ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಎಂದ ರಾಮಮನೋಹರ ಲೋಹಿಯಾರ ಮಾತಿನಲ್ಲಿ ದೇಶದ ಏಕತೆಯನ್ನು ಶಾಶ್ವತವಾಗಿ ಕಾಯ್ದುಕೊಳ್ಳುವ ಆಶಯವಿತ್ತು. ಆದರೆ ಒಂದೊಂದಾಗಿ ಪ್ರಾದೇಶಿಕ ಭಾಷೆಗಳ ಅಸ್ತಿತ್ವವನ್ನೇ ಹೊಸಕಿ ಹಾಕುವ ಯತ್ನ ಸಂವಿಧಾನದ ಹೆಸರಿನಲ್ಲಿ ನಡೆಯುತ್ತಿದೆ. ಅದಕ್ಕೆ ಪರಿಹಾರ ಸಂವಿಧಾನದಲ್ಲೇ ಇದೆ.
ಮತ್ತೊಂದು ಕನ್ನಡ ರಾಜ್ಯೋತ್ಸವ ಹೊಸಿಲಿಗೆ ಬಂದು ನಿಂತಿದೆ. ಈ ಮನೆ ಕನ್ನಡಿಗರದೋ ಅಲ್ಲವೋ ಒಳಕ್ಕೆ ಕಾಲಿಟ್ಟರೆ ಹೇಗೋ ಏನೋ ಎಂಬ ಅನುಮಾನ ಅದರ ಮುಖದಲ್ಲಿ ಮನೆಮಾಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ, ಕರ್ನಾಟಕ ಎಂದು ನಾಮಕರಣವಾದಾಗ ಇದ್ದ ಹರ್ಷ, ಸಂತೋಷ ಈಗ ಇಲ್ಲ ಎನ್ನುವುದು ನಮಗೆಲ್ಲ ಗೊತ್ತಿರುವಂತೆ ರಾಜ್ಯೋತ್ಸವಕ್ಕೂ ಗೊತ್ತಿದೆ. ವರ್ಷಕ್ಕೆ ಒಮ್ಮೆ ಬರಲೇಬೇಕಿರುವುದು ಸದ್ಯಕ್ಕೆ ಅದರ ಕರ್ಮ. ಈ ಹಿಂದಿನ 62 ವರ್ಷ ಬಂದಿದ್ದಂತೆ ಈಗ 63ನೇ ವರ್ಷದಲ್ಲಿ ಬಂದಿದೆ. ತನ್ನ ಬರುವನ್ನು ಸಂಭ್ರಮಿಸುವ ಮನೆಗಳ ಹುಡುಕಾಟ ಅದರ ಪಾಲಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಕಷ್ಟವೆನಿಸಬಹುದು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ನೂರಾರು ಸುಂದರ ಕನಸುಗಳಿಗೆ ಮುನ್ನುಡಿ ಬರೆದುಕೊಂಡ ಪೀಳಿಗೆ ಈಗ ಇಲ್ಲ. ಹುಯಿಲಗೋಳ ನಾರಾಯಣ ರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಬಯಸಿದರು. ಭಾಷಾವಾರು ಪ್ರಾಂತ್ಯ ರಚನೆಯನ್ನು ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’ ಎಂದು ಸಿದ್ದಯ್ಯ ಪುರಾಣಿಕರು ಸಂಭ್ರಮಿಸಿದರು. ‘ಕನ್ನಡವೇ ಸತ್ಯ; ಕನ್ನಡವೇ ನಿತ್ಯ’ ಎಂದು ಕುವೆಂಪು ತೀರ್ಪಿತ್ತರು. ಇಷ್ಟೆಲ್ಲ ಆದಮೇಲೆ ತಡವೇಕೆ ಎಂದು ಹೊರಟ ಗೋಪಾಲಕೃಷ್ಣ ಅಡಿಗರು ‘ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು’ ಎಂದರು. ಈ ಎಲ್ಲವನ್ನು ಓದಿಕೊಂಡ ಬಿ.