ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಆಹಾರ ಉತ್ಪಾದನೆಗೆ ಬರ,

ಅತಿವೃಷ್ಟಿ, ಅನಾವೃಷ್ಟಿಯಿಂದ ಅಪಾರ ಬೆಳೆಹಾನಿ >>
| ಅಭಿಲಾಷ್ ಪಿಲಿಕೂಡ್ಲು
ಬೆಂಗಳೂರು: ರಾಜ್ಯದ ಕೆಲ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದರೆ, ಇನ್ನಿತರೆಡೆ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಆಹಾರ ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಕುಸಿತವಾಗುವ ಆತಂಕ ಎದುರಾಗಿದೆ.
ಪ್ರಸಕ್ತ ವರ್ಷ ಬರೋಬ್ಬರಿ 14.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಮುಂಗಾರಿನಲ್ಲಿ 74.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇರಿಸಲಾಗಿತ್ತು. ಇದರಲ್ಲಿ 63.65 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಅನಾವೃಷ್ಟಿಗೆ 14.40 ಲಕ್ಷ ಹೆಕ್ಟೇರ್ ಹಾಗೂ ಅತಿವೃಷ್ಟಿಗೆ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಾಸಾಂತ್ಯಕ್ಕೆ ಬೆಳೆ ಹಾನಿ ಕುರಿತ ಸಮಗ್ರ ವರದಿ ಸಿದ್ಧವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಹುಸಿಯಾದ ನಿರೀಕ್ಷೆ
ಏಪ್ರಿಲ್-ಮೇ ತಿಂಗಳಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಸುರಿದ ಕಾರಣ ಮುಂಗಾರು ಬಿತ್ತನೆ ಚುರುಕಾಗಿತ್ತು. ಅಂದಾಜು 100 ಲಕ್ಷ ಟನ್ ಆಹಾರ ಉತ್ಪಾದನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದಾಗಿ ಬಹುತೇಕ ಬೆಳೆ ಹಾನಿಯಾಗಿವೆ. ಇದು ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿ?
ವಿಜಯಪುರ ಜಿಲ್ಲೆಯಲ್ಲಿ 4.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 3.47 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ 2.03 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ಹಾನಿಯಾಗಿದೆ. ಚಿತ್ರದುರ್ಗ, ಗದಗ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕಲಬುರಗಿ ಜಿಲ್ಲೆಯಲ್ಲೂ ತಲಾ 1 ಲಕ್ಷ ಹೆಕ್ಟೇರ್​ಗಿಂತ ಹೆಚ್ಚಿನ ಬೆಳೆ ಪ್ರದೇಶ ಅನಾವೃಷ್ಟಿಗೆ ತುತ್ತಾಗಿದೆ. ಕೊಡಗು, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸ್ವಲ್ಪ ಬೆಳೆ ಹಾನಿಯಾಗಿವೆ.
ಯಾವ ಬೆಳೆ ನಷ್ಟ?
ಹಾನಿಗೊಳಗಾದ 14.40 ಲಕ್ಷ ಹೆಕ್ಟೇರ್​ನಲ್ಲಿ 10.90 ಲಕ್ಷ ಹೆಕ್ಟೇರ್ ಆಹಾರ ಧಾನ್ಯಗಳಾಗಿವೆ. 4.7 ಲಕ್ಷ ಹೆಕ್ಟೇರ್ ಏಕದಳ ಧಾನ್ಯ ಹಾಗೂ 6.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳು ಮಳೆಯಿಲ್ಲದೆ ಒಣಗುತ್ತಿವೆ. 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ, ನವಣೆ, 86 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 2.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಹಾನಿಯಾಗಿವೆ. 3.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 1.9 ಲಕ್ಷ ಹೆಕ್ಟೇರ್ ಹೆಸರು ಬೆಳೆ ನಾಶವಾಗಿದೆ. 2.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, ಸೋಯಾಬೀನ್ ಸೇರಿ ಎಣ್ಣೆಕಾಳುಗಳು, 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಕಬ್ಬು ಹಾಗೂ ತಂಬಾಕು ಇನ್ನಿತರ ವಾಣಿಜ್ಯ ಬೆಳೆಗಳಿಗೆ ಹಾನಿಯಾಗಿದೆ.
ಲಿಂಬೆ ಉತ್ಪಾದನೆ ಕುಸಿತ?
ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಬೆಳೆ ಭಾರಿ ಕುಸಿತವಾಗುವ ಸಾಧ್ಯತೆಯಿದೆ. ಲಿಂಬೆ, ಬಾಳೆ, ದಾಳಿಂಬೆ, ಈರುಳ್ಳಿ ಬೆಳೆಗೆ ಭಾರಿ ಪ್ರಮಾಣದ ಹಾನಿಯಾಗಿದೆ. 2014-15ರಲ್ಲಿ 1.83 ಲಕ್ಷ ಟನ್ ಲಿಂಬೆ ಉತ್ಪಾದನೆಯಾಗಿದ್ದು, 2017-18ರಲ್ಲಿ ಇದು 1.78 ಲಕ್ಷ ಟನ್​ಗೆ ಕುಸಿದಿತ್ತು. ಈ ವರ್ಷ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ರಾಜ್ಯದಲ್ಲೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿರುವ ವಿಜಯಪುರ, ಈ ವರ್ಷ ಇದನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆ. ಬೆಳೆಗೆ ನೀರಿಲ್ಲದೆ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ.
ಅನಾವೃಷ್ಟಿಯಿಂದಾಗಿ ಆಹಾರ ಉತ್ಪಾದನೆಯಲ್ಲಿ ಇಳಿಕೆಯಾಗಲಿದೆ. ಕಳೆದೊಂದು ವಾರದಿಂದ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ. ಕೆಲ ಜಿಲ್ಲೆಗಳಲ್ಲಿ ಸಮೀಕ್ಷೆ ಪ್ರಗತಿಯಲ್ಲಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬೆಳೆ ಹಾನಿ ಪರಿಹಾರ ನೀಡುವ ಕುರಿತು ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
| ಬಿ.ವೈ.ಶ್ರೀನಿವಾಸ್, ನಿರ್ದೇಶಕ, ಕೃಷಿ ಇಲಾಖೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಜುಲೈ 1ರಿಂದ ಬೆಂಗಳೂರು ವಿಜ್ಞಾನೋತ್ಸವ

41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.