ಕನ್ನಡ ರಾಜ್ಯೋತ್ಸವ ಈಗ 62 ವಸಂತಗಳನ್ನು ಕಂಡಿದೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯ ಕವಲು ದಾರಿಯಲ್ಲಿ ನಿಂತಿದ್ದು, ಅದರ ಮುಂದೆ ಎರಡು ಆಯ್ಕೆಗಳಿವೆ. ಒಂದು, ಫ್ಯಾಸಿಸ್ಟ್, ಧಾರ್ಮಿಕ ರಾಷ್ಟ್ರೀಯತೆಗೆ ಬಲಿಯಾಗುವುದು. ಮತ್ತೊಂದು ತನ್ನ ಪ್ರಾಂತೀಯ ಸಾಂಸ್ಕೃತಿಕ ಬಹುತ್ವದ ಜತೆಗೆ ಆರ್ಥಿಕ-ರಾಜಕೀಯ ಮಾದರಿಯನ್ನು ಉಳಿಸಿಕೊಳ್ಳುವುದು.
ಇತ್ತೀಚಿನ ವಿಧಾನಸಭೆ ಚುನಾವಣೆ ಮತ್ತು ಅದರ ಫಲಿತಾಂಶ ಸದ್ಯದ ಆರ್ಥಿಕ–ರಾಜಕೀಯ ಹರಿವು ಮತ್ತು ಮಿಶ್ರ ಸಾಮಾಜಿಕ ಸಾಂಸ್ಕೃತಿಕ ಪ್ರವೃತ್ತಿಗಳನ್ನು ಸಾದರಪಡಿಸಿದೆ. ಇದರೊಂದಿಗೆ ಬಂಡವಾಳಶಾಹಿಯ ನರ್ತನ, ಜಾತಿಗಳ ಮೇಲಾಟ, ಸ್ಪರ್ಧಾತ್ಮಕ ಅಗ್ಗದ ಜನಪ್ರಿಯ ಕಾರ್ಯಕ್ರಮಗಳ ಅಬ್ಬರ, ಪರಿಸರ ವಿಷಯಗಳ ಕುರಿತ ಉಡಾಫೆ, ಇವುಗಳೆಲ್ಲ ಪ್ರಾಕೃತಿಕ ಸಂಪತ್ತು, ಆರ್ಥಿಕ ಸ್ಥಿರತೆ ಮತ್ತು ಸಾಂಸ್ಕೃತಿಕ ಬಹುತ್ವದ ಪ್ರಾಂತ್ಯವೊಂದರ ಸಂಭ್ರಮವನ್ನು ನಾಶಮಾಡುತ್ತಿವೆ.
ರಾಜ್ಯದ ಶಾಸಕರೇ ಪರಮ ಸಿರಿವಂತರು ಎಂದು ಇತ್ತೀಚಿನ ರಾಷ್ಟ್ರೀಯ ಸಮೀಕ್ಷೆಯೊಂದು ಹೊರಹಾಕಿರುವ ಮಾಹಿತಿ ಅಚ್ಚರಿ ಉಂಟು ಮಾಡಬೇಕಿಲ್ಲ. ನಾನಾತರಹದ ಉದ್ದಿಮೆ, ಸಂಸ್ಥೆ, ಭೂಮಿ ಇವೆಲ್ಲಾ ಈ ಪ್ರತಿನಿಧಿಗಳನ್ನು ಅಧಿಕಾರಕ್ಕೇರಿಸಿದ ಆರ್ಥಿಕ ಮೂಲಗಳು. ಅಷ್ಟೇ ಅಲ್ಲ; ಅವರ ರಾಜಕೀಯ ಅಧಿಕಾರಾವಧಿ ಅವರ ಅಗಾಧ ಸಂಪತ್ತಿನ ವಿಸ್ತಾರಕ್ಕೂ ಕಾರಣವಾಗಿರುವುದು ಸುಳ್ಳಲ್ಲ.