ಆರ್.ಲಕ್ಷ್ಮಣರಾವ್ ‘ಕರ್ನಾಟಕ ಬರಿ ನಾಡಲ್ಲ; ನಮ್ಮ ಸಂಸ್ಕೃತಿಯ ಧಾತು: ಕನ್ನಡ ಕೇವಲ ನುಡಿಯಲ್ಲ; ನಮ್ಮಂತರಂಗದ ಮಾತು’ ಎಂದು ವ್ಯಾಖ್ಯಾನಿಸಿದರು. ಮತ್ತೊಬ್ಬ ಕವಿ ‘ಕನ್ನಡವೆಂದರೆ ಬರಿ ನುಡಿಯಲ್ಲ; ಹಿರಿದಿದೆ ಅದರರ್ಥ: ಜಲವೆಂದರೆ ಕೇವಲ ನೀರಲ್ಲ; ಅದು ಪಾವನತೀರ್ಥ’ ಎಂದು ಮನವರಿಕೆ ಮಾಡಿಕೊಡುವ ಯತ್ನ ಮಾಡಿದರು. ಅದೆಷ್ಟೋ ಜನ ಕವಿ, ಬರಹಗಾರರು ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ ಬಗ್ಗೆ ಹುರಿದುಂಬಿಸಿಕೊಂಡೇ ಬಂದಿದ್ದಾರೆ. ಆದರೆ ಯಾಕೋ ಏನೋ ಕನ್ನಡ ಭಾಷೆ ವಿಚಾರದಂತೆ ಸಂಸ್ಕೃತಿಯ ವಿಚಾರದಲ್ಲೂ ನಾವು ಕನ್ನಡಿಗರು ಉದಾಸೀನದಲ್ಲಿದ್ದೇವೆ. ಎಂದೇ ಹೊಸಿಲಲ್ಲಿ ನಿಂತಿರುವ ರಾಜ್ಯೋತ್ಸವಕ್ಕೆ ಒಳಬರುವುದಕ್ಕೆ ಅಂಜಿಕೆ, ಅನುಮಾನ.
ಇತಿಹಾಸದ ಪುಟಗಳನ್ನು ತಿರುವಿದರೆ ನಮ್ಮ ಭೌಗೋಳಿಕ ವಿಸ್ತಾರ ವಿಸ್ಮಯ ಮೂಡಿಸುತ್ತದೆ. ಭಾಷೆಯ ಸೊಗಡು ಎಲ್ಲಿಂದೆಲ್ಲೀವರೆಗೂ ಪರಿಮಳ ಬೀರಿತ್ತೆಂಬುದು ಹೆಮ್ಮೆಯನ್ನು ಹೆಚ್ಚಿಸುತ್ತದೆ. ಮನುಷ್ಯ ಕುಲ ಒಂದೇ ಎಂದ ಪಂಪ. ‘ಮನುಷ್ಯರೆಲ್ಲರೂ ಒಂದೇ’ ಎನ್ನಲು ಜಗತ್ತಿನ ಬೇರೆ ಬೇರೆ ಸಜ್ಜನರಿಗೆ ಪಂಪ ಮಾದರಿಯಾದ. ಆದರೆ ಈ ಹೊತ್ತು ಮನುಷ್ಯ ಮನುಷ್ಯರ ನಡುವೆ ಗೋಡೆ ಏಳಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಭಾಷೆ ಇದ್ದರೆಷ್ಟು ಹೋದರೆಷ್ಟು ಎಂದು ಕೇಳುವ ಹಂತಕ್ಕೆ ಬಂದಿದ್ದೇವೆ. ಕರ್ನಾಟಕ ರಾಜ್ಯ ಉದಯವಾಗುವುದಕ್ಕೆ ಮುನ್ನ ಮತ್ತು ನಂತರದಲ್ಲಿ ದಶಕಗಳ ಕಾಲ ನಮ್ಮ ಪಾಲಿನ ಭಾವಸೇತುವಾಗಿದ್ದ ಕನ್ನಡಾಭಿಮಾನ ಕರಗಿ ನೀರಾಗಿ ಹರಿಯುತ್ತಿದೆ. ಕನ್ನಡ ಓದುವುದು, ನುಡಿಯುವುದು