಮ್ಮ ಕಾಯಕ ಮುಂದುವರಿಸಿದ್ದಾರೆ.
***
ಸಂವಹನ ಕ್ಷೇತ್ರದ ಸರದಾರ ಎನ್‌. ರವಿಶಂಕರ್‌
ಮೈಸೂರು ಮೂಲದವರು. ಏಮ್‌ ಹೈ ಕನ್ಸಲ್ಟೇಷನ್‌ ಸ್ಥಾಪಕರಲ್ಲಿ ಒಬ್ಬರು. ಸಾರ್ವಜನಿಕ ಸಂಪರ್ಕ ಸಂಸ್ಥೆಯಾಗಿ ಆರಂಭಿಸಿದ್ದು, ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು, ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಟಾರ್ಟ್‌ ಅಪ್‌ ಹಾಗೂ ತಂತ್ರಜ್ಞಾನ ಆಧಾರಿತ ವಾಣಿಜ್ಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕಳೆದ ನಾಲ್ಕಾರು ವರ್ಷಗಳಿಂದಲೂ ಇವರ ಸಂಸ್ಥೆ ನಂ1 ಸ್ಥಾನ ಕಾಪಿಟ್ಟುಕೊಂಡಿದೆ. ಅಂಕಣಕಾರರಾಗಿದ್ದ ರವಿಶಂಕರ್‌, ಸಂವಹನ ಸಲಹಾ ತಜ್ಞರು ಹೌದು. ಸಮಕಾಲೀನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಛಾಪನ್ನು ಮೂಡಿಸುವ ಬಗ್ಗೆ ಪ್ರೇರಣಾತ್ಮಕ ಉಪನ್ಯಾಸಗಳನ್ನು ನೀಡುತ್ತಾರೆ. ಇವರ ಸಂಸ್ಥೆ ಹಾಗೂ ಸಂಸ್ಥೆಯಲ್ಲಿರುವವರು ಹಲವಾರು ರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬೆಸ್ಟ್‌ ಕಮ್ಯುನಿಕೇಷನ್‌ ಕನ್ಸಲ್ಟಿಂಗ್‌ ಕಂಪನಿಯಾಗಿ ಹೊರಹೊಮ್ಮಿದೆ. ಲಾಸ್ಯ ಎಂಬ ಮಗಳು ರಂಗಭೂಮಿಯಲ್ಲಿಯೂ, ಪರಮ್‌ ಎಂಬ ಮಗ ಸಂಗೀತದಲ್ಲಿ ಆಸಕ್ತರಾಗಿರುವ ಬಾಲ ಕಲಾವಿದರಾಗಿದ್ದಾರೆ. ಕಿರುತೆರೆ ಕಲಾವಿದೆ ದೀಪಾ ರವಿಶಂಕರ್‌ ಇವರ ಬಾಳ ಸಂಗಾತಿ. ಯುವ ಜಗತ್ತನ್ನು ಒಂದು ವಿಶೇಷ ಕ್ಷೇತ್ರಕ್ಕೆ ತರಬೇತಿಗೊಳಿಸುವಲ್ಲಿ ಇವರು ನಿರತರಾಗಿದ್ದಾರೆ.