ರಾಜಕೀಯ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳು ಸಾರ್ವಜನಿಕ ಮೂಲಸೌಕರ್ಯದೆಡೆಗೆ ಮುಖ ಮಾಡಿವೆ. ಇವೆಲ್ಲ ನಾಗರಿಕ ಸೌಕರ್ಯಗಳ ವಿಸ್ತರಣೆಯೇನಲ್ಲ! ಕಾಂಕ್ರೀಟು ಹಾಕುವುದು, ರಸ್ತೆ ವಿಸ್ತರಣೆ, ಮೆಟ್ರೊ ಮಾರ್ಗ, ವೈಟ್ ಟಾಪಿಂಗ್, ಎತ್ತರಿಸಿದ ಹೆದ್ದಾರಿ, ಅಣೆಕಟ್ಟು, ಗಣಿಗಾರಿಕೆ – ಇಂತಹ ಕಾಮಗಾರಿಗಳು ಅಧಿಕಾರಸ್ಥರಿಗೆ ಕಿಕ್ ಬ್ಯಾಕ್‍ನ ಮೂಲಗಳು. ಅಭಿವೃದ್ಧಿ ಮತ್ತು ಆರ್ಥಿಕ ಯೋಜನಾ ಪರಿಕಲ್ಪನೆಯನ್ನು ಮೂಲಸೌಲಭ್ಯ ನಿರ್ಮಾಣ ಮತ್ತು ವಿಸ್ತರಣೆಯ ಮಟ್ಟಕ್ಕಿಳಿಸಲಾಗಿದೆ.
ಆದ್ದರಿಂದಲೇ ಆರೋಗ್ಯ, ಶಿಕ್ಷಣ, ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡ ಸಮಗ್ರ ಯೋಜನೆ ಗೈರು ಹಾಜರಾಗಿದೆ. ಗ್ರಾಮೀಣ ಮತ್ತು ಕೃಷಿ ಕ್ಷೇತ್ರದ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸಾಲಮನ್ನಾ ಒಂದೇ ಜನಪ್ರಿಯ ಘೋಷಣೆಯಾಗಿದೆ. ಇದರ ಲಾಭ ದೊಡ್ಡ ರೈತರಿಗಷ್ಟೆ ಎಂಬುದು ವಾಸ್ತವ. ಭೂಮಿ, ಸಂಪನ್ಮೂಲ, ಕೃಷಿ ಉತ್ಪಾದನೆ, ಮಾರುಕಟ್ಟೆ ಮುಂತಾದ ವಿಷಯಗಳಿಗೆ ಗಮನ ಕೊಡುವಲ್ಲಿ ಆಗಿರುವ ವೈಫಲ್ಯದಿಂದ ಕೃಷಿಲೋಕದ ವಿವಿಧ ಭಾಗಗಳಲ್ಲಿ ವಿಭಿನ್ನ ಸಂಕಷ್ಟಗಳು ಉದ್ಭವಿಸಿವೆ.
ಶುಷ್ಕ ಮತ್ತು ಬರಪೀಡಿತ ಪ್ರದೇಶಗಳ ಜನರ ವಲಸೆ, ಕಟ್ಟಡ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಅಗ್ಗದ ಕೂಲಿಗಳನ್ನು ಒದಗಿಸಿದೆ. ಗಮನಾರ್ಹ ಸಂಖ್ಯೆಯ ಜನರ ಬದುಕು ಅಪೌಷ್ಟಿಕತೆ, ಅನಕ್ಷರತೆ, ಅನಾರೋಗ್ಯಗಳಿಂದ ಪೀಡಿತವಾಗಿದ್ದರೂ ಈ ಬಗ್ಗೆ ಪರಿಹಾರೋಪಾಯಗಳು ಬಂದಿಲ್ಲ. ಖಾಸಗಿ ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸುವ ಸರ್ಕಾರದ ಪ್ರಯತ್ನವು ಖಾಸಗಿ ಆರೋಗ್ಯೋದ್ಯಮಿಗಳ ಒತ್ತಡದಿಂದಾಗಿ ಸ್ಥಗಿತಗೊಂಡಿದೆ.
ಬಂಡವಾಳ ಬೆಳವಣಿಗೆ, ಕಾರ್ಮಿಕ ಕಾಯಿದೆ ಉಲ್ಲಂಘನೆ, ಅಪದ್ಧ ಯೋಜನೆಗಳ ಪ್ರಾದೇಶಿಕ ಅಭಿವೃದ್ಧಿ ಮಾದರಿಯ ಪ್ರಾತಿನಿಧಿಕ ಉದಾಹರಣೆಯನ್ನಾಗಿ ಬೆಂಗಳೂರನ್ನು ನೋಡಬಹುದು. ಕನ್ನಡತನದ ವಾದಿಗಳು ಬೆಂಗಳೂರನ್ನು ತಮ್ಮದೆಂದು ಹೇಳಿಕೊಂಡರೂ ಅದೀಗ ನಗರೀಕರಣವೆಂಬ ಭ್ರಮೆಯ ಕಪಿಮುಷ್ಠಿಯಲ್ಲಿದೆ. ನಿಯಂತ್ರಣವಿಲ್ಲದ, ಕಾಳಧನದಲ್ಲೇ ನಡೆಯುತ್ತಿರುವ ರಿಯಲ್ ಎಸ್ಟೇಟ್ ಆರ್ಥಿಕತೆ ಈ ನಗರವನ್ನು ನಿಯಂತ್ರಿಸುತ್ತಿದೆ. ಪರಿಸರ ಮಾಲಿನ್ಯ, ಭ್ರಷ್ಟಾಚಾರ ಮತ್ತು ಒಟ್ಟಾರೆ ಪರಿಸರ ಕುಸಿತಗಳೆಲ್ಲ ಇದರ ಭಾಗವೇ.
ಪರಿಸರ ವಿಷಯಗಳ ಬಗ್ಗೆ ನಿರ್ಲಕ್ಷ್ಯ ರಾಜ್ಯದ ಬಹುತೇಕ ಆರ್ಥಿಕ ಅಭಿವೃದ್ಧಿ ನೀತಿಗಳ ಲಕ್ಷಣವಾಗಿದೆ. ಪ್ರತೀ ಹಳ್ಳಿಗೂ ಕುಡಿಯುವ ನೀರಿನ ಹೆಸರಿನಲ್ಲಿ ನದಿಗಳಿಗೆ ಅಣೆಕಟ್ಟು ಕಟ್ಟಲಾಗುತ್ತಿದೆ; ಇಲ್ಲಾ ಕಾಲುವೆ ಹೆಸರಿನ ದುಬಾರಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳನ್ನು (ಕೆರೆ, ಕುಂಟೆ, ಕಾಡು, ಗೋಮಾಳ ಕೃಷಿ ಭೂಮಿ) ಹೊಸಕಿ ಹಾಕಲಾಗುತ್ತಿದೆ. ಈ ಸಂಪನ್ಮೂಲದ ಬಿಕ್ಕಟ್ಟನ್ನು ಪರಿಹರಿಸಲು ಬೃಹತ್ ತಾಂತ್ರಿಕ ಕಾಮಗಾರಿಗಳನ್ನು ಮುಂದೆ ಮಾಡಲಾಗುತ್ತಿದೆ.
ಒಂದು ಪ್ರದೇಶದ ಪರಿಸರ ಸುಸ್ಥಿರತೆಗೆ ಧಕ್ಕೆ ಉಂಟುಮಾಡುವ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸಲಾಗದ ವೈಫಲ್ಯದ ಫಲವೇ ಕೊಡಗಿನ ಪರಿಸರ ದುರಂತ. ಹವಾಮಾನ ಬದಲಾವಣೆ ಕುರಿತಂತೆ ರಾಜ್ಯಕ್ಕೊಂದು ಕ್ರಿಯಾಯೋಜನೆ ಇದ್ದರೂ ಅದ್ಯಾವುದೂ ಅನುಷ್ಠಾನಗೊಂಡಿಲ್ಲ. ರಾಜ್ಯದ ಉದ್ದಗಲಕ್ಕೂ ಪರಿಸರ ನಾಶದ ಲಕ್ಷಣಗಳು ಗೋಚರಿಸುತ್ತಿದ್ದು ಹವಾಮಾನ ಬದಲಾವಣೆ ಅವುಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸಲಿದೆ. ಸ್ಪರ್ಧಾತ್ಮಕ ಜನಪ್ರಿಯ ಕಾರ್ಯಕ್ರಮಗಳು ಈ ರಾಜ್ಯವನ್ನು ಆವರಿಸಿವೆ. ಧಾನ್ಯದಿಂದ ಹಿಡಿದು ಬೂಟಿನವರೆಗೆ ವಿಸ್ತೃತಗೊಂಡಿರುವ ‘ಭಾಗ್ಯ ಯೋಜನೆಗಳು’ ಜನರ ಅವಶ್ಯಕತೆಗಳನ್ನು ಪೂರೈಸುವ ಬದಲು ಜನರನ್ನು ವಿಧೇಯ ಗುಲಾಮರನ್ನಾಗಿಸಿವೆ.