ಪ್ರತಿಷ್ಠೆಗೆ ಕಡಿಮೆಯದೆನಿಸುತ್ತಿದೆ. ಸಾಹಿತ್ಯಸಂಬಂಧಿ ವೇದಿಕೆಗಳಲ್ಲಿ ಭಾಷಣ ಮಾಡುವವರು ‘ಪಂಪ ರನ್ನ ಇರುವ ತನಕ ಕನ್ನಡಕ್ಕೆ ಸಾವಿಲ್ಲ’ ಎಂದು ಏರಿದದನಿಯಲ್ಲಿ ಹೇಳುತ್ತಾರೆ. ಸರ್ಕಾರದ ನೀತಿ ಕಾರಣವಾಗಿ ಕನ್ನಡ ಅಕ್ಷರಮಾಲೆಯೇ ಪ್ರಾಥಮಿಕ ಶಿಕ್ಷಣದಿಂದ ದೂರವಾಗುತ್ತಿರುವಾಗ ಪಂಪ ರನ್ನರು ಉಳಿಯುತ್ತಾರಾದರೂ ಹೇಗೆ? ಅವರನ್ನು ಉಳಿಸುವ ಕೆಲಸವನ್ನು ಮಾಡಬೇಕು ಯಾರು…? ಪಂಪ ರನ್ನರನ್ನು ಮುಂದಿಟ್ಟುಕೊಂಡು ಆಡುವುದೆಲ್ಲವೂ ನಮ್ಮನ್ನು ನಾವು ವಂಚಿಸಿಕೊಳ್ಳುವ ಹುಸಿಭರವಸೆಯ ಬತ್ತಾಸುಗಳು ಮಾತ್ರ.
ಸಂವಿಧಾನಕ್ಕೆ ತಿದ್ದುಪಡಿಯೇ ಪರಿಹಾರ: ಕಳೆದ ಒಂದೂವರೆ ದಶಕದಲ್ಲಿ ಮೂರು ಪಕ್ಷಗಳು ರಾಜ್ಯದ ಆಡಳಿತವನ್ನು ನಡೆಸಿವೆ. ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮ ಕನ್ನಡವೇ ಆಗಿರಬೇಕೆಂಬ ವಾದ ಸುಪ್ರೀಂ ಕೋರ್ಟ್ನಲ್ಲಿ ಇದೇ ಅವಧಿಯಲ್ಲಿ ಬಿದ್ದುಹೋಗಿದೆ. ಮಗುವಿನ ಶಿಕ್ಷಣ ಮಾಧ್ಯಮ ಯಾವುದಿರಬೇಕು ಎನ್ನುವುದನ್ನು ನಿಶ್ಚಯಿಸುವ ಹಕ್ಕು , ಅಧಿಕಾರ ಪೋಷಕರದೇ ಹೊರತು ಸರ್ಕಾರದ್ದಲ್ಲ ಎಂದು ಕೋರ್ಟ್ ಹೇಳಿದೆ. ಕನ್ನಡದ ಜತೆಯಲ್ಲಿ ಬೇರೆ ಯಾವುದೇ ಭಾಷೆಯ ಕಲಿಕೆಗೂ ಸ್ವಾತಂತ್ರ್ಯವಿರಲಿ ಎಂಬ ಕೂಗು ಕೇಳುವವರಿಲ್ಲದ ಅರಣ್ಯರೋದನ. ಹಿಂದಿ ಭಾಷಾಸಾಮ್ರಾಜ್ಯ ವಿಸ್ತರಣೆ, ಇಂಗ್ಲಿಷ್ನ ವ್ಯಾಮೋಹ ಸೃಷ್ಟಿಸಿರುವ ಪ್ರವಾಹದ ವಿರುದ್ಧ ಈಜಲು ಪ್ರಾದೇಶಿಕ ಭಾಷೆಗಳಿಗೆ ಶಕ್ತಿ ಸಾಲದು. ಸಂವಿಧಾನಕ್ಕೆ ತಿದ್ದುಪಡಿ ತಾರದ ಹೊರತು ಪ್ರಾದೇಶಿಕ ಭಾಷೆಗಳಿಗೆ ಉಳಿವಿಲ್ಲ. ನೊಂದಿರುವ ರಾಜ್ಯಗಳು ಒಂದಾಗಿ ದನಿ ಎತ್ತಿದರೆ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರದ ಮನವೊಲಿಸುವುದು ಅಸಾಧ್ಯದ್ದೇನೂ ಅಲ್ಲ. ಆದರೆ ಬೆಕ್ಕಿಗೆ ಯಾರು ಗಂಟೆ ಕಟ್ಟಬೇಕು?