***
ಬಣ್ಣದ ಭಾವಲೋಕದಲ್ಲಿ ಶಿವಾನಂದ ಶ್ಯಾಗೋಟಿ
’ಕಹಾನಿ ಬಾಲ್ಕನಿ ಕಿ’ ಬಾಲ್ಕನಿಯ ಕತೆ ಎಂಬ ಶೀರ್ಷಿಕೆಯ ಕಲಾಕೃತಿಯ ಕರ್ತೃ ಶಿವಾನಂದ ಶ್ಯಾಗೋಟಿ. ಮೈಸೂರಿನ ಕಾವಾ ಸಂಸ್ಥೆಯ ಪದವೀಧರರು. ಮನುಷ್ಯನ ಜೀವನ, ಜೀವನಕ್ರಮ, ಸಂಬಂಧಗಳು, ಕಟ್ಟಡಗಳು, ಕಟ್ಟಡದ ಕಥೆಗಳು ಇವುಗಳಲ್ಲಿ ಜೀವದುಂಬುವುದು ಶಿವಾನಂದ ಅವರ ಕಲೆಯ ಮೂಲಸೆಲೆಯಾಗಿದೆ. ಪೇಂಟಿಂಗ್‌ ಮಾಧ್ಯಮದಲ್ಲಿ ಏಕಾಂತದಲ್ಲಿಯೇ ಲೋಕಾಂತವನ್ನು ಸೃಷ್ಟಿಸುವ ಈ ಯುವಕಲಾವಿದ ದುಬೈ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಆರ್ಟ್‌ ಎಕ್ಸಿಬಿಷನ್‌ಗೆ ಆಯ್ಕೆಯಾದ ಭಾರತೀಯ. ವಿಶ್ವದ ಐದೂ ಖಂಡಗಳಿಂದ ಬಂದ 300 ಕಲಾವಿದರಲ್ಲಿ ಒಬ್ಬರಾಗಿದ್ದರು ಶ್ಯಾಗೋಟಿ. ಎಲ್ಲ ಎಲ್ಲೆಗಳನ್ನು ಮೀರಿದಾಗಲೂ ಮನುಷ್ಯನ ಭಾವಲೋಕ, ಜೀವಲೋಕ, ಮೂಲತಃ ಒಂದೇನೆ. ಈ ಮೂಲ ಗುಣಾವಗುಣಗಳ ಚಿತ್ರಣವೇ ಇವರ ಕಲಾಕೃತಿಗಳ ಜೀವಾಳವಾಗಿದೆ. ಕನ್ನಡದ ಕಲಾ ಕಂಪನ್ನು ವಿಶ್ವದ ಎಲ್ಲ ಕಲಾವಿದರ ಸಮ್ಮುಖದಲ್ಲಿ ಪ್ರದರ್ಶಿಸಿರುವ ಶಿವಾನಂದ ಇನ್ನು ಶಾರ್ಜಾ, ಹಾಂಗ್‌ಕಾಂಗ್‌ಗಳಲ್ಲಿ ಏಷ್ಯಾದ ಸಮಕಾಲೀನ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಲಿದ್ದಾರೆ.
 ***
ಶಿಕ್ಷಣ ನೀತಿಯ ರೂಪಿಸುತ್ತ...
ಬೀದರ್ ಜಿಲ್ಲೆಯವರು. ಓದಿದ್ದು ಪ್ರಾಣಿಶಾಸ್ತ್ರ. ವೃತ್ತಿ ಅನುಭವ ಶಿಕ್ಷಣ ಕ್ಷೇತ್ರದಲ್ಲಿ. ಶಿಕ್ಷಣವನ್ನು ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ವೃತ್ತಿಯಾರಂಭಿಸಿದವರು. ಶೈಕ್ಷಣಿಕ ಪರಿಹಾರಗಳು, ಶಿಕ್ಷಣದಲ್ಲಿ ತಂತ್ರಜ್ಞಾನ, ನವೋದ್ಯಮ ಕೌಶಲ ಮುಂತಾದ ಕ್ಷೇತ್ರದಲ್ಲಿ ಪರಿಶ್ರಮಿಸಿದವರು. ಶಿಕ್ಷಣದಲ್ಲಿ ತಂತ್ರಜ್ಞಾನ ಯೋಜನೆಯಲ್ಲಿ 50ಸಾವಿರ ಶಿಕ್ಷಕರನ್ನು ತರಬೇತಿಗೊಳಿಸಿದ್ದಾರೆ. Organisation for Economic Co-operation and Development(OECD) ಯಿಂದ ಪ್ಯಾರಿಸ್‌ಗೆ ಪಯಣಿಸಿ, ಶಿಕ್ಷಣದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆ, ತಮಿಳುನಾಡು, ಕೇರಳ ರಾಜ್ಯ ಸರ್ಕಾರಗಳಿಗೆ ಶಿಕ್ಷಣ ಇಲಾಖೆಯಲ್ಲಿ ಸಿಎಸ್‌ಆರ್‌ ಕಾರ್ಯಕ್ರಮಗಳ ಅಳವಡಿಕೆಯಲ್ಲಿ ಶ್ರಮಿಸಿದ್ದಾರೆ. ದೇಶದ 100 ಅತ್ಯುತ್ತಮ ಕಾಲೇಜುಗಳಲ್ಲಿ ಕೌಶಲ ಅಭಿವೃದ್ಧಿಗೆ, ಶಿಕ್ಷಣ ನೀತಿ ರೂಪಿಸಲು ಕಾರ್ಯಯೋಜನೆ ರೂಪಿಸಿ ನೀಡಿದ್ದಾರೆ. ದೇಶದ ಎಲ್ಲ ಐಐಟಿಗಳಲ್ಲಿಯೂ ಕೌಶಲ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ರೂಪಿಸಿದ ಸಿಎಸ್‌ಆರ್‌ ಕಾರ್ಯಕ್ರಮಗಳು ಏಷ್ಯ ಖಂಡದ ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕಿ ಭಾರತದ ಯೋಜನೆ ಆಯ್ಕೆಯಾಗಿತ್ತು..
ಮುಖಪುಟಕ್ಕೆ
ಹೆಬ್ಬೆಟ್ ರಾಮಕ್ಕನಿಗೆ ರಾಷ್ಟ್ರೀಯ ಗರಿ
ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಹೆಬ್ಬೆಟ್ ರಾಮಕ್ಕ ಚಿತ್ರ ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ತಾರಾ ಮತ್ತು ದೇವರಾಜ್ ಮುಖ್ಯ ಭೂಮಿಕೆಯ ಸಿನಿಮಾ ಇದಾಗಿದ್ದು, ಅನಕ್ಷರಸ್ಥ ಹೆಣ್ಣುಮಗಳೊಬ್ಬಳ ರೋಚಕ ಕಥೆ ಸಿನಿಮಾದಲ್ಲಿದೆ. ರಾಷ್ಟ್ರೀಯ ಪ್ರಶಸ್ತಿ ಮಾತ್ರವಲ್ಲ, ರಾಜ್ಯ ಸರಕಾರದ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ವಿಭಾಗದಲ್ಲೂ ಈ ಬಾರಿ ಪ್ರಶಸ್ತಿ ಪಡೆದಿದೆ. ನಟರಾಗುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟವರು ನಂಜುಂಡೇಗೌಡ. ಆನಂತರ ಸಹ ನಿರ್ದೇಶಕರಾಗಿ ಹಲವು ಸಿನಿಮಾಗಳಿಗೆ ದುಡಿದು, ಸಂಕ್ರಾತಿ ಸಿನಿಮಾದಿಂದ ಸ್ವತಂತ್ರ ನಿರ್ದೇಶಕರಾದರು. 1989ರಲ್ಲಿ ತೆರೆಕಂಡ ಈ ಚಿತ್ರಕ್ಕೂ ರಾಜ್ಯ ಪ್ರಶಸ್ತಿ ಬಂತು. ಮಕ್ಕಳಿಗಾಗಿಯೂ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಇವರು, ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಗಳನ್ನೂ ಆಯೋಜನೆ ಮಾಡಿದ್ದಾರೆ. ನಾನು ಗಾಂಧಿ, ಅಆಇಈ ಹೀಗೆ ಇವರ ಮಕ್ಕಳ ಚಿತ್ರಗಳು ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ.