ಜಾತಿ ಅಭಿವೃದ್ಧಿ ಸಂಘಟನೆಗಳ ಸ್ಥಾಪನೆ ಮತ್ತು ಅವಕ್ಕೆ ಸರ್ಕಾರ ಅನುದಾನ ನೀಡುವ ಪ್ರಕ್ರಿಯೆ, ಆ ಜಾತಿಗಳ ಅಭಿವೃದ್ಧಿಯ ಹಾದಿಯನ್ನೇನೂ ಸೂಚಿಸುವುದಿಲ್ಲ. ಈ ಜಾತಿ ನಾಯಕರೆಲ್ಲ ರಾಜಕೀಯ ನಾಯಕರಿಗೆ ಶರಣಾಗಿದ್ದಾರೆ. ಅವರು ತಮ್ಮ ಸಮುದಾಯಗಳ ಅವಶ್ಯಕತೆಗಳನ್ನು ಪ್ರತಿನಿಧಿಸುತ್ತಿಲ್ಲ.
ಕಳಪೆ ಶಿಕ್ಷಣ, ಸಮೂಹ ಶಿಕ್ಷಣದ ಫಲಾನುಭವಿಗಳಾದ ಯುವಕರು ಈಗ ಜಾತಿ/ಧರ್ಮಾಧಾರಿತ ಸಂಘಟನೆಗಳ ಜೊತೆ ಗುರುತಿಸಿಕೊಳ್ಳುತ್ತಿರುವುದು ನಮ್ಮನ್ನು ಕಳವಳಕ್ಕೆ ಈಡುಮಾಡಬೇಕಿದೆ. ಇವರಲ್ಲೊಂದಿಷ್ಟು ಮಂದಿ ಬೀದಿ ಕಾಯುವ ಗುಂಪುಗಳಾಗಿದ್ದಾರೆ. ಗೌರಿಯ ಹಂತಕರು, ಅವರ ಸಹಾಯಕರೆಲ್ಲ ‘ಹಿಂದೂ ಧರ್ಮವನ್ನು ಉಳಿಸಲು’ ಯತ್ನಿಸುತ್ತಿರುವ ಗ್ರಾಮಾಂತರ ಭಾಗದ ಯುವಕರೇ.
ಭೂಗತ ದೊರೆಯೆಂದು ಕುಖ್ಯಾತಿ ಪಡೆದವ್ಯಕ್ತಿಯೊಬ್ಬ ಕರ್ನಾಟಕ ಅಥ್ಲೆಟಿಕ್ಸ್ ಅಸೊಸಿಯೇಷನ್‍ನ ಅಧ್ಯಕ್ಷನಾಗಿ ಸಾಮಾಜಿಕ, ರಾಜಕೀಯ ವಲಯಗಳಲ್ಲಿ ಮಾನ್ಯತೆ ಗಳಿಸಲೆತ್ನಿಸುವುದು; ಅಪರಾಧ ಹಿನ್ನೆಲೆಯ ಮಹಿಳೆಯೊಬ್ಬಳು ಶ್ರೀರಾಮ ಸೇನೆಯ ಅಧ್ಯಕ್ಷೆಯಾಗುವುದು ಸಾಮಾಜಿಕ ಮನ್ನಣೆ ಗಳಿಸಿರುವ ಸಂಸ್ಥೆಗಳೊಳಗೆ ಪ್ರಜಾಸತ್ತೆ ವಿರೋಧಿ ಶಕ್ತಿಗಳ ನುಸುಳುವಿಕೆಯ ಕುರುಹು. ಹಿಂಸಾತ್ಮಕ ಬಲಪಂಥೀಯತೆಯನ್ನು ಸಾಂಸ್ಕೃತಿಕವಾಗಿ ಒಪ್ಪಿಕೊಳ್ಳುತ್ತಿರುವುದರ ಪುರಾವೆ.