ಎರಡು ವರ್ಷದ ಹಿಂದೆ ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರ್ಟ್ ತೀರ್ಪಿನ ಕಾರಣವಾಗಿ ಕನ್ನಡದಂಥ ಪ್ರದೇಶ ಭಾಷೆಗಳ ಸಂಕಷ್ಟವನ್ನು ಪ್ರಸ್ತಾಪಿಸಿ ಇದಕ್ಕೆ ಇರುವ ಏಕೈಕ ಪರಿಹಾರ ಸಂವಿಧಾನ ತಿದ್ದುಪಡಿ ಎಂದು ಪ್ರತಿಪಾದಿಸಿದ್ದರು. ಈ ವಿಚಾರದಲ್ಲಿ ಕೇಂದ್ರದ ಗಮನ ಸೆಳೆಯುವ ಕೆಲಸವನ್ನು ತಾವು ಮಾಡುವುದಾಗಿಯೂ ಹೇಳಿದ್ದರು. ಮೊದಲಿಗೆ ಆ ನಿಟ್ಟಿನಲ್ಲಿ ಆಗಬೇಕಿದ್ದ ಕೆಲಸ ಮೂರು ಹಂತದ್ದಾಗಿತ್ತು. ಮೊದಲನೆಯದಾಗಿ ಪತ್ರ ಮುಖೇನ ಕೇಂದ್ರದ ಗಮನ ಸೆಳೆಯುವುದು; ಸಮಾನಮನಸ್ಕ ಮುಖ್ಯಮಂತ್ರಿಗಳ ಸಮಾವೇಶ ನಡೆಸಿ ಒಮ್ಮತದ ನಿರ್ಣಯ ಅಂಗೀಕರಿಸಿ ಕೇಂದ್ರದ ಮೇಲೆ ಒತ್ತಡ ಹೇರುವುದು; ರಾಜ್ಯದ ಸಂಸದರೆಲ್ಲರನ್ನೂ ಮುಂದಿಟ್ಟುಕೊಂಡು ಕನ್ನಡ ಪರವಾದ ಹೋರಾಟಕ್ಕೆ ಸಂವೈಧಾನಿಕ ವೇದಿಕೆಯನ್ನು ಬಳಸಿಕೊಳ್ಳುವುದು. ಆದರೆ ಸಿದ್ದರಾಮಯ್ಯ ಭಾಷಣದ ಆಚೆಗೆ ಏನೂ ಮಾಡಲಿಲ್ಲ. ಅಷ್ಟೇ ಅಲ್ಲ ತಾವಾಡಿದ ಮಾತನ್ನು ತಾವೇ ಮರೆತರು. ನಮ್ಮದು ತಮಿಳುನಾಡಿನಂತಲ್ಲ. ಅಲ್ಲಿಯೂ ಇಂಗ್ಲಿಷ್ಗೆ ಆದ್ಯತೆ ಇದೆ. ನಮಗಿಂತ ತುಸು ಹೆಚ್ಚೇ ಇದೆ. ಆದರೆ ಇಂಗ್ಲಿಷ್ಗಾಗಿ ಮಾತೃಭಾಷೆ/ರಾಜ್ಯಭಾಷೆಯನ್ನು ಅವರು ಬಲಿಕೊಟ್ಟಿಲ್ಲ. ಅಂಥ ಯತ್ನಕ್ಕೆ ಮುಂದಾಗುವ ಧೈರ್ಯ ಯಾರಲ್ಲೂ ಇಲ್ಲ. ನಮ್ಮಲ್ಲಿ ಹಾಗಲ್ಲ. ಇಲ್ಲಿರುವ ಬಹುತೇಕ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಹಿಂದಿರುವ ಕೈ ರಾಜಕಾರಣಿಗಳದ್ದೇ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇತರ ಪಕ್ಷಗಳ ಹಿತವನ್ನು ಅದು ಕಾಯುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂಬ ಕೂಗಿಗೆ ರಾಜಕೀಯ ಅಂಗಳದಿಂದ ಬೆಂಬಲ ವ್ಯಕ್ತವಾಗದೇ ಇರುವುದಕ್ಕೆ ಈ ಸ್ವಹಿತವಲ್ಲದೆ ಬೇರೆ ಕಾರಣವಿರಲಾರದು.