--------
ಅಭಯ್ ಸಿಂಹ ಅವರ ಪಡ್ಡಾಯಿ
ಯುವ ಕಲಾತ್ಮಕ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಅಭಯ್ ಸಿಂಹ. ಮೂಲತಃ ಮಂಗಳೂರಿನವರು. ಪೂನಾ ಫಿಲ್ಮ್ ಇನ್ಸಿಟ್ಯೂಟ್‍ನಲ್ಲಿ ಶಾಸ್ತ್ರೀಯವಾಗಿ ಸಿನಿಮಾ ಅಭ್ಯಾಸ ಮಾಡಿದ್ದಾರೆ. ಚೊಚ್ಚಲ ಮಕ್ಕಳ ಸಿನಿಮಾ ಗುಬ್ಬಚ್ಚಿಗಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಈ ಬಾರಿ ಪಡ್ಡಾಯ ಹೆಸರಿನ ತುಳು ಸಿನಿಮಾ ನಿರ್ದೇಶಿಸಿದ್ದು, ಪ್ರಾದೇಶಿಕ ವಿಭಾಗದಲ್ಲಿ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ  ಭಾಜನವಾಗಿದೆ . ಕಲಾತ್ಮಕ ಮಾತ್ರವಲ್ಲ, ಕಮರ್ಷಿಯಲ್ ಚಿತ್ರಗಳಿಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಲೆಯಾಳಂನ ಖ್ಯಾತ ನಟ ಮೊಮ್ಮಟ್ಟಿ ಅವರನ್ನು ಕನ್ನಡಕ್ಕೆ ಕರೆತಂದ ಹೆಗ್ಗಳಿಕೆ ಇವರದ್ದು. ಅಭಯ್ ನಿರ್ದೇಶನದ ಶಿಕಾರಿ ಸಿನಿಮಾದಲ್ಲಿ ಮೊಮ್ಮಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇವರ ನಾಲ್ಕು ಸಿನಿಮಾಗಳಲ್ಲಿ ಎರಡು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹಲವು ಸಾಕ್ಷ್ಯ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ.
--------------
ಚಿತ್ರ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಹ್ಲಾದ್
ಸಾಹಿತ್ಯ, ಚಿತ್ರಕಥೆ, ಸಂಭಾಷಣೆ ಮತ್ತು ಚಿತ್ರಸಾಹಿತ್ಯ ಹೀಗೆ ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದವರು ಜೆ.ಎಂ.ಪ್ರಹ್ಲಾದ್. ಮಾರ್ಚ್ 22 ಚಿತ್ರಕ್ಕಾಗಿ ಬರೆದ "ಮುತ್ತು ರತ್ನದ ಪ್ಯಾಟೆಗೆ' ಹಾಡಿಗೆ ಈ ಸಲದ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದೇ ಹಾಡಿಗೇ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. 60ಕ್ಕೂ ಹೆಚ್ಚು ಸಿನಿಮಾ ಹಾಡುಗಳಿಗೆ ಇವರ ಸಾಹಿತ್ಯವಿದೆ. 1997ರಲ್ಲೂ ನೋಡು ಬಾ ನಮ್ಮೂರ ಸಿನಿಮಾದ "ಎಂಥ ಮಾಯವೋ' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹೆಸರಾಂತ ನಿರ್ದೇಶಕರ ಚಿತ್ರಗಳಿಗೆ ಚಿತ್ರಕತೆ-ಸಂಭಾಷಣೆ ಬರೆದಿದ್ದಾರೆ. ಎರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿರುವ ಇವರು, ನಾಲ್ಕು ರಾಷ್ಟ್ರ ಪ್ರಶಸ್ತಿ ಪಡೆದ, ಎಂಟು ರಾಜ್ಯ ಪ್ರಶಸ್ತಿಗಳನ್ನು ಪಡೆದ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಈವರೆಗೂ ನಲವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲೂ ದುಡಿದಿದ್ದಾರೆ. ಮಾಯಾಮೃಗ, ದಂಡಪಿಂಡಗಳು ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಪ್ರವಾಹ, ಡಾಕ್ಟರ್ ಸುಕನ್ಯ ಇವರ ಪ್ರಕಟಿತ ಕೃತಿಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....