ರಾಜಕೀಯ ಪಕ್ಷಗಳ ಬಂಡವಾಳಶಾಹೀಕರಣ ಮತ್ತು ಜಾತಿ/ ಧರ್ಮಾಧಾರಿತ ಸಂಸ್ಥೆಗಳು ಕ್ಷುದ್ರಶಕ್ತಿಗಳ ಪಾಲಾಗಿರುವುದರ ಮಧ್ಯೆಯೂ ಕೆಲವು ಆಯ್ದ, ಜನಪರ ಚಳವಳಿಗಳಲ್ಲಿ ನಾವು ಹೊಸ ಆಶಯಗಳನ್ನು ಕಂಡುಕೊಳ್ಳಬಹುದಾಗಿದೆ. ಗ್ರಾಕೂಸ್ (ಗ್ರಾಮೀಣ ಕೂಲಿ ಕಾರ್ಮಿಕರ ಸಂಘ), ಪೌರ ಕಾರ್ಮಿಕರ ಸಂಘ, ಮನೆಕೆಲಸದವರ ಸಂಘ ಮತ್ತಿತರ ಹೊಸ ಸಂಘಟನೆಗಳಿವೆ; ಅವುಗಳಿಂದಾಗಿ ಹೊಸ ಚಳವಳಿಗಳು ಬೆಳೆದಿವೆ. ಆದಿವಾಸಿ, ಮಹಿಳೆಯರ ಹಕ್ಕು ಮತ್ತು ಅಸ್ಮಿತೆಗಾಗಿ ಹೋರಾಡುತ್ತಿರುವ, ಪರಿಸರ ಮತ್ತು ಸುಸ್ಥಿರ ಕೃಷಿ ವಿಷಯಗಳಿಗೆ ಸಂಬಂಧಿಸಿದಂತೆ ಚಳವಳಿ ಮಾಡುತ್ತಿರುವ ಗುಂಪುಗಳಿವೆ. ಸರ್ಕಾರದ ಕೆಂಗಣ್ಣು ಇವುಗಳ ಮೇಲೆಯೇ. ಈ ಸಂಘಟನೆ/ಗುಂಪುಗಳ ದನಿ ಮತ್ತು ಕೊಡುಗೆಯನ್ನು ಕಡೆಗಣಿಸಲಾಗಿದೆ.
ಪಂಚಾಯತ್ ರಾಜ್ ಮತ್ತು 73ನೇ ಸಂವಿಧಾನ ತಿದ್ದುಪಡಿಯ ಹರಿಕಾರನಾಗಿ ನಮ್ಮ ರಾಜ್ಯ ಕಂಡರೂ, ವಿಕೇಂದ್ರೀಕೃತ ಪ್ರಜಾಸತ್ತೆಯಾಗಿ ರಾಜ್ಯದ ಪಂಚಾಯತುಗಳು ಉಳಿದಿಲ್ಲ. ಇತ್ತೀಚೆಗಂತೂ ವಿಕೇಂದ್ರೀಕೃತ ಆಡಳಿತದ ಲಾಭ ಪಡೆಯುವ ದಲ್ಲಾಳಿಗಳ ಪಡೆಯೇ ಸೃಷ್ಟಿಯಾಗಿದೆ.