ಕನ್ನಡವನ್ನೂ ಕನ್ನಡ ಭಾಷೆಯನ್ನೂ ಲಘುವಾಗಿ ನೋಡುವ ಪ್ರವೃತ್ತಿ ವಿರುದ್ಧ ಬಲವಾದ ಹೋರಾಟದ ತುರ್ತು ಈಗ ಇದೆ. ಕನ್ನಡ ಹೆಸರಿನಲ್ಲಿ ನಡೆದಿರುವ ‘ವ್ಯವಹಾರ’ ಬಹುತೇಕ ಚಳವಳಿಯನ್ನು ಗುಮಾನಿಯಿಂದ ನೋಡುವಂತೆ ಮಾಡಿದೆ. ಕನ್ನಡ ಕಣ್ಣೀರಿಡುತ್ತಿರುವ ಈ ಸಮಯದಲ್ಲಿ ಮ. ರಾಮಮೂರ್ತಿಯಂಥವರು ನೆನಪಾಗಿ ಕಾಡುತ್ತಾರೆ. ‘ಕನ್ನಡ ವೀರ ಸೇನಾನಿ’ ಎಂದು ಜನರಿಂದ ಕರೆಸಿಕೊಂಡ ರಾಮಮೂರ್ತಿಯವರ ಜನ್ಮಶತಾಬ್ದಿ ವರ್ಷ ಇದು. ಕನ್ನಡಕ್ಕಾಗಿ ಅದರ ಸಾರ್ವಭೌಮತ್ವಕ್ಕಾಗಿ ಅನಕೃ ಜತೆಗೂಡಿ ಅವರು ನಡೆಸಿದ ಹೋರಾಟ ಮಾದರಿ. ಕರ್ನಾಟಕದ ಅಸ್ಮಿತೆಯಾಗಿ ಕನ್ನಡ ಧ್ವಜ ವಿನ್ಯಾಸಗೊಳಿಸಿದ್ದು; ಕನ್ನಡ ಪಕ್ಷಕ್ಕೆ ಜನ್ಮ ನೀಡಿದ್ದು; ಚಲನಚಿತ್ರ ಕ್ಷೇತ್ರದ ಪಿಡುಗಾಗಿದ್ದ ಡಬ್ಬಿಂಗ್ ವಿರುದ್ಧ ಬಂಡಾಯದ ಬಾವುಟ ಏರಿಸಿದ್ದು; ರಾಜ್ಯದೊಳಗೆ ಅಲ್ಲಲ್ಲಿ ತಮಿಳು ವಸಾಹತು ತಲೆ ಎತ್ತದಂತೆ ತಡೆದಿದ್ದು; ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿದ್ದ ಕನ್ನಡ ಕೃತಿಗಳ ನಿರ್ಲಕ್ಷ್ಯದ ವಿರುದ್ಧ ಗುಟುರು ಹಾಕಿ ಕನ್ನಡಕ್ಕೆ ಮರ್ಯಾದೆ ಸಲ್ಲುವಂತೆ ಮಾಡಿದ್ದು; ಇಡೀ ರಾಜ್ಯದಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಗೆ ಅಹರ್ನಿಶಿ ಹೋರಾಡಿದ್ದು… ಒಂದೇ ಎರಡೇ?
ರಾಮಮೂರ್ತಿ ಮತ್ತು ಅವರ ಹೋರಾಟದ ವಿವಿಧ ಮಜಲುಗಳನ್ನು ಆ ಕಾಲದಲ್ಲಿದ್ದು ಕಂಡವರ ಬರಹಗಳನ್ನು ಸಂಗ್ರಹಿಸಿ ರಾ.ನಂ ಚಂದ್ರಶೇಖರರ ಸಂಪಾದಕತ್ವದಲ್ಲಿ ‘ಕನ್ನಡ ವೀರ ಸೇನಾನಿ’ ಎಂಬ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಕನ್ನಡ ಅವಜ್ಞೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ಹೋರಾಟದ ದಿಕ್ಸೂಚಿಯಂತೆ ಕೃತಿ ಬಂದಿದೆ. ರಾಜ್ಯೋತ್ಸವ ಈಗ ತಿಂಗಳಾನುಗಟ್ಟಲೆ ನಡೆಯುತ್ತದೆ. ಸರ್ಕಾರ ಅದಕ್ಕೆಂದೇ ಹಣವನ್ನು ನೀರಿನಂತೆ ವ್ಯಯಿಸುತ್ತದೆ. ಹಣ ಸಿಗುತ್ತದೆಂಬ ಕಾರಣಕ್ಕೇ ಹೊಸ ಹೊಸ ಸಂಘಟನೆಗಳು ಚಳವಳಿಯ ಹೆಸರಿನಲ್ಲಿ ಹುಟ್ಟಿ ಕಮಾಯಿ ಮಾಡಿಕೊಳ್ಳುತ್ತಿವೆ.
ರಾಮಮೂರ್ತಿ ಒಂದೆಡೆ ಹೇಳುತ್ತಾರೆ- ‘ಕನ್ನಡ ಚಳವಳಿಗೆ ನಿಮ್ಮ ಧನ-ಧಾನ್ಯ ಬೇಕಿಲ್ಲ, ಬಲಿದಾನ ಬೇಕಿಲ್ಲ; ಬೇಕಿರುವುದು ನಿಮ್ಮ ಕನ್ನಡಾಭಿಮಾನ ಮಾತ್ರ’. ಈಗಿನ ಚಳವಳಿ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ನಡೆದಿದೆ ಎಂದೇ ಅದು ಕನ್ನಡಿಗರ ನಂಬಿಕೆ ವಿಶ್ವಾಸವನ್ನು ಕಳೆದುಕೊಂಡಿದೆ. ಡಬ್ಬಿಂಗ್ ನಿಂತ ನಂತರದಲ್ಲಿ ರೀಮೇಕ್ ಹಾವಳಿ ಶುರುವಾಯಿತು. ಸೃಜನಶೀಲತೆಯನ್ನೇ ಹೊಸಕಿ ಹಾಕುತ್ತಿರುವ ರೀಮೇಕ್ಗಳಿಗೆ ಸರ್ಕಾರವೇ ಪ್ರೋತ್ಸಾಹ, ಉತ್ತೇಜನ ನೀಡುತ್ತಿರುವುದು ವಿಪರ್ಯಾಸ. ‘ಕನ್ನಡತನವಿಲ್ಲದ ನಕಲು ಕನ್ನಡ ಚಿತ್ರಗಳನ್ನು ಬಹಿಷ್ಕರಿಸುವ ಕಾಲವೂ ಬರಬಹುದು’ ಎಂದು ಅರವತ್ತರ ದಶಕದಲ್ಲೇ ರೀಮೇಕುಗಳ ವಿರುದ್ಧ ರಾಮಮೂರ್ತಿ ಎಚ್ಚರಿಸಿದ್ದರು. ಆದರೆ ಈ ಹೊತ್ತಿನ ಕನ್ನಡ ಚಳವಳಿ ರೀಮೇಕ್ಗಳೊಂದಿಗೆ ರಾಜಿ ಮಾಡಿಕೊಂಡಿದೆ. ಬಸವಳಿಯುತ್ತಿರುವ ಕನ್ನಡಕ್ಕೆ ಹುರುಪು ಹುಮ್ಮಸ್ಸು ತುಂಬುವ ಕೆಲಸವನ್ನು ಚಳವಳಿಯೇ ಮಾಡಬೇಕಿದೆ. ಸರ್ಕಾರ ಕನ್ನಡದ ಹಿತಕ್ಕೆ ಬೆನ್ನು ಹಾಕಿ ಕೂತಿರುವಾಗ ಚಳವಳಿ ಗರಿಗೆದರ ಬೇಕಿತ್ತು. ಕನ್ನಡ ಮತ್ತು ಕನ್ನಡಿಗರ ದುರ್ದೈವ ಚಳವಳಿ ನಿಸ್ತೇಜಗೊಂಡಿದೆ. ಎಂದೇ ಸರ್ಕಾರವೂ ಜಾಣನಿದ್ರೆಗೆ ಸರಿದಿದೆ.
(ಲೇಖಕರು ಹಿರಿಯ ಪತ್ರಕರ್ತರು)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