ಒಂದುಕಾಲದಲ್ಲಿ ನಮ್ಮ ರಾಜ್ಯವು ದೇಶದ ಹೆಸರಾಂತ ವಿಶ್ವವಿದ್ಯಾನಿಲಯಗಳ ನಾಡಾಗಿತ್ತು. ವಿಶ್ವವಿದ್ಯಾನಿಲಯಗಳು ನಮ್ಮ ಕಾಳಜಿಯ ಕೇಂದ್ರವಾಗಬೇಕಿದ್ದವು. ಆದರೆ, ಇಂದು ಅವುಗಳು ರಾಜಕೀಯದ ಆಡುಂಬೊಲವಾಗಿವೆ. ಕುಲಪತಿಗಳ ಹುದ್ದೆಗಳೇ ಹರಾಜಾಗುತ್ತಿವೆ ಎಂಬ ಮಾತೂ ಕೇಳಿ ಬರುತ್ತಿದೆ. ಅವುಗಳ ಕಾರ್ಯ ನಿರ್ವಹಣೆ ಮತ್ತು ಶೈಕ್ಷಣಿಕ ಮಟ್ಟವೂ ಕಳಪೆಯಾಗುತ್ತಿದೆ. ಹೀಗಿದ್ದಾಗ್ಯೂ ಸರ್ಕಾರವು ವಿಶಿಷ್ಟ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಕೆಲಸ ಮಾಡುತ್ತಿದೆ (ಸಂಗೀತ, ಜಾನಪದ, ತೋಟಗಾರಿಕೆ, ಪಂಚಾಯತ್ ರಾಜ್ ಇತ್ಯಾದಿ). ಈ ವಿ.ವಿಗಳ ಬಗ್ಗೆ ಪರಾಮರ್ಶೆಯೇ ನಡೆದಿಲ್ಲ; ಆದರೂ ಕ್ರೀಡಾ ವಿ.ವಿ, ಪ್ರವಾಸೋದ್ಯಮ ವಿ.ವಿ, ಸಿನೆಮಾ ವಿ.ವಿ ಅಂತೆಲ್ಲಾ ಶುರು ಮಾಡುವ ನಿರ್ಧಾರಕ್ಕೆ ಸರ್ಕಾರ ಕೈ ಹಾಕಿದೆ. ಇವೆಲ್ಲ ಅಗ್ಗದ ಜನಪ್ರಿಯತೆಯ ಸೂಚಿಗಳಷ್ಟೇ.
ಸಮುದಾಯಗಳ ನಡುವಿನ ಆರ್ಥಿಕ ವ್ಯವಹಾರಗಳ ಪೈಪೋಟಿಗೆ ನೀರರೆಯುವ ಕೆಲಸವನ್ನು ಹಿಂದುತ್ವ ಮಾಡುತ್ತಿದೆ. ಅಂತರ್ಗಾಮಿಯಾಗಿರುವ ಆರ್ಥಿಕ ಚಟುವಟಿಕೆಗಳ ಸ್ಪರ್ಧೆ ಪ್ರತೀ ಸಮುದಾಯದ ಮೂಲಭೂತವಾದಿ/ ಸಾಂಸ್ಥಿಕ ಧಾರ್ಮಿಕ ನೆಲೆಗಳನ್ನು ಬಲಿಷ್ಠಗೊಳಿಸುತ್ತಿದೆ. ಇದರ ಪರಿಣಾಮವಾಗಿ ಧಾರ್ಮಿಕ ಸಮುದಾಯಗಳ ಮಧ್ಯೆ ಹೊಸ ಗಡಿರೇಖೆಗಳು ಸೃಷ್ಟಿಯಾಗಿವೆ. ವೈಷಮ್ಯ, ಅಸಹಿಷ್ಣುತೆ, ಸೇಡು ಈ ಗಡಿರೇಖೆಗಳ ಹೂರಣವಾಗಿವೆ.
ಶ್ರೀಮಂತ ಪ್ರಾಕೃತಿಕ ಸಂಪನ್ಮೂಲ, ವ್ಯಾಪಾರ ಮತ್ತು ಕೃಷಿಯ ಸುದೀರ್ಘ ಚರಿತ್ರೆ, ಸುಶಿಕ್ಷಿತ ಜನಸಮುದಾಯಗಳಿರುವ ದಕ್ಷಿಣ ಕನ್ನಡ, ದೇಶಕ್ಕೇ ಮಾದರಿ ಜಿಲ್ಲೆಯಾಗಬಹುದಿತ್ತು. ಆದರೆ ಕೋಮುದ್ವೇಷ ಹಾಗೂ ಹಿಂಸೆ ಹರಡಿ, ಕಲಹಬಾಧಿತ ಪ್ರದೇಶವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ, ಈಶಾನ್ಯ ಭಾರತ, ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಇದು ಅಸಹಿಷ್ಣುತೆ ಮತ್ತು ಹಿಂಸೆಗೆ ಒತ್ತಾಸೆ ನೀಡುತ್ತಿರುವುದರ ದ್ಯೋತಕ.
ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ‘ಕರ್ನಾಟಕ ಮಾದರಿ ಅಭಿವೃದ್ಧಿ’ಯಾಗಲೀ ಜೆಡಿಎಸ್ ‘ಮಣ್ಣಿನ ಮಗ’ನ ಮಾದರಿಯಾಗಲೀ ಬಿಜೆಪಿಯ ‘ಗುಜರಾತ್ ಅಭಿವೃದ್ಧಿ’ ಮಾದರಿಯಾಗಲೀ ಕರ್ನಾಟಕಕ್ಕೆ ಭರವಸೆ ಹುಟ್ಟಿಸುತ್ತಿಲ್ಲ. ಈ ಬಂಡವಾಳಶಾಹೀ ದುರಾಸೆ ಮತ್ತು ಅಗ್ಗದ ಜನಪ್ರಿಯತೆಯ ಅಜೆಂಡಾಗಳು ರಾಜ್ಯದ ಶ್ರಮಿಕ ವರ್ಗದ ಹಿತಾಸಕ್ತಿಯನ್ನಷ್ಟೇ ಅಲ್ಲ; ರಾಜ್ಯದ ದೀರ್ಘಕಾಲೀನ ಆರ್ಥಿಕ, ಪರಿಸರ ಸುಸ್ಥಿರತೆಯ ಹಿತಾಸಕ್ತಿಗಳನ್ನೂ ಪಕ್ಕಕ್ಕೆ ಸರಿಸಿವೆ. ಇದರ ಹೊಡೆತ ತಿನ್ನುತ್ತಿರುವುದು ಅಂಚಿನಲ್ಲಿರುವ ಮಂದಿ. ಅಗ್ಗದ ಜನಪ್ರಿಯ ಧೋರಣೆಯ ವಿಕೃತಿ ಮತ್ತು ಬಂಡವಾಳಶಾಹಿ ಬೇಡಿಕೆಗಳು ಇನ್ನಷ್ಟು ಕರಾಳವಾಗಿ ತಲೆ ಎತ್ತಿ, ಈಗಾಗಲೇ ನಾಜೂಕಾಗಿರುವ ಪ್ರಜಾಸತ್ತಾತ್ಮಕ ಚೌಕಟ್ಟಿನ ಮೇಲೆ ತಮ್ಮ ಛಾಪು ಒತ್ತುತ್ತಿವೆ.
ಈ ಕವಲು ದಾರಿಯಲ್ಲಿ ನಾವು ನಿಂತಿದ್ದೇವೆ. ಸಾಮಾಜಿಕ ನ್ಯಾಯ, ಆರ್ಥಿಕ ಸ್ಥಿರತೆ ಮತ್ತು ಪರಿಸರ ಸುಸ್ಥಿರತೆಗಳ ಅಗತ್ಯಗಳನ್ನು ಒತ್ತಿಹೇಳುವ ಸಮೂಹ ಚಳವಳಿಗಳಷ್ಟೇ ಹಿಂದುತ್ವದ ಅಜೆಂಡಾಕ್ಕೆ ಶರಣಾಗುತ್ತಿರುವ ಪ್ರಭುತ್ವಕ್ಕೆ ಸವಾಲಾಗಬಲ್ಲವು. ಈ ಚಳವಳಿಗಳಷ್ಟೇ ನಮ್ಮ ನಾಡಿನ ಸಾಂಸ್ಕೃತಿಕ ಬಹುತ್ವ ನಷ್ಟವಾಗುವುದನ್ನು ತಡೆಯಬಲ್ಲವು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